ಪ್ರೋ. ಎಂ.ಡಿ ನಂಜುಂಡಸ್ವಾಮಿ ಅವರ ಜನ್ಮದಿನದ ಅಂಗವಾಗಿ ಫೆಬ್ರವರಿ 10ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ರೈತ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ರೈತಪರ ಬಜೆಟ್ ರೂಪಿಸುವಂತೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗುತ್ತದೆ” ಎಂದು ಹೇಳಿದರು.
“ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್ ಮಹಾದೇವಪ್ಪ, ಶಾಸಕ ಹಾಗೂ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್ ಪಾಟೀಲ್, ಮೇಲಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ಇರಲಿದ್ದಾರೆ” ಎಂದರು.
“ಸಮಾವೇಶಕ್ಕೆ ಎಲ್ಲ ಜಿಲ್ಲೆಗಳಿಂದ ರೈತರು ಬರಲಿದ್ದಾರೆ. ಸುಮಾರು 10,000ಕ್ಕೂ ಅಧಿಕ ರೈತರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ” ಎಂದರು.
“ಕಾಂಗ್ರೆಸ್ ಸರ್ಕಾರವು ಬಜೆಟ್ ಮಂಡಿಸಲಿದ್ದು, ಪ್ರಮುಖವಾಗಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ಸಿದ್ದಪಡಿಸಿದೆ. ಭೂಸ್ವಾಧೀನಕ್ಕಾಗಿ ಸರ್ಕಾರ ಅನುದಾನ ಮೀಸಲಿಡಬೇಕು. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೃಷಿ ಬೆಲೆ ಆಯೋಗ ರಚನೆ ಮಾಡಿದ್ದು, ಈ ಆಯೋಗಕ್ಕೆ ಶಾಸನ ಬದ್ಧ ಅಧಿಕಾರ ನೀಡಿ, ನಿರ್ಣಯ ಕೈಗೊಳ್ಳುವ ಅಧಿಕಾರ ನೀಡಬೇಕು, ಇದರಿಂದ ರೈತರಿಗೆ ಅನುಕೂಲವಾಗಲಿದೆ, ರೈತರು ಬೆಂಬಲ ಬೆಲೆಯಲ್ಲಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುತ್ತದೆ” ಎಂದರು.
“ಸರ್ಕಾರ ನೀಡುವ ಬೆಂಬಲ ಬೆಲೆಯು ಮಾರುಕಟ್ಟೆ ದರಕ್ಕಿಂತ ಕಡಿಮೆ ಇದೆ. ಇದರಿಂದ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದರೆ ನಷ್ಟು ಉಂಟಾಗುತ್ತದೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಈ ಹಿನ್ನೆಲೆ ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕವಾಗಿ ಕಾನೂನು ರಚನೆಗೆ ಅವಕಾಶ ನೀಡಬೇಕು” ಎಂದು ತಿಳಿಸಿದರು.
“ಕೃಷಿ ಬೆಲೆ ಆಯೋಗಕ್ಕೆ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವ ಅಧಿಕಾರ ನೀಡಬೇಕು. ಜೊತೆಗೆ ಅನೇಕ ವಿಷಯಗಳ ಚರ್ಚಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ದಿನ್ನಿ, ಬೂದೆಯ್ಯ ಸ್ವಾಮಿ, ಪ್ರಭಾಕರ ಪಾಟೀಲ್, ರವಿಕುಮಾರ ಸೇರಿದಂತೆ ಅನೇಕರು ಇದ್ದರು.
ವರದಿ : ಹಫೀಜುಲ್ಲ