ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯ ನಂತರ ಭಾರತದ ಕೇಸರಿ ನಕ್ಷೆ ಬರೆದಿರುವುದನ್ನು ವಿರೋಧಿಸಿದ ವಿದ್ಯಾರ್ಥಿ ಅಮಾನತಿಗೆ ತಡೆಹಿಡಿದ ಎನ್‌ಐಟಿ ಕ್ಯಾಲಿಕಟ್
ಕಳೆದ ತಿಂಗಳು ರಾಮ ಮಂದಿರ ಉದ್ಘಾಟನೆಯ ದಿನದಂದು ಭಾರತದ ಕೇಸರಿ ನಕ್ಷೆ ರಚನೆ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಯನ್ನು ಎನ್‌ಐಟಿ (ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ) ಕ್ಯಾಲಿಕಟ್ ಅಮಾನತು ಮಾಡಿದ ನಂತರ ಕ್ಯಾಂಪಸ್‌ನಲ್ಲಿ ಬಿಗುವಿನ ವಾತಾವರಣ ಕಂಡುಬಂದಿತ್ತು. ಇದೀಗ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮಾನತು ನಿರ್ಧಾರ ತಡೆಹಿಡಿಯಲಾಗಿದೆ. ವಿದ್ಯಾರ್ಥಿಗೆ ಮೇಲ್ಮನವಿ ಸಲ್ಲಿಸಿ ತನ್ನ ಪ್ರತಿಕ್ರಿಯೆ ಮಂಡಿಸಲು ಅವಕಾಶ ಕೊಡಲಾಗಿದೆ
ಎನ್‌ಐಟಿಯಲ್ಲಿ ನಾಲ್ಕನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವ್ಯಾಸಖ್ ಪ್ರೇಮ್‌ಕುಮಾರ್ ಅಮಾನತು ಮಾಡಿರುವುದನ್ನು ಕಾಲೇಜು ಆಡಳಿತ ಘೋಷಿಸಿದ ನಂತರ ಅನೇಕ ವಿದ್ಯಾರ್ಥಿ ಸಂಘಟನೆಗಳು ಕಾಲೇಜು ಆವರಣದೊಳಗೆ ಪ್ರತಿಭಟನೆಯನ್ನು ಆಯೋಜಿಸಿವೆ. ಪ್ರಸ್ತುತ ಅಮಾನತುಗೊಂಡ ವಿದ್ಯಾರ್ಥಿಯ ಮೇಲ್ಮನವಿಯನ್ನು ಆಲಿಸಿ ನಿರ್ಧಾರ ಕೈಗೊಳ್ಳುವವರೆಗೂ ಶಾಲಾ ಆಡಳಿತ ಅಮಾನತು ಆದೇಶದ ಜಾರಿಯನ್ನು ತಡೆಹಿಡಿದಿದೆ.
ಜನವರಿ 22ರಂದು ವಿಜ್ಞಾನ ಮತ್ತು ಧಾರ್ಮಿಕ ಕ್ಲಬ್ ಎನ್ನುವ ಬ್ಯಾನರ್ ಅಡಿಯಲ್ಲಿ ಕೆಲವು ವಿದ್ಯಾರ್ಥಿಗಳು ಎನ್‌ಐಟಿ ಗೇಟ್ ಬಳಿ ಕೇಸರಿ ಬಣ್ಣದಲ್ಲಿ ಭಾರತದ ನಕ್ಷೆಯನ್ನು ಬಿಡಿಸಿದ್ದರು. ಪ್ರೇಮ್‌ಕುಮಾರ್ ನೇತೃತ್ವದಲ್ಲಿ ಕೆಲವು ವಿದ್ಯಾರ್ಥಿಗಳು ಈ ನಕ್ಷೆಯ ವಿರುದ್ದ ಪ್ರತಿಭಟಿಸಿದ್ದರು. ಪ್ರತಿಭಟನೆಯ ಸಂದರ್ಭ ಪ್ರೇಮ್‌ಕುಮಾರ್ ‘ಭಾರತ ರಾಮರಾಜ್ಯವಲ್ಲ’ ಎನ್ನುವ ಘೋಷಣಾ ಫಲಕವನ್ನು ಹಿಡಿದಿರುವುದನ್ನು ಇತರ ಕೆಲವು ವಿದ್ಯಾರ್ಥಿಗಳು ವಿರೋಧಿಸಿದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು.
ಜನವರಿ 31ರಂದು ಸಂಸ್ಥೆಯ ಸ್ಟೂಡೆಂಟ್ ವೆಲ್‌ಫೇರ್ (ವಿದ್ಯಾರ್ಥಿಗಳ ಕಲ್ಯಾಣ) ಡೀನ್ ಪ್ರೇಮ್‌ಕುಮಾರ್ ಅವರನ್ನು ಒಂದು ವರ್ಷ ಅಮಾನತು ಮಾಡಿರುವುದನ್ನು ಘೋಷಿಸಿದ್ದರು. ಪ್ರೇಮ್‌ಕುಮಾರ್ ಸಂಸ್ಥೆಯಲ್ಲಿ ಸಂಘರ್ಷ ಮತ್ತು ಶಾಂತಿ ಕದಡುವ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಆದರೆ ಸಿಪಿಐ(ಎಂ)ನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಮತ್ತು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಕೆಎಸ್‌ಯು ಫೆಬ್ರವರಿ 1ರಂದು ಕಾಲೇಜು ಆವರಣದೊಳಗೆ ಪ್ರತಿಭಟನೆ ಆಯೋಜಿಸಿದ್ದವು. ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯ ಕಾವಿನ ನಡುವೆ ಸಂಸ್ಥೆ ಇದೀಗ ಅಮಾನತು ಜಾರಿಯನ್ನು ತಡೆಹಿಡಿದಿರುವುದಾಗಿ ಆದೇಶಿಸಿದೆ.