ಕಲ್ಯಾಣ ಕರ್ನಾಟಕ ಭಾಗದಲ್ಲಿನ ಬಸವ ಕಲ್ಯಾಣದ ಅನುಭವ ಮಂಟಪವು 12ನೇ ಶತಮಾನದಲ್ಲಿ ಸಮಸಮಾಜದ ಕನಸಿನಿಂದ ನಿರ್ಮಾಣವಾಗಿತ್ತು. ಆ ಆದಿಸೆಯಲ್ಲಿ ತಮ್ಮ ವಚನಗಳ ಮೂಲಕ ಸಮಸಮಾಜವನ್ನು ಪ್ರತಿಪಾದಿಸಿದವರು ಮಡಿವಾಳ ಮಾಚಿದೇವ ಶರಣರು ಎಂದು ವಿಜಯಪುರ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.
ವಿಜಯಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಶರಣರು ಅಂದು ಹಾಕಿಕೊಟ್ಟ ಹಾಗೂ ತಿಳಿಸಿದ ವಿಚಾರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ಅಂದಿನ ಬಸವಾದಿ ಶರಣರು ಕಾಯಕ ತತ್ವವನ್ನು ಅನುಸರಿಸಬೇಕು. ಅವರ ಜೀವನ ಆದರ್ಶಗಳನ್ನು ಅಳವಡಿಕೊಳ್ಳಬೇಕು” ಎಂದು ಅವರು ಹೇಳಿದರು.
ಅಪರ ಪೊಲೀಸ್ ವರಿಷ್ಟಾಧಿಕಾರಿ ರಾಮನಗೌಡ ಹಟ್ಟಿ ಮಾತನಾಡಿ, “ಶರಣರು 12ನೇ ಶತಮಾನದಲ್ಲಿ ಸಮಾರು 770 ಶಿವಶರಣರು ಒಂದೆಡೆ ಸೇರಿ ಅನುಭವ ಮಂಟಪದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಏಕತೆಗಾಗಿ ಚಿಂತನ-ಮಂಥನ ಹಾಗೂ ಘೋಷ್ಟಿಗಳನ್ನು ನಡೆಸುತ್ತಿದ್ದರು. ಅಂದಿನ ವಚನಗಳು ಇಂದು ನಮ್ಮ ಜೀವನೋಪಾಯ ನಡೆಸಲು ಒಂದು ದಾರಿಯಾಗಿವೆ. ಶಿವಶರಣರ ವಚನಗಳು ಸಮಾಜಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಲ್ಲದೆ, ವಚನಗಳಿಂದ ನಾವುಗಳೂ ಕಲಿಯಬೇಕಾದದ್ದು ಬಹಳಷ್ಟಿದೆ. ನಾವು ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ನಾವೆಲ್ಲರೂ ಒಂದೆ ಎನ್ನುವ ಭಾವನೆ ನಮ್ಮಲ್ಲಿರಬೇಕು. ಅದರೊಂದಿಗೆ ಎಲ್ಲ ಸಮಾಜವನ್ನು ಪ್ರಿತಿಯಿಂದ, ಗೌರವದಿಂದ ಕಾಣಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಂಜುನಾಥ ಜನಗೊಂಡ , ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ, ಜಿ.ಪಂ ಯೋಜನಾಧಿಕಾರಿ ಎ.ಬಿ ಅಲ್ಲಾಪುರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿ ಅಯ್ಯುಬ್ ದ್ರಾಕ್ಷಿ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ಸಾಯಬಣ್ಣ ಮಡಿವಾಳರ, ಸಮಾಜದ ಮುಖಂಡರುಗಳಾದ ಬಾಬು ಬಳ್ಳಾರಿ, ಮುತ್ತಪ್ಪ ಮಡಿವಾಳರ, ಪ್ರಭು ಮಡಿವಾಳರ, ಶಿವಪ್ಪ ಹುಬ್ಬಳ್ಳಿ, ಶ್ರೀಶೈಲ ಅಗಸರ, ಮಲಕಪ್ಪ ಹುಬ್ಬಳ್ಳಿ, ಸಂತೋಷ ಬಾಗಲಕೋಟ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ಗಿರೀಶ ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು. ಸುಭಾಸ ಕಲ್ಲೂರ ನಿರೂಪಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು.