ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲಕ ಕಾರಣಕ್ಕೆ ಅಪ್ತಾಪ್ತ ವಯಸ್ಸಿನ ಮಗ ತನ್ನ ತಾಯಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ತಂದೆಯನ್ನು ಕೊಲೆ ಕೇಸ್‌ನಿಂದ ರಕ್ಷಣೆ ಮಾಡಲು ಮಗನೇ ಕೊಲೆ ಆರೋಪವನ್ನು ತನ್ನ ಮೇಲೆ ಎಳೆದುಕೊಂಡು ಶರಣಾಗಿದ್ದ ಎಂಬ ಸಂಗತಿಯನ್ನು ಇದೀಗ ಪೊಲೀಸರು ಭೇದಿಸಿದ್ದಾರೆ.
ಹೌದು, ಅಪ್ರಾಪ್ತ ಬಾಲಕನೊಬ್ಬ ತಾನು ತನ್ನ ತಾಯಿಯನ್ನು ಕೊಲೆ ಮಾಡಿದ್ದೇನೆ ಎಂದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದನು. ಪ್ರಕರಣದ ತನಿಖೆ ನಡೆಸಿದ ಕೆ.ಆರ್.ಪುರ ಠಾಣಾ ಪೊಲೀಸರು ಹತ್ಯೆ ಪ್ರಕರಣದ ಸತ್ಯ ಸಂಗತಿಯನ್ನು ಬಯಲು ಮಾಡಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಲು ಬಳಸಲಾಗಿದ್ದ ಕಬ್ಬಿಣದ ರಾಡ್‌ನಲ್ಲಿ ಎರಡು ವಿಭಿನ್ನ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ರಾಡ್ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಗೆ ಕಳುಹಿಸಿದ್ದಾರೆ. ಈ ವೇಳೆ ರಾಡ್ ಮೇಲೆ ಇಬ್ಬರ ಫಿಂಗರ್ ಪ್ರಿಂಟ್ ಇರುವುದು ಗೊತ್ತಾಗಿದೆ. ತಂದೆ-ಮಗ ಇಬ್ಬರೂ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ, ಆರೋಪಿ ಪತಿ ಚಂದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ತಿಂಡಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಫೆಬ್ರವರಿ 2ರಂದು ಹತ್ಯೆ ನಡೆದಿತ್ತು. ಗಲಾಟೆಯಲ್ಲಿ ತಾಯಿ ನೇತ್ರಾವತಿ (40) ಅವರನ್ನ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿತ್ತು.
ಮೃತಳ ಮಗ ತಾನೇ ತನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ಶರಣಾಗಿದ್ದನು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಆರಂಭಿಸಿದ ಬಳಿಕ ಸತ್ಯ ಹೊರಬಿದ್ದಿದೆ.
ಮಹಿಳೆಯ ಕೊಲೆಗೆ ಕಾರಣ
ಗಂಡ-ಹೆಂಡತಿ ಮಗ ಮೂವರು ಒಂದೇ ಮನೆಯಲ್ಲಿದ್ದರು. “ಪತ್ನಿ ನೇತ್ರಾವತಿ ವಿವಾಹೇತರ ಸಂಬಂಧ ಹೊಂದಿದ್ದಳು. ಆಕೆಗೆ ಮದ್ಯಪಾನದ ಅಭ್ಯಾಸವಿತ್ತು. ಅಲ್ಲದೇ, ಆಕೆ ಒಮ್ಮೊಮ್ಮೆ ಮನೆ ಬಿಟ್ಟು ಹೋದರೇ ಎರಡು-ಮೂರು ದಿನವಾದರೂ ಮನೆಗೆ ಬರುತ್ತಿರಲಿಲ್ಲ. ಈ ಸಮಯದಲ್ಲಿ ನಾವು ಉಪವಾಸ ಇರಬೇಕಿತ್ತು. ಈ ಬಗ್ಗೆ ನೇತ್ರಾವತಿಗೆ ಪ್ರಶ್ನೆ ಮಾಡಿದರೇ, ನಮ್ಮ ಮೇಲೆಯೇ ಜೋರು ಮಾಡಿ ಜಗಳ ಮಾಡುತ್ತಿದ್ದಳು. ಹಾಗಾಗಿ, ಮಗನ ಜತೆಗೆ ಸೇರಿ ಹತ್ಯೆ ಮಾಡಲು ನಿರ್ಧಾರ ಮಾಡಿದೆ” ಎಂದು ಬಂಧಿತ ಆರೋಪಿ ಚಂದ್ರಪ್ಪ ಒಪ್ಪಿಕೊಂಡಿದ್ದಾನೆ.
ಅಪ್ಪನನ್ನ ರಕ್ಷಿಸೋಕೆ ಜೈಲು ಸೇರಿದ ಮಗ
ತಂದೆ-ಮಗ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿದ್ದರು. ಬಳಿಕ, ತಂದೆಯನ್ನ ರಕ್ಷಿಸಲು ಅಪ್ರಾಪ್ತ ಮಗ ಆರೋಪವನ್ನು ತನ್ನ ಮೇಲೆ ಹಾಕಿಕೊಂಡು ಜೈಲಿಗೆ ಸೇರಿದ್ದನು. ಆರೋಪವನ್ನು ಸಾಬೀತು ಮಾಡಲು ತನ್ನ ತಂದೆ ಕೈಯಲಿದ್ದ ರಾಡ್ ತೆಗೆದುಕೊಂಡು ತಾನೂ ತನ್ನ ತಾಯಿಗೆ ಒಂದೆರಡು ಏಟು ಹೊಡೆದಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಲಿಗೆ ಹೋದರೆ ಉತ್ತಮ ಶಿಕ್ಷಣ
“ಅಪ್ರಾಪ್ತರು ಜೈಲಿಗೆ ಹೋದರೆ ಶಿಕ್ಷೆ ಕಡಿಮೆ ಇರುತ್ತದೆ. ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ. ನಾನು ಹೊರಗಡೆ ಬರೋವಷ್ಟರಲ್ಲಿ ನೀನು ಚೆನ್ನಾಗಿ ಹಣ ಮಾಡಿಕೊಂಡಿರು” ಎಂದು ಅಪ್ರಾಪ್ತ ಮಗ ತನ್ನ ತಂದೆಗೆ ಓಲೈಸಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವಂತೆ ಆಗ್ರಹ
ಇತ್ತಕಡೆ ನೇತ್ರಾ ಸತ್ತಿರುವುದು ಖಚಿತವಾದ ಬಳಿಕ ಚಂದ್ರಪ್ಪ ಅಲ್ಲಿಂದ ಪರಾರಿಯಾಗಿದ್ದನು. ಮಗ ಪೊಲೀಸರಿಗೆ ಶರಣಾಗಿದ್ದನು. ಸದ್ಯ ಮಗನೊಂದಿಗೆ ಅಪ್ಪನನ್ನು ಸಹ ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.