ದಾವಣಗೆರೆ ಜಿಲ್ಲೆಯ ಜಗಳೂರಿಲ್ಲಿ ರಸ್ತೆ ಬದಿಯಲ್ಲಿದ್ದ ಸಾಲು ಮರಗಳನ್ನು ಸೋಮವಾರ (ಫೆ.5) ಬೇಕಾಬಿಟ್ಟಿಯಾಗಿ ಕತ್ತರಿಸಲಾಗಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಸಿಲಿನಿಂದ ಸಾರ್ವಜನಿಕರಿಗೆ, ನೂರಾರು ಪಕ್ಷಿಗಳಿಗೆ, ದಾರಿ ಹೋಕರಿಗೆ ತಂಪೆರೆಯುತ್ತಿದ್ದ ದಶಕಗಳಷ್ಟು ಹಳೆಯ ದೊಡ್ಡ ದೊಡ್ಡ ಮರಗಳನ್ನು ಕ್ಷುಲ್ಲಕ ಕಾರಣ ಹೇಳಿ ಧರೆಗುರುಳಿಸಲಾಗಿದೆ. ಇಲ್ಲಿನ ರಾಮಾಲಯ ರಸ್ತೆಯಲ್ಲಿ 40ರಿಂದ 50ವರ್ಷಗಳ ಹಳೆಯದಾದ ನಾಲ್ಕು ದೈತ್ಯ ಮರಗಳನ್ನು ಯಂತ್ರಗಳನ್ನು ಬಳಸಿ ಕತ್ತರಿಸಲಾಗಿದೆ.
ವಿದ್ಯುತ್ ಲೈನ್ ಮೇಲೆ ಮರದ ಕೊಂಬೆಗಳು ಚಾಚಿವೆ ಎಂಬ ಕಾರಣಕ್ಕೆ ಆಕಾಶದೆತ್ತರಕ್ಕೆ ಬೆಳೆದಿದ್ದ ಸುಬಾಬುಲ್ಲಾ, ರೇನ್ ಟ್ರೀ ಮರಗಳ ಬಹುತೇಕ ಕೊಂಬೆಗಳನ್ನು ಕತ್ತರಿಸಿದ್ದು ಅವುಗಳೀಗ, ಅಸ್ತಿಪಂಜರದಂತೆ ಕಾಣುತ್ತಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ತೀವ್ರ ಬರಗಾಲ ಇದೆ. ಪ್ರಸ್ತುತ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ವಿವಿಧ ಹಳ್ಳಿಗಳಿಂದ ನಿತ್ಯ ಆಗಮಿಸುವ ಜನರು ಅಲ್ಲಲ್ಲಿ ಮರಗಳ ತಂಪಿನಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. ದೈತ್ಯ ಮರಗಳನ್ನು ಕಡಿದು ಹಾಕಲು ಕೆಲವು ವರ್ತಕರು ಮತ್ತು ಕಟ್ಟಡಗಳ ಮಾಲೀಕರು ಅರಣ್ಯ ಇಲಾಖೆಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ರಾಮಾಲಯ ರಸ್ತೆಯಲ್ಲಿ ನಾಲ್ಕೈದು ಮರಗಳ ಕೊಂಬೆಗಳು ವಿದ್ಯುತ್ ಮಾರ್ಗಕ್ಕೆ ಅಡ್ಡಿಯಾಗುತ್ತಿವೆ ಎಂಬ ಕಾರಣಕ್ಕೆ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಅರ್ಜಿ ಸಲ್ಲಿಸಿದ್ದು, ಅನುಮತಿ ನೀಡಲಾಗಿದೆ. ಉಳಿದಂತೆ ಕೆಲವರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಮಾದ್ಯಮದವರಿಗೆ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳು ಮರ ಕಡಿಯಲು ಸೂಕ್ತ ಕಾರಣವಿಲ್ಲದೆ ಅನುಮತಿ ನೀಡಬಾರದು. ಅನುಮತಿಗೂ ಮೊದಲು ಸ್ಥಳ ಪರಿಶೀಲನೆ ನಡೆಸಬೇಕು. ಮರಗಳನ್ನು ಬೆಳೆಸುವುದಕ್ಕೆ ಒತ್ತು ನೀಡಬೇಕು. ಮರಗಳ ಮಾರಣಹೋಮ ನಡೆಸಲು ಅವಕಾಶ ನೀಡಬಾರದು ಈ ನಡೆ ಹೀಗೆ ಮುಂದುವರಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.