- ನಮ್ಮೂರ ಮಸೀದಿ ನೋಡ ಬನ್ನಿ ವಿನೂತನ ಕಾರ್ಯಕ್ರಮ
- ಬೈಬಲ್‌ನಲ್ಲಿ ಇದ್ದ ಹಾಗೆಯೇ ಕುರಾನ್‌ನಲ್ಲಿಯೂ ಇದೆ
ಧರ್ಮ ಧರ್ಮಗಳ ನಡುವೆ ಎತ್ತಿಕಟ್ಟಿ ರಾಜಕೀಯವಾಗಿ ನಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ ನಮ್ಮ ನಡುವೆ ಯಾವುದೇ ಗೋಡೆಗಳು ಇರಬಾರದು. ನಾವು ಪರಸ್ಪರ ಸಹೋದರರು ಎಂದು ಮನಗಂಡು, ಧರ್ಮಗಳು, ಧರ್ಮಗ್ರಂಥಗಳು, ಆರಾಧನಾಲಯಗಳು ನಿಗೂಢವಾಗಿದ್ದರೆ ಮಾತ್ರ ಕೋಮು ಶಕ್ತಿಗಳಿಗೆ ತಮ್ಮ ಪಟ್ಟಬದ್ಧ ಹಿತಾಸಕ್ತಿಯನ್ನು ಸಾಧಿಸಲು ಸಾಧ್ಯ ಎಂದರಿತ ಉಡುಪಿ ಜಿಲ್ಲೆಯ ಬೈಂದೂರಿನ ಮುಸ್ಲಿಂ ಬಾಂಧವರು ಕೋಮುವಾದಿ ಶಕ್ತಿಗಳಿಗೆ ಸೌಹಾರ್ದತೆಯ ಪಾಠ ಕಲಿಸಿದ್ದಾರೆ.
ಬೈಂದೂರಿನ ಖತೀಜತುಲ್ ಖುಬ್ರ ಜಾಮಿಯಾ ಮಸೀದಿಯಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಸಮಾಜದ ಹಿಂದೂ, ಕ್ರೈಸ್ತ ಬಾಂಧವರಿಗೆ ಮುಕ್ತವಾಗಿ ಮಸೀದಿಯನ್ನು ಸಂದರ್ಶಿಸುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಜಮೀಯ್ಯತುಲ್ ಫಲಾಹ್ ಬೈಂದೂರು ಘಟಕ, ಖತೀಜತುಲ್ ಖುಬ್ರ ಮಸೀದಿ ಆಡಳಿತ ಸಮಿತಿ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಉಡುಪಿ ಜಿಲ್ಲೆಯ ವತಿಯಿಂದ ಹಮ್ಮಿಕೊಂಡ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಬೈಂದೂರಿನ ನೂರಾರು ಸಂಖ್ಯೆಯ ಹಿಂದು ಮತ್ತು ಕ್ರೈಸ್ತ ಬಾಂಧವರು ಮಸೀದಿಯನ್ನು ಸಂದರ್ಶಿಸಿ, ಮಸೀದಿ ಒಳಗೆ ನಡೆಯುವ ಪ್ರಾರ್ಥನೆ ಮತ್ತು ಅಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮುಕ್ತವಾಗಿ ನೋಡಲು ಮತ್ತು ತಿಳಿದುಕೊಳ್ಳಲು ಅನುವು ಮಾಡಿಕೊಟ್ಟು ಸೌಹಾರ್ದತೆಯನ್ನು ಮೆರೆದಿದ್ದಾರೆ.
ಮಸೀದಿ ಸಂದರ್ಶಿಸಿದ ಬಳಿಕ ಬೈಂದೂರಿನ ಗಾಣಿಗ ಸಮಾಜದ ಅಧ್ಯಕ್ಷ ವೀರಭದ್ರ ಗಾಣಿಗ ಈ ದಿನ.ಕಾಮ್ ಜೊತೆ ಮಾತನಾಡಿ, “ನಾವು ಹೊರಗಡೆಯಿಂದ ಮಸೀದಿಯನ್ನು ನೋಡುತ್ತಿದ್ದೆವು. ಇಂದು ಒಳಗೆ ಬಂದು ನೋಡುವಂತಹ ಅವಕಾಶವನ್ನು ಸಂಘಟಕರು ಮಾಡಿಕೊಟ್ಟಿದ್ದಾರೆ. ಮಸೀದಿಯೊಳಗೆ ಯಾವ ರೀತಿ ಪ್ರಾರ್ಥನೆ ಮಾಡುತ್ತಾರೆ, ಮಸೀದಿಯಲ್ಲಿ ಯಾವ ರೀತಿಯ ಸಂದೇಶವನ್ನು ಸಮಾಜಕ್ಕೆ ನೀಡುತ್ತಾರೆಂಬ ಬಗ್ಗೆ ಹಲವು ರೀತಿಯ ಸಂಶಯಗಳು ನಮ್ಮ ತಲೆಯಲ್ಲಿ ಓಡುತ್ತಿದ್ದವು. ಬೈಂದೂರಿನಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು ಸೌಹಾರ್ದಯುತವಾಗಿ ಜೀವನ ಮಾಡಿದವರು, ಮುಂದೆಯೂ ಕೂಡ ಸೌಹಾರ್ದತೆಯಿಂದಲೇ ಬದುಕುತ್ತೇವೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹೇಳಿದಂತಹ ಮಾತುಗಳೂ ಕೂಡ ನಮ್ಮ ಮನಸ್ಸನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ನಮ್ಮ ಧರ್ಮಗಳು ಯಾವುದೇ ಆಗಿದ್ದರೂ ಕೂಡ ಬದುಕು ಕಟ್ಟಿಕೊಳ್ಳುವಾಗ ನಾವೆಲ್ಲರೂ ಒಂದೇ ರೀತಿಯಲ್ಲಿ ಬದುಕಬೇಕೆಂಬ ಸಂದೇಶವನ್ನು ಸಾರಿದರು” ಎಂದರು.
ಕ್ಯಾಥೋಲಿಕ್ ಸಭಾದ ಬೈಂದೂರು ಅಧ್ಯಕ್ಷ ಜೋಸ್ಪಿನ್ ರೋಡ್ರಿಗಸ್ ಈ ದಿನ.ಕಾಮ್ ಜೊತೆ ಮಾತನಾಡಿ, “ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಯಿತು. ಒಳ್ಳೆಯ ಕಾರ್ಯಕ್ರಮ ಎಂದೇ ಹೇಳಬಹುದು. ಏಕೆಂದರೆ ಎಲ್ಲರಿಗೂ ಕೂಡ ಖುಷಿಯನ್ನು ಕೊಟ್ಟಿದೆ. ಮಸೀದಿಯೊಳಗೆ ಏನಿದೆ ಎಂಬುದು ನಮಗೆ ಗೊತ್ತಿರಲಿಲ್ಲ. ಈಗ ನೋಡಿದ ನಂತರ ಎಲ್ಲವೂ ತಿಳಿಯಿತು. ಬೈಬಲ್‌ನಲ್ಲಿ ಇದ್ದ ಹಾಗೇಯೇ ಕುರಾನ್‌ನಲ್ಲಿಯೂ ಇದೆ. ಕುರಾನ್‌ನಲ್ಲಿ ಏನಿದೆ ಎಂಬುದನ್ನೂ ಕೂಡ ಕೇಳಿದೆ. ಈ ರೀತೀಯ ಕಾರ್ಯಕ್ರಮಗಳು ಮುಂದುವರೆಯಬೇಕು” ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಬೈಂದೂರು ಮಹಿಳಾ ಘಟಕದ ಕಾರ್ಯದರ್ಶಿ, ಶಿಕ್ಷಕಿ ಜೈತ್ರ ಎಡ್ತರೆ ಈ ದಿನ.ಕಾಮ್ ಜೊತೆ ಮಾತನಾಡಿ, “ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದ ಕರೆಯೋಲೆ ಬಂದಾಗ ಏನೋ ಒಂದು ಹೊಸತರ ಅನ್ನಿಸಿತು. ಪ್ರತಿನಿತ್ಯ ಮಸೀದಿಯನ್ನು ನೋಡುತ್ತಲೇ ತಿರುಗುತ್ತಿದ್ದೇವೆ. ಆದರೆ ಇದರೊಳಗಡೆ ಏನಿದೆ ಎಂಬುದು ಗೊತ್ತಿರಲಿಲ್ಲ. ಈಗ ಇಲ್ಲಿಯ ಕಾರ್ಯಚಟುವಟಿಕೆಗಳು, ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನಾನು ಮೊದಲ ಬಾರಿಗೆ ಮಸೀದಿಯೊಳಗೆ ಪ್ರವೇಶಿಸಿದೆ. ಅಲ್ಲಿ ನಮಾಜ಼್ ಮಾಡುವುದನ್ನು ನೋಡಲು ಅವಕಾಶ ಸಿಕ್ಕಿತು. ಮುಸ್ಲಿಮರ ಸಂಸ್ಕೃತಿ ನೋಡಿ ತಿಳಿಯಲು ಸಾಧ್ಯವಾಯಿತು” ಎಂದು ಹೇಳಿದರು.
ಸಾಲಿಹಾತ್ ಶಿಕ್ಷಣ ಸಂಸ್ಥೆಯ ಇದೀಸ್ ಹೂಡೆ ಈ ದಿನ.ಕಾಮ್ ಜೊತೆ ಮಾತನಾಡಿ, “ಕರಾವಳಿಯಲ್ಲಿ ಮಸೀದಿಯಿಂದಲೇ ಇಸ್ಲಾಮಿ ಸಂಸ್ಕೃತಿ ಆರಂಭಗೊಂಡಿತು. 648ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮಸೀದಿ ಬಾರ್ಕೂರಿನಲ್ಲಿ ನಿರ್ಮಿಸಿದ ದಾಖಲೆ ಕೂಡ ಇತಿಹಾಸ ಪುಟಗಳಲ್ಲಿದೆ. ಅದಕ್ಕಿಂತ ಮುಂಚೆಯೂ ಕೂಡ ತೆಂಗಿನ ಸೋಗೆಗಳ ಮೂಲಕ ಅರಬ್ ವ್ಯಾಪಾರಿಗಳು ಮಸೀದಿ ನಿರ್ಮಿಸಿ ನಮಾಜ್ ಮಾಡುತ್ತಾ ಬಂದಿದ್ದಾರೆ ಮತ್ತು ಸಾವಿರಾರು ವರ್ಷಗಳ ಹಳೆಯ ಮಸೀದಿಗಳನ್ನೂ ಕೂಡ ಉಡುಪಿ ಜಿಲ್ಲೆಯಾದ್ಯಂತ ನಾವು ಕಾಣಬಹುದು” ಎಂದು ಹೇಳಿದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಶೇಕ್ ಫಯಾಜ್ ಅಲಿ ಈ ದಿನ.ಕಾಮ್ ಜೊತೆ ಮಾತನಾಡಿ, “ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಮತ್ತು ಎಲ್ಲರಿಗೂ ಮಸೀದಿ ಸಂದರ್ಶನದ ಉದ್ದೇಶವಾಗಿತ್ತು. ಮಸೀದಿ ಬಗ್ಗೆ ಮಸೀದಿಯಲ್ಲಿ ನಡೆಯುವ ಆಚರಣೆ ಬಗ್ಗೆ ನಿಗೂಢವಾಗಿರಬಾರದು, ಅದು ಎಲ್ಲರಿಗೂ ತೆರೆದುಕೊಂಡಿರಬೇಕು. ಇನ್ನೂ ಧರ್ಮ ಧರ್ಮಗಳು ನಿಗೂಢವಾಗುತ್ತಿರುವ ಸಂದರ್ಭದಲ್ಲಿ ಎಲ್ಲ ಧರ್ಮಗಳು ತಮ್ಮನ್ನು ತಾವು ಬೇರೆಯವರೊಂದಿಗೆ ಬೆರೆಯುವಂತಹ ಮುಕ್ತ ಅವಕಾಶಗಳನ್ನು ಸೃಷ್ಟಿಸಬೇಕು. ಅದಕ್ಕೋಸ್ಕರ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ನಾವು ಎಷ್ಟು ಜನರನ್ನು ಆಹ್ವಾನಿಸಿದ್ದೇವೆಯೋ ಅವರೆಲ್ಲರೂ ನಮ್ಮ ಆಹ್ವಾನವನ್ನು ಸ್ವೀಕರಿಸಿ ಬಹಳ ಗೌರವಯುತವಾಗಿ ಬಂದಿದಾರೆ. ಇಂತಹ ಕಾರ್ಯಕ್ರಮ ಎಲ್ಲಡೆಯೂ ನಡೆಯಬೇಕು. ಆ ಮೂಲಕ ನಮ್ಮ ನಡುವೆ ಸೌಹಾರ್ದತೆಯನ್ನು ಗಟ್ಟಿಗೊಳಿಸಬಹುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮನುಷ್ಯರನ್ನು ಮೃಗಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ: ಪತ್ರಕರ್ತ ನವೀನ್ ಕುಮಾರ್
ಒಟ್ಟಿನಲ್ಲಿ ಕಾಲದ ಬೇಡಿಕೆ ಎಂಬಂತೆ ಸೌಹಾರ್ದತೆಯನ್ನು ಸಾರಲು ಪರಸ್ಪರ ಸಂಬಂಧಗಳನ್ನು ಬಲಿಷ್ಠಪಡಿಸಲು ನಮ್ಮೂರ ಮಸೀದಿ ನೋಡ ಬನ್ನಿಯಂತಹ ಕಾರ್ಯಕ್ರಮಗಳನ್ನು ಎಲ್ಲ ಮಸೀದಿಗಳಲ್ಲಿ ನಡೆಸಬೇಕು. ಅದರ ಜೊತೆಗೆ ಮಂದಿರ ಮತ್ತು ಚರ್ಚ್‌ಗಳಲ್ಲಿಯೂ ಕೂಡ ಇತರೆ ಧರ್ಮಗಳಿಗ ಆಹ್ವಾನಿಸಿ ಅಲ್ಲಿಯೂ ಕೂಡ ಇಂತಹ ಕಾರ್ಯಕ್ರಮ ದಿನನಿತ್ಯ ನಡೆಯುತ್ತಿದ್ದರೆ ಮುಂದೊಂದು ದಿನ ಈ ದೇಶದ ಚಿತ್ರಣವೇ ಬದಲಾಗಬಹುದು. ಮಹತ್ಮಾ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗಬಹುದು. ಸಂವಿಧಾನದ ಆಶಯಗಳು ಎಲ್ಲರಲ್ಲೂ ಮೂಡಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
