ಕಾಳಪತ್ರ ಬಿಡುಗಡೆ ಮಾಡಿ ಉದ್ಯಮಿಗಳಿಗೆ ತನಿಖೆಯ ಬೆದರಿಕೆ ಹಾಕಿ ಅನುದಾನ ಸಂಗ್ರಹ, ಶಾಸಕರ ಖರೀದಿ ಮತ್ತು ಮಹಿಳೆ- ಅಲ್ಪಸಂಖ್ಯಾತರ ಮೇಲೆ ಅನ್ಯಾಯ ಬಿಜೆಪಿಯ ಸಾಧನೆ ಎಂದ ಕಾಂಗ್ರೆಸ್
ಬಿಜೆಪಿ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಜನರಿಗೆ ಬೆದರಿಕೆ ಹಾಕಿ ಚುನಾವಣಾ ಬಾಂಡ್‌ಗಳನ್ನು ಪಡೆದುಕೊಂಡು ಚುನಾವಣೆಗೆ ಅನುದಾನ ಸಂಗ್ರಹಿಸುತ್ತಿದೆ ಎಂದು ಗುರುವಾರ (ಫೆಬ್ರವರಿ 8) ಕಾಳಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
”ಪರೋಕ್ಷ ಬೆದರಿಕೆಯ ಮೂಲಕ ಒತ್ತಡ ಹೇರಿ ಅನುದಾನ ಸಂಗ್ರಹಿಸುತ್ತಾರೆ. ಈ ಹಣವನ್ನು ಪ್ರಜಾಪ್ರಭುತ್ವವನ್ನು ನಾಶಪಡಿಸಲು ಉಪಯೋಗಿಸುತ್ತಿದ್ದಾರೆ. 10 ವರ್ಷಗಳ ಅಧಿಕಾರದಲ್ಲಿ ಬಿಜೆಪಿ 411 ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಉರುಳಿಸಿ ತನ್ನ ಸರ್ಕಾರ ರಚಿಸಿರುವ ಸಾಧನೆ ಮಾಡಿದೆ” ಎಂದು ಖರ್ಗೆ ಟೀಕಿಸಿದರು.
ಯುಪಿಎ ಅಧಿಕಾರಾವಧಿಯಲ್ಲಿ ಆಗಿರುವ ಅರ್ಥವ್ಯವಸ್ಥೆಯ ಕಳಪೆ ನಿರ್ವಹಣೆ ಬಗ್ಗೆ ಕೇಂದ್ರದ ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಶ್ವೇತಪತ್ರವನ್ನು ಹೊರಡಿಸುವ ಕೆಲಗಂಟೆಗಳಿಗೆ ಮೊದಲು ವಿಪಕ್ಷ ಕಾಂಗ್ರೆಸ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಳಪತ್ರವನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ಸರ್ಕಾರದ ಆಡಳಿತದ ಕಪ್ಪುಚುಕ್ಕೆಗಳನ್ನು ಬಿಡಿಸಿಟ್ಟರು.
’10 ವರ್ಷಗಳ ಅನ್ಯಾಯ ಕಾಲ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿರುವ ಕೈಪಿಡಿಯಾಗಿರುವ ಕಾಳಪತ್ರದಲ್ಲಿ, ದೇಶದ ಅರ್ಥವ್ಯವಸ್ಥೆ ಧ್ವಂಸಗೊಳಿಸಲಾಗಿದೆ, ನಿರುದ್ಯೋಗ ಉಲ್ಬಣಿಸಿದೆ ಹಾಗೂ ಕೃಷಿ ಕ್ಷೇತ್ರ ನಾಶವಾಗಿದೆ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಘೋರ ಅನ್ಯಾಯ ಎಸಗಲಾಗಿದೆ ಎಂದು ಹೇಳಲಾಗಿದೆ.
ಕಾಳಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ”ಇಂತಹ ಪತ್ರವನ್ನು ಬಿಡುಗಡೆ ಮಾಡಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಧನ್ಯವಾದ ಹೇಳುತ್ತೇನೆ. ಈ ಕಾಳಪತ್ರ ಕೇಂದ್ರ ಸರ್ಕಾರದ ಉತ್ತಮ ಕೆಲಸಗಳ ನಡುವೆ ನನ್ನ ಹಣೆ ಮೇಲಿನ ಕಪ್ಪು ತಿಲಕ (ದುಷ್ಟಶಕ್ತಿಯನ್ನು ಹೊಡೆದೋಡಿಸಲು)” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕೈಪಿಡಿಯಲ್ಲಿ ಏನಿದೆ?
ಕಾಳಪತ್ರದಲ್ಲಿ ಕಳೆದ ಹತ್ತು ವರ್ಷಗಳ ಮೋದಿ ಸರ್ಕಾರದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅನ್ಯಾಯವನ್ನು ಪ್ರದರ್ಶಿಸಿರುವ ಬಗ್ಗೆ ವಿವರವಿದೆ. ಜೊತೆಗೆ, ಸಾಮಾಜಿಕ ಅಸಾಮರಸ್ಯ ಹರಡಿರುವುದು ಮತ್ತು ರಾಷ್ಟ್ರೀಯ ಭದ್ರತೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಟೀಕಿಸಲಾಗಿದೆ.
ಕೇಂದ್ರ ಸರ್ಕಾರ ವಾಣಿಜ್ಯೋದ್ಯಮಿಗಳ ಸಾವಿರಾರು ಕೋಟಿ ಸಾಲಗಳನ್ನು ಮನ್ನಾ ಮಾಡಿರುವುದು ಮತ್ತು ಆ ಉದ್ಯಮಗಳು ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವ ವಿವರಗಳನ್ನೂ ಕಾಳಪತ್ರ ಮುಂದಿಟ್ಟಿದೆ. ಈ ಸಾಲ ಮನ್ನಾಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ ಮತ್ತು ಬೆಲೆಯೇರಿಕೆ ಹದಕ್ಕೆ ಬಂದಿಲ್ಲ. ಉದ್ಯೋಗ ಅವಕಾಶಗಳೂ ಏರಿಲ್ಲ ಎಂದು ಖರ್ಗೆ ವಿವರಿಸಿದರು.
ಈ ಕೈಪಿಡಿಯ ಬಹುತೇಕ ವಿಚಾರಗಳು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಜನರ ಮುಂದಿಡುತ್ತಿರುವ ವಿಷಯಗಳೇ ಆಗಿವೆ.
”ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾಡಿರುವ ಟೀಕೆಗಳು ಪ್ರಧಾನಿ ಹುದ್ದೆಯ ಘನತೆಯನ್ನು ಇಳಿಸಿದೆ” ಎಂದು ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
”ದೂರದೃಷ್ಟಿಯಿರುವ ರಾಷ್ಟ್ರ ನಾಯಕರೊಬ್ಬರು ತನ್ನ ಹತ್ತು ವರ್ಷಗಳ ಸಾಧನೆಯನ್ನು ಮುಂದಿಡುವ ಬದಲಾಗಿ ಮುಂದಿ ಐದು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇನೆ ಎಂದು ಘೋಷಿಸುತ್ತಾರೆ” ಎಂದು ಖರ್ಗೆ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅರ್ಥವ್ಯವಸ್ಥೆಯ ಶ್ವೇತಪತ್ರ | ಕೇಂದ್ರ ಸರ್ಕಾರದ ವೈಫಲ್ಯಗಳ ಕಾಳಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್
ಕಾಂಗ್ರೆಸ್ ಮೇಲೆ ಮೋದಿ ಉತ್ತರ-ದಕ್ಷಿಣವೆಂದು ವಿಭಜಿಸುವ ಆರೋಪ ಹೊರಿಸಿರುವುದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳಿಗೆ ಶೇ 50ರಷ್ಟು ತೆರಿಗೆ ಆದಾಯದ ಪಾಲು ನೀಡಬೇಕು ಎಂದು ಯುಪಿಎ ಸರ್ಕಾರವನ್ನು ಒತ್ತಾಯಿಸಿದ್ದರು. ಗುಜರಾತ್ ಕೇಂದ್ರಕ್ಕೆ ರೂ 48,600 ಕೋಟಿ ನೀಡಿದರೆ, ಶೇ 2.5ರಷ್ಟು ಮರುಪಡೆಯುತ್ತಿದೆ ಎಂದು ಮೋದಿ ಹೇಳಿದ್ದರು. ಆದರೆ ಅದೇ ಮಾತನ್ನು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದರೆ ದೇಶದ್ರೋಹಿಗಳೆಂದು ಹಳಿಯಲಾಗುತ್ತಿದೆ” ಎಂದು ಖರ್ಗೆ ಟೀಕಿಸಿದರು.
ಇತ್ತೀಚೆಗೆ ತಮಗೆ ಬೆದರಿಕೆ ಕರೆಗಳನ್ನು ಮಾಡಿ ಅವಾಚ್ಯ ಶಬ್ದಗಳಿಂದ ಬೈಗುಳ ನೀಡಲಾಗುತ್ತಿದೆ ಎಂದು ಖರ್ಗೆ ತಿಳಿಸಿದ್ದಾರೆ. ”ನಾನು ಒಂದು ಚುನಾವಣೆಯನ್ನೂ ಹೊರತುಪಡಿಸಿ 53 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಚುನಾವಣೆ ಸೋತಿಲ್ಲ. ಪರೋಕ್ಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ದೂಷಿಸುವುದು, ಅವಹೇಳನ ಮಾಡುವುದು ಅವರ ಶೈಲಿ. ಒಂದೂ ಕಪ್ಪು ಮಚ್ಚೆ ಇಲ್ಲದ ಒಬ್ಬ ದಲಿತನನ್ನು ಅವಹೇಳನ ಮಾಡುವ ಇಚ್ಛೆ ಇದ್ದಲ್ಲಿ, ನೋಡೋಣ. ನಮಗೆ ಕನಿಕರ ಬೇಕಿಲ್ಲ, ದೂಷಿಸಿದವರ ಸಣ್ಣತನವಷ್ಟೇ ಕಾಣಿಸುತ್ತದೆ” ಎಂದು ಖರ್ಗೆ ಹೇಳಿದ್ದಾರೆ.