ಜನವರಿ 30ರಂದು ಗಾಂಧಿ ಹುತಾತ್ಮ ದಿನದ ಅಂಗವಾಗಿ, ಸೌಹಾರ್ದ ಮಾನವ ಸರಪಳಿ ಮತ್ತು ಸೌಹಾರ್ದ ಸಭೆ ನಡೆಸಲಾಗುವುದು ಎಂದು ಹಾಸನ ಜಿಲ್ಲಾ ಸೌಹಾರ್ದ ವೇದಿಕೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದೆ.
ಹಾಸನ ನಗರದಲ್ಲಿ ಮಾಧ್ಯಮಗಳೆದುರು ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್ ಮಾತನಾಡಿ, “ಹಲವು ದಶಕಗಳಿಂದಲೂ ಕರ್ನಾಟಕವನ್ನು ʼಸರ್ವ ಜನಾಂಗದ ಶಾಂತಿಯ ತೋಟʼ ಎಂದು ಹೆಮ್ಮೆಯಿಂದ ಕರೆಯುತ್ತಾಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು ನಿಚ್ಚಳವಾಗಿದೆ. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಮತ, ಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಮತೀಯ ದ್ವೇಷ-ಹಗೆತನದ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿರುವ ವಿಷಮಗಳಿಗೆಯಲ್ಲಿ ನಾವು ಹಾದು ಹೋಗುತ್ತಿದ್ದೇವೆ. ದೇವರು, ಮತ, ಧರ್ಮ ಮುಂತಾದವುಗಳನ್ನು ಸಂಕುಚಿತ ಉದ್ದೇಶಗಳಿಗೆ ಎಗ್ಗಿಲ್ಲದೆ ಬಳಸಲಾಗುತ್ತಿದೆ” ಎಂದು ಹೇಳಿದರು.
“ದೇಶದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಒಂದು ಚಿಂತನೆಯು ಇಂದು ರಾಜಕೀಯ ಅಧಿಕಾರವನ್ನು ನಡೆಸುತ್ತಿದ್ದು, ಅದೇ ಚಿಂತನೆಯನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಸಂಸತ್ ಭವನದ ಉದ್ಘಾಟನೆಯನ್ನು ಒಂದು ಧರ್ಮದ ಗುರುಗಳಿಂದ ಉದ್ಘಾಟಿಸುವುದು, ಒಂದು ಧರ್ಮದ ದೇವಸ್ಥಾನದ ಉದ್ಘಾಟನೆಯನ್ನು ಸ್ವತಃ ಪ್ರಧಾನಿಗಳೇ ಉದ್ಘಾಟಿಸುವುದು ಇದು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆಯಾದಂತೆ” ಎಂದರು.
“ದಿನನಿತ್ಯದ ದ್ವೇಷ ಭಾಷೆಯಿಂದ ನಮ್ಮ ಸಾಮಾಜಿಕ, ಮತೀಯ ದ್ವೇಷದ ಜೊತೆಗೆ ಅಸ್ಪೃಶ್ಯತೆ, ಜಾತಿಯ ದಮನ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗಳ ತೀವ್ರತೆಯೂ ಸೌಹಾರ್ದದ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶತ ಶತಮಾನಗಳ ಇತಿಹಾಸವುಳ್ಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಹಾಗೂ ಜನ ಸಂಸ್ಕೃತಿಯನ್ನು ಗುರುತಿಸಿ ಅದನ್ನು ಮುನ್ನೆಲೆಗೆ ತರುವ ಐತಿಹಾಸಿಕ ಅವಶ್ಯಕತೆ ಉಂಟಾಗಿದೆ” ಎಂದು ಹೇಳಿದರು.
“ಪ್ರಸ್ತುತ ಸಮಾಜದಲ್ಲಿ ಸ್ನೇಹಪರತೆ, ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಳಜಿಯುಳ್ಳವರೆಲ್ಲಾ ಒಂದೆಡೆ ಕಲೆತು, ಕುಳಿತು ಕಾರ್ಯಯೋಜನೆ ರೂಪಿಸಿ, ಸೌಹಾರ್ದತೆಯ ಸಂದೇಶವನ್ನು ಜನರ ನಡುವೆ ನಿರಂತರ ಕೊಂಡೊಯ್ಯುವ ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಗಿದ್ದು, ಸೌಹಾರ್ದ ಪರಂಪರೆಯನ್ನು ಉಳಿಸುವ, ಬೆಳೆಸುವ ಅಭಿಯಾನವನ್ನು ನಿರಂತರವಾಗಿ ನಡೆಸಲಾಗುವುದು. ನಮ್ಮ ಜನಜೀವನದಲ್ಲಿ, ಆಚಾರ ವಿಚಾರಗಳಲ್ಲಿ ಹಾಸುಹೊಕ್ಕಾಗಿರುವ ಸೌಹಾರ್ದತೆಯ ಪರಂಪರೆಯನ್ನು ಅರಿಯುವುದು, ಅಂತಹ ಮನೋಭಾವವನ್ನು ಸಮಕಾಲಿಕವಾಗಿ ರೂಪಿಸಲು ಮತ್ತು ಅದನ್ನು ಬಲಪಡಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
“ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜನವರಿ 30ರಂದು, ಇಡೀ ರಾಜ್ಯದಲ್ಲಿ ಬೃಹತ್ ಮಾನವ ಸರಪಳಿ ಹಾಗೂ ಸೌಹಾರ್ದ ಸಭೆಯನ್ನು ಒಳಗೊಂಡಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ಅಂದು ಹಾಸನದ ಹೇಮಾವತಿ ಪ್ರತಿಮೆಯ ಮುಂಭಾಗ ಸಂಜೆ 4ಗಂಟೆಗೆ ಸೌಹಾರ್ದ ಸಭೆ ಮತ್ತು ಮಾನವ ಸರಪಳಿಯನ್ನು ನಿರ್ಮಿಸಲಾಗುವುದು” ಎಂದು ತಿಳಿಸಿದ್ದಾರೆ.
“ನಾಡಿನ ಸೌಹಾರ್ದ ಪರಂಪರೆ ಶಾಂತಿ, ಸಾಮರಸ್ಯಗಳನ್ನು ಉಳಿಸ ಬಯಸುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭದ್ರಾವತಿ ಸರ್ವತೋಮುಖ ಅಭಿವೃದ್ಧಿ ನಮ್ಮ ಪಣ: ಲತಾ ಚಂದ್ರಶೇಖರ್
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಾಹಿತಿ ಬಾನುಮುಷ್ತಾಕ್, ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಕೆ ಟಿ ಶಿವಪ್ರಸಾದ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್, ದಲಿತ ಸಂಘಟನೆಯ ಸಂಚಾಲಕ ಅಂಬುಗ ಮಲ್ಲೇಶ್, ಪತ್ರಕರ್ತ ವೆಂಕಟೇಶ್, ಟಿಪ್ಪು ಸಂಘರ್ಷ ಸಮಿತಿಯ ಮುಬಷಿರ್ ಅಹಮದ್, ಜಿಲ್ಲಾ ಕ್ರೈಸ್ತ ಸಂಘಗಳ ಮುಖಂಡ ಸುರೇಶ್ ಪೌಲ್, ಸೌಹಾರ್ದ ವೇದಿಕೆಯ ಜಿಲ್ಲಾ ಸಂಚಾಲಕ ಪೃಥ್ವಿ ಇದ್ದರು.