ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ಸಂಘಟನಾಕಾರರು ಬೆಂಗಳೂರು ರೈಲ್ವೆ ಸೆಕ್ಯೂರಿಟಿ ಕಮಿಷನರ್ ದೇವಾಂಶ್ ಶುಕ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಮಾಧ್ಯಮದಲ್ಲಿ ವರದಿಯಾದ ಶಿವಮೊಗ್ಗ-ಯಶವಂತಪುರ ರೈಲಿನಲ್ಲಿ ಮಹಿಳೆಯೊಬ್ಬರನ್ನು ಹತ್ಯೆಮಾಡಿ, ಚಿನ್ನಾಭರಣ ದೋಚಿರುವ ದುರ್ಘಟನೆಯು, ನಾಡಿನ ನಾಗರಿಕರಿಗೆ ಅದರಲ್ಲೂ ಮಹಿಳೆಯರಿಗೆ ತೀವ್ರ ಆಘಾತವವನ್ನುಂಟು ಮಾಡಿದೆ” ಎಂದರು.
“ಪ್ರಸ್ತುತದಲ್ಲಿ ಮಹಿಳೆಯರಿಗೆ ರಕ್ಷಣೆ ಎನ್ನುವುದು ಮರೀಚಿಕೆಯಾಗಿದೆ. ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಪೆನೋಗ್ರಾಫರ್ ಆಗಿದ್ದ ಜಿ ಅನ್ನಪೂರ್ಣ ಅವರು ಇಲಾಖೆಯ ಪರೀಕ್ಷೆಯ ಮೇಲ್ವಿಚಾರಣೆಗಾಗಿ ಶಿವಮೊಗ್ಗಕ್ಕೆ ಹೋಗಿ ಹಿಂತಿರುಗಿವಾಗ ಘಟನೆ ನಡೆದಿದ್ದು, ರೈಲ್ವೆ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ” ಎಂದು ಆರೋಪಿಸಿದರು.
“2 ರಿಂದ 3 ದಿನ ರಜೆ ಇದ್ದ ಕಾರಣ ಅನ್ನಪೂರ್ಣ ಅವರಿಗೆ ಸ್ಲೀಪಿಂಗ್ ಕೋಚ್‌ನಲ್ಲಿ ಬುಕಿಂಗ್ ಸಿಗದ ಕಾರಣ ಅವರು ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸಿದ್ದಾರೆ. ಅಲ್ಲಿ ಜನಸಂದಣಿ ಇದ್ದು, ಕುಳಿತುಕೊಳ್ಳಲೂ ಜಾಗವಿಲ್ಲದ ಕಾರಣ ಮತ್ತು ಬೆಳಿಗ್ಗೆ ಕಚೇರಿಗೆ ಹೋಗಬೇಕಾದರೆ ಕೊಂಚ ವಿಶ್ರಾಂತಿ ಅವಶ್ಯಕ ಎಂದು ಮಹಿಳಾ ಬೋಗಿಗೆ ಹೋಗಿ ಕುಳಿತಿದ್ದಾರೆ. ಮಹಿಳಾ ಭೋಗಿಯಲ್ಲೇ ಈ ದುರ್ಘಟನೆ ನಡೆದಿದ್ದು, ಮಹಿಳಾ ಬೋಗಿಗಳು ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ಖಾತ್ರಿಪಡಿಸುತ್ತವೆ ಎಂಬುವ ಪ್ರಶ್ನೆಗೆ ಇಲಾಖೆಯು ಉತ್ತರಿಸಬೇಕಿದೆ” ಎಂದರು.
“ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ನಡೆದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಾತ್ರಿಪಡಿಸಬೇಕು. ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪರಿಹರಿಯದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
“ನಡೆದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಾತ್ರಿಪಡಿಸಬೇಕು. ರೈಲ್ವೆ ಭೋಗಿಗಳ ಸುರಕ್ಷತೆ ಬಗ್ಗೆ ರೈಲ್ವೆ ಇಲಾಖೆ ಆದ್ಯತೆಯನ್ನು ಹೆಚ್ಚಿಸಬೇಕು. ರಜಾ ದಿನಗಳಲ್ಲಿ ಜನರಲ್ ಭೋಗಿಗಳನ್ನು ಹೆಚ್ಚಿಸಬೇಕು. ಮಹಿಳಾ ಭೋಗಿಗಳನ್ನು ರೈಲ್ವೆಯ ಮಧ್ಯಭಾಗದಲ್ಲಿ ಅಳವಡಿಸಬೇಕು” ಎಂದು ಒತ್ತಾಯಿಸಿದರು.
ಎಐಎಂಎಸ್ಎಸ್ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಶಾಂತ ಎ ಸೇರಿದಂತೆ ಇತರರು ಇದ್ದರು.