ಕೇಂದ್ರ ಸರ್ಕಾರ ಕೆಜಿ ಅಕ್ಕಿಗೆ ₹29 ದರದಂತೆ ಮಾರುಕಟ್ಟೆಗೆ ನೇರವಾಗಿ ಬಿಡುಗಡೆ ಮಾಡುವ ಯೋಜನೆ ಪ್ರಕಟಿಸಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕಲ್ಲು ಹಾಕುವ ಮೋದಿ ಸರ್ಕಾರದ ಮತ್ತೊಂದು ಪ್ರಯತ್ನವಿದು ಎನ್ನುವುದು ಸ್ಪಷ್ಟ
ಕೇಂದ್ರ ಸರ್ಕಾರ ಹೊಸ ಯೋಜನೆಯೊಂದರಲ್ಲಿ ಭಾರತ್ ಬ್ರಾಂಡ್ ಅಕ್ಕಿಯನ್ನು ನೇರವಾಗಿ ಗ್ರಾಹಕರಿಗೆ ಊಹಿಸಲಾಗದ ಕೆಜಿ ಅಕ್ಕಿಗೆ ₹29 ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಲೋಕಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇರುವ ಸಮಯದಲ್ಲಿ ಬಿಜೆಪಿ ಸರ್ಕಾರ ಚಾಣಾಕ್ಷತನ ಪ್ರದರ್ಶಿಸಿ ಅಕ್ಕಿಯನ್ನು ನೇರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಎಂದು ಈ ನಡೆಯನ್ನು ವಿಶ್ಲೇಷಿಸಲಾಗುತ್ತಿದೆ. ವಾಸ್ತವದಲ್ಲಿ ಫೆಬ್ರವರಿ 6ರಿಂದ ಜಾರಿಗೆ ಬರಲಿರುವ ಈ ಯೋಜನೆ ಬಿಜೆಪಿ ಸರ್ಕಾರದ ಕುತಂತ್ರದ ಕಾರ್ಯಯೋಜನೆ ಎನ್ನಬಹುದು.
ಕರ್ನಾಟಕದಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಭರವಸೆ ನೀಡಿದ ಅಕ್ಕಿ ಕೊಡಲಾಗದೆ, ಪರ್ಯಾಯವಾಗಿ ಹಣ ನೀಡುತ್ತಿರುವ ಸಂದರ್ಭದಲ್ಲಿ ಕೇಂದ್ರದ ಹೊಸ ಯೋಜನೆ ಜಾರಿಗೆ ಬರಲಿದೆ ಎಂದು ಕರ್ನಾಟಕ ಬಿಜೆಪಿಯ ಎಕ್ಸ್ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆ ಟ್ವೀಟ್ ಮಾಡಿದೆ.
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಸರ್ಕಾರವು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಕೈಗೆಟುಕುವ ದರದಲ್ಲಿ ಭಾರತ್ ಬ್ರ್ಯಾಂಡ್ ಅಡಿ ಅಕ್ಕಿಯನ್ನು 1 ಕೆಜಿಗೆ ₹29 ಕ್ಕೆ ಲಭ್ಯಗೊಳಿಸಲಿದೆ.
ಇಂದಿನಿಂದ ಚಾಲನೆ ಸಿಗಲಿದ್ದು, ನಾಫೆಡ್ನ ಸಂಚಾರಿ ವಾಹನಗಳಲ್ಲಿ ಮತ್ತು ಆನ್ಲೈನ್ ಸ್ಟೋರ್ಗಳಲ್ಲಿ ಲಭ್ಯವಿರಲಿದೆ.… pic.twitter.com/y4G4xelxWt
— BJP Karnataka (@BJP4Karnataka) February 6, 2024
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
ನೇರ ಮಾರುಕಟ್ಟೆಯ ಮಾರಾಟದಿಂದ ಯಾರಿಗೆ ಲಾಭ?
ಕರ್ನಾಟಕ ಸರ್ಕಾರದ ಬಿಪಿಎಲ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಯೋಜನೆಗೆ ಅಕ್ಕಿ ಖರೀದಿಗೆ ಕೇಂದ್ರದ ಬಿಜೆಪಿ ಸರ್ಕಾರ ನೆರವು ನೀಡದೆ ಇರುವ ವಿವಾದ ಹಸಿರಾಗಿರುವಾಗಲೇ ಕೇಂದ್ರ ಸರ್ಕಾರ ನೇರವಾಗಿ ಮಾರುಕಟ್ಟೆಗೆ ಅಕ್ಕಿ ಬಿಡುಗಡೆಗೆ ಸಿದ್ಧವಾಗಿದೆ. ರಾಜ್ಯ ಮತ್ತು ಕೇಂದ್ರದ ನಡುವಿನ ಈ ಅಕ್ಕಿ ಬಿಕ್ಕಟ್ಟು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಎರವಾಗದಿರಲು ಮೋದಿ ಸರ್ಕಾರ ಹೊಸ ಹಾದಿ ಕಂಡುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತದೆ. ಚುನಾವಣೆಗೆ ಮೊದಲು ಇದು ಬಿಜೆಪಿಗೆ ಲಾಭದಾಯಕವಾಗಿ ಪರಿಣಮಿಸುವ ನಿರೀಕ್ಷೆಯನ್ನೂ ಮಾಡಲಾಗಿದೆ.
ವಾಸ್ತವದಲ್ಲಿ ಬಿಪಿಎಲ್ ಯೋಜನೆಯಡಿ 10 ಕೆಜಿ ಅಕ್ಕಿ ಫಲಾನುಭವಿಗಳಿಗೆ ನೇರವಾಗಿ ಸಿಗಲಿದೆ. ಕೇಂದ್ರದ ಯೋಜನೆಯಡಿ ₹29ಕ್ಕೆ ಕೆಜಿ ಅಕ್ಕಿ ಬಹುಶಃ ಬಿಜೆಪಿಯ ಪ್ರಣಾಳಿಕೆಯಲ್ಲಿ ಮಾತ್ರ ಉಳಿಯುವ ಸಾಧ್ಯತೆಯಿದೆ. ಏಕೆಂದರೆ, ಕೇಂದ್ರ ಭಂಡಾರದಲ್ಲಿ ಮತ್ತು ಇತರ ಆಯ್ದ ಜಾಗಗಳಲ್ಲಿ ಅಕ್ಕಿ ಲಭ್ಯವಿರುತ್ತದೆ. ದೇಶದಲ್ಲಿ 81 ಕೋಟಿ ಜನರನ್ನು ಬಿಪಿಎಲ್ ಯೋಜನೆಯಲ್ಲಿ ಪಡಿತರ ವ್ಯವಸ್ಥೆಯಡಿ ತರಲಾಗಿದೆ. ಅವರೂ ₹29ಕ್ಕೆ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಖರೀದಿಸಬಹುದು. ಆದರೆ ಈ ಬೆಲೆಗೆ ಕೆಲವೇ ಮಳಿಗೆಗಳಲ್ಲಿ ಅಕ್ಕಿ ದೊರೆಯಲಿದೆ. ಬಹುತೇಕ ಮಳಿಗೆಗಳು ದೆಹಲಿಯ ಅಕ್ಕಪಕ್ಕದಲ್ಲೇ ಇರಲಿವೆ. ಕರ್ನಾಟಕದಲ್ಲಿ ಯಾವ ಮಳಿಗೆಗಳಲ್ಲಿ ಅಕ್ಕಿ ದೊರೆಯಲಿದೆ ಎನ್ನುವುದು ಮುಖ್ಯವಾಗುತ್ತದೆ. ಈ ಬಗ್ಗೆ ಯೋಜನೆ ಜಾರಿಗೆ ಬಂದ ನಂತರ ಬಿಜೆಪಿಯೇ ಸ್ಪಷ್ಟಪಡಿಸಬೇಕಿದೆ. ಬಿಪಿಎಲ್ ಯೋಜನೆಯಡಿ ಪಡಿತರ ವ್ಯವಸ್ಥೆಯಡಿ ತಮ್ಮೂರಿನಲ್ಲೇ ಅಕ್ಕಿ ಪಡೆಯುವ ಫಲಾನುಭವಿಗಳು, ಕೇಂದ್ರದ ಯೋಜನೆಯಲ್ಲಿ ಅಕ್ಕಿ ಖರೀದಿಸಲು ಆಯ್ದ ಮಳಿಗೆಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ.
ಕೇಂದ್ರದ ಯೋಜನೆಯಲ್ಲಿ ₹29ರಂತೆ 5 ಕೆಜಿ ಅಕ್ಕಿ ₹145ಕ್ಕೆ ಸಿಗಲಿದೆ. ಆದರೆ, ರಾಜ್ಯ ಸರ್ಕಾರ 5 ಕೆಜಿ ಅಕ್ಕಿಗೆ ಫಲಾನುಭವಿಗಳ ಖಾತೆಗೆ ₹150 ಹಾಕುತ್ತಿದೆ! ಹೀಗಾಗಿ, ಕೇಂದ್ರದ ಅಕ್ಕಿ ನೇರ ಮಾರಾಟ ಯೋಜನೆಯು ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುವ ಯೋಜನೆಯ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ 10 ಕೆಜಿ ಉಚಿತ ಅಕ್ಕಿ ಯೋಜನೆಗೆ ಅಕ್ಕಿಯ ಖರೀದಿಗಾಗಿ ಸಂಕಷ್ಟಪಡುತ್ತಿರುವಾಗ ಕೇಂದ್ರದ ಯೋಜನೆ ಇನ್ನಷ್ಟು ಹೊಡೆತ ನೀಡಲಿದೆ. ಇದೀಗ ಹತ್ತು ಕಜಿ ನೀಡಲು ಅಕ್ಕಿ ಖರೀದಿಸಲಾಗದೆ ಪಡಿತರ ವ್ಯವಸ್ಥೆಯಡಿ 5 ಕೆಜಿ ಅಕ್ಕಿಯನ್ನಷ್ಟೇ ಉಚಿತವಾಗಿ ನೀಡಲಾಗುತ್ತಿದೆ. ಕೆಜಿ ಅಕ್ಕಿಗೆ ತಲಾ ₹34ರಂತೆ ಉಳಿದ 5 ಕೆಜಿ ಅಕ್ಕಿಯ ಮೊತ್ತವನ್ನು ಬಿಪಿಎಲ್ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ.
ಅಕ್ಕಿ ಖರೀದಿಗಾಗಿ ಪ್ರಯತ್ನಿಸುತ್ತಿರುವ ಕರ್ನಾಟಕ
ರಾಜ್ಯ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಕಳೆದ ಕೆಲವು ತಿಂಗಳಲ್ಲಿ ವಿಭಿನ್ನ ಏಜೆನ್ಸಿಗಳು ಮತ್ತು ಅಕ್ಕಿ ಗಿರಣಿದಾರರ ಜೊತೆಗೆ ಡಜನ್‌ಗಟ್ಟಲೆ ಸಭೆಗಳನ್ನು ಮಾಡಿದ್ದಾರೆ. ಆದರೆ ಅಕ್ಕಿ ಬೆಲೆಗಳು ಏರಿರುವ ಕಾರಣದಿಂದ ಕಾನೂನು ಪ್ರಕಾರ ಅಕ್ಕಿ ಸಂಗ್ರಹ ಭಾರತೀಯ ಆಹಾರ ಮಂಡಳಿಯ ಅಡಿಯಲ್ಲಿ ಬರುತ್ತದೆ. ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಫೆಡರೇಶನ್ ಅಥವಾ ಭಾರತೀಯ ರಾಷ್ಟ್ರೀಯ ಸಹಕಾರಿ ಬಳಕೆದಾರರ ಫೆಡರೇಶನ್ ಮೂಲಕ ಅಕ್ಕಿಯನ್ನು ಖರೀದಿಸಬೇಕಾಗುತ್ತದೆ. ಇದೀಗ ಕೇಂದ್ರ ಸರ್ಕಾರ ಕೆಜಿಗೆ ₹29ರಂತೆ ಭಾರತ್ ಬ್ರಾಂಡ್ ಹೆಸರಿನಲ್ಲಿ ನೇರವಾಗಿ ಮಾರುಕಟ್ಟೆಯಲ್ಲಿ ಮಾರಲು ನಿರ್ಧರಿಸಿದಾಗ, ಇವೇ ಫೆಡರೇಶನ್‌ಗಳ ಮೂಲಕ ಅಕ್ಕಿ ಖರೀದಿಸಲಿದೆ.
ರಾಜ್ಯಸರ್ಕಾರದ ಅಕ್ಕಿ ಖರೀದಿಗೆ ನೆರವಾಗದ ಕೇಂದ್ರ
ಸಚಿವ ಮುನಿಯಪ್ಪ ಅವರು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಫೆಡರೇಶನ್ ಅಥವಾ ಭಾರತೀಯ ರಾಷ್ಟ್ರೀಯ ಸಹಕಾರಿ ಬಳಕೆದಾರರ ಫೆಡರೇಶನ್‌ನಿಂದ ರಾಜ್ಯ ಸರ್ಕಾರ ನೇರವಾಗಿ ಅಕ್ಕಿಯನ್ನು ಖರೀದಿಸಬಹುದೇ ಎಂದು ವಿಚಾರಿಸಿದ್ದಾರೆ. ”ರಾಜ್ಯ ಸರ್ಕಾರದ ಉಚಿತ ಅಕ್ಕಿ ಯೋಜನೆಗೆ ನೆರವಾಗಲು ಕೇಂದ್ರ ಸರ್ಕಾರ ಏನೂ ನೆರವು ನೀಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಫೆಡರೇಶನ್‌ಗಳು ನೇರವಾಗಿ ಮಾರುವುದಿಲ್ಲ. ಆದರೆ ಕೇಂದ್ರ ಸರ್ಕಾರ ಈ ಎರಡು ಫೆಡರೇಶನ್‌ಗಳಿಂದ ಅಕ್ಕಿಯನ್ನು ಖರೀದಿಸುತ್ತಿದೆ” ಎಂದು ಮುನಿಯಪ್ಪ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ನೇರವಾಗಿ ಅಕ್ಕಿ ಮಾರುವ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ಮುನಿಯಪ್ಪ, ”ಕೇಂದ್ರ ಸರ್ಕಾರ ಪ್ರತಿ ಕೆಜಿಗೆ ₹38ರಂತೆ ಅಕ್ಕಿ ಖರೀದಿಸಿದೆ. ಅದನ್ನು ಶಾಶ್ವತವಾಗಿ ಗೋದಾಮಿನಲ್ಲಿ ಇಡಲು ಸಾಧ್ಯವಿಲ್ಲ. ಹೀಗಾಗಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ನಮಗೆ 2 ಲಕ್ಷ ಟನ್‌ಗಳಿಂದ 2.5 ಲಕ್ಷ ಟನ್‌ಗಳವರೆಗೆ ಅಕ್ಕಿಯ ಅಗತ್ಯವಿದೆ. ಆದರೆ ಅಕ್ಕಿ ಖರೀದಿ ಮೇಲಿನ ನಿಷೇಧದಿಂದಾಗಿ ಖರೀದಿಸಲಾಗುತ್ತಿಲ್ಲ” ಎಂದು ಹೇಳಿದ್ದಾರೆ.
ಮುನಿಯಪ್ಪ ಅವರ ಆರೋಪವನ್ನು ತಳ್ಳಿಹಾಕಿರುವ ಬೆಂಗಳೂರು ಕೇಂದ್ರದ ಲೋಕಸಭಾ ಸಂಸದ ಪಿಸಿ ಮೋಹನ್ ಪ್ರಕಾರ, ”ಅಕ್ಕಿ ಬೆಲೆಗಳು 15-20 ಪಟ್ಟು ಹೆಚ್ಚಾಗಿರುವುದರಿಂದ ಹಣದುಬ್ಬರ ನಿಯಂತ್ರಣದ ಪ್ರಯತ್ನವಾಗಿ ನೇರವಾಗಿ ಅಕ್ಕಿ ಮಾರಲಾಗುತ್ತಿದೆ” ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಹಣದುಬ್ಬರ ನಿಭಾಯಿಸಲು ಅಕ್ಕಿಯನ್ನು ನೇರವಾಗಿ ಮಾರಾಟ ಮಾಡುವ ಸಲಹೆಗಳನ್ನು ಆಹಾರ ತಜ್ಞರು ಹಿಂದೆಯೂ ನೀಡಿದ್ದರು. ಆದರೆ ರಾಜ್ಯ ಸರ್ಕಾರಗಳು ಪಡಿತರ ವ್ಯವಸ್ಥೆಯಡಿ ನೀಡುವ ಉಚಿತ ಅಕ್ಕಿ ಯೋಜನೆಗಳಿಗೆ ತಡೆಯೊಡ್ಡುವ ಅಥವಾ ಅಕ್ಕಿ ಖರೀದಿಗೆ ಅವಕಾಶ ನೀಡಬಾರದು ಎನ್ನುವ ಸಲಹೆಯನ್ನು ಬಹುಶಃ ಆಹಾರ ತಜ್ಞರು ನೀಡಲಾರರು.
ಕುಸಿದ ಅಕ್ಕಿ ಉತ್ಪಾದನೆ
2023ರಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೂಲಕ ಖರೀದಿಸಿದ ಅಕ್ಕಿಯ ಪ್ರಮಾಣ ಶೇ 12.7ರಷ್ಟು ಕುಸಿದಿದೆ ಎಂದು ಸರ್ಕಾರ ಹೇಳಿತ್ತು. 2023-24ರ ಅಕ್ಟೋಬರ್- ಸೆಪ್ಟೆಂಬರ್ ಋತುವಿನಲ್ಲಿ ಕೇಂದ್ರ ಸರ್ಕಾರ 521.27 ಲಕ್ಷ ಟನ್‌ಗಳಷ್ಟು ಖಾರಿಫ್ ಬೆಳೆಯಲ್ಲಿ ಖರೀದಿಸಿದೆ ಎಂದು ವರದಿಯಾಗಿತ್ತು. ಕೃಷಿ ಸಚಿವಾಲಯ ಖಾರಿಫ್ ಋತುವಿನಲ್ಲಿ ಅಕ್ಕಿಯ ಉತ್ಪಾದನೆ ಕುಸಿದಿದೆ ಎಂದೂ ತಿಳಿಸಿತ್ತು. ಹಿಂದಿನ ವರ್ಷದ 110.51 ದಶಲಕ್ಷ ಟನ್‌ಗಳಿಗೆ ಹೋಲಿಸಿದಲ್ಲಿ 2023-24ರಲ್ಲಿ 106.31 ದಶಲಕ್ಷ ಟನ್‌ಗಳಷ್ಟು ಅಕ್ಕಿ ಉತ್ಪಾದನೆಯಾಗಿದೆ. ಎರಡೂ ಖಾರಿಫ್ ಮತ್ತು ರಾಬಿ ಋತುವಿನಲ್ಲಿ 2023-24ರಲ್ಲಿ ಅಂದಾಜು ಸುಮಾರು 550 ಲಕ್ಷ ಟನ್‌ಗಳಷ್ಟು ಖರೀದಿಸುವ ಅಂದಾಜನ್ನು ಕೇಂದ್ರ ಸರ್ಕಾರ ತಿಳಿಸಿತ್ತು. 2022-23ರಲ್ಲಿ 569.47 ಲಕ್ಷ ಟನ್‌ಗಳೆಂದು ದಾಖಲಾಗಿತ್ತು.
ಒಂದಂತೂ ಸ್ಪಷ್ಟ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಅಕ್ಕಿ ಸಿಗದಂತೆ ಮಾಡುವುದು. ರಾಜ್ಯ ಸರ್ಕಾರ ನೀಡುವ ಬೆಲೆಗಿಂತ ಕಡಿಮೆ ಬೆಲೆ ಕೇಂದ್ರ ಸರ್ಕಾರವೇ ನೀಡಿ, ಅದರ ಜನಪ್ರಿಯತೆಯನ್ನು ಕುಗ್ಗಿಸುವುದಾಗಿದೆ. ಆ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಹಣಿಯಲು ಬಿಜೆಪಿ ಷಡ್ಯಂತ್ರ ರೂಪಿಸಿದೆ. ಇದಕ್ಕೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸಲಿದೆ ಮತ್ತು ಅದನ್ನು ಮೆಟ್ಟಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.