ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಹೊಸ ವಿನ್ಯಾಸದ ಅಶ್ವಮೇಧ ಕ್ಲಾಸಿಕ್ 800 ಬಸ್‌ಗಳನ್ನು 2024ರ ಮೇ ಅಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ಮಾಡಲು ಉದ್ದೇಶಿಸಿದೆ ಎಂದು ನಿಗಮ ತಿಳಿಸಿದೆ.
ಕೆಎಸ್‌ಆರ್‌ಟಿಸಿಯ ಕೆಂಗೇರಿ ವರ್ಕ್ ಶಾಪ್ಗೆ 100 ಹೊಸ ಬಸ್ ಬಂದಿವೆ. ಕೆಎಸ್ಆರ್ಟಿಸಿಗೆ ಒಟ್ಟು ಸಾವಿರ ಹೊಸ ಬಸ್‌ಗಳು ಬರಲಿವೆ. ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್‌ಗಳು ಬಂದಿವೆ. ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಫೆಬ್ರುವರಿ 5 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ವಿಧಾನಸೌಧದ ಮುಂಭಾಗ (ಗ್ರ್ಯಾಂಡ್ ಸ್ಟೇಪ್ಸ್) ಮೇಲೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ ರಸ್ತೆಗಿಳಿದಿರುವ ಈ 100 ಬಸ್‌ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ಹೆಸರಿಡಲಾಗಿದೆ. ಈ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಶ್ವಮೇಧ ಕ್ಲಾಸಿಕ್ ಬಸ್‌ಗಳು 3.42 ಮೀಟರ್ ಎತ್ತರವಿದ್ದು, 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ ಹಾಗೂ ಆರು ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್ ಒಳಗೊಂಡಿದೆ. 52 ಬಕೆಟ್ ಸೀಟು, ಬಸ್ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್‌ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೇಜ್ ಇಡಲು ದೊಡ್ಡದಾದ ಸ್ಥಳಾವಕಾಶ ನೀಡಲಾಗಿದೆ.
ಇನ್ನು ಈ ಬಸ್‌ಗಳು ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಈ ಬಸ್‌ಗಳಲ್ಲಿ ಲಭ್ಯವಿದೆ.
ಈಗಾಗಲೇ ಸಾರಿಗೆ ಇಲಾಖೆ ಅಂಬಾರಿ ಉತ್ಸವ ಬಸ್, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಪರಿಚಯಿಸಿದ್ದು, ಇದೀಗ ಕೆಎಸ್‌ಆರ್‌ಟಿಸಿಯ ನೂತನ ವಿನ್ಯಾಸ ಪಾಯಿಂಟು ಟು ಪಾಯಿಂಟ್ ಎಕ್ಸಪ್ರೆಸ್ ಅಶ್ವಮೇಧ ಬಸ್‌ಗಳು ಫೆಬ್ರುವರಿ 5ರಿಂದ ರಸ್ತೆಗಿಳಿಯಲಿವೆ.
ಈ ಸುದ್ದಿ ಓದಿದ್ದೀರಾ? ಕುಸಿದ ಅಂತರ್ಜಲ | ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ
ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಘನ ಉಪಸ್ಥಿತಿವಹಿಸಲಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಸಚಿವರು, ಶಾಸಕರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.