ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿದರೆ ಗ್ರಾಮಕ್ಕೆ ಬರಬೇಕಾದರೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಬರುವಂತಹ ಸ್ಥಿತಿ ಎದುರಾಗಿದ್ದು, ಅಂತಹ ಬೃಹತ್ ಗುಂಡಿಗಳು ಇವೆ. ಇದರಿಂದ ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸುಮಾರು 6 ವರ್ಷಕ್ಕೂ ಅಧಿಕ ವರ್ಷಗಳಿಂದ ರಸ್ತೆಗಳ ಪರಿಸ್ಥಿತಿ ಇದೇ ರೀತಿ ಇದೆ. ಆಗಿನ ಬಿಜೆಪಿ ಎಂಎಲ್‌ಎ ಅಶೋಕ್ ನಾಯ್ಕ್ ಅವರ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುತ್ತಮುತ್ತಲಿನ ಕೆರೆ, ಚಾನೆಲ್ ಮತ್ತು ಗದ್ದೆಗಳು ಇದ್ದು, ಹೆಚ್ಚು ಕಡಿಮೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹಾಗಾಗಿ ಸ್ಥಳೀಯ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ತ್ವರಿತಗತಿಯಲ್ಲಿ ರಸ್ತೆ ರಿಪೇರಿ ಮಾಡಿಸಿಕೊಡಬೇಕು” ಎಂದು ಆಗ್ರಹಿಸಿದರು.
“ಕೆಲವು ತಿಂಗಳ ಹಿಂದೆ ಒಂದು ಅಜ್ಜಿಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗುವಾಗ ಬೈಕ್ ಆಯತಪ್ಪಿ ಬಿದ್ದು, ಅಜ್ಜಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ಇದೊಂದು ಸಾವಿನ ಗುಂಡಿಯಂತಾಗಿದೆ. ನಿತ್ಯವೂ ಊರಿನ ಒಳಗೆ ಬರಲು ಹೊರಗಡೆ ಹೋಗಲು ತೀವ್ರ ಸಮಸ್ಯೆ ಆಗುತ್ತಿದ್ದೂ ಶಾಲಾ ಮಕ್ಕಳಿಗೆ ಮತ್ತು ವೃದ್ಧರಿಗೆ ಅನಾರೋಗ್ಯ ಪೀಡಿತರು ಹೀಗೆ ಎಲ್ಲರೂ ಸಮಸ್ಯೆ ಎದುರಿಸುವಂತಾಗಿದೆ” ಎಂದು ಹೇಳಿದರು.
“ಪ್ರಸ್ತುತ ಜೆಡಿಎಸ್ ಎಂಎಲ್‌ಎ ಶಾರದಾ ಪುರ್ಯ ನಾಯಕ್ ಅವರ ಗಮನಕ್ಕೂ ತಂದಿದ್ದು, ಇಷ್ಟು ತಿಂಗಳು ಕಳೆದರೂ ಸಮಸ್ಯೆ ಬಗೆಹರಿಸಿ ಕೊಡುತ್ತಿಲ್ಲ. ಇಲ್ಲಿಗೆ ಬಸ್ ವ್ಯವಸ್ಥೆಯೂ ಇಲ್ಲ. ಬಸ್ ವ್ಯವಸ್ಥೆ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಕ್ಕೆ ಬಸ್ ವ್ಯವಸ್ಥೆಯಾಗಿದೆ. ಆದರೆ, ರಸ್ತೆ ಸರಿ ಇಲ್ಲದೆ ಬಸ್ ಕೂಡ ಬರುತ್ತಿಲ್ಲ. ಸಂಜೆ ವೇಳೆಯಲ್ಲಿ ಶಾಲಾ ಮಕ್ಕಳು ಬರಲು ತುಂಬ ಅನಾನುಕೂಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಲ್ಲಿರುವ ಚಾನೆಲ್ ಕೂಡ ಗಬ್ಬೆದ್ದು ನಾರುತ್ತಿದೆ. ಚಾನೆಲ್‌ಗೆ ಕಸ, ಇತರೆ ತ್ಯಾಜ್ಯ ಸೇರಿದ್ದು, ತುಂಬಿ ತುಳುಕುತ್ತಿದೆ. ಇದನ್ನೂ ಕೂಡ ಸ್ವಚ್ಛಗೊಳಿಸಿಲ್ಲ. ರಸ್ತೆ ಕಾಮಗಾರಿ ಕಳಪೆಯಾಗಿದ್ದು, ರಸ್ತೆ ತುಂಬೆಲ್ಲಾ ಗುಂಡಿಮಯವಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲು ತೂರಾಟ; ತಪ್ಪಿತಸ್ಥರ ಕ್ರಮಕ್ಕೆ ಕುರುಬರ ಸಂಘ ಆಗ್ರಹ
ಮಾಹಿತಿಗಾಗಿ ಈ ದಿನ.ಕಾಮ್ ಪಿಡಿಒ ನಾಗಮಣಿ ಅವರನ್ನು ಸಂಪರ್ಕ ಮಾಡಿದ್ದು, ಅವರು ರಜೆಯಲ್ಲಿ ಇದ್ದೇನೆ. ಎರಡು ದಿನಗಳ ನಂತರ ಮಾಹಿತಿ ನೀಡುತ್ತೇನೆಂದು ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಶಾಸಕ ಶಾರದಾ ಪುರ್ಯ ನಾಯಕ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಮಾತನಾಡಿ, “ಸರ್ಕಾರ ಯಾವುದೇ ರೀತಿಯ ಅನುದಾನ ನೀಡುತ್ತಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಅನುದಾನ ಬಂದ ಕೂಡಲೇ ಮೊದಲ ಪ್ರಾತಿನಿಧ್ಯವನ್ನು ಬಿದರೆ ಗ್ರಾಮಕ್ಕೆ ನೀಡಿ ರಸ್ತೆ ಮಾಡಿಕೊಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.
