ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದುಡಿಯುವ ವರ್ಗ, ಬಡವರು, ನಿರ್ಗತಿಕರು, ವಿದ್ಯಾರ್ಥಿಗಳ ಹಸಿವನ್ನು ‘ಇಂದಿರಾ ಕ್ಯಾಂಟೀನ್’ ನೀಗಿಸುತ್ತಿದೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆರಂಭಿಸಿದ ಮಹತ್ವಾಕಾಂಕ್ಷೆಯ ಈ ಯೋಜನೆ ಹಲವು ಜನರಿಗೆ ಅಕ್ಷಯ ಪಾತ್ರೆಯಾಗಿದೆ. ಸಂಕ್ರಾತಿ ಹಬ್ಬಕ್ಕೆ ಹೊಸ ಆಹಾರದ ಪಟ್ಟಿಯೊಂದಿಗೆ ಮುನ್ನುಗ್ಗಬೇಕಾಗಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಏಪ್ರಿಲ್ ನಂತರ ಮುದ್ದೆ, ಸಾರು ದೊರೆಯುವ ಸಾಧ್ಯತೆ ಇದೆ.
ಬೆಂಗಳೂರು ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಟೆಂಡರ್ ವಿಳಂಬವಾಗಿದ್ದು, ಏಪ್ರಿಲ್ ನಂತರ ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ, ಸಾರು ದೊರೆಯುವ ಸಾಧ್ಯತೆ ಇದೆ.
ಈ ಹಿಂದೆ ಇಂದಿರಾ ಕ್ಯಾಂಟೀನ್ಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಕೇವಲ ರೈಸ್‌ಬಾತ್, ಅನ್ನ ಸಾಂಬಾರ್, ಮೊಸರನ್ನ ನೀಡಲಾಗುತ್ತಿತ್ತು. ಆದರೆ, ಹಿರಿಯ ನಾಗರಿಕರು ಹಾಗೂ ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಇತರರು ಊಟ ಮಾತ್ರ ಬೇಡ ಮುದ್ದೆ, ಚಪಾತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಊಟದ ಮೆನು ಬದಲಾವಣೆ ಮಾಡಿ ಮುದ್ದೆ, ಸಾರು, ಚಪಾತಿ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು.
ಕಳೆದ ಆಗಸ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ಹೊಸ ಟೆಂಡರ್ ಪ್ರಕ್ರಿಯೆ ನಡೆಯದ ಹಿನ್ನೆಲೆ ಹಳೆ ಗುತ್ತಿಗೆದಾರರನ್ನು ಮುಂದುವರಿಸಲಾಗಿತ್ತು. ಡಿಸೆಂಬರ್‌ನಲ್ಲಿ ಟೆಂಡರ್ ಆಹ್ವಾನಿಸಲು ಸರ್ಕಾರ ಅನುಮೋದನೆ ನೀಡಿದೆ.
ಬಿಬಿಎಂಪಿ ಈ ಬಾರಿ ಕೇಂದ್ರೀಕೃತ ಟೆಂಡರ್ ಆಹ್ವಾನಿಸದೆ 8 ವಲಯಗಳಿಗೆ ಪ್ರತ್ಯೇಕ ಟೆಂಡರ್ ಆಹ್ವಾನಿಸುವುದಕ್ಕೆ ನಿರ್ಧರಿಸಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.
ಟೆಂಡರ್ ಪ್ರಕ್ರಿಯೆ ಇನ್ನು ಪೂರ್ಣಗೊಂಡಿಲ್ಲ. ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನು ಕನಿಷ್ಠ ಒಂದು ತಿಂಗಳು ಬೇಕಾಗಬಹುದು. ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆ ಗುತ್ತಿಗೆದಾರರಿಗೆ ಈ ಬಾರಿ ಮುದ್ದೆ, ಸಾರು ನೀಡುವುದನ್ನು ಕಡ್ಡಾಯಗೊಳಿಸಿದ್ದು, ಏಪ್ರಿಲ್‌ನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಆನಂತರ ಲಭ್ಯವಾಗಲಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫೆ.10ರಂದು ರೈತ ನಾಯಕ ಪ್ರೊ. ಎಂಡಿಎನ್ ನೆನಪಿನಲ್ಲಿ ಬೃಹತ್ ರೈತ ಸಮಾವೇಶ
2017ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭ
ಅತಿ ಕಡಿಮೆ ದರದಲ್ಲಿ ಬಡವರಿಗೆ ಮೂರು ಹೊತ್ತು ಊಟ ನೀಡಲು ಕ್ಯಾಂಟೀನ್‌ಗಳನ್ನು 2017ರ ಆಗಸ್ಟ್ 16ರಂದು ಆರಂಭಿಸಲಾಯಿತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಉದ್ಘಾಟಿಸಲಾಗಿತ್ತು. ತಮಿಳುನಾಡಿನ ‘ಅಮ್ಮಾ ಕ್ಯಾಂಟೀನ್’ ಮಾದರಿಯಲ್ಲಿ ಈ ಯೋಜನೆ ರೂಪಿಸಲಾಗಿತ್ತು.
ಆದರೆ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಚಾಲ್ತಿಯಲ್ಲಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ಆಗಿನ ಬಿಜೆಪಿ ಸರ್ಕಾರ ಅನುದಾನ ನೀಡುವುದನ್ನೇ ನಿಲ್ಲಿಸಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ಯಾಂಟೀನ್ ಅನ್ನು ನಿರ್ವಹಣೆ ಮಾಡುತ್ತಿತ್ತು.
2023-24ನೇ ಸಾಲಿನ ಬಜೆಟ್‌ನಲ್ಲಿ ಕ್ಯಾಂಟೀನ್‌ಗೆ ಬಿಬಿಎಂಪಿ ₹50 ಕೋಟಿ ಮೀಸಲಿಟ್ಟಿತ್ತು. ಹೊರತಾಗಿ ಆಹಾರದ ಗುತ್ತಿಗೆಯ ಕಂಪನಿಗಳಿಗೆ ಬಾಕಿ ಬಿಲ್ ಮಾಡಲು ಕೂಡ ಬಿಬಿಎಂಪಿ ಸಂಕಷ್ಟ ಎದುರಿಸುತ್ತಿತ್ತು.