ಮದ್ಯಪಾನ ಸೇವಿಸಿ ವ್ಯಕ್ತಿಯೊಬ್ಬ ಪರಿಚಿತರ ಮನೆಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಯುವಕನ ಮೇಲೆ ಗುಂಡಿನ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ 12 ಗಂಟೆಗೆ ಈ ಘಟನೆ ನಡೆದಿದೆ. ಪರಶುರಾಮ್ ಎಂಬಾತ ಸೂರಜ್ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸದ್ಯ ಆರೋಪಿ ಪರಶುರಾಮ್ ಅವರನ್ನು ಗಂಗಮ್ಮನ ಗುಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪರಶುರಾಮ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದನು. ಈತ ತನ್ನ ಬಳಿ ಪರವಾನಗಿ ಹೊಂದಿರುವ ಗನ್ ಇಟ್ಟುಕೊಂಡಿದ್ದಾರೆ.
ಸೋಮವಾರ ಮಧ್ಯರಾತ್ರಿ ಏಕಾಏಕಿ ಪರಿಚಿತರ ಮನೆಗೆ ತೆರಳಿ ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ, ಮನೆಗೆ ಪ್ರವೇಶ ಮಾಡಲು ಹೊರಟ ಆರೋಪಿಯನ್ನು ಸೂರಜ್ ತಡೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.
ಕೋಪಗೊಂಡ ಪರಶುರಾಮ್ ತನ್ನ ಬಳಿ ಇದ್ದ ಗನ್ ತೆಗೆದು ಸೂರಜ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಗುಂಡು ಗೋಡೆಗೆ ತಾಕಿದ್ದು, ಯುವಕ ಸೂರಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಕ್ಕಳ ನಾಪತ್ತೆ ಪ್ರಕರಣ ಶೇ.34 ರಷ್ಟು ಏರಿಕೆ
ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದು, ಆರೋಪಿ ಪರಶುರಾಮ್ನನ್ನು ಹಿಡಿದಿದ್ದಾರೆ. ಬಳಿಕ ಸೂರಜ್ ಹಾಗೂ ಆತನ ತಂದೆ ಆರೋಪಿಯನ್ನು ಹಿಡಿದು ಅವರ ಬಳಿ ಇದ್ದ ಗನ್ ಅನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಗಂಗಮ್ಮನ ಗುಡಿ ಠಾಣೆಯ ಪೊಲೀಸರು ಪರಶುರಾಮ್‌ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.