ದೇಶದ ಅತ್ಯುನ್ನತ ಪದವಿಯಾದ ಐಸಿಎಸ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಸಾಮಾಜಿಕ, ಆರ್ಥಿಕ ಹಾಗೂ ಸಮಾನತೆ ಸಮಾಜ ರೂಪಿಸಲು ಶ್ರಮಿಸಿದರು ಎಂದು ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಜಿಲ್ಲಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಹೇಳಿದರು.
ವಾಡಿ ಪಟ್ಟಣದಲ್ಲಿ ಬುಧವಾರ ಎಐಡಿಎಸ್‍ಒ) ಹಾಗೂ ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಭಾವಚಿತ್ರ ಮೆರವಣಿಗೆ ಉದ್ಘಾಟಿಸಿ ಮಾತನಾಡಿ,”ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ನೌಕರಿ ಮಾಡುವ ಬದಲು ದೇಶದ ಜನರನ್ನು ಬ್ರಿಟಿಷ್‌ರ ಶೋಷಣೆ, ದಬ್ಬಾಳಿಕೆಯಿಂದ ಮುಕ್ತಿಗೊಳಿಸಬೇಕೆಂದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮಕಿದರು” ಎಂದರು.
ಎಐಡಿಎಸ್‍ಒ ನಗರ ಸಮಿತಿ ಕಾರ್ಯದರ್ಶಿ ಗೋವಿಂದ ಯಳವಾರ ಮಾತನಾಡಿ, “ಇಂದಿನ ಸಾಮಾಜಿಕ ವ್ಯವಸ್ಥೆ ಮತ್ತೊಂದು ಕ್ರಾಂತಿಗಾಗಿ ಕೂಗುತ್ತಿದೆ. ಜಾತಿ, ಧರ್ಮ, ಧ್ವಜಗಳ ಹೆಸರಿನಲ್ಲಿ ನಮ್ಮ ರಾಜಕಾರಣಿಗಳು ಯುವಜನರ ಐಕ್ಯತೆಯನ್ನು ಒಡೆದು ಹಾಕುತ್ತಿದ್ದಾರೆ. ಕೋಮು ಸಂಘರ್ಷಗಳು ಸಾಮಾಜದ ಅಶಾಂತಿಗೆ ಕಾರಣವಾಗುತ್ತಿವೆ. ಭಾರತೀಯರು ಎಂಬ ಭಾವಕ್ಕೆ ಕೋಮುವಾದ ದೊಡ್ಡ ಪೆಟ್ಟು ನೀಡುತ್ತಿದೆ” ಎಂದರು.
“ಕುವೆಂಪು ಸಾರಿದ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೇಳುತ್ತಿವೆ. ವಿದ್ಯಾರ್ಥಿ ಯುವಜನರು ಭ್ರಷ್ಟ ರಾಜಕೀಯ ಪಕ್ಷಗಳ ನಾಯಕರ ಬಾಲಂಗೋಚಿಗಳಾಗದೆ ವೈಜ್ಞಾನಿಕ ಚಿಂತನೆಗಳ ತಳಹದಿಯಲ್ಲಿ ಸಂಘಟಿತರಾಗುವ ಮೂಲಕ ನೇತಾಜಿ ಬೋಸ್ ಅವರ ಕನಸು ನನಸು ಮಾಡಲು ಮುಂದಾಗಬೇಕು” ಎಂದು ಕರೆ ನೀಡಿದರು.
ನಿವೃತ್ತ ಹಿರಿಯ ಶಿಕ್ಷಕ ಅನೀಲಕುಮಾರ ಕುಲಕರ್ಣಿ ನೇತಾಜಿ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ವಿದ್ಯಾರ್ಥಿಗಳ ಪ್ರಭಾತ್‍ಪೇರಿಗೆ ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶೂದ್ರ ಸ್ವಾಮಿ ಕೇಸರಿ ಸ್ವಾಮಿಯಾಗುವುದು ತಪ್ಪೇ?
ಕಾರ್ಯಕ್ರಮದಲ್ಲಿ ಎಐಡಿವೈಒ ಕಾರ್ಯದರ್ಶಿ ಗೌತಮ ಪರ್ತೂಕರ, ಎಐಡಿಎಸ್‍ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಶಿಕ್ಷಕರಾದ ಗೀತಾ ಠಾಕೂರ, ಯಾಸ್ಮೀನ್ ಬೇಗಂ, ರುಕ್ಮಿಣಿ, ಮುಖಂಡರಾದ ಗೋದಾವರಿ ಕಾಂಬಳೆ, ಶರಣುಕುಮಾರ ದೋಶೆಟ್ಟಿ, ಶರಣು ಹೇರೂರ, ದತ್ತಾತ್ರೇಯ ಹುಡೇಕರ, ಸಂಪತಕುಮಾರ, ಜೈಭೀಮ್ ದಾಸರ, ರಾಜು ಒಡೆಯರಾಜ, ಮಹೆಬೂಬ್ ಸೇರಿದಂತೆ ವಿವಿಧ ಪ್ರೌಢ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿದ್ಧಾರ್ಥ ತಿಪ್ಪನೋರ ನಿರೂಪಿಸಿ, ವಂದಿಸಿದರು.