ಸಂಘಪರಿವಾರ, ಬಿಜೆಪಿ ರಾಜಕೀಯಕ್ಕಾಗಿ ಸೃಷ್ಟಿಸಿದ್ದ ಕೆರಗೋಡು ಧ್ವಜ ವಿವಾದವನ್ನು ಖಂಡಿಸಿ ಮಂಡ್ಯದ ಸಮಾನ ಮನಸ್ಕರ ವೇದಿಕೆ ಫೆಬ್ರವರಿ 7ರಂದು ಮಂಡ್ಯ ಬಂದ್‌ಗೆ ಕರೆಕೊಟ್ಟಿತ್ತು. ಇದೀಗ, ಬಂದ್‌ಅನ್ನು ಹಿಂಪಡೆದಿದೆ. ಮಂಡ್ಯ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ವೇದಿಕೆ ಬಂದ್ ಕರೆಯನ್ನು ಹಿಂಪಡೆದಿದೆ ಎಂದು ವರದಿಯಾಗಿದೆ.
ಕೆರಗೋಡು ಗ್ರಾಮ ಪಂಚಾಯತಿ ಎದುರಿನ ಧ್ವಜಸ್ಥಂಭದಲ್ಲಿ ರಾಷ್ಟ್ರಧ್ವಜ ಹಾರಿಸುವಾಗಿ ಅನುಮತಿ ಪಡೆದಿದ್ದ ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಕೇಸರಿ ಧ್ವಜ ಹಾರಿಸಿದ್ದರು. ಅದನ್ನು ತೆರವುಗೊಳಿಸಿ ಅಧಿಕಾರಿಗಳು ರಾಷ್ರಧ್ವಜ ಹಾರಿಸಿದ್ದರು. ಕೇಸರಿ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿತ್ತು. ಅಲ್ಲದೆ, ಫೆ.9ಕ್ಕೆ ಮಂಡ್ಯ ಬಂದ್‌ಗೆ ಹಿಂದುತ್ವ ಕೋಮುವಾದಿ ಸಂಘಟನೆಗಳು ಕರೆಕೊಟ್ಟಿವೆ. ಹಿಂದುತ್ವವಾದಿಗಳ ಬಂದ್ ವಿರೋಧಿಸಿ ಸಮಾನ ಮನಸ್ಕರ ವೇದಿಕೆ ಫೆ.7ರಂದು ಮಂಡ್ಯ ಬಂದ್‌ಗೆ ಕರೆಕೊಟ್ಟಿತ್ತು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್, ಎಸ್‌ಪಿ ಎನ್ ಯತೀಶ್ ನೇತೃತ್ವದಲ್ಲಿ ಸಭೆ ನಡೆದಿದೆ. ಬಂದ್‌ನಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರಿಗಳಿಗೆ ತೊಂದೆರೆಯಾಗುತ್ತದೆ. ಬಂದ್ ಮಾಡುವುದು ಬೇಡವೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ವೇದಿಕೆ, ‘ಫೆ.9ರ ಬಂದ್‌ಗೆ ಅವಕಾಶ ಕೊಡಬಾರದು. ಒಂದು ವೇಳೆ, ಅಂದು ಹಿಂದುತ್ವವಾದಿಗಳು ಬಂದ್ ಮಾಡಿದರೆ, ಮತ್ತೊಂದು ದಿನ ಬಂದ್ ಮಾಡುತ್ತೇವೆ’ ಎಂಬ ಶರತ್ತಿನ ಮೇಲೆ ಬಂದ್ ಕರೆಯನ್ನು ಹಿಂಪಡೆದಿದೆ.