ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ನಿರ್ಧರಿಸಿದೆ.
ಕನ್ನಡ ಒಳಗೊಂಡಂತೆ 13 ಪ್ರಾದೇಶಿಕ ಭಾಷೇಗಳಲ್ಲಿ ಪರೀಕ್ಷೆ ಬರೆಯಬಹುದು ಎಂದು ಸಚಿವಾಲಯ ಹೇಳಿದೆ. ಈ ಬಗ್ಗೆ, ಕೇಂದ್ರ ಗೃಹ ಸಚಿವ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಿಎಪಿಎಫ್ ಪರೀಕ್ಷೆ ಬರೆಯಲು ಎರಡು ಭಾಷೆಗಳಿಗೆ ಮಾತ್ರ ಅವಕಾಶ ಇತ್ತು. ಈ ಬಗ್ಗೆ ಹಲವು ವಾಗ್ಯುದ್ಧ ಕೇಳಿ ಬರುತ್ತಿತ್ತು. ಈ ಮಧ್ಯೆಯೇ ಎಂಎಚ್‌ಎ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಕಾನ್ಸ್ಟೇಬಲ್ ಹುದ್ದೆಗೆ ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.
2024 ಜನವರಿ 1ರಿಂದ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನ್ನಡ, ತಮಿಳು, ತೆಲುಗು ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಎಂಎಚ್‌ಎ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ, ಪ್ರಶ್ನೆ ಪತ್ರಿಕೆಯು ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲೂ ಲಭ್ಯವಿರುತ್ತದೆ ಎನ್ನಲಾಗಿದೆ.
ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯುವುದರಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿ ಪ್ರಯೋಜನವಾಗುತ್ತದೆ. ಅವರು ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ. ಸಿಎಪಿಎಫ್‌ನಲ್ಲಿ ಸ್ಥಳೀಯ ಯುವಕರ ಭಾಗವಹಿಸುವಿಕೆಗೆ ಉತ್ತೇಜನ ನೀಡಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಂಎಚ್‌ಎ ಹೇಳಿದೆ.