ಲೋಕಸಭೆ ಚುನಾವಣೆಗೂ ಮುನ್ನ ಸಂಸತ್ತಿನಲ್ಲಿ ಕೊನೆಯ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ರಾಜಕೀಯ ನಡೆಯನ್ನು ಮುಂದುವರೆಸಿದರು. ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಮೀಸಲಾತಿ ವಿರೋಧಿಸಿದ್ದರು ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆಯ ಮೇಲೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಒಬಿಸಿಗಳ ಮೀಸಲಾತಿಯನ್ನು ಪೂರ್ಣಗೊಳಿಸಲಿಲ್ಲ. ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ನೀಡಲಿಲ್ಲ. ಭಾರತ ರತ್ನಕ್ಕೆ ಅಂಬೇಡ್ಕರ್ ಅವರನ್ನು ಪರಿಗಣಿಸಲಿಲ್ಲ. ಏಕೆಂದರೆ ಭಾರತ ರತ್ನ ಅವರ ಕುಟುಂಬದವರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೀಗ ಅವರು ಸಾಮಾಜಿಕ ನ್ಯಾಯದ ಬಗ್ಗೆ ನಮಗೆ ಪಾಠ ಮಾಡುತ್ತಿದ್ದಾರೆ ಎಂದು ಹೇಳಿದರು.
ನೆಹರು ಅವರು ಮೀಸಲಾತಿ ವಿರೋಧಿಸಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂದು ಇದೇ ಸಂದರ್ಭದಲ್ಲಿ ಮೋದಿ ಪ್ರಸ್ತಾಪಿಸಿದರು. ”ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ, ಮುಖ್ಯವಾಗಿ ಸೇವೆಗಳಲ್ಲಿ. ಅಸಮರ್ಥತೆ ಹಾಗೂ ಎರಡನೇ ದರ್ಜೆಯ ಮಾನದಂಡಗಳಿಗೆ ಕಾರಣವಾಗುವುದರಿಂದ ನಾನು ಇದಕ್ಕೆ ಸಂಪೂರ್ಣ ವಿರೋಧಿಯಾಗಿದ್ದೇನೆ ಎಂದು ನೆಹರು ಹೇಳಿದ್ದರು. ಏಕೆಂದರೆ ಕಾಂಗ್ರೆಸ್‌ನವರು ಮೀಸಲಾತಿ ವಿರೋಧಿಗಳಾಗಿದ್ದರು. ಅಂದು ಸರ್ಕಾರ ಕಾಲಕಾಲಕ್ಕೆ ನೇಮಕ ಮಾಡಿ ಬಡ್ತಿ ನೀಡಿದ್ದರೆ ಇಂದು ಈ ಸ್ಥಾನದಲ್ಲಿರುತ್ತಿದ್ದರು” ಎಂದು ಪ್ರಧಾನಿ ಹೇಳಿದರು.
ವಾಸ್ತವವಾಗಿ ನೆಹರು ಬರೆದ ಪತ್ರದ ಸಾರಾಂಶ ಹೀಗಿದೆ
ಆದರೆ ಪ್ರಧಾನಿ ಆರೋಪಕ್ಕೂ ನೆಹರು ಅವರು ಬರೆದ ಪತ್ರಕ್ಕೂ ಸಂಬಂಧವೇ ಇಲ್ಲ. 1961ರ ಜೂನ್ 27ರಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ನೆಹರು, ”ಮೀಸಲಾತಿಯ ಹಳೆಯ ಪದ್ಧತಿಗಳನ್ನು ಹೊರತರಬೇಕಾಗಿದೆ. ಮುಖ್ಯವಾಗಿ ಜಾತಿ ಅಥವಾ ಅವುಗಳ ಗುಂಪುಗಳಿಗೆ ನೀಡುವ ಸವಲತ್ತುಗಳನ್ನು ನೀಡುವುದನ್ನು ಹೊರತರಬೇಕು. ಆರ್ಥಿಕ ಪರಿಸ್ಥಿತಿ ಸಹಾಯ ಮಾಡಬೇಕೆ ವಿನಃ ಜಾತಿಯಿಂದಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಹಾಯ ಮಾಡುತ್ತ ಕೆಲವೊಂದು ನಿಯಮ ಹಾಗೂ ಸಂಪ್ರದಾಯಗಳಿಗೆ ನಾವು ಸಂಬಂಧ ಹೊಂದಿದ್ದೇವೆ ಎಂಬುದು ನಿಜ. ಅವರು ಕೂಡ ಸಹಾಯಕ್ಕೆ ಅರ್ಹರು. ಆದರೆ ನಾನು ಯಾವುದೇ ರೀತಿಯ ಮೀಸಲಾತಿಗಳನ್ನು ಇಷ್ಟಪಡುವುದಿಲ್ಲ ಮುಖ್ಯವಾಗಿ ಸೇವೆಗಳಲ್ಲಿ. ನಮ್ಮ ದೇಶ ಎಲ್ಲದರಲ್ಲಿಯೂ ಪ್ರಥಮ ದರ್ಜೆ ದೇಶವಾಗಬೇಕು. ಕೆಲವುಗಳಿಗೆ ಪ್ರೋತ್ಸಾಹಿಸಿ ಎರಡನೇ ದರ್ಜೆಯವರಾಗಿ ಕಳೆದು ಹೋಗಬಾರದು” ಎಂದಿದ್ದರು.
”ಹಿಂದುಳಿದ ವರ್ಗಗಳಿಗೆ ಉತ್ತಮ ಶಿಕ್ಷಣದ ಮೂಲಕ ಅವಕಾಶಗಳನ್ನು ನೀಡಿ ಸಹಾಯ ಮಾಡುವುದೇ ಈಗಿರುವ ನಿಜವಾದ ಹಾದಿಯಾಗಿದೆ. ಮುಖ್ಯವಾಗಿ ತಾಂತ್ರಿಕ ಶಿಕ್ಷಣ. ಉಳಿದಂತೆ ಕೆಲವೊಂದು ಊರುಗೋಲು ಒದಗಿಸುವುದರಿಂದ ದೇಹಕ್ಕೆ ಶಕ್ತಿ ಅಥವಾ ಆರೋಗ್ಯವನ್ನು ನೀಡುವುದಿಲ್ಲ” ಎಂದು ಹೇಳಿದ್ದರು.
”ನಾನು ಉಜ್ವಲ ಸಾಮರ್ಥ್ಯ ಹೊಂದಿರುವ ಬಾಲಕರು ಮತ್ತು ಬಾಲಕಿಯರ ಮೇಲೆ ಒತ್ತಡ ಹಾಕುತ್ತೇನೆ. ಅವರು ಮಾತ್ರ ನಮ್ಮ ಮಾನದಂಡಗಳನ್ನು ಬೆಳಗುತ್ತಾರೆ. ಈ ದೇಶದಲ್ಲಿ ಸಂಭಾವ್ಯ ಪ್ರತಿಭೆಗಳಿರುವ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ. ಅವರಿಗೆ ಅವಕಾಶ ಕೊಟ್ಟರೆ ಮಾತ್ರ ಇದು ಸಾಧ್ಯ. ಆದರೆ ನಾವು ಮೀಸಲಾತಿ ಮತ್ತು ಜಾತಿ ಆಧಾರದ ಮೇಲೆ ಹೋದರೆ ನಾವು ಸಮರ್ಥ ಹಾಗೂ ಉಜ್ವಲ ಪ್ರತಿಭೆಗಳನ್ನು ಕಳೆದುಕೊಂಡು ಎರಡನೇ ಅಥವಾ ಮೂರನೇ ದರ್ಜೆಯವರಾಗಿ ಉಳಿಯುತ್ತೇವೆ” ಎಂದು ಹೇಳಿದ್ದರು.
”ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಮೀಸಲಾತಿ ನೀಡುತ್ತಿರುವು ಬಗ್ಗೆ ನಾನು ದುಃಖಿತನಾಗಿದ್ದೇನೆ. ಈಗಲೂ ಧರ್ಮ, ಜಾತಿ ಪರಿಗಣನೆಯ ಮೇಲೆ ಬಡ್ತಿ ನೀಡುತ್ತಿರುವುದು ನನಗೆ ಆಶ್ಚರ್ಯವಾಗಿದೆ. ಈ ಹಾದಿಯು ಮೂರ್ಖತನ ಮಾತ್ರವಲ್ಲ ದುರಂತ ಕೂಡ ಆಗಿದೆ. ನಾವು ಹಿಂದುಳಿದ ವರ್ಗಗಳಿಗೆ ಎಲ್ಲ ರೀತಿಯಂದಲೂ ಸಹಾಯ ಮಾಡೋಣ” ಎಂದು ಹೇಳಿದ್ದರು.
ಪ್ರಧಾನಿ ಜವಾಹರ್‌ಲಾಲ್ ನೆಹರು ಸ್ವತಂತ್ರ ಬಂದ(1947) ಎರಡು ತಿಂಗಳ ನಂತರ ಎಲ್ಲ ರಾಜ್ಯಗಳ ಸಿಎಂ ಮತ್ತು ಪ್ರಾಂತ್ಯಗಳ ಮುಖ್ಯಸ್ಥರಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದರು. 1964ರಲ್ಲಿ ತಾವು ನಿಧನರಾಗುವ ನಾಲ್ಕು ತಿಂಗಳ ಮುಂಚಿನವರೆಗೂ ಈ ಅಭ್ಯಾಸವನ್ನು ಮುಂದುವರೆಸಿದ್ದರು.