ಆಸ್ತಿ ವಿಚಾರಕ್ಕೆ ಚಾಕುವಿನಿಂದ ಇರಿದು ಇಬ್ಬರನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕುಂಬಾರಪೇಟೆಯಲ್ಲಿ ನಡೆದಿದೆ.
ಪದ್ಮನಾಭನಗರದ ಸುರೇಶ್ (55) ಮತ್ತು ಚಾಮರಾಜಪೇಟೆಯ ಮಹೇಂದ್ರ (68) ಕೊಲೆಯಾದವರು. ಇವರಿಬ್ಬರು ಸ್ನೇಹಿತರು. ಕುಂಬಾರಪೇಟೆಯಲ್ಲಿ ಹಾರ್ಡ್‌ವೇರ್ ಶಾಪ್ ನಡೆಸುತ್ತಿದ್ದರು. ಕೊಲೆ ಘಟನೆ ಬಳಿಕ ಆರೋಪಿ ಬದ್ರಿನಾಥ್, ಸ್ವತಃ ಹಲಸೂರುಗೇಟ್ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಬುಧವಾರ ರಾತ್ರಿ 8.30ರ ಸುಮಾರಿಗೆ ಈ ಜೋಡಿ ಕೊಲೆ ನಡೆದಿದೆ.
“ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದ್ದು, ಸಂಬಂಧಿ ಭದ್ರಿನಾಥ್ ಎಂಬಾತ ಚಾಕುವಿನಿಂದ ಇರಿದು, ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಮೃತ ಸುರೇಶ್ ಮತ್ತು ಆರೋಪಿ ಬದ್ರಿನಾಥ್ ಸಂಬಂಧಿಕರು. ಸುರೇಶ್, ಕುಂಬಾರಪೇಟೆಯ ಮಾರುತಿ ಕಾಂಪ್ಲೆಕ್ಸ್ ಹಾರ್ಡ್‌ವೇರ್ ಶಾಪ್ ನಡೆಸುತ್ತಿದ್ದರು. ಈ ಮಳಿಗೆಯ ಒಡೆತನದ ಸಂಬಂಧ ಸುರೇಶ್ ಮತ್ತು ಬದ್ರಿನಾಥ್ ನಡುವೆ ವಿವಾದವಿತ್ತು. ಅಲ್ಲದೆ, ಈ ವಿಚಾರವಾಗಿ ಈ ಹಿಂದೆಯೇ ಅವರ ನಡುವೆ ಹಲವು ಬಾರಿ ಜಗಳವಾಗಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.
“ಬುಧವಾರ ರಾತ್ರಿ 7.45ರ ಸುಮಾರಿಗೆ ಕಾಂಪ್ಲೆಕ್ಸ್‌ನಲ್ಲಿ ಸುರೇಶ್ ಹಾಗೂ ಮಹೇಂದ್ರ ಮಾತನಾಡುತ್ತ ಕುಳಿತಿದ್ದ ವೇಳೆ ಬದ್ರಿನಾಥ್ ತೆರಳಿದ್ದಾನೆ. ಈ ವೇಳೆ, ಮೂವರ ನಡುವೆಯೂ ಆಸ್ತಿ ವಿಚಾರಕ್ಕೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಬದ್ರಿನಾಥ್, ಚಾಕುವಿನಿಂದ ಸುರೇಶ್ ಹಾಗೂ ಮಹೇಂದ್ರನಿಗೆ ಮನಬಂದಂತೆ ಇರಿದು ಹತ್ಯೆಗೈದು ಪರಾರಿಯಾಗಿದ್ದಾನೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ಮಳಿಗೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಹಟಕ್ಕೆ ಬಿದ್ದಿದ್ದ ಬದ್ರಿನಾಥ್, ಸುರೇಶ್‌ರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. ಸಂಚಿನಂತೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಕಾಂಪ್ಲೆಕ್ಸ್‌ನ ಮಳಿಗೆಗೆ ಬಂದು ಸುರೇಶ್ ಜತೆ ಜಗಳವಾಡಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಮಳಿಗೆಯಲ್ಲೇ ಇದ್ದ ಮಹೇಂದ್ರ ಅವರು ಸುರೇಶ್ ಅವರ ರಕ್ಷಣೆಗೆ ತೆರಳಿದ್ದಾರೆ. ಆಗ ಆರೋಪಿಯು ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಆತನಿಂದ ಪಾರಾಗಲು ಮಹೇಂದ್ರ ಮಳಿಗೆಯಿಂದ ಹೊರಗೆ ಓಡಿದ್ದಾರೆ. ಆಗ ಆರೋಪಿಯು ಅವರನ್ನು ಬೆನ್ನಟ್ಟಿ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸುರೇಶ್ ಅವರು ಮಳಿಗೆಯೊಳಗೆ ಮೃತಪಟ್ಟಿದ್ದಾರೆ. ಮಹೇಂದ್ರ ಅವರು ಮಳಿಗೆಯ ಹೊರ ಭಾಗದಲ್ಲಿ ಸಾವನ್ನಪ್ಪಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಲ್ಲಿ ಹುಕ್ಕಾಬಾರ್ ನಿಷೇಧಿಸಿ ಆದೇಶ ಹೊರಡಿಸಿದ ಆರೋಗ್ಯ ಇಲಾಖೆ
“ಸುರೇಶ್ ಅವರನ್ನು ಮಾತ್ರ ಕೊಲೆ ಮಾಡುವುದು ಆರೋಪಿಯ ಉದ್ದೇಶವಾಗಿತ್ತು. ಆದರೆ, ಸುರೇಶ್‌ರ ರಕ್ಷಣೆಗೆ ಹೋದ ಮಹೇಂದ್ರ ಅವರನ್ನು ಆರೋಪಿ ಕೊಲೆ ಮಾಡಿದ್ದಾನೆ. ನಂತರ ಆರೋಪಿಯೇ ಠಾಣೆಗೆ ಬಂದಿದ್ದು, ಆತನನ್ನು ಬಂಧಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
”ಕುಂಬಾರಪೇಟೆಯ ಮಳಿಗೆಯೊದರಲ್ಲಿ ಜೋಡಿ ಕೊಲೆ ಆಗಿದೆ. ಈ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದೇವೆ. ಸುರೇಶ್ ಮತ್ತು ಮಹೇಂದ್ರ ಇಬ್ಬರು ಕಿಚನ್ ಉಪಕರಣ ಮಾರಾಟ ಮಾಡುತ್ತಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆಸ್ತಿ ವಿಚಾರಕ್ಕೆ ಸುರೇಶ್ ಕೊಲೆಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯ ವಿಚಾರಣೆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಏನೆಂದು ಗೊತ್ತಾಗಲಿದೆ” ಎಂದು ಕೇಂದ್ರ ವಿಭಾಗ ಡಿಸಿಪಿ ಶೇಖರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ಹಾಗೂ ಎಫ್‌ಎಸ್‌ಎಲ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ಸ್ಥಳಾಂತರ ಮಾಡಿದ್ದಾರೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.