ವಿವಿಧ ಇಲಾಖೆಯ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ವಸತಿ ನಿಲಯ ಕಾರ್ಮಿಕರು ಬಾಕಿ ವೇತನ ಪಾವತಿ ಮತ್ತು ಶಾಸನ ಬದ್ಧ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಡಿಸಿ ಕಚೇರಿ ಮುಂದೆ ಇಂದು (ಫೆ.8) ಪ್ರತಿಭಟನಾ ಧರಣಿ ನಡೆಸಿದೆ.
ವಸತಿ ನಿಲಯದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಈ ಹಿಂದೆ ಹಲವಾರು ಬಾರಿ ಗಮನ ಸೆಳೆದರೂ ಅಧಿಕಾರಿಗಳು ಸ್ಪಂದಿಸದ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟನಾಕಾರರು ಖಂಡಿಸಿದರು. ಸಮಾಜ ಕಲ್ಯಾಣ ಇಲಾಖೆಯಡಿ ಮಾನ್ವಿ ತಾಲೂಕಿನ ಮೆಟ್ರಿಕ್ ಪೂರ್ವ ಹಾಸ್ಟೇಲ್ ಕಾರ್ಮಿಕರಿಗೆ ಐದು ತಿಂಗಳು, ಮೆಟ್ರಿಕ್ ನಂತರದ ಹಾಸ್ಟೆಲ್ ಕಾರ್ಮಿಕರಿಗೆ ಆರು ತಿಂಗಳ ವೇತನ ಬಾಕಿ ಇದೆ.
ಲಿಂಗಸೂಗೂರಿನಲ್ಲಿ ಮೆಟ್ರಿಕ್ ಪೂರ್ವ ಹಾಸ್ಟೇಲ್ ಕಾರ್ಮಿಕರಿಗೆ ಏಳು ತಿಂಗಳು, ಬಿಸಿಎಂ ಹಾಸ್ಟೇಲ್ ಕಾರ್ಮಿಕರಿಗೆ ಮೂರು ತಿಂಗಳೂರು, ಲಿಂಗಸೂಗೂರು, ಮಾನ್ವಿ, ರಾಯಚೂರು ತಾಲೂಕಿನ ಎಸ್ಟಿ ಹಾಸ್ಟೇಲ್ ಕಾರ್ಮಿಕರಿಗೆ ನಾಲ್ಕು ತಿಂಗಳ ವೇತನ ಬಾಕಿ ಇದ್ದು, ಈ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಧರಣಿ ನಿರತರು ಒತ್ತಾಯಿಸಿದರು.
ಕಾರ್ಮಿಕರಿಗೆ ವೇತನ ಚೀಟಿ, ರಜೆ ಸೌಲಭ್ಯ, ಗುರುತಿನ ಚೀಟಿ, ಪಿಎಫ್ ಮತ್ತು ಇಎಸ್‌ಐ ಬಗ್ಗೆ ನೀಡುತ್ತಿಲ್ಲ. ವಾರದೊಳಗೆ ಬೇಡಿಕೆ ಇತ್ಯರ್ಥಪಡಿಸದೆ ಇದ್ದಲ್ಲಿ, ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸಂಘಟನೆ ಅಧ್ಯಕ್ಷ ಮಹೇಶ ಚೀಕಲಪರ್ವಿ, ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ ಶಿರಶ್ಯಾಡ್, ಮುಖಂಡರಾದ ಹುಲಿಗೆಪ್ಪ, ಹುಚ್ಚಣ್ಣ, ಶಶಿಕುಮಾರ, ಬಸವರಾಜ್, ಮುಸ್ತಾಫ್, ಮಹೇಶ, ಈರಮ್ಮ, ಹನುಮಶೆಟ್ಟಿ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.