ತಮ್ಮ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಶೇಖ್ ಅಕೀಬ್ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ನಿವಾಸಿ ಸುಲ್ತಾನ ಖಾನಂ ಮನವಿ ಮಾಡಿದ್ದರು. ಆದರೆ ತಮ್ಮ ಅಪ್ರಾಪ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಂಡ್ಯ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದು, “ನಾನು ಮತ್ತು ನನ್ನ ಗಂಡ ಆಶ್ರಫ್ ಖಾನ್ ಅವರಿಗೆ ಒಟ್ಟು 3 ಮಂದಿ ಮಕ್ಕಳಿದ್ದು, ಅವರಲ್ಲಿ ಮೊದಲಿಬ್ಬರು ಗಂಡು ಮಕ್ಕಳಾಗಿದ್ದು, ಕೊನೆಯವಳೇ ನನ್ನ ಮಗಳು. ಈಗ ಅವಳು ಮಂಡ್ಯ ಶುಗರ್ ಫ್ಯಾಕ್ಟರಿ ಸರ್ಕಲ್ ಬಳಿ ಇರುವ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾಳೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
“ನಮ್ಮ ಮನೆಯಿಂದ ಶಾಲೆಗೆ ಸುಮಾರು ಒಂದೂವರೆ ಕಿಮೀ ಅಂತರ ಇರುವುದರಿಂದ ಶಾಲೆಗೆ ಹೋಗಿ ಬರಲು ಸೈಕಲ್ ತೆಗೆದು ಕೊಟ್ಟಿದ್ದೇವೆ. ಹಾಗಾಗಿ ನನ್ನ ಮಗಳು ಸೈಕಲ್‌ನಲ್ಲಿ ಶಾಲೆಗೆ ಓಡಾಡುತ್ತಾಳೆ. ಈ ವೇಳೆ ಶೇಖ್ ಅಕಿಬ್ ಎಂಬಾತ ಮಂಡ್ಯ ಸಿಟಿ ಸಬ್ಬರಿಯಾಬಾದ್ ಮೊಹಲ್ಲಾ ನಿವಾಸಿಯಾಗಿದ್ದು, ಸುಮಾರು 9 ತಿಂಗಳುಗಳಿಂದ ನನ್ನ ಮಗಳ ಸ್ಕೂಲ್ ಬಳಿ ಹೋಗಿ ನನ್ನ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದು, ನೀನು ನನ್ನನ್ನು ಪ್ರೀತಿಸದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿ, 14 ವರ್ಷದ ನನ್ನ ಮಗಳನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಓಡಾಡುತ್ತಿದ್ದಾನೆ” ಎಂದು ಆರೋಪಿಸಿದ್ದರು.
“ನನ್ನ ಮಗಳನ್ನು ಕರೆದುಕೊಂಡು ಓಡಾಡುತ್ತಿರುವುದನ್ನು ನಾನೇ ನನ್ನ ಕಣ್ಣಾರೆ ಕಂಡಿದ್ದೇನೆ. ಬಳಿಕ ಅವರ ಮನೆಯವರನ್ನು ಪತ್ತೆ ಹಚ್ಚಿ ಅವರ ತಾಯಿ ಮತ್ತು ಅಕ್ಕನನ್ನು ಕರೆಸಿ ಈ ರೀತಿ ಮಾಡದಂತೆ ಬುದ್ದಿವಾದ ಹೇಳಿದ್ದೇನೆ. ಆದರೂ ಶೇಖ್ ಅಕಿಬ್ ತನ್ನ ದುರ್ವರ್ತನೆ ಬದಲಾಯಿಸಿಕೊಳ್ಳದೆ ನನ್ನ ಅಪ್ರಾಪ್ತ ಮಗಳನ್ನು ಪೀಡಿಸುವುದು, ಛೇಡಿಸುವುದು, ಹಲವು ಫೋನ್ ನಂಬರ್‌ಗಳಿಂದ ಫೋನ್ ಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದಾನೆ” ಎಂದು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜ. 31ರಂದು ‘ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಸಂವಹನ’ ಕುರಿತು ವಿಚಾರ ಸಂಕಿರಣ
“ನನ್ನ ಮಗಳನ್ನು ಪೀಡಿಸುವುದಲ್ಲದೇ ಫೋನ್ ಪೇ ಅಕೌಂಟ್‌ಗೆ ಹಣ ಹಾಕುವುದು ಮಾಡುತ್ತಿದ್ದಾನೆ. ಈ ಹಣವನ್ನು ಅವನಿಗೆ ಹಿಂತಿರುಗಿಸಿದರೂ ಕೂಡ ಮತ್ತೆ ಮತ್ತೆ ಹಣವನ್ನು ಹಾಕುತ್ತಿದ್ದಾನೆ. ಇದು ನನ್ನ ಮಗಳಿಗೆ ಮತ್ತು ನಮ್ಮ ಕುಟುಂಬಕ್ಕೆ ತೊಂದರೆ ಕೊಡುವ ದುರುದ್ದೇಶವೇ ಆಗಿದೆ. ನನ್ನ ಅಪ್ರಾಪ್ತ ಮಗಳಿಗೆ ಶೇಖ್ ಅಕಿಬ್ ಹೆದರಿಸಿ ಬೆದರಿಸಿ ಪೀಡಿಸುತ್ತಿದ್ದಾನೆ. ಹಾಗಾಗಿ ಈತನ್ನು ಕೂಡಲೇ ಬಂಧಿಸಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದರು.
ಇದರೆಲ್ಲದರ ನಡುವೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ತಪ್ಪಿತಸ್ಥನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.