ಕ್ರಿಕೆಟ್ ಪ್ರೇಮಿಗಳನ್ನು, ಅದರಲ್ಲೂ ಐಪಿಎಲ್ ಕ್ರಿಕೆಟ್ ಪ್ರೇಮಿಗಳನ್ನು ಪ್ರೇರೇಪಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ಅದಕ್ಕಾಗಿ, ಹುಬ್ಬಳ್ಳಿಯಲ್ಲಿ ‘ಐಪಿಎಲ್ ಫ್ಯಾನ್ ಪಾರ್ಕ್’ಅನ್ನು ತೆರೆದಿದೆ. ಇದು ಏಪ್ರಿಲ್ 15 ಮತ್ತು 16ರ ಶನಿವಾರ-ಭಾನುವಾರ ತೆರೆದಿರಲಿದೆ. ಇಲ್ಲಿ 38X20 ಅಡಿಗಳ ಬೃಹತ್ ಎಲ್ಇಡಿ ಪರದೆಯನ್ನು ಹಾಕಲಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಒಂದೆಡೆ ಕುಳಿತು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.
“ಸ್ಥಳದಲ್ಲಿ ನಾಲ್ಕು ಕ್ರಿಕೆಟ್ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ‘ಫ್ಯಾನ್ ಪಾರ್ಕ್’ನ ದೈತ್ಯ ಪರದೆಯ ಮೇಲೆ ಕ್ರಿಕೆಟ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಾತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿದೆ” ಎಂದು ಬಿಸಿಸಿಐನ ಕಾರ್ಯಾಚರಣೆ ವ್ಯವಸ್ಥಾಪಕ ಅನಂತ್ ದಾತಾರ್ ಹೇಳಿದ್ದಾರೆ.
“ಭಾರತದ 45 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ತೆರೆಯಲಾಗಿದೆ. ಹುಬ್ಬಳ್ಳಿಯಲ್ಲಿನ ಈ ವಿಶೇಷ ಕಾರ್ಯಕ್ರಮದಲ್ಲಿ 10,000ಕ್ಕೂ ಹೆಚ್ಚು ಜನರು ಭಾಗವಹಿಸಲು ನಿರೀಕ್ಷೆಯಿದೆ” ಎಂದು ಅವರು ಹೇಳಿದ್ದಾರೆ.

“ಇದು ಕ್ರಿಕೆಟ್ ಅಭಿಮಾನಿಗಳಿಗೆ ಕ್ರೀಡಾಂಗಣದಂತಹ ಅನುಭವವನ್ನು ನೀಡುತ್ತದೆ. ಕ್ರಿಕೆಟ್ ಪ್ರೇಮಿಗಳು ನೆಚ್ಚಿನ ಆಟಗಾರರು, ನೆಚ್ಚಿನ ತಂಡಗಳ ಕುರಿತು ತಮ್ಮ ಪ್ರೀತಿಯನ್ನು ಒಂದೆಡೆ ಕಲೆತು ವ್ಯಕ್ತಪಡಿಸಲು ಕಾರ್ಯಕ್ರಮ ಅವಕಾಶ ನೀಡುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಕಿತ್ತೂರು ಕರ್ನಾಟಕ: ಬಿಜೆಪಿ ಅಭ್ಯರ್ಥಿಗಳಿಗೆ ಬಿಸಿ ತಟ್ಟಲಿರುವ ಬಂಡಾಯ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯದ ಸಂಚಾಲಕ ನಿಖಿಲ್ ಭೂಸದ್ ಮಾತನಾಡಿ, “ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ‘ಐಪಿಎಲ್ ಫ್ಯಾನ್ ಪಾರ್ಕ್’ ನಿರ್ಮಿಸಲಾಗಿದೆ. ಮೂರು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಪ್ರತಿಕ್ರಿಯೆಯನ್ನು ನೋಡಿದ್ದ ಬಿಸಿಸಿಐ, ಕರ್ನಾಟಕದಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಆಯೋಜಿಸಲು ಹುಬ್ಬಳ್ಳಿ ನಗರವನ್ನು ಆಯ್ಕೆ ಮಾಡಿದೆ” ಎಂದಿದ್ದಾರೆ.
ಹುಬ್ಬಳ್ಳಿಯ ನಂತರ, ಬೆಳಗಾವಿ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌ಗಳನ್ನು ಯೋಜಿಸುವ ನಿರೀಕ್ಷೆ ಇದೆ.