ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರು ವಿಶ್ವವಿದ್ಯಾಲಯವೂ ಒಂದಾಗಿದೆ. 1,400 ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿರುವ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆವರಣದಲ್ಲಿರುವ ಹಾಸ್ಟೆಲ್‌ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರೆ. ಆದರೆ, ಹಾಸ್ಟೆಲ್‌ನಲ್ಲಿ ನೀಡುವ ಊಟದ ಬಗ್ಗೆ ಕಳೆದ ಎರಡು ತಿಂಗಳ ಅಂತರದಲ್ಲಿ ಮತ್ತೆ ಆರೋಪ ಕೇಳಿಬಂದಿದೆ.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಊಟದಲ್ಲಿ ಮತ್ತೆ ಹುಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕವನ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ‘ಕಟ್ಟುಪಾಡು ಬದಲಾಗದು’ ಎಂಬ ಶೀರ್ಷಿಕೆಯಡಿ ಕವನ ರಚಿಸಿ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಕಟ್ಟುಪಾಡು ಬದಲಾಗದು
ಬದಲಿಸಲು ಮುಂದೆ ಬಂದರೆ
ಎತ್ತಂಗಡಿ ಕಟ್ಟಿಟ್ಟ ಬುತ್ತಿ
ಅಣವಾಳೂವ
ವಿದ್ಯೆಯಲ್ಲಿ
ಸರಿದಾರಿಯಲ್ಲೇ ಬಚ್ಚಿಟ್ಟ ಬುತ್ತಿ
ವಿದ್ಯಾರ್ಥಿ ಪಟ್ಟ
ಅತ್ಯಂತ ಸುರಕ್ಷಿತ ಕಾಲವಿದು
ಅಲ್ಲಿ ವಿರೋಧ
ಕೋಟೆ ಕಟ್ಟ ಕೂಡದು
ಅನ್ಯಾಯ ಶಕ್ತಿ ವಿರುದ್ಧ
ಧನಿ ಎತ್ತ ಕೂಡದು
ಕತ್ತಿಯಿಂದ ಕೊಯ್ದರೂ
ಎತ್ತಿದ ನಾಲಿಗೆಯ
ಯಾರಿಗೂ ತೋರಿಸ ಕೂಡದು
ಬರೆವ ಶಕ್ತಿ ಶಾಯಿಯಿದ್ದರೂ
ಕಾಗದ ಕೊಡ ಕೂಡದು
ಬರೆದು ಮಡಚಿ ಕೊಟ್ಟರು
ತಮ್ಮೆಸರಿನ ಸುಳಿವು ಬಿಡ ಕೂಡದು
ತಟ್ಟೆಯಲಿ ತನ್ನದೆ ಮನೆ
ಎಂದರಿತರೂ ಬೆಂಕಿ ಹಚ್ಚ ಕೂಡದು
ಇನ್ನೇನು ಮಾಡುವುದು ನೀವೆ ಹೇಳಿ!
-ಅನಾಮಧೇಯ
ಮೂಲೆ ಮನೆ
ಜ್ಞಾನಭಾರತಿ ವಠಾರ
ಹೀಗೆ ಕವನದ ಮೂಲಕ ಹಾಸ್ಟೆಲ್‌ನ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವಸತಿ ಶಾಲೆಯ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಕಳಪೆ ಆಹಾರ ತಿಂದು ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಿದೆ. ಊಟದಲ್ಲಿ ಹುಳ ಇದೆ ಎಂದರೆ ಅಡ್ಜೆಸ್ಟ್ ಮಾಡಿಕೊಳ್ಳಿ ಎಂಬ ಅಸಡ್ಡೆಯ ಉತ್ತರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
2023ರಲ್ಲಿ ಇದೇ ಹಾಸ್ಟೆಲ್‌ನಲ್ಲಿ ಊಟದಲ್ಲಿ ಹುಳು ಪತ್ತೆಯಾಗಿತ್ತು. ವಿದ್ಯಾರ್ಥಿಗಳು ಈ ವಿರುದ್ಧ ಪ್ರತಿಭಟನೆ ನಡೆಸಿದ್ದರು. ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಊಟ, ನೀರು ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.