ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಅಪರೂಪದ ‘ಆಲಿವ್ ರೆಡ್ ಲೇ’ ಪ್ರಭೇದದ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದು, ಮೊಟ್ಟೆಗಳನ್ನು ಸಂರಕ್ಷಿಸಿ ಇಡಲಾಗಿದೆ.
ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮೊಟ್ಟೆಗಳನ್ನು ಸಂರಕ್ಷಣೆ ಮಾಡಿದ ಸ್ಥಳೀಯರನ್ನು ಹಾಗೂ ಇಲಾಖೆಯ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಮೀನುಗಾರರಿಗೆ ಬಹುಮಾನ
ತಣ್ಣೀರು ಬಾವಿಯ ಕಡಲ ತೀರದಲ್ಲಿ ಅಪರೂಪದ ಆಲಿವ್ ರೆಡ್ ಲೇ ಕಡಲಾಮೆ ಮೊಟ್ಟೆ ಇಟ್ಟಿರುವುದನ್ನು ಪತ್ತೆ ಮಾಡಿ ಸಂರಕ್ಷಣೆಗೆ ನೆರವಾದ ಸಸಿಹಿತ್ಲು ಗ್ರಾಮದ ಮೀನುಗಾರರಾದ ಆನಂದ ಕೋಟ್ಯಾನ್ ಮತ್ತು ವಾಸು ಕೋಟ್ಯಾನ್ ಅವರಿಗೆ ಸಚಿವರು 5 ಸಾವಿರ ರೂಪಾಯಿಗಳ ಬಹುಮಾನ ಮತ್ತು ಪ್ರಶಂಸಾ ಪತ್ರ ಪ್ರದಾನ ಮಾಡಿದರು. ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಹುಮಾನ ಪ್ರದಾನ ಮಾಡಲಾಯಿತು.
ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ಈಶ್ವರ ಖಂಡ್ರೆ ಸೋಮವಾರ ತಡರಾತ್ರಿ ತಣ್ಣೀರು ಬಾವಿ ಅತಿಥಿ ಗೃಹಕ್ಕೆ ವಿಶ್ರಾಂತಿಗೆ ಆಗಮಿಸಿದ್ದರು. ಈ ವೇಳೆ ಅಧಿಕಾರಿಗಳು ತಣ್ಣೀರುಬಾವಿ ಬೀಚ್‌ನಲ್ಲಿ ಅಪರೂಪದ ಆಲೀವ್ ರೆಡ್ ಲೇ ಆಮೆ 1985ರ ಬಳಿಕ ಇದೇ ಮೊದಲ ಬಾರಿಗೆ ಸಾವಿರಾರು ಮೊಟ್ಟೆ ಇಟ್ಟಿದ್ದು, ಇದನ್ನು ಸಂರಕ್ಷಿಸಿರುವುದಾಗಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಚಿವರು ಪರಿಶೀಲಿಸಿ, ಈ ಮೊಟ್ಟೆಗಳು ಮರಿಯಾದ ಬಳಿಕ ಸುರಕ್ಷಿತವಾಗಿ ಕಡಲಿಗೆ ಬಿಡುವಂತೆ ಸೂಚಿಸಿದರು.
ಈ ಅಪರೂಪದ ಆಮೆಗಳ ಮೊಟ್ಟೆ ನಾಯಿ ಮತ್ತು ಪಕ್ಷಿಗಳ ಪಾಲಾಗದಂತೆ ಸುತ್ತಲೂ ಕಟ್ಟೆ ಕಟ್ಟಿ ಸಂರಕ್ಷಿಸಿರುವ ಅರಣ್ಯ ಸಿಬ್ಬಂದಿಯ ಕಾಳಜಿ ಮತ್ತು ತಣ್ಣೀರು ಬಾವಿ ಕಡಲ ತೀರವನ್ನು ಅತ್ಯಂತ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಕೆ.ಎಸ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಳನ್ ಮತ್ತಿತರರು ಉಪಸ್ಥಿತರಿದ್ದರು.