ದಲಿತ ಕೇರಿಯ ಮನೆಗಳಲ್ಲಿ ಜನವೋ ಜನ. ಹಾಗಾದರೆ ಅವರ ಮನೆಗಳಲ್ಲಿ ಹಬ್ಬ ಹರಿದಿನಗಳು ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ಈ ಗ್ರಾಮದ ದಲಿತ ಮನೆಗಳ ಒಂದೊಂದು ಮನೆಗಳಲ್ಲಿ ಮೂರ್ನಾಲ್ಕು ಕುಟುಂಬಗಳು ವಾಸವಾಗಿವೆ. ಒಂದು ಚಿಕ್ಕ ಮನೆಯಲ್ಲಿ 10 ರಿಂದ 20 ಜನಗಳವರೆಗೆ 8ರಿಂದ 10 ಮಕ್ಕಳು ಸೇರಿ ವಾಸ ಮಾಡುತ್ತಿದ್ದಾರೆ .ಇದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಡ್ಲೆಗುಂದಿ ಮತ್ತು ಭಾನುವಳ್ಳಿ ಗ್ರಾಮದ ದಲಿತ ಕೇರಿಯ ಜನಗಳ ವಾಸ ಸ್ಥಳದ ಸ್ಥಿತಿಯಾಗಿದೆ.
ಎರಡು ಊರುಗಳ ಜನ ತಾಲೂಕು ಆಡಳಿತದ ಮುಂದೆ ಸುಮಾರು ಎರಡ್ಮೂರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಎರಡು ಊರುಗಳಲ್ಲಿ ಕಡ್ಲೆಗುಂದಿಯಲ್ಲಿ ನಾಲ್ಕು ಎಕರೆ ಇನಾಂ ಜಮೀನು ಮತ್ತು ಭಾನುವಳ್ಳಿಯಲ್ಲಿ 2 ಎಕರೆ 27 ಗುಂಟೆ ಸರ್ಕಾರಿ ಜಮೀನು ಇದ್ದರೂ ವಸತಿಗಾಗಿ ಜಾಗ ಕೇಳುತ್ತಿದ್ದರೂ ಸ್ಥಳೀಯ ಮತ್ತು ತಾಲೂಕು ಆಡಳಿತ, ಜಿಲ್ಲಾಡಳಿತ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಜನಗಳ ಆರೋಪವಾಗಿದೆ.
ಮಕ್ಕಳು ವೃದ್ಧರಾದಿಯಾಗಿ ಮಳೆಗಾಲ ಚಳಿಗಾಲದಲ್ಲಿಯೂ ಕೂಡ ಹೊರಗೆ ರಾತ್ರಿಯೇ ಮಲಗಬೇಕಾದ ಸ್ಥಿತಿ ಕಾಲೋನಿಯ ಜನಗಳಲ್ಲಿದೆ. ಈ ಸ್ಥಿತಿಯಲ್ಲಿದ್ದರೂ ಯಾವುದೇ ಅಧಿಕಾರಿ, ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ ಎಂಬುವುದೇ ವಿಪರ್ಯಾಸವಾಗಿದೆ.
15ರಿಂದ 20ರ ನಿವೇಶನದ ಸಣ್ಣ ಮನೆಯೊಂದರಲ್ಲಿ 10 ರಿಂದ 15ಜನ ಹೇಗೆ ಇರಬಹುದು ಊಹಿಸಿಕೊಳ್ಳಿ, ಸ್ಥಳೀಯ ಆಡಳಿತದ ಅಧಿಕಾರಿಗಳ ಕಚೇರಿಗಳೂ ಕೂಡ 15×20ರ ಅಳತೆಗಿಂತ ದೊಡ್ಡ ಕಚೇರಿಗಳಿರುತ್ತವೆ. ಆದರೆ ಈ ಗ್ರಾಮಸ್ಥರ ಮನೆಗಳು ಕಚೇರಿ ಅಳತೆಗಿಂತ ಚಿಕ್ಕದಿವೆ. ಇವುಗಳಲ್ಲಿಯೇ ಇಲ್ಲಿನ ಜನ ಬದುಕು ಸಾಗಿಸುವಂತಾಗಿದೆ.
ಹಾಗಾಗಿ ಈ ಜನಗಳು ವಸತಿರಹಿತ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಸೇರಿ ದಲಿತ ಸಂಘರ್ಷ ಸಮಿತಿಯೊಂದಿಗೆ ಒಂದು ತಿಂಗಳಿಗೂ ಹೆಚ್ಚು ದಿನಗಳಿಂದಲೂ ಹರಿಹರ ತಾಲೂಕು ಆಡಳಿತದ ಮುಂಬಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಈವರೆಗೂ ಯಾವುದೇ ಅಧಿಕಾರಿ, ಜನಪ್ರತಿನಿಧಿಗಳು, ಬಂದು ನಮ್ಮ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಹಾಂತೇಶ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳೆದ ಒಂದೂವರೆ ತಿಂಗಳಿನಿಂದ ಎರಡೂ ಗ್ರಾಮಗಳ ವಸತಿ ರಹಿತರು ಕೂಲಿಕಾರ್ಮಿಕರು, ರೈತರಾಗಿದ್ದು ಮಕ್ಕಳೊಂದಿಗೆ ಮಹಿಳೆಯರು ಸೇರಿ ನಿವೇಶನಕ್ಕಾಗಿ ಆಗ್ರಹಿಸಿ ಧರಣಿ ನಡೆಸುತ್ತಿದ್ದರೂ ಯಾವುದೇ ಅಧಿಕಾರಿ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಎರಡೂ ಗ್ರಾಮಗಳಲ್ಲೂ ಸರ್ಕಾರಿ ಮತ್ತು ಇನಾಂ ಜಮೀನು ಇದ್ದರೂ ದಲಿತರಿಗೆ ವಸತಿ ಒದಗಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
ವೃದ್ದೆಯೊಬ್ಬರು ಈ ದಿನ.ಕಾಮ್‌ನೊಂದಿ ದಿಗೆ ಮಾತನಾಡಿ, “ಮನೆಗಳಿಲ್ಲದೇ, ಬೀದಿ ಬೀದಿಗಳಲ್ಲಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಈಗ ತಿಂಗಳಾದರೂ ಮನೆಗೆ ಜಾಗ ಕೊಡುತ್ತಿಲ್ಲ. ಇತ್ತ ಜೀವನಕ್ಕೆ ಕೂಲಿಯೂ ಇಲ್ಲದಾಗಿದೆ. ಹೀಗಾದರೆ ಬಡವರು ನಾವು ಹೇಗೆ ಬದುಕುವುದು” ಎಂದು ಕಣ್ಣೀರಿಟ್ಟರು.
ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಪೆಂಡಾಲ್‌ಗಳಲ್ಲಿ ಧರಣಿ ಕುಳಿತಿರುವುದು, ಊಟಕ್ಕೆ ಮನೆಯಿಂದಲೇ ಬಾಕ್ಸ್ ತಂದು ತಿನ್ನುವುದು ಕಂಡುಬಂದಿತು.
ಈ ಬಗ್ಗೆ ತಹಶೀಲ್ದಾರ್ ಗುರುಬಸವರಾಜು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಿವೇಶನ ರಹಿತರಿಗೆ ಸೂರು ಒದಗಿಸಲು ತಾಲೂಕು ಆಡಳಿತ ಸಿದ್ದವಿದೆ. ಭಾನುವಳ್ಳಿ ಗ್ರಾಮದ ಭೂಮಿಗೆ ಸಂಬಂಧಿಸಿದಂತೆ ಪತ್ರ ವ್ಯವಹಾರ ಮಾಡಲಾಗಿದ್ದು, ಕಡತ ಜಿಲ್ಲಾಡಳಿತಕ್ಕೆ ಕಳಿಸಿದೆ. ಕಡ್ಲೆಗುಂದಿ ಗ್ರಾಮದ ವಸತಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭೂಮಿ ಮಂಜೂರು ಮಾಡಲು ಪತ್ರ ಕಳುಹಿಸಬೇಕಾಗಿದ್ದು, ಅದು ತಲುಪಿದ ಬಳಿಕ ಭೂ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ; ಫೆ.14ರಿಂದ ಉಪವಾಸ ಸತ್ಯಾಗ್ರಹ
ಏನೇ ಇದ್ದರೂ ವಸತಿ ರಹಿತರಿಗೆ ಶೀಘ್ರ ನಿವೇಶನ ನೀಡಿ ತಲೆ ಮೇಲೊಂದು ಸೂರು ಒದಗಿಸಲು ತಾಲೂಕು ಮತ್ತು ಜಿಲ್ಲಾಡಳಿತ, ಜನಪ್ರತಿನಿಧಿಗಳು ತುರ್ತಾಗಿ ಸ್ಪಂದಿಸಿ ಬಡವರಿಗೆ ನೆರವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.