ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ

Date:

Advertisements
ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಹೊಸದೇನಲ್ಲ. ಕೇಂದ್ರದ ಅಂಗಳದಲ್ಲಿ ನಿಂತು ಕೇಂದ್ರವನ್ನೇ ಪ್ರಶ್ನೆ ಮಾಡಿದ ದಿಲ್ಲಿ ಚಲೋ ಪ್ರತಿಭಟನೆಯನ್ನು ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ರಾಜಕೀಯ ಪ್ರತಿಭಟನೆ ಎನ್ನಬಹುದಾದರೂ, ಇದು ಐತಿಹಾಸಿಕ ಪ್ರತಿಭಟನೆಯಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಲಿದೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿದರೆ, ದೇಶ ದ್ರೋಹದ ಪಟ್ಟಕ್ಕೇರಿಸುವ ಈ ಸಂದರ್ಭದಲ್ಲಿ, ಈ ಬೆಳವಣಿಗೆ ಯಾವ ರೂಪ ಪಡೆಯುತ್ತದೆಂಬುದನ್ನು ಕಾದು ನೋಡಬೇಕಿದೆ. 

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಶಾಸಕರು ಮತ್ತು ಸಂಸದರ ನಿಯೋಗ, ದೆಹಲಿಯ ಜಂತರ್ ಮಂತರ್ ನಲ್ಲಿ ಕೆಂದ್ರ ಸರ್ಕಾರದ ತೆರಿಗೆ ಹಂಚಿಕೆಯ ತಾರತಮ್ಯ ನೀತಿಯ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದೆ.

ಕೇಂದ್ರದ ಅಂಗಳದಲ್ಲಿ ನಿಂತು ಕೇಂದ್ರವನ್ನೇ ಪ್ರಶ್ನೆ ಮಾಡಿದ ಈ ಪ್ರತಿಭಟನೆಯನ್ನು ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ರಾಜಕೀಯ ಪ್ರತಿಭಟನೆ ಎನ್ನಬಹುದಾದರೂ, ಇದು ಐತಿಹಾಸಿಕ ಪ್ರತಿಭಟನೆಯಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಲಿದೆ.

ಪ್ರತಿಭಟನೆಗೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿ ಮಾಧ್ಯಮಗಳ ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಇದು ಬರೀ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲ, ಇದು ಕೇವಲ ಕರ್ನಾಟಕ ರಾಜ್ಯದ ಪ್ರಶ್ನೆಯಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿರುವ ಎಲ್ಲ ರಾಜ್ಯಗಳ ಪ್ರಶ್ನೆ,’ ಎಂದಿರುವುದು ಪ್ರಶ್ನೆಗಳನ್ನು ಎತ್ತುತ್ತದೆ. ಉತ್ತರಗಳನ್ನು ಬೇಡುತ್ತದೆ. ಹಲವು ವಿಚಾರಗಳತ್ತ ಬೆಳಕು ಚೆಲ್ಲುತ್ತದೆ.

Advertisements

ಸಿದ್ದರಾಮಯ್ಯನವರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ದೆಹಲಿಯ ಪತ್ರಕರ್ತರಿಗೆ ಅಂಕಿ-ಅಂಶಗಳ ಸಮೇತ ವಿವರಿಸಿದರು. ಜಿಎಸ್ಜಿ, ಕಸ್ಟಮ್ಸ್, ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆಯಿಂದ ಕೇಂದ್ರಕ್ಕೆ ಹೋಗುತ್ತಿರುವ ಮೊತ್ತ ಮತ್ತು ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಅನುದಾನವನ್ನು ವಿವರವಾಗಿ ಬಿಚ್ಚಿಟ್ಟರು.

ರಾಜ್ಯ ಬರಗಾಲಕ್ಕೆ ತುತ್ತಾಗಿದೆ. 223 ತಾಲೂಕುಗಳ ಬೆಳೆ ನಾಶವಾಗಿ ರೈತರ ಬದುಕು ದುಸ್ಥಿತಿಯಲ್ಲಿದೆ. ಅದರಲ್ಲೂ194 ತಾಲೂಕುಗಳ ಸ್ಥಿತಿ ಚಿಂತಾಜನಕವಾಗಿದೆ. ಈ ನಿಟ್ಟಿನಲ್ಲಿ ಮನರೇಗಾದ ಮಾನವ ದಿನಗಳ ಸಂಖ್ಯೆಯನ್ನು 100ರಿಂದ 150ಕ್ಕೆ ಏರಿಸಿ ಎಂಬ ವಿಚಾರದಲ್ಲಿ ರಾಜ್ಯದ ಹಲವು ಸಚಿವರು ಕೇಂದ್ರದ ಸಚಿವರನ್ನು ಖುದ್ದಾಗಿ ಕಂಡು ಮನವಿ ಅರ್ಪಿಸಿದ್ದಾರೆ. ಆದರೆ ಮಾನವ ದಿನಗಳನ್ನೂ ಹೆಚ್ಚಿಸಲಿಲ್ಲ, ಹಳೇ ಬಾಕಿಯೂ ಬಿಡುಗಡೆಯಾಗಲಿಲ್ಲ. ಇದು ನೇರವಾಗಿ ಬಡವರ ಕೈಗೆ ಕೆಲಸ ಕೊಡುವ, ಅವರ ಬದುಕನ್ನು ಕೊಂಚ ಮಟ್ಟಿಗಾದರೂ ಸಹನೀಯಗೊಳಿಸುವ ಯೋಜನೆ. ಆದರೆ ಕೇಂದ್ರ ಸರ್ಕಾರದಿಂದ ಯಾವ ಸ್ಪಂದನೆಯೂ ಸಿಗಲಿಲ್ಲ.

ಇದಷ್ಟೇ ಅಲ್ಲ, ಅಪ್ಪರ್ ಕೃಷ್ಣಾ, ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಯೋಜನೆಗಳ ಬಗ್ಗೆ ಕೇಂದ್ರ ನಿರಾಸಕ್ತಿ ತಳೆದಿರುವುದನ್ನು ಬಿಡಿಸಿಟ್ಟರು. 15ನೇ ಹಣಕಾಸು ಆಯೋಗದ ಮಾನದಂಡಗಳು; ಪೆರಿಫರಲ್ ರಿಂಗ್ ರಸ್ತೆಗೆ ಕೊಡಬೇಕಾದ 11,495 ಕೋಟಿ ಬಿಡುಗಡೆ ವಿಚಾರದಲ್ಲಿ ಹಣಕಾಸು ಸಚಿವರ ಹಸ್ತಕ್ಷೇಪವನ್ನು ಬಯಲು ಮಾಡಿದರು. ಸೆಸ್ ಮತ್ತು ಸರ್ಚಾರ್ಜ್ ಏರಿಕೆಯಿಂದ ಕೇಂದ್ರ ಸರ್ಕಾರದ ಖಜಾನೆ ಸೇರುತ್ತಿರುವ 550 ಸಾವಿರ ಕೋಟಿಯತ್ತ ಗಮನ ಸೆಳೆದರು.

ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಹೊಸದೇನಲ್ಲ. ಆದರೆ ಅವರ ಅಂಗಳದಲ್ಲಿಯೇ ನಿಂತು ಅವರ ಅನ್ಯಾಯವನ್ನು ಬಹಿರಂಗಗೊಳಿಸಿದ್ದು ಅಪರೂಪದ ಘಟನೆಯಾಗಿ ದಾಖಲಾಗಲಿದೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿದರೆ, ಅವರ ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ದೇಶ ದ್ರೋಹದ ಪಟ್ಟಕ್ಕೇರಿಸುವ ಈ ಸಂದರ್ಭದಲ್ಲಿ, ಈ ಬೆಳವಣಿಗೆ ಯಾವ ರೂಪ ಪಡೆಯುತ್ತದೆಂಬುದನ್ನು ಕಾದು ನೋಡಬೇಕಿದೆ.

ತೆರಿಗೆ ಹಂಚಿಕೆ ಅನ್ಯಾಯ ಕೇವಲ ಕರ್ನಾಟಕ ರಾಜ್ಯದ ಸಮಸ್ಯೆಯಲ್ಲ. ಕೇಂದ್ರದ ವಿರುದ್ಧ ದನಿ ಎತ್ತಿರುವ ಕರ್ನಾಟಕಕ್ಕೆ ತೆಲಂಗಾಣ ಮತ್ತು ಪಶ್ಚಿಮ ಬಂಗಾಲ ಸರ್ಕಾರಗಳು ಬೆಂಬಲ ವ್ಯಕ್ತಪಡಿಸಿವೆ. ಕೇರಳ ಸರ್ಕಾರ ಈಗಾಗಲೇ ಕೇಂದ್ರದ ತೆರಿಗೆ ಹಂಚಿಕೆಯಲ್ಲಾದ ಅನ್ಯಾಯದ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ರಾಜ್ಯಗಳ ಪಾಲಿನ ಹಣವನ್ನು ಕೊಡದೇ ತಾರತಮ್ಯ ನೀತಿ ಅನುಸರಿಸುತ್ತಿರುವ ಕೇಂದ್ರದ ನಡೆಯನ್ನು ಸುಪ್ರೀಂ ಕೋರ್ಟಿನ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿದೆ. ಕೇರಳ ಸರ್ಕಾರದ ನಡೆಯನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬೆಂಬಲಿಸಿದ್ದಾರೆ.

ಇದು ಕೇಂದ್ರ ಸರ್ಕಾರ ವಿತ್ತೀಯ ವಿಚಾರದಲ್ಲಿ ರಾಜ್ಯಗಳಿಗೆ ತೋರುತ್ತಿರುವ ಮಲತಾಯಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಒಕ್ಕೂಟ ವ್ಯವಸ್ಥೆಗೆ ಬೆಲೆ ಕೊಡದ ಕೇಂದ್ರ ಸರ್ಕಾರದ ಭಂಡತನವನ್ನು ಬಯಲು ಮಾಡುತ್ತದೆ. ಅದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದ ಸಂಬಂಧವನ್ನು ಜಟಿಲಗೊಳಿಸುವ ಕೃತ್ಯದಂತೆಯೂ ಕಾಣುತ್ತಿದೆ.

ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಸಂಸದರ ಪಾತ್ರ ಮಹತ್ವವಾದುದು. ಸಂಸದರು ತಾವು ಪ್ರತಿನಿಧಿಸುವ ಕ್ಷೇತ್ರದ ಜನರೊಂದಿಗೆ ಸಂವಹನ ನಡೆಸಬೇಕು, ಅವರ ಸಮಸ್ಯೆಗಳನ್ನು ಆಲಿಸಬೇಕು, ಅದನ್ನು ಸಂಸತ್ತಿನ ಅಧಿವೇಶನಗಳಲ್ಲಿ ಪ್ರಶ್ನೆ ಮಾಡಬೇಕು. ಸರ್ಕಾರದಿಂದ ಉತ್ತರ ಪಡೆದು, ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಹಾಗೆಯೇ ಕೇಂದ್ರದ ಅನ್ಯಾಯ, ತಾರತಮ್ಯ ನೀತಿ ಹಾಗೂ ಮಲತಾಯಿ ಧೋರಣೆಯನ್ನೂ ಪ್ರಶ್ನಿಸಬೇಕು. ಆದರೆ ರಾಜ್ಯದಿಂದ ಗೆದ್ದು ಹೋಗಿರುವ ಬಿಜೆಪಿಯ 27(ಮೈತ್ರಿಯೂ ಸೇರಿ) ಲೋಕಸಭಾ ಸದಸ್ಯರು ರಾಜ್ಯದ ಪರವಾಗಿ ಸಂಸತ್ತಿನಲ್ಲಿ ಎದ್ದು ನಿಂತು ಪ್ರಶ್ನಿಸಿದ ಉದಾಹರಣೆಯೇ ಇಲ್ಲ. ಪ್ರಧಾನಮಂತ್ರಿ ಮೋದಿಯವರನ್ನು ಭೇಟಿ ಮಾಡಿ, ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಹೇಳಿಕೊಂಡಿದ್ದೂ ಇಲ್ಲ.

70 ರ ದಶಕದಲ್ಲಿ ಇಂದಿರಾ ಗಾಂಧಿ ಅಲೆ ಇದ್ದಾಗ, ‘ಕತ್ತೆ ನಿಂತರೂ ಗೆಲ್ಲುವುದು ಗ್ಯಾರಂಟಿ’ ಎಂಬ ಮಾತಿತ್ತು. ಈಗ ಅದು ಮೋದಿ ಅಲೆಯಾಗಿ ಬದಲಾಗಿದೆ. ಐದು ವರ್ಷ ನಿದ್ದೆ ಮಾಡಿದ ರಾಜ್ಯದ ಬಿಜೆಪಿ ಸಂಸದರು, ಮೋದಿ ಅಲೆಯಲ್ಲಿ ಮತ್ತೆ ಗೆಲ್ಲಲು ಹವಣಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮತದಾರರ ಮುಂದೆ ಪ್ರತ್ಯಕ್ಷರಾಗಲಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಭುಗಳಾಗುವುದು, ಮತದಾರರಿಗೆ ಬೆಲೆ ಬರುವುದು ಚುನಾವಣಾ ಸಮಯದಲ್ಲಿ ಮಾತ್ರ. ಅಂತಹ ಅಪೂರ್ವ ಅವಕಾಶವನ್ನು ಬಳಸಿಕೊಂಡು, ನಾಡಿಗೆ ದ್ರೋಹ ಬಗೆದ ಸಂಸದರಿಗೆ ಬುದ್ಧಿ ಕಲಿಸಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X