ಮೋದಿ ಪ್ರಧಾನಿ ಅದಾಗಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ದೇಶದಲ್ಲಿ ಸರ್ವಾಧಿಕಾರಿ ನಡೆಯುತ್ತಿದೆ. ಅವರ ವಿರುದ್ಧ ಮಾತನಾಡಿದವರನ್ನ ಹೆದರಿಸುವ ಕೆಲಸ ನಡೆಯುತ್ತಿದೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಅದಕ್ಕಾಗಿ ಅನಿವಾರ್ಯವಾಗಿ ನಾವು ಪ್ರತಿಭಟನೆ ಹಮ್ಮಿಕೊಳ್ಳುವಂತಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದ್ದರೂ ಕೂಡ ಕೇಂದ್ರ ಸರ್ಕಾರ ಮಾನವೀಯ ನೆಲೆಯಲ್ಲೂ ಕೂಡ ಒಂದು ರೂಪಾಯಿಯ ನೆರವು ನೀಡಿಲ್ಲ. ರಾಜ್ಯದ ಬಿಜೆಪಿ ನಾಯಕರು ಯಾವ ಮುಖ ಇಟ್ಟುಕೊಂಡು ನಮ್ಮ ವಿರುದ್ಧ ಮಾತನಾಡುತ್ತಾರೆ. ಅನಿವಾರ್ಯವಾಗಿ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಈ ಅನಿವಾರ್ಯತೆ ಕೇವಲ ಕರ್ನಾಟಕದ್ದು ಮಾತ್ರವಲ್ಲ. ಇದು ಎಲ್ಲ ಬಿಜೆಪಿಯೇತರ ರಾಜ್ಯ ಸರ್ಕಾರಗಳ ಸಮಸ್ಯೆ ಇದು. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ” ಎಂದು ತಿಳಿಸಿದರು.
“ಚಂಡೀಗಢ ಮೇಯರ್ ಚುನಾವಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳೇ ಆತಂಕ ವ್ಯಕ್ತಪಡಿಸಿ, ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದ್ದಾರೆ. ಇದು ಕೇವಲ ಒಂದು ಪ್ರಕರಣವಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದಂದಿನಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ ಆರಂಭವಾಗಿದೆ. ಪ್ರತಿಯೊಂದು ಹಂತದಲ್ಲೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯ ಸರ್ಕಾರಗಳನ್ನು ಬೀಳಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿಯವರ ಹುಟ್ಟುಗುಣ” ಎಂದು ಕಿಡಿಕಾರಿದರು.
“ರಾಜ್ಯಗಳ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಪ್ರಶ್ನಿಸದಂತೆ ಮಾಡಲಾಗುತ್ತಿದೆ. ಬಿಜೆಪಿಯವರೇ ಬಿಜೆಪಿ ವರಿಷ್ಠರನ್ನು ಪ್ರಶ್ನಿಸುವಂತಿಲ್ಲ. ಪ್ರಶ್ನೆ ಮಾಡಿದರೆ ಅವರನ್ನು ಮುಗಿಸುವ ಕೆಲಸವಾಗುತ್ತಿದೆ. ಬಿಜೆಪಿಯವರು ಹೆಸರಿಗಷ್ಟೇ ರಾಮರಾಜ್ಯ, ಜೈಶ್ರೀರಾಮ್ ಎಂದೆಲ್ಲ ಹೇಳುತ್ತಾರೆ. ಆದರೆ, ಅವರು ಮಾಡುವುದೆಲ್ಲ ಪಾಪದ ಕೆಲಸ” ದಿನೇಶ್ ಗುಂಡೂರಾವ್ ಕಿಡಿಕಾರಿದರು.
“ಕಾಂಗ್ರೆಸ್ ಯಾವತ್ತೂ ದೇಶ ಒಡೆಯುವ ಕೆಲಸ ಮಾಡಿಲ್ಲ ಎಲ್ಲರನ್ನು ಒಗ್ಗೂಡಿಸಿಕೊಂಡು ದೇಶದ ಸ್ವಾತಂತ್ರ್ಯ, ಐಕ್ಯತೆ ಮತ್ತು ಸಮಗ್ರತೆಗಾಗಿ ಹೋರಾಡಿದ ಪಕ್ಷ ತಮ್ಮದು. ಡಿಕೆ ಸುರೇಶ್ ಪ್ರತ್ಯೇಕ ದಕ್ಷಿಣ ಭಾರತದ ಬಗ್ಗೆ ಮಾತಾಡಿದ್ದು ತಪ್ಪು ಅಂತ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹೇಳಿದ್ದಾರೆ. ಅಸಲಿಗೆ ಸುರೇಶ್ ದೇಶ ಒಡೆಯವ ಮಾತು ಆಡಿಲ್ಲ, ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಮಾತ್ರ ಅವರು ಮಾತನಾಡಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕೆಜಿ ಅಕ್ಕಿಗೆ ₹29 | ‘ಅನ್ನಭಾಗ್ಯ’ಕ್ಕೆ ಕಲ್ಲು ಹಾಕುವ ಮೋದಿ ಸರ್ಕಾರದ ಚುನಾವಣಾ ತಂತ್ರಗಾರಿಕೆ
“ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಶಾಸಕ ಬಾಲಕೃಷ್ಣ, ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ ಎಂದು ಗ್ಯಾರಂಟಿಗಳನ್ನ ನಿಲ್ಲಿಸುವುದಿಲ್ಲ. ಯಾರೋ ಏನೋ ಹೇಳಿದರೆ ಎಂದು ಗ್ಯಾರೆಂಟಿ ನಿಲ್ಲಿಸಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಹೇಳಿದ ಎಲ್ಲ ಕೆಲಸವನ್ನು ಕೂಡ ಮಾಡಿದ್ದಾರೆ” ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.