ನಾಯಕರ ಹೇಳಿಕೆಗಳಲ್ಲಿ, ಅವರಿಗೆ ಬೇಕಾದ ಅಂಶವನ್ನು ಹೆಕ್ಕಿ, ಅದಕ್ಕೆ ಒಗ್ಗರಣೆ ಕೊಟ್ಟು, ಆ ಒಗ್ಗರಣೆಯ ಘಾಟು ಊರಿಗೆಲ್ಲ ಅಡರುವಂತೆ ಮಾಡುವುದು. ಯಾವುದೋ ಪಕ್ಷದ ಪರ ವಕಾಲತ್ತು ವಹಿಸಿ ಸುದ್ದಿ ಸೃಷ್ಟಿಸುವುದು, ಹಂಚುವುದು ಎಂದರೆ ಇದೇ. ಇದೇ ಗೋದಿ ಮೀಡಿಯಾ!
ಫೆ. 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ ಸಂದರ್ಭದಲ್ಲಿ, ಸಂಸದರ ಅಭಿಪ್ರಾಯ-ಅನಿಸಿಕೆಗಳನ್ನು ಕೇಳುತ್ತಿದ್ದ ಕೆಲ ದೃಶ್ಯ ಮಾಧ್ಯಮಗಳ ಸುದ್ದಿಗಾರರನ್ನು ಉದ್ದೇಶಿಸಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ‘ದೇಶದಲ್ಲೇ ಅತೀ ಹೆಚ್ಚು ತೆರಿಗೆ ಹಣ ಕಟ್ಟುವ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ. ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗ್ತಿದೆ. ಹೀಗೆಯೇ ಮುಂದುವರೆದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತದೆ. ಪ್ರತ್ಯೇಕ ರಾಷ್ಟ್ರದ ಕೂಗು ಏಳಲಿದೆ’ ಎಂದರು.
ಇದೇ ಸಂದರ್ಭದಲ್ಲಿ ಟಿವಿ ಒಂಭತ್ತರಲ್ಲಿ ನ್ಯೂಸ್ ಆಂಕರ್, ನಾಲ್ವರು ಗಣ್ಯರನ್ನು ಕೂರಿಸಿಕೊಂಡು ಕೇಂದ್ರ ಬಜೆಟ್ ಬಗ್ಗೆ ಚರ್ಚಿಸುತ್ತಿದ್ದರು. ಚರ್ಚೆಗೂ ಮುನ್ನವೇ ಆಂಕರ್, ‘ಇದು ಐತಿಹಾಸಿಕ ಬಜೆಟ್, ಜನಹಿತ ಬಜೆಟ್, ವಿಕಸಿತ ಬಜೆಟ್’ ಎಂದು ಬಜೆಟ್ ಪರವಾದ ನರೇಟಿವ್ ಕಟ್ಟುತ್ತಿದ್ದರು. ಚರ್ಚೆಯಲ್ಲಿ ಪಾಲ್ಗೊಂಡಿದ್ದವರನ್ನು ಅವರ ಮೂಗಿನ ನೇರಕ್ಕೆ ಒಗ್ಗಿಸಿಕೊಳ್ಳಲು ವೇದಿಕೆ ನಿರ್ಮಿಸುತ್ತಿದ್ದರು.
ಹಾಗಾಗಿ ಅದನ್ನು ಚರ್ಚೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಜೊತೆಗೆ, ಅಲ್ಲಿದ್ದವರು ಐದು ಮಂದಿ. ಅದರಲ್ಲಿ ಟಿವಿ ಒಂಭತ್ತರ ಆಂಕರ್, ಇಬ್ಬರು ಹಿರಿಯ ಅರ್ಥಶಾಸ್ತ್ರಜ್ಞರು, ಜೆಡಿಎಸ್ಸಿನ ಒಬ್ಬರು- ಈ ನಾಲ್ವರು ಮೋದಿಯ ಭಜನಾ ಮಂಡಳಿಯ ಸದಸ್ಯರು. ಮಿಕ್ಕ ಒಬ್ಬರು- ಅದು ನಾವು ಮತ್ತೊಬ್ಬರಿಗೂ ಸ್ಪೇಸ್ ಕೊಡುತ್ತೇವೆ ಎಂದು ತೋರಿಸಿಕೊಳ್ಳಲು- ಕಾಂಗ್ರೆಸ್ಸಿನ ನಿಕೇತ್ ಮೌರ್ಯ.
ಅಂದರೆ, ಆ ಚರ್ಚೆ ಯಾರ ಪರವಿರಬೇಕು, ಯಾರನ್ನು ಖಳನಾಯಕರನ್ನಾಗಿ ಚಿತ್ರಿಸಬೇಕು ಮತ್ತು ನಾಡಿನ ಮುಂದೆ ಬಿಂಬಿಸಬೇಕು ಎಂಬುದು ಪೂರ್ವಯೋಜಿತ. ಇಂತಹ ‘ಗಹನ’ವಾದ ಚರ್ಚೆ ನಡೆಯುತ್ತಿರುವ ನಡುವಿನಲೇ, ಡಿಕೆ ಸುರೇಶ್ ಅವರ ಬಜೆಟ್ ಕುರಿತ ಅಭಿಪ್ರಾಯ ಫ್ಲಾಶ್ ನ್ಯೂಸ್ ರೀತಿ ಬಂದುಹೋಗುತ್ತದೆ. ತಕ್ಷಣ ಆಂಕರ್ ಮುಖ ಅರಳುತ್ತದೆ, ಬಾಯಿಗೆ ಬಿಸ್ಕೆಟ್ ಬಂದು ಬಿದ್ದಷ್ಟು ಖುಷಿಯಲ್ಲಿ, ‘ನೋಡಿ, ನೋಡಿ, ದೇಶ ಒಡೆಯುವ ಮಾತು, ಏನ್ ಮಾತಾಡ್ತಿದೀನಿ ಎಂಬ ಅರಿವಿದೆಯಾ ಅವರಿಗೆ, ಕಾಂಗ್ರೆಸ್ಸಿಗರ ಕತೆ ಏನು ಅಂತ’ ಎಂದು ಪ್ರಚೋದನಾತ್ಮಕ ಮಾತುಗಳನ್ನು ಆಡುತ್ತಾರೆ. ಅದಕ್ಕೆ ತಕ್ಕಹಾಗೆ ಅವರ ಹಾವಭಾವ ಬದಲಾಗುತ್ತದೆ. ಬಜೆಟ್ ಮೇಲಿನ ಚರ್ಚೆ ಹಳಿ ತಪ್ಪುತ್ತದೆ. ಪ್ರತ್ಯೇಕ ರಾಷ್ಟ್ರದ ಕೂಗು, ರಾಷ್ಟ್ರದ ಏಕತೆಯ ಬದಲಿಗೆ ಪ್ರತ್ಯೇಕತೆಯ ಚರ್ಚೆಯಾಗಿ ಬದಲಾಗುತ್ತದೆ. ಇದ್ದ ಒಬ್ಬನೇ ಒಬ್ಬ ಕಾಂಗ್ರೆಸ್ಸಿಗರಾದ ನಿಕೇತ್ ಮೌರ್ಯರ ಮೇಲೆ ಮುರಿದುಕೊಂಡು ಬೀಳುವ ಆಂಕರ್, ‘ಈ.. ಈ.. ಹೇಳಿಕೆಗೆ ಏನ್ ಹೇಳ್ತಿರಿ ನೀವು’ ಎನ್ನುತ್ತಾರೆ.
ಅವರು ನಾಲ್ಕು ಜನ, ಇವರು ಒಬ್ಬರು. ಆ ಕ್ಷಣದಲ್ಲಿ ಅವರು ಕೊಂಚ ಮೌನ ತಾಳುತ್ತಾರೆ. ಎರಡೇ ಸೆಕೆಂಡ್, ಅಷ್ಟಕ್ಕೇ ಆಂಕರ್, ‘ಯಾಕೆ, ಏನು ಮಾತು ಬರ್ತಿಲ್ವಾ?’ ಎಂದು ಅವರನ್ನು ಇನ್ನಷ್ಟು ಕಂಗೆಡಿಸುತ್ತಾರೆ. ಒಂಥರಾ ವ್ಯಂಗ್ಯದಲ್ಲಿ ಅವರನ್ನು ಪ್ರಚೋದಿಸಲು ಪ್ರಯತ್ನಿಸುತ್ತಾರೆ.
ಆದರೆ ನಿಕೇತ್ ಮೌರ್ಯ, ತಮ್ಮ ಪಕ್ಷವನ್ನು, ನಾಯಕರನ್ನು ಬಿಟ್ಟುಕೊಡದೆ, ‘ನೋಡಿ, ಕೇಂದ್ರಕ್ಕೆ ಹೋಗುತ್ತಿರುವ ತೆರಿಗೆಯಲ್ಲಿ ಕರ್ನಾಟಕದ ಪಾಲು ಹೆಚ್ಚಿದೆ. ಜಿಎಸ್‌ಟಿ, ಕಸ್ಟಮ್ಸ್ ಎಲ್ಲವೂ ಅಧಿಕ. ಆದರೆ ಅತ್ತ ಕಡೆಯಿಂದ ಬರುತ್ತಿರುವ ಮೊತ್ತ ಅತ್ಯಲ್ಪ. ಇದು ತಾರತಮ್ಯವಲ್ಲವೇ? ಇದನ್ನೇ ಅವರು ಕೇಳಿರಬಹುದು, ಅಷ್ಟೇ…’ ಎನ್ನುತ್ತಾರೆ.
ನಿಕೇತ್ ಮೌರ್ಯ ತೆರಿಗೆ, ತಾರತಮ್ಯದ ಬಗ್ಗೆ ಹೇಳ್ತಿದ್ದಹಾಗೆ… ಆಂಕರ್, ‘ಅಲ್ಲ, ಅಲ್ಲ, ಅವರು ಬಾಯ್ತಪ್ಪಿ ಹೇಳಿದಾರೆ ಅಂತಿರಾ’ ಎಂದು ಪ್ರಶ್ನಿಸಿ, ಆ ಚರ್ಚೆಯನ್ನು ಬೆಳೆಸಲು ಹವಣಿಸುತ್ತಾರೆ.
ಇದನ್ನು ಓದಿದ್ದೀರಾ?: ಮಹಾತ್ಮ ಗಾಂಧಿ | ಸಂಭಾಷಣೆಯಲ್ಲಿ ರೂಪುಗೊಂಡ ಲೋಕಹಿತ ಚಿಂತಕ
ಟಿವಿ ಒಂಭತ್ತಾದ್ದರಿಂದ, ಅದಕ್ಕಿರುವ ನೆಟ್ ವರ್ಕ್ ನೆರವಿನಿಂದ ಅಷ್ಟೇ ವೇಗವಾಗಿ, ಫೀಲ್ಡ್‌ನಲ್ಲಿದ್ದ ಸುದ್ದಿಗಾರರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಂಪರ್ಕಿಸಿ, ‘ಸುರೇಶರಿಂದ ಪ್ರತ್ಯೇಕ ರಾಷ್ಟ್ರದ ಕೂಗು ಕೇಳಿಬಂದಿದೆ, ಏನಂತೀರಾ?’ ಎಂದು ಕೇಳುತ್ತಾರೆ. ಅವರು ಅನುಭವಿ, ‘ನಾನು ಅಖಂಡ ಭಾರತದ ಪರ. ಜನರ ಅಭಿಪ್ರಾಯವನ್ನು ಅವರು ಹೇಳಿರಬೇಕು’ ಎನ್ನುತ್ತಾರೆ. ಡಿಕೆಯ ಹೇಳಿಕೆಯನ್ನು ಅಲ್ಲಿಗೇ ಬಿಟ್ಟು, ಬಿಜೆಪಿ ನಾಯಕರತ್ತ ಓಡುತ್ತಾರೆ.
ಬರಗೆಟ್ಟ ಬಿಜೆಪಿಗೆ ಬಿಸಿ ಭೋಜನ ಸಿಕ್ಕಷ್ಟು ಖುಷಿ. ಶೋಭಾ ಕರಂದ್ಲಾಜೆ, ವಿಜಯೇಂದ್ರ, ಆರ್. ಅಶೋಕ್, ಅಶ್ವತ್ಥನಾರಾಯಣ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ- ತಲೆಗೊಂದು ಹೇಳಿಕೆ, ಕಾಂಗ್ರೆಸ್ಸನ್ನು ಕಂಗೆಡಿಸಿದ ಖುಷಿ. ಅದನ್ನು ಅಷ್ಟೇ ಖುಷಿಯಿಂದ ಬಿತ್ತರಿಸಿ, ಕಡ್ಡಿಯನ್ನು ಗುಡ್ಡ ಮಾಡಿದ ಟಿವಿ ಒಂಭತ್ತು, ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ಸಿಗರನ್ನು ದೇಶದ್ರೋಹಿಗಳನ್ನಾಗಿ ಚಿತ್ರಿಸುವಲ್ಲಿ, ಅದನ್ನು ರಾಜ್ಯದಾದ್ಯಂತ ಹಂಚುವುದರಲ್ಲಿ ಯಶಸ್ವಿಯೂ ಆಯಿತು.
ಹೇಳಿಕೇಳಿ ಅದು ಟಿವಿ ಒಂಭತ್ತು. ಸುದ್ದಿ ವಾಹಿನಿಗಳ ನಡುವಿನ ಟಿಆರ್ಪಿ ರೇಟಿಂಗ್ ನಲ್ಲಿ ಮುಂದಿದೆ. ಪೈಪೋಟಿ ಯುಗವಾದ್ದರಿಂದ ಅದರಲ್ಲಿ ಬಂದ ಸುದ್ದಿಯನ್ನು ಮಿಕ್ಕ ಮಾಧ್ಯಮಗಳೂ ಅನುಸರಿಸುತ್ತವೆ. ಹಾಗಾಗಿ ಅದು ಇಡೀ ದಿನ ಬಿತ್ತರಿಸುವ ಬಿಸಿ ಸುದ್ದಿಯಾಯಿತು. ಬಿಜೆಪಿಗೆ ಲಾಭವಾಯಿತು, ಕಾಂಗ್ರೆಸ್ಸಿಗೆ ಕಷ್ಟವಾಯಿತು.
ಕುಕಡ್ ಅಪ್ ಸ್ಟೋರಿ ಅಂದರೆ ಇದೇ. ನಾಯಕರ ಹೇಳಿಕೆಗಳಲ್ಲಿ, ಅವರಿಗೆ ಬೇಕಾದ ಅಂಶವನ್ನು ಹೆಕ್ಕಿ, ಅದಕ್ಕೆ ಒಗ್ಗರಣೆ ಕೊಟ್ಟು, ಆ ಒಗ್ಗರಣೆಯ ಘಾಟು ಊರಿಗೆಲ್ಲ ಅಡರುವಂತೆ ಮಾಡುವುದು. ಯಾವುದೋ ಪಕ್ಷದ ಪರ ವಕಾಲತ್ತು ವಹಿಸಿ ಸುದ್ದಿ ಸೃಷ್ಟಿಸುವುದು, ಹಂಚುವುದು ಎಂದರೆ ಇದೇ. ಇದೇ ಗೋದಿ ಮೀಡಿಯಾ!
ಅಸಲಿಗೆ, ಮಾಧ್ಯಮಗಳು ತಳೆಯಬೇಕಾದ ನಿಲುವೇನು?
ಕೇಂದ್ರ ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುವ 2ನೇ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಮಹಾರಾಷ್ಟ್ರದ ತರುವಾಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕರ್ನಾಟಕದ ಕೊಡುಗೆ ಗಮನಾರ್ಹ. ಕರ್ನಾಟಕದಿಂದ 2022-23ನೇ ಸಾಲಿನಲ್ಲಿ ಸುಮಾರು 3.50 ಲಕ್ಷ ಕೋಟಿ ರೂ. ವರಮಾನ ಕೇಂದ್ರ ಸರ್ಕಾರಕ್ಕೆ ಸಂದಾಯವಾಗಿದೆ. ಆದರೆ ಕರ್ನಾಟಕದಿಂದ ಕಂಡಾಬಟ್ಟೆ ಕಾಸು ಕಿತ್ತುಕೊಂಡರೂ ನ್ಯಾಯಯುತ ಪಾಲು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿರುವುದು ಋಜುವಾತಾಗುತ್ತಲೇ ಇದೆ.
ಅನೇಕ ಬಾರಿ ಮುಖ್ಯಮಂತ್ರಿ ಆದಿಯಾಗಿ ಸಚಿವರ ನಿಯೋಗ, ಉನ್ನತಾಧಿಕಾರಿಗಳ ತಂಡಗಳು ಕೇಂದ್ರದ ಮೇಲೆ ಒತ್ತಡ ಹೇರಿದರೂ ನಿರೀಕ್ಷಿತ ಅನುದಾನ ನೀಡದೇ ಇರುವುದು ಆಕ್ಷೇಪಕ್ಕೆ ಆಸ್ಪದ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಮತ್ತು ಆದಾಯ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಅದಕ್ಕೆ ಸಮಾನಾಂತರವಾಗಿ ರಾಜ್ಯಕ್ಕೆ ಹಣ ಹಂಚಿಕೆಯಾಗುತ್ತಿಲ್ಲ. ಪ್ರಕೃತಿ ವಿಕೋಪ, ನೀರಾವರಿ, ರೈಲ್ವೆ ಯೋಜನೆಗಳಿಗೆ ಮಾತ್ರವಲ್ಲ; ಜಿಎಸ್‌ಟಿ ಪಾಲು ಹಂಚಿಕೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದರಿಂದ ಅಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗುತ್ತಿರುವುದೂ ಸುಳ್ಳಲ್ಲ.
ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ಹಣಕಾಸು ಆಯೋಗದ ಶಿಫಾರಸು ಮೂಲಕ ವರ್ಗಾವಣೆ ರೂಪದಲ್ಲಿ ಕೇಂದ್ರ ಸರ್ಕಾರ ಹಣವನ್ನು ಕೊಡುತ್ತದೆ. ಆದರೆ ಈ ಯಾವ ಅನುದಾನಗಳೂ ಸಮರ್ಪಕವಾಗಿಲ್ಲ. ಸಮಯಕ್ಕೆ ಸರಿಯಾಗಿ ಬಂದ ದಾಖಲೆಯಿಲ್ಲ. ದಕ್ಷಿಣ ಹಾಗೂ ಉತ್ತರ ರಾಜ್ಯಗಳ ನಡುವೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ; ದಕ್ಷಿಣದ ರಾಜ್ಯಗಳು ತೆರಿಗೆ ರೂಪದಲ್ಲಿ ಹೆಚ್ಚು ಆದಾಯ ಕೊಟ್ಟರೂ ಅವುಗಳಿಗೆ ಅನುದಾನ ಕಡಿಮೆ ದೊರೆಯುತ್ತಿದೆ ಎಂಬ ಕೂಗೂ ಇದೆ. ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಾನದಂಡಗಳೇ ಬದಲಾಗಬೇಕು ಎಂಬ ಒತ್ತಡವೂ ಕೇಳಿ ಬರುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರವಾಹಕ್ಕೆದುರು ದಶಕ ಕಾಲದ ಈಜು- Scroll.in ಗೆ ಅಭಿನಂದನೆ!
ರಾಜ್ಯದ ಜನರ ಪರವಿರುವ ಮಾಧ್ಯಮಗಳು ಇದನ್ನು ಪ್ರಶ್ನಿಸಬೇಕಲ್ಲವೇ? ಇವರು ಪ್ರಶ್ನಿಸಲಾಗದಿದ್ದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಪ್ರಶ್ನೆ ಮಾಡುವುದನ್ನು ಪ್ರೋತ್ಸಾಹಿಸಬೇಕಲ್ಲವೇ? ರಾಜ್ಯದಿಂದ ಕೇಂದ್ರಕ್ಕೆ ಹೋದ ಸಂಸದರು ಪ್ರಧಾನಿ ಮೋದಿಯವರ ಮೇಲೆ ಒತ್ತಡ ತರಬೇಕಲ್ಲವೇ? ಇದು ರಾಜ್ಯದ ಹಿತ ಕಾಯುವ ಕೆಲಸವಲ್ಲವೇ?
ಪ್ರಶ್ನೆ ಮಾಡಿದರೆ, ಮಾಡುವಾಗಿನ ಮಾತು ಕೊಂಚ ಒರಟಾದರೆ… ದೇಶದ್ರೋಹಿಯ ಪಟ್ಟ ಕಟ್ಟಿಟ್ಟ ಬುತ್ತಿ. ದೇಶದ್ರೋಹಿ ಎಂದು ಬಿಜೆಪಿ ಹೇಳುವುದಿಲ್ಲ. ಆದರೆ ಅವರ ಗೋದಿ ಬಿಸ್ಕತ್ ತಿಂದ ಪತ್ರಕರ್ತರು, ಮಾಧ್ಯಮಗಳು ಹೇಳುತ್ತವೆ.
ಇವರನ್ನು ಏನಂತ ಕರೆಯಬೇಕು?

ಲೇಖಕ, ಪತ್ರಕರ್ತ
ಲೇಖಕರು ನಕಲಿ ದೇಶಭಕ್ತರು ಹುಸಿ ಹಿಂದುತ್ವವಾದಿಗಳನ್ನು ಜಾಗ ನೋಡಿ ತಿವಿದಿದ್ದಾರೆ,, ಆದರೆ ಫ್ಯಾಸಿಸ್ಟ್ ಮನಸ್ಥಿತಿಯವರು ಇದೆಲ್ಲಾ ಮೆದುಳು ಪ್ರವೇಶ ಆಗುವುದೇಯಿಲ್ಲ
ಅಸಮಾನ ಹಂಚಿಕೆ, ಹೀಯಾಳಿಕೆ , ಮೈಬಣ್ಣ ನೋಡಿ ಕೀಳಾಗಿ ವರ್ತಿಸುವುದು , ಸೋಲಿನ ನೀಚ ಸೇಡು. ಮನೆ ಮಗ ಹೊರಹೋಗನೆ?