ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಯ ಮೂಲಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಅನ್ನು ಸೋಲಿಸುವ ಪಣ ತೊಟ್ಟಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಇನ್ನೂ ಕೂಡ ಸೀಟು ಹಂಚಿಕೆಯ ವಿಚಾರ ಅಧಿಕೃತವಾಗಿಲ್ಲ. ಮಾತುಕತೆ ಮುಂದುವರಿಯುತ್ತಲೇ ಇದೆ.
ಈ ನಡುವೆ ಮಂಡ್ಯದ ಕೆರಗೋಡುವಿನ ಹನುಮಧ್ವಜದ ವಿವಾದಕ್ಕೆ ಸಂಬಂಧಿಸಿ ಒಟ್ಟಿಗೆ ಪ್ರತಿಭಟನೆ ನಡೆಸಿದೆ. ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತೋ ಅಥವಾ ಬಿಜೆಪಿ ಸ್ಫರ್ಧೆ ಮಾಡುತ್ತೋ ಎಂಬ ವಿಚಾರ ಬಹಳಷ್ಟು ಚರ್ಚೆಗೂ ಗ್ರಾಸವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ನಡೆದ ಪ್ರತಿಭಟನೆಯ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವೇದಿಕೆಗೆ ಬರುತ್ತಿದ್ದಂತೆಯೇ ಬಿಜೆಪಿಯ ಮುಖಂಡರಾದ ನಾರಾಯಣ ಗೌಡ ಹಾಗೂ ಪ್ರೀತಂ ಗೌಡ ವೇದಿಕೆಯಿಂದ ಕಾಲ್ಕಿತ್ತಿದ್ದರು.
ಈ ಎಲ್ಲ ಬೆಳವಣಿಗೆಯ ನಡುವೆಯೇ ತನ್ನ ಬಯಕೆಯನ್ನು ವ್ಯಕ್ತಪಡಿಸಿರುವ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್, ತನಗೆ ಮಂಡ್ಯದ ಮೊದಲ ಬಿಜೆಪಿ ಸಂಸದೆಯಾಗುವ ಆಸೆಯಿದೆ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿ- ಜೆಡಿಎಸ್ ಮೈತ್ರಿಯ ಫಲವಾಗಿ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಬಹುದು ಎಂಬ ವರದಿಗಳ ನಡುವೆಯೇ ಸುಮಲತಾ ಅವರಿಂದ ಈ ಹೇಳಿಕೆ ಬಂದಿದೆ.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, “ಮಂಡ್ಯಕ್ಕೆ ಬಿಜೆಪಿಯಿಂದ ಮೊದಲ ಸಂಸದೆ ನಾನಾಗಬೇಕು ಎಂಬ ಬಯಕೆ ಇದೆ. ಇದರಲ್ಲಿ ತಪ್ಪೇನಿದೆ? ಜೊತೆಗೆ ಬಿಜೆಪಿ ಈ ಸೀಟ್ ತನ್ನಲ್ಲೇ ಉಳಿಸಿಕೊಳ್ಳುತ್ತದೆ ಎಂಬ ನಂಬಿಕೆ ನನಗೆ ಇದೆ” ಎಂದು ಹೇಳಿಕೆ ನೀಡಿದ್ದಾರೆ.
“2018 ವಿಧಾನಸಭಾ ಚುನಾವಣೆಯ ಫಲಿತಾಂಶ ನೋಡಿದರೆ ಬಿಜೆಪಿಗೆ ಎಷ್ಟು ಶೇಕಡವಾರು ಮತ ಬಂದಿದೆ ಅಂತ ಗೊತ್ತಾಗುತ್ತದೆ. ಆದರೂ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳೇ ಬೇರೆ ಬೇರೆ. ಮೋದಿಯವರ ಶಕ್ತಿಯನ್ನು ಬಳಸಿ ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಅನ್ನೋ ಆಸೆ ನನಗಿದೆ” ಎಂದು ಸುಮಲತಾ ಮನದ ಇಚ್ಚೆ ಹೊರಹಾಕಿದ್ದಾರೆ.
ಈ ನಡುವೆ ಬೆಂಗಳೂರಿನಿಂದ ನೀವು ಕಣಕ್ಕೆ ಇಳಿಯುವ ಸಾಧ್ಯತೆ ಕೂಡ ಚರ್ಚೆಯಾಗುತ್ತಿದೆಯಲ್ಲವೇ ಎಂದು ಪತ್ರಕರ್ತರು ಕೇಳಿದ್ದಕ್ಕೆ ಉತ್ತರಿಸಿದ ಸುಮಲತಾ, “ಇವೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಚರ್ಚೆ. ಈ ಬಗ್ಗೆ ನಾನೆಲ್ಲಿಯೂ ಮಾತನಾಡಿಲ್ಲ. ನನ್ನ ಬಳಿ ಕೂಡ ಯಾರೂ ಈ ಬಗ್ಗೆ ಕೇಳಿಲ್ಲ. ಆದರೂ ಎಲ್ಲ ಕಡೆ ಊಹಾಪೋಹ ಹರಿದಾಡುತ್ತಿದೆ. ಆದರೆ ನಾನು ಮಾತ್ರ ಮಂಡ್ಯ ಬಗ್ಗೆ ಗಮನ ಹರಿಸುತ್ತಿದ್ದೇನೆ” ಎಂದು ಸುಮಲತಾ ಹೇಳಿದರು.