ಮಹಾತ್ಮಗಾಂಧಿ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ವೇದಿಕೆಯು ಸೌಹಾರ್ದ ಪರಂಪರೆ ಉಳಿಸುವ-ಬೆಳೆಸುವ ಅಭಿಯಾನ ನಡೆದಿದೆ. ವೇದಿಕೆಯ ಮುಖಂಡರು ಮತ್ತು ಕಾರ್ಯಕರ್ತರು ಕಲಬುರಗಿಯ ಜಗತ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸೌಹಾರ್ದ ಸಂದೇಶ ಸಾರಿದ್ದಾರೆ.
ಶ್ವೇತ ಪರದೆಯ ಮೇಲೆ ವಿದ್ಯಾರ್ಥಿಗಳು ಸೌಹಾರ್ದತೆ ಸಾರುವ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ, ಮನುಜ ಕುಲವೊಂದೇ, ಸಂವಿಧಾನ ನಮ್ಮ ಧರ್ಮ ಗ್ರಂಥ ಎಂದು, ಬುದ್ಧ, ಬಸವ, ಅಂಬೇಡ್ಕರ್, ಟಿಪ್ಪು ಸುಲ್ತಾನ್ರ ಚಿತ್ರಗಳನ್ನು ಬಿಡಿಸಿ ಸೌಹಾರ್ದ ಸಂದೇಶ ರವನಿಸಿದರು.
ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾಅವರು ಮಾತನಾಡಿ, ಅಣ್ಣ ಬಸವಣ್ಣನವರ ಈ ದಾರ್ಶನಿಕವಾಣಿಯು ಕಲ್ಯಾಣದ ಶಿವಶರಣರು ವಿಶ್ವ ಬದುಕಿಗೆ ನೀಡಿದ ಮೌಲಿಕ ಕಾಣಿಕೆಯಾಗಿದೆ. ದಯಾದ್ರತೆಯೇ ಎಲ್ಲ ಧರ್ಮಗಳ ಜೀವದ್ರವ್ಯ. ದುರಂತವೆಂದರೆ ಧರ್ಮ ಮತ್ತು ದೇವರ ಹೆಸರಲ್ಲಿ ನಡೆದಷ್ಟು ಹಿಂಸೆ, ಕೊಲೆಗಳು ಮತ್ತಾವುದೇ ವಿಷಯದಲ್ಲಿ ನಡೆದಿಲ್ಲ. ಹೃದಯಹೀನರ ಹೃದಯವೇ ಆಗಬೇಕಾಗಿದ್ದ ಧರ್ಮಗಳು ಜನಸಮುದಾಯಗಳ ಮಾರಣಹೋಮಕ್ಕೆ ಕಾರಣವಾದದ್ದು ನಾಗರೀಕತೆಯ ಪರಮ ವ್ಯಂಗ್ಯ.
ಜನರ ಈ ಮೂರ್ಖತನವನ್ನು ಹೋಗಲಾಡಿಸಲೆಂದೇ ಜಗತ್ತಿನ ದಾರ್ಶನಿಕರು ಧರ್ಮ ಸಮನ್ವಯತೆಯೇ ಎಲ್ಲಕ್ಕಿಂತ ದೊಡ್ಡ ಮತ್ತು ಏಕೈಕ ಸಾಧನೆ ಎಂಬುದನ್ನು ತಮ್ಮ ನಡೆ-ನುಡಿಯಿಂದ ತೋರಿಸಿಕೊಟ್ಟರು. ಧಾರ್ಮಿಕ ಸಾಮರಸ್ಯ, ಪರಸ್ಪರ ಸೌಹಾರ್ದತೆ, ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಗಳ ಜೀವ ಜಗತ್ತಿನ ಅಭಿವೃದ್ಧಿಯ ಮಂತ್ರ. ಆದ್ದರಿಂದ ಮನುಷ್ಯ ನಿರ್ಮಿತ ಜಾತಿ,ಧರ್ಮ, ಲಿಂಗ, ಪ್ರದೇಶ, ಭಾಷೆ ಇತ್ಯಾದಿ ಎಲ್ಲ ತಾರತಮ್ಯಗಳನ್ನು ಮೀರಿ ಪರಸ್ಪರ ಮಾನವೀಯ ಮಿಡಿತದಲ್ಲಿ ಕೂಡಿ ಬಾಳಬೇಕು. ʼಪ್ರೀತಿ ಕೊಟ್ಟು ಪ್ರೀತಿ ಪಡಿ, ಧರ್ಮದ್ವೇಷ-ಜಾತಿ ಕ್ಲೀಷೆ ಮೊದಲು ಕಡಿʼ ಎಂಬ ತತ್ವ ಬೀಜವನ್ನು ಕಲ್ಯಾಣ ಕರ್ನಾಟಕದ ದೃಷ್ಟಾರರು ಬಿತ್ತನೆ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕವು ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಭೌತಿಕ ಅಭಿವೃದ್ಧಿಯಲ್ಲಿ ತುಂಬಾ ಹಿಂದೆ ಉಳಿದಿದೆಯಾದರೂ ತಾತ್ವಿಕವಾಗಿ, ಸಾಂಸ್ಕೃತಿಕವಾಗಿ ನಮ್ಮ ನಾಡು ಇಡೀ ದೇಶಕ್ಕೆ ಮಾದರಿಯಾಗಿದೆ. ಚಾರಿತ್ರಿಕವಾಗಿ ಈ ನಾಡು ಹಲವು ಅಗ್ನಿದಿವ್ಯಗಳನ್ನು ಹಾದು ಬಂದಿದ್ದರೂ ತನ್ನ ಸಮಚಿತ್ತವನ್ನು ಕಳೆದುಕೊಂಡಿಲ್ಲ. ಪರಧರ್ಮ ಮತ್ತು ಪರವಿಚಾರಗಳನ್ನು ಸೈರಿಸಿಕೊಳ್ಳುವುದೇ ನಿಜವಾದ ಬಂಗಾರ ಎಂದು ಸಾರಿದ ಕನ್ನಡದ ಮೊದಲ ಉಪಲಬ್ಧ ಕೃತಿ ‘ಕವಿರಾಜಮಾರ್ಗ’ ರಚನೆಯಾಗಿದ್ದು ಇಲ್ಲಿಯೇ.
ವರ್ಗ, ವರ್ಣ, ಅಂಗ ಇತ್ಯಾದಿ ತಾರತಮ್ಯಗಳನ್ನು ಹಿಮ್ಮೆಟ್ಟಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನೆ ಬಲಿಕೊಟ್ಟುಕೊಂಡ ಶರಣರ ನಾಡು ಇದು. ಈ ನಾಡಿನ ತಾತ್ವಿಕ ಅನುಸಂಧಾನಗಳೆ ಇರಲಿ, ಧಾರ್ಮಿಕ ಆಚರಣೆಗಳೆ ಇರಲಿ, ಹಬ್ಬ-ಜಾತ್ರೆ, ಸಂತೆ, ಉರುಸ್ ಏನೇ ಇರಲಿ. ಅವೆಲ್ಲವೂ ಜನಸಮುದಾಯಗಳ ಕೂಡು ಬದುಕಿನ ನೆಲೆಯಲ್ಲಿ ಅರಳುತ್ತವೆ. ವೈಯಕ್ತಿಕ ಮದುವೆ. ಕುಬುಸ, ತೊಟ್ಟಿಲು, ಹುಟ್ಟುಹಬ್ಬ, ಮರಣ ಏನೇ ಇರಲಿ ಊರಿನ ಎಲ್ಲರೂ ಸೇರಿ ಸಾಮುದಾಯಿಕವಾಗಿಯೇ ಸಂಪನ್ನಗೊಳ್ಳುತ್ತವೆ.
ದೇಶವೆಂಬ ದೇಶವೇ ಹಿಂದೂ-ಮುಸ್ಲಿಂ ಎಂಬ ಕಲ್ಪಿತ ವೈರತ್ವದ ವಿಷಾನಿಲದ ಅಮಲಿನಲ್ಲಿ ಜೋಲಿ ಹೊಡೆಯುತ್ತಿದೆ. ಜನತೆಯ ಬದುಕು ಸಂಕಟದ ಹಳವಂಡದಲ್ಲಿ ಹೂತು ಹೋಗಿದೆ. ಸುಳ್ಳು ವದಂತಿ, ಹುಸಿ ಇತಿಹಾಸ, ರಾಜಕೀಯ ಪ್ರೇರಿತ ದಂಗೆ-ಗಲಭೆಗಳಲ್ಲಿ ಜನಜೀವನ ಮೂರಾಬಟ್ಟೆಯಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮೆಲ್ಲರ ಮೇಲೆ ಗುರುತರ ಹೊಣೆಗಾರಿಕೆ ಇದೆ.
ಹೌದು ಜನ ಸಮುದಾಯಗಳ ಬದುಕಿಗೆ ಕಾವಲುಗಾರರಾಗಿ ಅವರನ್ನು ಧರ್ಮಾಂಧತೆಯ ಈ ಅಮಲಿನಿಂದ ಹೊರ ತರಬೇಕಿದೆ. ಇಲ್ಲವಾದರೆ ದೇಶ ಸಂಪೂರ್ಣ ಸರ್ವನಾಶವಾಗಲಿದೆ.ಇಲ್ಲಾ. ಹಾಗಾಗಲು ಈ ದೇಶದ ಪ್ರಜ್ಞಾವಂತರು ಬಿಡಲಾರರು. ಬುದ್ಧ-ಬಸವ-ಬಾಬಾ-ಶರಣಬಸಪ್ಪ- ಬಂದೇನವಾಜರ ಈ ಕಲಬುರಗಿಯಲ್ಲಂತೂ ಕೋಮುವಾದದ ವಿಷಾನಿಲ ಪಸರಿಸಲು ಬಿಡಲಾರೆವು ಎಂಬ ಸಂದೇಶ ನೀಡಲು, ಕಲಬುರಗಿಯಲ್ಲಿ ಭಾವೈಕ್ಯತೆ ಬಿಂಬಿಸುವ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು.
ಜನೇವರಿ 30, 1948ರಂದು ‘ಹೇ ರಾಮ್’ ಎಂದು ಅಸು ನೀಗಿದ ಪರಮ ರಾಮಭಕ್ತ ಮಹಾತ್ಮ ಗಾಂಧೀಯನ್ನು ಗುಂಡಿಟ್ಟು ಕೊಂದವ ಆರ್ಎಸ್ಎಸ್ನ ಕಟ್ಟಾಳು ನಾಥರಾಮ ಗೋಡ್ಸೆ ಎಂಬುದು ಜಗಜ್ಜಾಹೀರು. ಕೊಲೆಯ ಈ ಅನಿಷ್ಟ ಸರಮಾಲೆ ಗಾಂಧೀಯಿಂದ ಗೌರಿಯವರೆಗೆ ನಡೆಯುತ್ತಲೆ ಇದೆ. ನಾಗರೀಕ ಸಮಾಜಕ್ಕೆ ಈಗ ಧರ್ಮಾಂಧತೆಯ ಗ್ರಹಣ ಬಡಿದುಕೊಂಡಿದೆ. ವಿಶ್ವಕ್ಕೆ ಕಂಟಕವಾಗಿರುವ ಈ ಬೃಹತ್ ಬಂಡವಾಳಶಾಹಿ ಪ್ರೇರಿತ ಗ್ರಹಣ ಬಿಡಿಸಲು ನಾವೆಲ್ಲ ಸಾಮರಸ್ಯದ ಹೆಜ್ಜೆ ಇಡಬೇಕಿದೆ.
ಕೈಗೆ ಕೈ ಜೋಡಿಸಿ ನಾಡು ಉಳಿಸಿಕೊಳ್ಳಬೇಕಿದೆ. ತನ್ಮೂಲಕ ಸರ್ವಶ್ರೇಷ್ಠವಾದ ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯಬೇಕಿದೆ. ಬರಿ ಬಂಧುಗಳೆ ನಮ್ಮೊಂದಿಗೆ ಸಣ್ಣ ಹೆಜ್ಜೆ. ನಿಮ್ಮ ಈ ಪುಟ್ಟ ಪಾದ ತ್ರಿವಿಕ್ರಮನಾಗಿ ಕೋಮುವಾದಿಗಳ ತಲೆ ಮೆಟ್ಟದೆ ಇರದು ಎಂದು ಹೇಳಿದರು.
ಈ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಎನ್. ಎಫ್.ಆಯ್. ಡಾಬ್ಲೂ ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ), ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ದಲಿತ ಸಂಘರ್ಷ ಸಮಿತಿ, ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ ಸಿ.ಆಯ್.ಟಿ.ಯು ಸಮುದಾಯ, ಮಾನವ ಬಂಧುತ್ವ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾ ಡಿ ವಾಯ್ ಎಫ್ ಆಯ್ ಭಾರತ ಜ್ಞಾನ ವಿಜ್ಞಾನ ಸಮಿತಿ ಬಸವ ಕೇಂದ್ರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬಿಸಿಲು ಬೆಳದಿಂಗಳು ಸಂವಿಧಾನ ಸಂರಕ್ಷಣಾ ಸಮಿತಿ, ಎ. ಆಯ್ ಕೆ ಎಸ್, ಎ. ಆಯ್. ಟಿ. ಯು. ಸಿ, ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಂಘ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಪ್ರಬುದ್ಧ ಭಾರತ್ ಸಂಘರ್ಷ ಸಮಿತಿ, ಅನೇಕ ವಿದ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು.