Exclusive | ಕೆರಗೋಡಿನ ಕೆಲವು ಯುವಕರು ನಂಬಿಕೊಂಡಂತೆ ಇದು ’ಸಿದ್ದರಾಮಯ್ಯ’ನವರ ಫೋಟೋ ಅಲ್ಲ

Date:

Advertisements

“35 ವರ್ಷಗಳ ಹಿಂದೆಯೇ ಹನುಮಧ್ವಜಕ್ಕಾಗಿ ಕೆರಗೋಡಿನಲ್ಲಿ ಧ್ವಜಸ್ತಂಭದ ಭೂಮಿಪೂಜೆ ಮಾಡಲಾಗಿತ್ತೆ? ವಾಸ್ತವವೇನು?”

ಕೆರಗೋಡಿನಲ್ಲಿ ಗ್ರೌಂಡ್ ರಿಪೋರ್ಟ್‌ಗಾಗಿ ಅಡ್ಡಾಡುತ್ತಾ ಕೆಲವು ಯುವಕರನ್ನು ಮಾತನಾಡಿಸುವಾಗ, “ನೋಡಿ ಸ್ವಾಮಿ, ಇದು ಸಿದ್ದರಾಮಯ್ಯನವರ ಫೋಟೋ. ಕೆರಗೋಡಿನಲ್ಲಿ ಸುಮಾರು 35 ವರ್ಷಗಳ ಹಿಂದೆಯೇ ಅರ್ಜುನಧ್ವಜ (ಹನುಮಧ್ವಜ) ಹಾರಿಸಲು ಧ್ವಜಸ್ತಂಭಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. ಅಂದು ಸಿದ್ದರಾಮಯ್ಯನವರೇ ಗ್ರಾಮಕ್ಕೆ ಬಂದಿದ್ದರು” ಎಂಬ ಮಾಹಿತಿಯನ್ನು ನೀಡುತ್ತಿದ್ದರು. ಕೆಲವು ಮಂದಿ ಇದು ನಿಜವೆಂದೇ ನಂಬಿ, ಊರಿನಲ್ಲಿ ಈ ಸುದ್ದಿಯನ್ನು ಹಬ್ಬಿಸಿರುವುದು ಖಚಿತವಾಗಿದೆ.

ಹಳೆಯ ಫೋಟೋವೊಂದರಲ್ಲಿ ಇರುವ ವ್ಯಕ್ತಿಯೊಬ್ಬರನ್ನು ಮಾರ್ಕ್ ಮಾಡಿ, “ನೋಡಿ, ಇದು ಸಿದ್ದರಾಮಯ್ಯನವರು. ಹನುಮ ಧ್ವಜಸ್ತಂಭದ ಗುದ್ದಲಿ ಪೂಜೆಗೆ ಬಂದಿದ್ದರು” ಎಂದು ಹೇಳುತ್ತಾರೆ. ಮೇಲುನೋಟಕ್ಕೆ ಸಿದ್ಧರಾಮಯ್ಯನವರ ಹಳೆಯ ಫೋಟೋ ಎಂಬಂತೆಯೇ ಇದು ಬಿಂಬಿತವಾಗುತ್ತಿದೆ.

Advertisements

ಅದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಪರಿವಾರದ ಬೆಂಬಲಿಗರು, “ಅಂದು ಇಲ್ಲದ ವಿವಾದ ಇಂದು ಏಕೆ? ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಇರುವ ಶ್ರೀ ಹನುಮ ಧ್ವಜ ಇದ್ದ ಅರ್ಜುನ ಸ್ತಂಭ ಇದ್ದ ಸ್ಥಳದಲ್ಲೇ ಸುಮಾರು 35 ವರ್ಷಗಳ ಹಿಂದೆ ಶ್ರೀ ಹನುಮ ಧ್ವಜ ಹಾರಿಸಲು ಧ್ವಜಸ್ತಂಭ ನಡೆಲು ಕೆರಗೋಡು ಗ್ರಾಮಸ್ಥರು ಗುದ್ದಲಿಪೂಜೆ ಮಾಡಿದ ದೃಶ್ಯ” ಎಂಬ ಸಾಲುಗಳೊಂದಿಗೆ ಇನ್ನೆರಡು ಫೋಟೋಗಳನ್ನು ವೈರಲ್ ಮಾಡಿದ್ದಾರೆ. ಕೆಲವು ಮಾಧ್ಯಮಗಳೂ ಇದನ್ನೇ ವರದಿ ಮಾಡಿವೆ.

ಹನುಮ ೧

ಹನಮ ೨

ಹನುಮ ೭

ಹನುಮ ೫
ಇಲ್ಲಿ ಬಿಳಿ ಬಣ್ಣದಲ್ಲಿ ಗುರುತು ಹಾಕಿರುವ ವ್ಯಕ್ತಿಯನ್ನು ಸಿದ್ದರಾಮಯ್ಯ ಎಂದು ಕೆರಗೋಡಿನ ಕೆಲವು ಯುವಕರು ಬಿಂಬಿಸುತ್ತಿರುವುದು ಖಚಿತವಾಗಿದೆ

ಇಂತಹ ಪ್ರತಿಪಾದನೆಗಳ ಹಿಂದಿರುವ ಸತ್ಯವನ್ನು ಬೆತ್ತು ಹತ್ತಿ ಹೊರಟ ’ಈದಿನ.ಕಾಂ’ಗೆ ಖಚಿತ ಮಾಹಿತಿಗಳು ಲಭ್ಯವಾಗಿವೆ. ಗ್ರಾಮದ ಅನೇಕರನ್ನು ಮಾತನಾಡಿಸಿ, “ಈ ಫೋಟೋದಲ್ಲಿರುವ ವ್ಯಕ್ತಿ ಸಿದ್ಧರಾಮಯ್ಯನವರೇ? ಇದು ಹನುಮಧ್ವಜ ನೆಡಲು ನಡೆದ ಭೂಮಿ ಪೂಜೆಯೇ?” ಎಂದು ಪ್ರಶ್ನಿಸಿತು. ಆದರೆ ಕೆರಗೋಡಿನ ಹಳೆಯ ದಾಖಲೆಗಳನ್ನು, ಫೋಟೋಗಳನ್ನು ಕೆದಕಿ ನೋಡಿದಾಗ ಸಿಕ್ಕ ಉತ್ತರಗಳೇ ಬೇರೆ.

ಹನುಮ ೪
ಸಿದ್ದರಾಮಯ್ಯನವರ ಫೋಟೋವೆಂದು ಕೆರಗೋಡಿನಲ್ಲಿ ಸುದ್ದಿ ಹಬ್ಬಿರುವುದನ್ನು ಗ್ರಾಮಸ್ಥರೊಬ್ಬರು ಈದಿನ.ಕಾಂಗೆ ತಿಳಿಸುತ್ತಿರುವುದು.

ಕೆರಗೋಡಿನ ಕೆಲವು ಯುವಕರು ನಂಬಿಕೊಂಡಿರುವಂತೆ ಇಲ್ಲಿನ ಫೋಟೋವೊಂದರಲ್ಲಿ ಇರುವ ವ್ಯಕ್ತಿ, ಸಿದ್ಧರಾಮಯ್ಯನವರಲ್ಲ. ಇದು ಹನುಮಧ್ವಜ ಸ್ಥಾಪಿಸಲು ಮಾಡಿರುವ ಗುದ್ದಲಿಪೂಜೆಯೂ ಅಲ್ಲ. ಜೊತೆಗೆ ಇಲ್ಲಿನ ಫೋಟೋಗಳು ಹನುಮಧ್ವಜಕ್ಕೆ ಸಂಬಂಧಿಸಿದವುಗಳೂ ಅಲ್ಲ.

ಗ್ರಾಮದಲ್ಲಿ ಸುಮಾರು ನಾಲ್ಕು ದಶಕಗಳ ಹಿಂದೆ ಸಾಂಸ್ಕೃತಿಕ ಚಟುವಟಿಕೆಗಳನ್ನು “ಗೌರಿ ಶಂಕರ ಕಲಾ ಸಂಘ” ಆರಂಭಿಸಿತು. ಈ ಸಂಘವು ಮುಂದೆ ’ಗೌರಿ ಶಂಕರ ಸೇವಾ ಟ್ರಸ್ಟ್‌’ ಆಗಿ ಬದಲಾಯಿತು. ಕೆರಗೋಡಿನ ರಂಗಮಂದಿರದ ಜಾಗದಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸುವುದಾಗಿ ಅನುಮತಿ ಪಡೆದದ್ದು ಇದೇ ಟ್ರಸ್ಟ್. ಆದರೆ ಟ್ರಸ್ಟ್‌ನ ಅಧ್ಯಕ್ಷರಾದ ರಾಮಚಂದ್ರ ಅವರನ್ನು ದಿಕ್ಕುತಪ್ಪಿಸಿ, ಅವರ ಗಮನಕ್ಕೆ ತರದೆ ಕೇಸರಿ ಧ್ವಜವನ್ನು ಹಾರಿಸಿ ವಿವಾದ ಸೃಷ್ಟಿಸಿದ್ದು ಬೇರೆಯದ್ದೇ ತಂಡ. ಟ್ರಸ್ಟ್ ಹೆಸರನ್ನು ದುರುಪಯೋಗ ಮಾಡಿಕೊಂಡು ರಾಮಚಂದ್ರ ಅವರನ್ನು ಬಲಿಪಶು ಮಾಡಿರುವುದು ವಾಸ್ತವ ಎಂಬುದನ್ನು ಈಗಾಗಲೇ ’ಈದಿನ.ಕಾಂ’ ಬಯಲಿಗೆಳೆದಿದೆ. ಅದರ ಮುಂದುವರಿದ ಭಾಗವಾಗಿ ಈ ಫೋಟೋಗಳ ಅಸಲಿಯತ್ತನ್ನು ಇಲ್ಲಿ ತಿಳಿಸಲಾಗಿದೆ.

ಗೌರಿಶಂಕರ ಕಲಾ ಸಂಘವು ಗ್ರಾಮದಲ್ಲಿ ಎಲ್ಲ ಜಾತಿ, ಸಮುದಾಯಗಳನ್ನು ಒಗ್ಗೂಡಿಸಿ ಕನ್ನಡ ರಾಜ್ಯೋತ್ಸವ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳನ್ನು ದಶಕಗಳಿಂದಲೂ ನಡೆಸಿಕೊಂಡು ಬರುತ್ತಿದೆ.

ಕನ್ನಡ ರಾಜ್ಯೋತ್ಸವವನ್ನು ದಶಕಗಳ ಹಿಂದೆ ಹತ್ತು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ಮಾಡಿದ್ದು ಕೂಡ ಗೌರಿ ಶಂಕರ ಕಲಾ ಸಂಘ. ಅಂದು ಗ್ರಾಮದಲ್ಲಿ ಕನ್ನಡ ಬಾವುಟವನ್ನು ಹಾರಿಸಲಾಗಿತ್ತು. ಒಂಬತ್ತು ದಿನ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳು, ಮಹಿಳೆಯವರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಗ್ರಾಮೀಣ ಕ್ರೀಡಾಕೂಟ ನಡೆಸಿ, ಹತ್ತನೇ ದಿನ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಲಾಗಿತ್ತು. ನಾಡದೇವತೆ ಚಾಮುಂಡೇಶ್ವರಿಯ ಮೆರವಣಿಗೆ ಮಾಡಿ, ಸುಮಾರು ನೂರು ಹತ್ತು ಎತ್ತಿನ ಗಾಡಿ ಕಟ್ಟಿಸಿ ಅತಿಥಿಗಳನ್ನು ಊರಿನಲ್ಲಿ ಮೆರವಣಿಗೆ ಮಾಡಲಾಗಿತ್ತು. ಒಂದು ರೀತಿ ಮಿನಿ ದಸರಾದ ರೀತಿ ಅಂದು ಕಾರ್ಯಕ್ರಮ ನಡೆದಿತ್ತು. ಅಂದಿನ ಸಮಾರೋಪದ ಸಮಾರಂಭಕ್ಕೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರನ್ನು ಕರೆಸಿ ಕಾರ್ಯಕ್ರಮ ಉದ್ಘಾಟಿಸಲಾಗಿತ್ತು. ಅವರು ಯಾವುದೇ ಧ್ವಜಸ್ತಂಭದ ಗುದ್ದಲಿಪೂಜೆಗೆ ಬಂದಿರಲಿಲ್ಲ. ಆದರೆ ಈಗ ವೈರಲ್ ಆಗುತ್ತಿರುವ ಫೋಟೋಗೂ ಹನುಮ ಧ್ವಜಸ್ತಂಭಕ್ಕೂ ಸಂಬಂಧವಿಲ್ಲ.

ಮೊದಲು ಫೋಟೋವನ್ನು ಗಮನಿಸಿ, “ಪಂಚೆ ಶರ್ಟ್ ಹಾಕಿರುವ ವ್ಯಕ್ತಿಯ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಇಣುಕಿ ನೋಡುತ್ತಿರುವುದು ಸ್ಪಷ್ಟವಾಗುತ್ತದೆ. ಪಂಚೆ ಶರ್ಟ್ ಹಾಕಿರುವ ವ್ಯಕ್ತಿಯೇ ಬೇರೆ, ತಲೆ ಕಾಣಿಸಿಕೊಂಡಿರುವ ‌ವ್ಯಕ್ತಿಯೇ ಬೇರೆ ಎಂಬುದು ಗೊತ್ತಾಗುತ್ತದೆ” ಎನ್ನುತ್ತಾರೆ ಗ್ರಾಮದ ಹಿರಿಯರು.

ಹಾರೆಯನ್ನು ಹಿಡಿದುಕೊಂಡಿರುವ ವ್ಯಕ್ತಿ- ಮಹಾನಾಡು ಯಜಮಾನರಾಗಿದ್ದ ಕೆ.ಎಲ್.ಯೋಗೀಶ್. ಈಗ ಅವರು ಹಾಸಿಗೆ ಹಿಡಿದಿದ್ದಾರೆ. ಉಳಿದಂತೆ ಮುಖಂಡರಾದ ಟಿ.ಪಿ.ಪ್ರಕಾಶ್, ಇಂಜಿನಿಯರ್‌ ವಸಂತಕುಮಾರ್‌, ಕಲಾ ಸಂಘದ ಸದಸ್ಯರಾಗಿದ್ದ ಗೋಪಾಲ ಕಾಮತ್‌, ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದ ಸಿದ್ದರಾಜು, ಮುಖಂಡರಾದ ಕೆ.ಟಿ.ವಿಶ್ವನಾಥ್, ವಸಂತಕುಮಾರ್‌ ಇದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯ ಎಂದು ಬಿಂಬಿಸುತ್ತಿರುವ ವ್ಯಕ್ತಿ ಯಾರು ಗೊತ್ತೆ? – ತಾಳೇಮೇಳೆ ದೊಡ್ಡಿಯ ನಿವಾಸಿ ಪಾರ್ಥಸಾರಥಿ.

ಕೆರಗೋಡು ವ್ಯಾಪ್ತಿಯಲ್ಲಿನ ತಾಳೇಮೇಳೆದೊಡ್ಡಿಯ ನಿವಾಸಿ ಪಾರ್ಥಸಾರಥಿ

ಪಾರ್ಥಸಾರಥಿ ೧
ಕೆರಗೋಡು ವ್ಯಾಪ್ತಿಯಲ್ಲಿನ ತಾಳೇಮೇಳೆದೊಡ್ಡಿಯ ನಿವಾಸಿ ಪಾರ್ಥಸಾರಥಿ

“ಒಂದು ವೇಳೆ ಸಿದ್ದರಾಮಯ್ಯನವರು ಅಂದಿನ ಕಾರ್ಯಕ್ರಮಕ್ಕೆ ಬಂದಿದ್ದರೆ ಅವರಿಂದಲೇ ಗುದ್ದಲಿಪೂಜೆ ಮಾಡಿಸುತ್ತಿದ್ದರು ಅಲ್ಲವೇ?” ಎಂದು ಪ್ರಶ್ನಿಸುತ್ತಾರೆ ಗ್ರಾಮದ ಇತಿಹಾಸ ಬಲ್ಲವರು.

ಇದನ್ನೂ ಓದಿರಿ: Exclusive: ಕೆರಗೋಡಿನ ಹನುಮಧ್ವಜದ ಹಿಂದೆ ಇದ್ದದ್ದು ಜಾತಿ ಕಲಹ ಸೃಷ್ಟಿಸುವ ಸಂಚು

“ಎಂಬತ್ತರ ದಶಕದ ರಾಜ್ಯೋತ್ಸವ ಸಂದರ್ಭದಲ್ಲಿ ತೆಗೆದ ಫೋಟೋಗಳು ಈಗ ವೈರಲ್ ಆಗಿವೆ. ಹನುಮಧ್ವಜದ ಪರಿಕಲ್ಪನೆಯೇ ಗ್ರಾಮಸ್ಥರಿಗೆ ಗೊತ್ತಿಲ್ಲದ ದಿನಗಳಲ್ಲಿ ಹನುಮಧ್ವಜಕ್ಕಾಗಿ ಧ್ವಜಸ್ತಂಭ ನೆಡುವುದಾದರೂ ಹೇಗೆ? ಕನ್ನಡ ಬಾವುಟವನ್ನು ಹಾರಿಸಲು ಮುಂದಾದ ಸಂದರ್ಭದಲ್ಲಿ ಒಂದು ಸ್ತಂಭಕ್ಕಾಗಿ ಹಾರೆ ಹಿಡಿದು ನಿಂತಿದ್ದಾಗ ತೆಗೆದ ಫೋಟೋ ಇದಾಗಿದೆ. ಅಲ್ಲಿ ಶಾಶ್ವತವಾದ ಧ್ವಜಸ್ತಂಭ ಇರಲಿಲ್ಲ. ಹನುಮಧ್ವಜಕ್ಕೂ ಈ ಫೋಟೋಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಕೆರಗೋಡು ಗ್ರಾಮದ ಮೂಲಗಳು ಖಚಿತಪಡಿಸುತ್ತವೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X