ನಾಡಿನ ಪರಂಪರೆ ಮತ್ತು ಇತಿಹಾಸ ಜನಸಾಮಾನ್ಯರಿಗೆ ಮುಟ್ಟಿಸಲು ಕರ್ನಾಟಕ ಸರ್ಕಾರ ಅನೇಕ ಉತ್ಸವಗಳನ್ನು ಮಾಡುತ್ತ ಬಂದಿದೆ. ಅದರಂತೆ ಬಸವ ಉತ್ಸವವು 2009-10ನೇ ಸಾಲಿನಿಂದ ಪ್ರಾರಂಭಿಸಿದೆ. ಆದರೆ ಪ್ರತಿವರ್ಷ ಬಸವ ಉತ್ಸವ ಆಚರಿಸುತ್ತಿಲ್ಲ ಎಂದು ಸರ್ಕಾರದ ನಡೆಯನ್ನು ಬಸವಪರ ಸಂಘಟನೆಗಳ ಪ್ರಮುಖರು ಖಂಡಿಸಿದರು.
ಬಸವಲ್ಯಾಣದ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಪ್ರೊ.ಸಿ.ಬಿ ಪ್ರತಾಪೂರೆ ಅವರು ಮಾತನಾಡಿ, “ಸರ್ಕಾರ ಒಂದು ಕಡೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ್ದಾರೆ. ಇನ್ನೊಂದು ಕಡೆ ಬಸವ ಉತ್ಸವ ಆಚರಿಸಲು ನಿಷ್ಕಾಳಜಿವಹಿಸುತ್ತಿರುವುದು ಖಂಡನೀಯವಾಗಿದೆ” ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಪ್ರೊ. ಎಸ್.ಜೆ ಕರಣೆ ಮಾತನಾಡಿ “ಸರ್ಕಾರ ಮೈಸೂರು ಉತ್ಸವ, ಹಂಪಿ ಉತ್ಸವ ಪ್ರತಿ ವರ್ಷ ಆಚರಿಸುತ್ತದೆ. ಅದರಂತೆ ಬಸವ ಉತ್ಸವವು ಸಹ ಪ್ರತಿ ವರ್ಷ ಆಚರಿಸಬೇಕು. ಈ ವರ್ಷ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದಕ್ಕೆ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ ಬಸವ ಉತ್ಸವವನ್ನು ವಿಶ್ವ ಮಟ್ಟದ ಉತ್ಸವವಾಗಿ ಬಸವಕಲ್ಯಾಣದಲ್ಲಿ ಪ್ರತಿ ವರ್ಷ ಆಚರಿಸುವಂತೆ ಸರ್ಕಾರ ಮುಂಬರುವ ಬಜೆಟನಲ್ಲಿ ಘೋಷಿಸಿ, ಅದಕ್ಕೆ 15 ಕೋಟಿಗೂ ಅಧಿಕ ಹಣವನ್ನು ಮೀಸಲಿಡುವ ಮುಖಾಂತರ ಬಸವ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು” ಎಂದು ಆಗ್ರಹಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ ಮನವಿ ಪತ್ರ ಓದಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬಸವಕಲ್ಯಾಣ ಸಹಾಯಕ ಆಯುಕ್ತರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವಕಲ್ಯಾಣ ಗ್ರೇಡ-2 ತಹಸೀಲ್ದಾರ್ ರಮೇಶ ಬಾಬು ಇದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜ್ಯ ಬಜೆಟ್‌ನಲ್ಲಿ ಕೃಷಿ ಕೂಲಿಕಾರರ ಬೇಡಿಕೆ ಘೋಷಣೆಗೆ ಆಗ್ರಹ
ಈ ಸಂದರ್ಭದಲ್ಲಿ ಪ್ರಮುಖರಾದ ಜಗನ್ನಾಥ ಪತಂಗೆ, ಪ್ರೊ.ಎ.ಡಿ ಪಾಟೀಲ, ಶಾಮರಾವ ಸಿಂಗ್, ಶ್ರೀಶೈಲ ಹುಡೆದ, ಬಾಬುರಾವ ಗೌಡಗಾಂವೆ, ಮಹಾದೇವಪ್ಪ ಇಜಾರೆ, ಗಣಪತಿ ಕಾಸ್ತೆ, ಜೈಪ್ರಕಾಶ ಸದಾನಂದೆ, ಬಸವಣಪ್ಪ ನೆಳಗಿ, ಸತ್ಯಕ್ಕ ತಾಯಿ ಸೇರರಿದಂತೆ ಇತರರಿದ್ದರು.