ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ

Date:

96ರ ಹರೆಯದ ಅಡ್ವಾಣಿಯವರು ಭಾರತರತ್ನಕ್ಕೆ ಅರ್ಹರಿರಬಹುದು, ಯೋಗ್ಯರಿರಬಹುದು. ಆದರೆ, ಅಡ್ವಾಣಿ ಎಂದಾಕ್ಷಣ ಭಾರತೀಯರ ಮನಸ್ಸಿನಲ್ಲಿ ಮೂಡುವುದು ರಥಯಾತ್ರೆ. ಆ ರಥಯಾತ್ರೆಯಿಂದ ಹರಿದ ರಕ್ತವೇ ಅವರನ್ನು ‘ಭಾರತ ರತ್ನ’ಕ್ಕೆ ಭಾಜನರನ್ನಾಗಿಸಿದೆ ಎಂಬುದು ಸುಳ್ಳಲ್ಲ. ಅದು ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದನ್ನು ತಪ್ಪಿಸಲಾಗುವುದಿಲ್ಲ.

ಡಿಸೆಂಬರ್ 6, 1992 ರಂದು ಬಾಬ್ರಿ ಮಸೀದಿಯನ್ನು ಕೆಡವಿದ ಕ್ಷಣದಲ್ಲಿ, ‘ಇದು ನನ್ನ ಮನಸ್ಸನ್ನು ಘಾಸಿಗೊಳಿಸಿದ ಅತ್ಯಂತ ದುಃಖದಾಯಕ ದಿನ’ ಎಂದು ಪಶ್ಚಾತ್ತಾಪ ಪಟ್ಟಿದ್ದರು ಎಲ್.ಕೆ. ಅಡ್ವಾಣಿಯವರು.

ಮಸೀದಿ ಕೆಡವಿದ ಕಾರಣಕ್ಕಾಗಿ ಅಂದು ಘಾಸಿಗೊಂಡ ಜೀವ; ಅದೇ ಕಾರಣಕ್ಕಾಗಿ ಇಂದು ಭಾರತ ರತ್ನ ಎಂಬ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನವಾಗಿದೆ. ಘಾಸಿಗೊಂಡ ಜೀವ ಈಗ ಖುಷಿಯಲ್ಲಿದೆ.

1947ರ ದೇಶ ವಿಭಜನೆಯ ನಂತರ, ಭಾರತೀಯರು ನಿಧಾನವಾಗಿ ಶಾಂತಿ ಸೌಹಾರ್ದ ಬದುಕಿನತ್ತ ಹೊರಳಿದ್ದರು. ದೇಶ ಅಭಿವೃದ್ಧಿಯತ್ತ ಮುಖ ಮಾಡಿತ್ತು. ಆದರೆ, ಆರೆಸೆಸ್‌ನ ಹಿಡನ್ ಅಜೆಂಡಾಕ್ಕೆ ಮತ್ತು ಭಾರತೀಯ ಜನತಾ ಪಕ್ಷದ ರಾಜಕೀಯದಾಸೆಗೆ ಆ ನೆಮ್ಮದಿ ಮತ್ತು ಅಭಿವೃದ್ಧಿ ಬಲಿಯಾಯಿತು. ಮತ್ತೊಂದು ಹಿಂದೂ-ಮುಸ್ಲಿಂ ವಿಭಜನೆಗಾಗಿ, ವಿಧ್ವಂಸಕ ಕೃತ್ಯಕ್ಕಾಗಿ ರಾಮ ಜ್ಯೋತಿ, ಇಟ್ಟಿಗೆ ಸಂಗ್ರಹ, ರಥಯಾತ್ರೆ ಚಾಲ್ತಿಗೆ ಬಂದವು. ದೇಶದಲ್ಲಿ ದ್ವೇಷಾಸೂಯೆ ಮೇರೆ ಮೀರಿ ರಕ್ತ ಹರಿಯತೊಡಗಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಿಂದೂ ಮತಗಳ ಧ್ರುವೀಕರಣಕ್ಕಾಗಿ, ರಾಮಮಂದಿರ ನಿರ್ಮಾಣಕ್ಕಾಗಿ 1990 ರಲ್ಲಿ ಅಡ್ವಾಣಿ ಆರಂಭಿಸಿದ ರಥಯಾತ್ರೆ, ದೇಶದಾದ್ಯಂತ ಸಂಚರಿಸಿ ಹಿಂದೂ-ಮುಸ್ಲಿಮರ ನಡುವಿನ ಕೋಮುಗಲಭೆಗಳಿಗೆ ಕಾರಣವಾಯಿತು. ರಥದ ಚಕ್ರಗಳು ಉರುಳಿದಂತೆಲ್ಲ ರಕ್ತ ಹರಿಯಿತು, ತಲೆಗಳು ಉರುಳಿದವು. ಸಾವಿಗೆ, ನೋವಿಗೆ, ಸಂಕಟಕ್ಕೆ, ಸಮಸ್ಯೆಗಳಿಗೆ ದೇಶ ಈಡಾಯಿತು. ಅಂತಿಮವಾಗಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರಿತು. ಸಂಘಪರಿವಾರ ಮತ್ತೊಂದು ಜಿಗಿತಕ್ಕೆ ದೇಶವನ್ನು ಅಣಿಗೊಳಿಸತೊಡಗಿತು.

ಅಂದು ಅಡ್ವಾಣಿಯವರ ರಥಯಾತ್ರೆಯಿಂದಾದ ಮತ ಧ್ರುವೀಕರಣ, ಮೋದಿಯವರು ಪ್ರಧಾನಿಯಾಗುವುದಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿತು. ಅಡ್ವಾಣಿಯವರಿಂದ ರಾಜಕಾರಣದ ಪಾಠಗಳನ್ನು ಕಲಿತಿದ್ದ, ಅವರ ನೆರಳಿನಂತಿದ್ದ, ರಥಯಾತ್ರೆಗೆ ಸಾರಥಿಯಾಗಿದ್ದ ಮೋದಿ, ಪ್ರಧಾನಿಯಾಗುತ್ತಿದ್ದಂತೆ ಅಡ್ವಾಣಿಯವರನ್ನೇ ಮರೆತರು. ಪಕ್ಷದ ಚಟುವಟಿಕೆಗಳಿಂದ ಅವರನ್ನು ದೂರವಿಟ್ಟರು. ತಮ್ಮದೇ ಸರ್ಕಾರ ಅಧಿಕಾರಕ್ಕೇರಿದರೂ ಅವರನ್ನು ರಾಷ್ಟ್ರಪತಿಯನ್ನಾಗಿಸುವ ಅವಕಾಶವಿದ್ದರೂ, ಆಯ್ಕೆ ಮಾಡದೆ ಅವಮಾನಿಸಿದರು. ಯಾವ ರಥಯಾತ್ರೆಯಿಂದ ರಾಮಮಂದಿರ ನಿರ್ಮಾಣದ ಕನಸು ಕಂಡಿದ್ದರೋ, ಆ ಮಂದಿರ ನಿರ್ಮಾಣವಾಗಿ, ರಾಮ ಪ್ರತಿಷ್ಠಾಪನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಅಡ್ವಾಣಿಯವರನ್ನು ಆಹ್ವಾನಿಸದೇ ಅವಮಾನಿಸಿದರು. ಅನಾರೋಗ್ಯವನ್ನು ಮುಂದಿಟ್ಟು ಸಮರ್ಥಿಸಿಕೊಂಡರು. ಮಂದಿರ ನಿರ್ಮಾಣ-ಉದ್ಘಾಟನೆಯಲ್ಲೂ ರಾಜಕೀಯ ಲಾಭವನ್ನೇ ನೋಡಿದರು.

ಸಂಘಪರಿವಾರದಿಂದ ಬಂದ ಎಲ್.ಕೆ. ಅಡ್ವಾಣಿ, ದೇಶ ಕಂಡ ಪರಿಶುದ್ಧ ರಾಜಕಾರಣಿಗಳಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ಅರವತ್ತು ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಅವರು ಅಧಿಕಾರ ಅನುಭವಿಸಿದ್ದು ಕೇವಲ ಏಳು ವರ್ಷಗಳು ಮಾತ್ರ. ಮಿಕ್ಕಂತೆ ಸಂಘ ಪರಿವಾರದ ಅಜೆಂಡಾಗಳನ್ನು ಜಾರಿಗೆ ತರಲು, ಪಕ್ಷ ಸಂಘಟಿಸಲು, ಹಿಂದೂಗಳನ್ನು ಒಟ್ಟುಗೂಡಿಸಲು ಅವಿಶ್ರಾಂತವಾಗಿ ದುಡಿದರು.

1977ರಲ್ಲಿ ಮೊರಾರ್ಜಿ ದೇಸಾಯಿಯವರ ಸಚಿವ ಸಂಪುಟದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಮಂತ್ರಿಯಾಗಿದ್ದಾಗ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಶಾಸನ ರೂಪಿಸುವಲ್ಲಿ, ಸಂವಿಧಾನಕ್ಕೆ ತಿದ್ದುಪಡಿ ತರುವಲ್ಲಿ ಮಹತ್ವದ ಪಾತ್ರ ವಹಿಸಿ ಮೆಚ್ಚುಗೆಗೆ ಪಾತ್ರರಾದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷ ಕಟ್ಟಿ ಬೆಳೆಸಿದ ಬಹುಮುಖ್ಯ ನಾಯಕ ಎನಿಸಿಕೊಂಡರು. ಉಪಪ್ರಧಾನಿ ಮತ್ತು ವಿರೋಧಪಕ್ಷದ ನಾಯಕನ ಸ್ಥಾನ ಅಲಂಕರಿಸಿ, ಆ ಸ್ಥಾನಗಳಿಗೆ ಗೌರವ ತಂದರು. ಪಾಕಿಸ್ತಾನಕ್ಕೆ ತೆರಳಿ, ಮಹಮದ್ ಅಲಿ ಜಿನ್ನಾ ಅವರ ಸಮಾಧಿ ಮೇಲೆ ಚಾದರ್ ಹೊದಿಸಿ, ‘ಹಿಂದೂ-ಮುಸ್ಲಿಮರ ನಡುವಿನ ರಾಯಭಾರಿಯಂತಿದ್ದ ಜಿನ್ನಾ, ಅಪರೂಪ ಜಾತ್ಯತೀತ ವ್ಯಕ್ತಿ’ ಎಂದು ಮನಬಿಚ್ಚಿ ಮಾತನಾಡಿದರು. 2004ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವೇನಾದರೂ ಗೆದ್ದಿದ್ದರೆ, ಅಡ್ವಾಣಿಯವರು ಪ್ರಧಾನಿಯಾಗಿರುತ್ತಿದ್ದರು.

ಅಡ್ವಾಣಿಯವರ ದುರದೃಷ್ಟವೋ ಏನೋ, ಎನ್‌ಡಿಎ ಸೋತು, ಯುಪಿಎ ಅಧಿಕಾರಕ್ಕೇರಿ ಮನಮೋಹನ್ ಸಿಂಗ್ ಪ್ರಧಾನಿಯಾದರು. ಪಾಕಿಸ್ತಾನದ ಮುಸ್ಲಿಂ ನಾಯಕ ಜಿನ್ನಾರನ್ನು ಹೊಗಳಿದ್ದರಿಂದ ಅಡ್ವಾಣಿಯವರು ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿ ಮೂಲೆಗೆ ತಳ್ಳಲ್ಪಟ್ಟರು. ಮೋಶಾಗಳು ಮುನ್ನೆಲೆಗೆ ಬಂದರು. 2014ರಲ್ಲಿ ಅಧಿಕಾರಕ್ಕೂ ಏರಿದರು.

ಮೋದಿಯವರು ಪ್ರಧಾನಿಯಾಗುತ್ತಿದ್ದಂತೆ, ಪಕ್ಷ ಕಟ್ಟಿದ ಬಿಜೆಪಿಯ ಭೀಷ್ಮರನ್ನೇ ಮರೆತರು. ರಥಯಾತ್ರೆಯಿಂದಾದ ಅನುಕೂಲವನ್ನೇ ಅಲ್ಲಗಳೆದರು. ಬಿಜೆಪಿಗೂ ಅಡ್ವಾಣಿಗೂ ಸಂಬಂಧವಿಲ್ಲದಂತೆ ದೂರ ಸರಿದರು. 2019ರಲ್ಲಿ ಮೋದಿಯವರು ಮತ್ತೊಮ್ಮೆ ಗೆದ್ದಾಗ, ಅಧಿಕಾರದಲ್ಲಿ ಗಟ್ಟಿಗೊಳ್ಳತೊಡಗಿದಾಗ- ಎಲ್ಲವೂ ನನ್ನಿಂದಲೇ ಎಂದು ಮೆರೆದರು. ಆಗ ಅಡ್ವಾಣಿಯವರು ಮೋದಿಯವರಲ್ಲಿ ಸರ್ವಾಧಿಕಾರಿಯನ್ನು ಕಂಡು, ದೇಶಕ್ಕೆ ಸತ್ಯ ತಿಳಿಸಿದರು. ಗೋದಿ ಮೀಡಿಯಾದ ಆರ್ಭಟದೆದುರು ಆ ಸತ್ಯ ಕೂಡ ಸಮಾಧಿಯಾಯಿತು.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಪ್ರಧಾನಿ ಮೋದಿಯವರು ಅಧಿಕಾರದಾಸೆಗಾಗಿ ಅಡ್ವಾಣಿಯವರನ್ನು ಬಳಸಿಕೊಂಡು ಬಿಸಾಡಿದ್ದು. ಮೋದಿಯವರ ನಡೆಯನ್ನು ಪ್ರಶ್ನಿಸಲಾಗದ ಬಿಜೆಪಿಯ ದುರ್ಬಲ ನಾಯಕರು, ಪ್ರಜ್ಞಾಪೂರ್ವಕವಾಗಿಯೇ ಅಡ್ವಾಣಿಯವರಿಂದ ಅಂತರ ಕಾಯ್ದುಕೊಂಡದ್ದು. ಮೋದಿಯವರು ಮಾಡಿದ್ದು ಸರಿ ಎಂದು ಒಪ್ಪಿಕೊಂಡು ಸುಮ್ಮನಾಗಿದ್ದು. ಇದು ಬಿಜೆಪಿಗರ ಸೋಗಲಾಡಿತನವಲ್ಲವೇ?

ಇಂತಹ ಸಂಘಪರಿವಾರ ಮತ್ತು ಬಿಜೆಪಿಯ ನಾಯಕರು ಇಂದು ಅದೇ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ದಯಪಾಲಿಸಿದ್ದಾರೆ. ಅವರ ಸೇವೆ, ಸಾಧನೆಗಳನ್ನು ಸ್ಮರಿಸುತ್ತಿದ್ದಾರೆ. ಅವರಂತಹ ಅಪ್ರತಿಮ ನಾಯಕ ಮತ್ತೊಬ್ಬರಿಲ್ಲ ಎಂದು ಹಾಡಿ ಹೊಗಳುತ್ತಿದ್ದಾರೆ.

ಇದು ಕೂಡ ಮೋದಿಯವರ ರಾಜಕೀಯ ಚದುರಂಗದಾಟದ ಭಾಗವೇ? ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಶಸ್ತಿ ದಯಪಾಲಿಸಿರಬಹುದೇ? ಈ ಅನುಮಾನಗಳಿಗೆ ವಿರೋಧಪಕ್ಷಗಳ ನಾಯಕರ ಹೇಳಿಕೆಗಳು ಮತ್ತು ಬಿಜೆಪಿಗರ ನಡವಳಿಕೆಗಳು ಉತ್ತರ ನೀಡುತ್ತಿವೆ.

96ರ ಹರೆಯದ ಅಡ್ವಾಣಿಯವರು ಭಾರತರತ್ನಕ್ಕೆ ಅರ್ಹರಿರಬಹುದು, ಯೋಗ್ಯರಿರಬಹುದು. ಆದರೆ, ಅಡ್ವಾಣಿ ಎಂದಾಕ್ಷಣ ಭಾರತೀಯರ ಮನಸ್ಸಿನಲ್ಲಿ ಮೂಡುವುದು ರಥಯಾತ್ರೆ. ಆ ರಥಯಾತ್ರೆಯಿಂದ ಹರಿದ ರಕ್ತವೇ ಅವರನ್ನು ‘ಭಾರತ ರತ್ನ’ಕ್ಕೆ ಭಾಜನರನ್ನಾಗಿಸಿದೆ ಎಂಬುದು ಸುಳ್ಳಲ್ಲ. ಅದು ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದನ್ನು ತಪ್ಪಿಸಲಾಗುವುದಿಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ

ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ...

ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ...

ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ...

ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರ...