Exclusive: ಕೆರಗೋಡಿನ ಹನುಮಧ್ವಜದ ಹಿಂದೆ ಇದ್ದದ್ದು ಜಾತಿ ಕಲಹ ಸೃಷ್ಟಿಸುವ ಸಂಚು

Date:

ಕೆರಗೋಡಿನ ವಾಸ್ತವಗಳನ್ನು ಕೆದಕುತ್ತಾ ಹೋದರೆ ಕೇಸರಿ ಧ್ವಜದೊಳಗೆ ಸುಪ್ತವಾಗಿ ಅವಿತು ಕೂತಿರುವ ಜಾತಿ ಮೇಲರಿಮೆ ಮತ್ತು ಅದು ಮನುಷ್ಯನೊಳಗೆ ತಂದೊಡ್ಡುವ ಅಂಧಕಾರ, ಅಹಮ್ಮಿಕೆಯ ಸ್ಪಷ್ಟ ಚಿತ್ರಣಗಳು ಕಾಣಸಿಗುತ್ತವೆ

ಒಂದು ಕಾಲದಲ್ಲಿ ವಿಧಾನಸಭಾ ಕ್ಷೇತ್ರವಾಗಿದ್ದ ಕೆರಗೋಡು ಜಾತಿ ಸಾಮರಸ್ಯದ ನೆಲ. ಇದಕ್ಕೆ ಉದಾಹರಣೆಯಾಗಿ ಇತಿಹಾಸವನ್ನು ನೋಡಬೇಕಾಗುತ್ತದೆ. 1989ನೇ ಇಸವಿಯ ಜನವರಿ 15ನೇ ತಾರೀಕು ಕೆರಗೋಡಿನಲ್ಲಿ ಜಾತಿ ಕಲಹವನ್ನು ಉದ್ದೀಪಿಸುವ ಪ್ರಯತ್ನಗಳಾಗಿದ್ದವು. ವಾಸ್ತವದಲ್ಲಿ ಅದು ಕೆರಗೋಡು ಮತ್ತು ಹಲ್ಲೆಗೆರೆ ಗ್ರಾಮಗಳಿಗೆ ಸಂಬಂಧಿಸಿದ ಘಟನೆಯಾಗಿತ್ತು. ಹಲ್ಲೆಗೆರೆಯಲ್ಲಿ ಜಾತಿ ತಾರತಮ್ಯ ಮಾಡಿದ್ದು ಕಾಡ್ಗಿಚ್ಚಿನಂತೆ ಹಬ್ಬಿ, ಅದು ಕೆರಗೋಡಿಗೂ ವ್ಯಾಪಿಸಿತು. ಅಂದು ಹಲ್ಲೆಗೆರೆಯ ಸವರ್ಣೀಯರು ಕೆರಗೋಡಿನ ದಲಿತ ಕಾಲೋನಿಯ ಮೇಲೆ ದಂಡೆತ್ತಿ ಬಂದರು. ಅಂತಹ ಸಂದರ್ಭದಲ್ಲಿ ದಲಿತರ ರಕ್ಷಣೆಗೆ ನಿಂತದ್ದು ಕೆರಗೋಡಿನ ಒಕ್ಕಲಿಗರು. “ನಮ್ಮ ಕೇರಿಗೆ ಬರಲು ನೀವ್ಯಾರು? ನಿಮಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡುವುದಿಲ್ಲ” ಎಂದು ಘೇರಾವ್ ಹಾಕಿದ ಲಾಯರ್‌ ಶಂಕರೇಗೌಡರು, ಟಿ.ಶಂಕರೇಗೌಡರು ಮತ್ತು ಇನ್ನಿತರ ಮುಖಂಡರು ತಮ್ಮೂರಿನ ದಲಿತರ ರಕ್ಷಣೆಗೆ ನಿಂತರು. ಆ ವೇಳೆಗಾಗಲೇ ಸ್ಥಳದಲ್ಲಿ ಹಾಜರಿದ್ದ ಪೊಲೀಸರನ್ನೂ ಲೆಕ್ಕಿಸದೆ ದಾಂಧಲೆ ಎಬ್ಬಿಸಲು ಯತ್ನಿಸಲಾಗಿತ್ತು. ಪೊಲೀಸರು ಅಶ್ರುವಾಯು ಸಿಡಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯನ್ನು ನೆನೆಯುವ ಹಿರಿಯ ದಲಿತ ಹೋರಾಟಗಾರ ಗುರುಪ್ರಸಾದ್ ಕೆರಗೋಡು ಅವರು, “ಅಂದು ನಮ್ಮೂರಿನ ಒಕ್ಕಲಿಗರು ನಮ್ಮ ರಕ್ಷಣೆಗೆ ನಿಂತಿದ್ದರೆ ಹೊರತು, ಎಂದಿಗೂ ಗಲಾಟೆ ಮಾಡಿದವರಲ್ಲ. ಇಂದೂ ಅಷ್ಟೇ, ನಮ್ಮೂರಲ್ಲಿ ಒಟ್ಟಾಗಿ ಬಾಳುತ್ತಿದ್ದೇವೆ. ಹೊರಗಿನ ಜನರು ಊರಿಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದಾರೆ” ಎನ್ನುತ್ತಾರೆ.

ಕೆರಗೋಡು ಗ್ರಾಮ

ಮಂಡ್ಯ ಜಿಲ್ಲಾ ಕೇಂದ್ರದಿಂದ ಸುಮಾರು 12 ಕಿಲೋ ಮೀಟರ್‌ ದೂರದಲ್ಲಿರುವ ಕೆರಗೋಡು, ಮಂಡ್ಯ ವಿಧಾನಸಭೆ ಕ್ಷೇತ್ರದೊಂದಿಗೆ ವಿಲೀನವಾದ ಬಳಿಕ ಹೋಬಳಿ ಕೇಂದ್ರವಾಗಿಯಷ್ಟೇ ಉಳಿಯಿತು. ಸುಮಾರು ನಾಲ್ಕು ಸಾವಿರ ಜನರಿರುವ ಈ ಗ್ರಾಮವು ಇಲ್ಲಿಯವರೆಗೆ ಕೋಮುಗಲಭೆಯನ್ನು ಕಂಡ ಉದಾಹರಣೆಯಿಲ್ಲ. ಹಳೆಯ ಕಹಿಘಟನೆಯಾಚೆಗೂ ಕೆರಗೋಡಿನ ಜನರಲ್ಲಿ ಸಾಮರಸ್ಯವೇ ಕಂಡುಬರುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಕ್ಕಲಿಗರು, ದಲಿತರು, ಕುರುಬರು, ನಾಯಕರು- ಹೀಗೆ ಹತ್ತಾರು ಸಮುದಾಯಗಳನ್ನು ಹೊಂದಿರುವ ಕೆರಗೋಡಿನಲ್ಲಿ ದೇಶದ ಯಾವುದೇ ಗ್ರಾಮದಲ್ಲಿ ಇರುವಂತೆ ಸಿನಿಕರು, ದಡ್ಡರು, ವಿಚಾರವಂತರು, ಜಾತಿವಾದಿಗಳು, ಕೋಮುವಾದಿಗಳು, ತಟಸ್ಥ ನಿಲುವುಳ್ಳವರು, ರಾಜಕೀಯವಾಗಿ ವಿವಿಧ ಪಕ್ಷಗಳನ್ನು ಬೆಂಬಲಿಸುವವರು, ಪಕ್ಷ ಯಾವುದಾದರೂ ಪ್ರೀತಿ ವಿಶ್ವಾಸ ಮುಖ್ಯ ಎನ್ನುವವರು ಖಂಡಿತ ಇದ್ದಾರೆ.

ಕಳೆದ ಎರಡು ದಶಕಗಳಿಂದ ಕೆರಗೋಡು ಭಾಗದಲ್ಲಿ ಆರ್‌ಎಸ್‌ಎಸ್ ಸಕ್ರಿಯವಾಗಿದೆ ಎಂಬುದು ನಿಜವಾದರೂ ಕೋಮು ಸಂಘರ್ಷಗಳೇನೂ ಆಗಿರಲಿಲ್ಲ. ಮುಸ್ಲಿಂ ಸಮುದಾಯದ ನಾಲ್ಕೈದು ಮನೆಗಳಿವೆ ಅಷ್ಟೇ. ಆದರೆ ಕೆರಗೋಡು ಈ ಸುದ್ದಿಯಾಗಿರುವುದು ಹಿಂದೂ- ಮುಸ್ಲಿಂ ಬೈನರಿಯ ಸಿದ್ಧಾಂತವಾದ ಹಿಂದುತ್ವದ ಕಾರಣಕ್ಕೆ. ಆದರೆ ಸುದ್ದಿಯನ್ನು ಭೇದಿಸುತ್ತಾ ಹೊರಟರೆ ಹಿಂದುತ್ವದ ನಿಜದರ್ಶನವಾಗುತ್ತದೆ. ಅದು ಮುಸ್ಲಿಂ ದ್ವೇಷವನ್ನು ಮೇಲುಹೊದಿಕೆಯಲ್ಲಿ ಹೊಂದಿದ್ದರೂ ಸುಪ್ತವಾಗಿ ಪೋಷಿಸುವ ಜಾತೀಯತೆಯ ಕರಾಳ ಬಾಹುಗಳು ಗೋಚರಿಸತೊಡಗುತ್ತವೆ.

ರಾಷ್ಟ್ರಧ್ವಜವನ್ನು ಇಳಿಸಿ, ಕೇಸರಿ ಧ್ವಜವನ್ನು ಹಾರಿಸಿದ ಬಳಿಕ ದೊಡ್ಡಮಟ್ಟದಲ್ಲಿ ಸುದ್ದಿಯಾಗಿರುವ ಕೆರಗೋಡು ಮಾಧ್ಯಮಗಳಲ್ಲಿ ಬಿಂಬಿತವಾಗಿರುವಂತೆ ಖಂಡಿತ ಇಲ್ಲ. ಕೆರಗೋಡಿನ ವಿದ್ಯಮಾನದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ದಶಕಗಳಿಂದಲೂ ಈ ಭಾಗದಲ್ಲಿ ಆರ್‌ಎಸ್‌ಎಸ್ ಸಕ್ರಿಯವಾಗಿದೆ ಎಂಬುದು ಸ್ಪಷ್ಟ. ’ಮಾಧವ ವಿದ್ಯಾಲಯ’ ಎಂಬ ಹೆಸರಿನ ಇಲ್ಲಿನ ಶಾಲೆಯೇ ಆರ್‌ಎಸ್‌ಎಸ್‌ ಚಟುವಟಿಕೆಗಳ ತಾಣ ಎನ್ನಲಾಗುತ್ತದೆ. ವಿಚಾರಿಸಿ ನೋಡಿದರೆ, “ಈ ಶಾಲೆಯಲ್ಲಿ ಸಂಸ್ಕೃತ ಶ್ಲೋಕ ಕಲಿತು, ನಮ್ಮ ಮಕ್ಕಳು ಸಾಧಿಸುವುದಾದರೂ ಏನು?” ಎಂಬ ಭಾವನೆ ಸ್ಥಳೀಯರಲ್ಲಿ ಕಂಡುಬರುತ್ತದೆ. ಆದರೆ ಒಂದು ರೀತಿಯ ಕೋಮುಭಾವನೆ ಕೆರಗೋಡು ಭಾಗದಲ್ಲಿ ಬೆಳೆಯುತ್ತಿರುವುದರಿಂದ, “ಸುಮಾರು ಎರಡು ದಶಕ ಇಲ್ಲಿ ಆರ್‌ಎಸ್‌ಎಸ್ ಸಕ್ರಿಯವಾಗಿರುವೇ ಕಾರಣ” ಎಂದು ಮಂಡ್ಯ ಜನತೆ ಊಹಿಸುತ್ತಾರೆ.

ಚುನಾವಣೆಯಲ್ಲಿ ಸೋತು ಕಂಗಾಲಾಗಿರುವ ಜೆಡಿಎಸ್‌ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸಿದ ಬಳಿಕ, ಸಂಘಪರಿವಾರ ನಿಧಾನಕ್ಕೆ ಮಂಡ್ಯದಲ್ಲಿ ಬೇರುಬಿಡಲು ಕೆರಗೋಡನ್ನು ಪ್ರಯೋಗಶಾಲೆಯಾಗಿ ಬಳಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಜನವರಿ 28 ಮತ್ತು 29ರಂದು ಹನುಮ ಧ್ವಜ ವಿಚಾರಕ್ಕೆ ಭಾರಿ ಸದ್ದು ಮಾಡಿದ ಕೆರಗೋಡಿನ ವಾಸ್ತವಗಳನ್ನು ಕೆದಕುತ್ತಾ ಹೋದರೆ ಕೇಸರಿ ಧ್ವಜದೊಳಗೆ ಸುಪ್ತವಾಗಿ ಅವಿತು ಕೂತಿರುವ ಜಾತಿ ಮೇಲರಿಮೆ ಮತ್ತು ಅದು ಮನುಷ್ಯನೊಳಗೆ ತಂದೊಡ್ಡುವ ಅಂಧಕಾರ, ಅಹಮ್ಮಿಕೆಯ ಸ್ಪಷ್ಟ ಚಿತ್ರಣಗಳು ಕಾಣಸಿಗುತ್ತವೆ.

ನಿಜವಾಗಿ ನಡೆದದ್ದೇನು?

ದೇಶದಲ್ಲಿ ಬೆಳೆಯುತ್ತಿರುವ ಹಿಂದುತ್ವ ಫ್ಯಾಸಿಸಂನ ಆತಂಕಗಳು, ರಾಮಮಂದಿರದ ನೆಪದಲ್ಲಿ ರಾರಾಜಿಸುವಾಗ ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು ವಿಚಾರಧಾರೆಗಳನ್ನು ಓದಿಕೊಂಡ ಕೆರಗೋಡಿನ ದಲಿತ ಸಮುದಾಯದ ಒಂದು ಗುಂಪು ಸಾಂವಿಧಾನಿಕ ಪ್ರಜ್ಞೆಯನ್ನು ಮೆರೆಯಲು ಯತ್ನಿಸುತ್ತದೆ. ಹನುಮಧ್ವಜದ ಹೆಸರಲ್ಲಿ ಗ್ರಾಮವು ಆಘಾತಕಾರಿ ಸಂಗತಿಗಳಿಗೆ ಸಾಕ್ಷಿಯಾಗುವುದನ್ನು ಮನಗಂಡು ಅದನ್ನು ತಡೆಯಲು ಮುಂದಾಗುತ್ತದೆ. ಆದರೆ ಹೊರಜಗತ್ತಿಗೆ ಕೆರಗೋಡು ಬಿಂಬಿತವಾಗುವುದೇ ಬೇರೆಯ ರೀತಿ. ಕೆರಗೋಡಿನಲ್ಲಿ ವಾಸ್ತವದಲ್ಲಿ ನಡೆದದ್ದು ಸಾಂವಿಧಾನಿಕ ಮೌಲ್ಯಗಳು ಮತ್ತು ಜಾತಿ ಅಹಮಿಕೆಯ ನಡುವಿನ ತಿಕ್ಕಾಟವೆಂಬುದು ವೇದ್ಯವಾಗುತ್ತದೆ. ಆದರೆ ಮಾಧ್ಯಮಗಳಾಗಲೀ, ಇಲ್ಲಿ ಬಂದು ಹೋದ ರಾಜಕಾರಣಿಗಳಾಗಲೀ ಘಟನೆಯ ಹಿಂದಿನ ಸತ್ಯಗಳನ್ನು ಜಗತ್ತಿನೆದುರು ತೆರದಿಡುವ ಪ್ರಯತ್ನವನ್ನು ಮಾಡಲಿಲ್ಲ.

ನಿಜಕ್ಕೂ ಕೆರಗೋಡಿನ ಜನರೆಲ್ಲರೂ ಈ ಘಟನೆಯ ಹಿಂದಿದ್ದಾರೆಂಬುದು ಸುಳ್ಳು. ಇಲ್ಲಿ ಹಿಂದುತ್ವ ಪ್ರೇರಿತ ಕಾಣದ ಕೈಗಳು ಜಾತಿ ಅಹಮಿಕೆಯನ್ನು ಉದ್ದೀಪಿಸಿ, ಅದಕ್ಕೆ ಧರ್ಮದ ಹೊದಿಕೆ ಹಾಕಿ, ಜನರನ್ನು ದಿಕ್ಕು ತಪ್ಪಿಸಿದ್ದಾರೆಂಬುದು ಗೊತ್ತಾಗುತ್ತದೆ. ಘಟನೆಯ ವಿವರಗಳನ್ನು ನೋಡಿದರೆ ಅದು ಇನ್ನಷ್ಟು ಅರ್ಥವಾಗುತ್ತದೆ. “ಆದರೆ ಈ ಘಟನೆಯಲ್ಲಿ ಕೆರಗೋಡಿನ ಜನರೆಲ್ಲ ಭಾಗಿಯಾಗಿದ್ದಾರೆಂಬುದು ಸುಳ್ಳು” ಎನ್ನುತ್ತಾರೆ ಗುರುಪ್ರಸಾದ್ ಕೆರಗೋಡು. “ಹೊರಗಿನ ಗ್ರಾಮಗಳಿಂದ ಬಂದವರು ಈ ಘಟನೆಗೆ ಕಾರಣವಾದರು” ಎಂಬುದು ಅವರ ಅಭಿಪ್ರಾಯ.

ಹಿರಿಯ ದಲಿತ ಹೋರಾಟಗಾರ ಗುರುಪ್ರಸಾದ್ ಕೆರಗೋಡು

ಮಂಡ್ಯದಿಂದ ಕೆರಗೋಡು ಪ್ರವೇಶಿಸಿದ ಕೂಡಲೇ- ಮುಖ್ಯರಸ್ತೆಯ ಪಕ್ಕದಲ್ಲೇ ಹನುಮನ ದೇವಾಲಯ, ಎದುರಿಗೆ ಒಂದಿಷ್ಟು ಜಾಗವಿರುವ ಬಸ್‌ ನಿಲ್ದಾಣ, ಅದಕ್ಕೆ ಹೊಂದಿಕೊಂಡಂತೆ ಇರುವ ರಂಗಮಂದಿರ, ಅಂಗಡಿ ಮುಂಗಟ್ಟು ಮತ್ತು ಬಲಕ್ಕೆ ಬಂದರೆ ಗ್ರಾಮ ಪಂಚಾಯಿತಿ, ಸುತ್ತಲು ಮನೆಗಳನ್ನು ಕಾಣಬಹುದು. ಬಸ್‌ಸ್ಟ್ಯಾಂಡ್‌ಗೆ ಹೊಂದಿಕೊಂಡಿರುವ ರಂಗಮಂದಿರದ ಜಾಗವೇ ವಿವಾದದ ಸ್ಥಳ. ಇದು ಸುಮಾರು 80 ಅಡಿ ಅಗಲ, 177 ಅಡಿ ಉದ್ಧವಿದೆ. ಸಾರ್ವಜನಿಕರು ಯಾವುದೇ ಕಾರ್ಯಕ್ರಮ ಮಾಡಲು ಕೆರಗೋಡಿನ ಎರಡನೇ ಬ್ಲಾಕ್‌ನಲ್ಲಿರುವ ಈ ಜಾಗವನ್ನೇ ಬಳಸುತ್ತಾ ಬಂದಿದ್ದಾರೆ.

ಕೆರಗೋಡು ರಂಗಮಂದಿರ

ಹೀಗಿರುವಾಗ ಕೆರಗೋಡು ಗ್ರಾಮ ಪಂಚಾಯಿತಿಗೆ 2023ರ ನವೆಂಬರ್‌ ವೇಳೆಗೆ ಕೆಲವರು ಒಂದು ಮನವಿಯನ್ನು ಸಲ್ಲಿಸಿ, “ನಾವು ಧ್ವಜಸ್ತಂಭ ಮಾಡುತ್ತೇವೆ” ಎನ್ನುತ್ತಾರೆ. ಯಾವ ಬಾವುಟ ಹಾರಿಸುತ್ತೇವೆ ಎಂದು ಹೇಳಿರುವುದಿಲ್ಲ. ಮತ್ತೂ ವಿಚಾರಿಸಿದಾಗ ರಾಷ್ಟ್ರ ಬಾವುಟ ಮತ್ತು ನಾಡ ಬಾವುಟ ಹಾರಿಸುವುದಾಗಿ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಗ್ರಾಮ ಪಂಚಾಯಿತಿ, “ಹಾಗೆ ವೈಯಕ್ತಿಕವಾಗಿ ಅನುಮತಿ ನೀಡಲು ಆಗಲ್ಲ, ಯಾವುದಾದರೂ ಸಂಸ್ಥೆ ಅಥವಾ ಟ್ರಸ್ಟ್‌ನಿಂದ ಅರ್ಜಿ ಕೊಡಿಸಿ. ಧ್ವಜವನ್ನು ನಿಯಮಾನುಸಾರ ಹಾರಿಸಬೇಕು, ಅದರ ಜವಾಬ್ದಾರಿಯನ್ನು ಯಾರಾದರೂ ಹೊರಬೇಕು” ಎಂದು ಸೂಚಿಸುತ್ತದೆ.

ಗ್ರಾಮದಲ್ಲಿರುವ ಗೌರಿಶಂಕರ ಸೇವಾ ಟ್ರಸ್ಟ್‌ಗೆ ದೊಡ್ಡ ಇತಿಹಾಸವೇ ಇದೆ. ನಿಜದ ಅರ್ಥದಲ್ಲಿ ಗ್ರಾಮದ ಜನರನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುತ್ತಾ, ಸುಮಾರು ಮೂರು ದಶಕಗಳಿಂದ ಕಲೆ, ಸಂಸ್ಕೃತಿಯನ್ನು ಬೆಳೆಸಲು ಶ್ರಮಿಸುತ್ತಿರುವ ಈ ಟ್ರಸ್ಟ್‌ ಆರಂಭದಲ್ಲಿ ’ಗೌರಿಶಂಕರ ಕಲಾ ಸಂಘ’ ಎಂಬ ಹೆಸರನ್ನು ಹೊಂದಿತ್ತು. ನಂತರ ಟ್ರಸ್ಟ್‌ ಆಗಿ ಬದಲಾಯಿತು. ಎಲ್ಲ ಜಾತಿ ಜನಾಂಗಗಳನ್ನು ಒಳಗೊಂಡು ಗ್ರಾಮದಲ್ಲಿ ಪ್ರೀತಿ ವಿಶ್ವಾಸವನ್ನು ಬೆಸೆಯುವಲ್ಲಿ ಈ ಟ್ರಸ್ಟ್‌ ಮಾಡಿರುವ ಕೆಲಸಗಳನ್ನು ಗ್ರಾಮದ ಎಲ್ಲರೂ ಹಾಡಿಹೊಗಳುತ್ತಾರೆ. ಇದರ ಅಧ್ಯಕ್ಷರಾದ ರಾಮಚಂದ್ರ ಅವರನ್ನು ಮನವೊಲಿಸಿದ ಕೇಸರಿ ಧ್ವಜದ ಗುಂಪು ಟ್ರಸ್ಟ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತದೆ. ಅದಕ್ಕೆ ರಾಮಚಂದ್ರ ಸಹಿ ಮಾಡುತ್ತಾರೆ. ರಂಗ ಮಂದಿರದ ಜಾಗದಲ್ಲಿ ಧ್ವಜಸ್ತಂಭ ನಿರ್ಮಿಸುವುದಾಗಿಯೂ ರಾಷ್ಟ್ರಧ್ವಜ ಮತ್ತು ಕರ್ನಾಟಕ ಬಾವುಟ ಹಾರಿಸುವುದಾಗಿಯೂ ಡಿಸೆಂಬರ್‌ 29ರಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಕೆಯಾಗುತ್ತದೆ. ಡಿಸೆಂಬರ್‌ನಲ್ಲಿಯೇ ಗ್ರಾಮ ಪಂಚಾಯಿತಿ ಒಂದು ನಿರ್ಧಾರಕ್ಕೆ ಬಂದು, ಗೌರಿ ಶಂಕರ ಸೇವಾ ಟ್ರಸ್ಟ್ಗೆ ಅವಕಾಶ ನೀಡಲು ಒಪ್ಪಿಕೊಳ್ಳುತ್ತದೆ. ಇದಾದ ಬಳಿಕ ರಂಗಮಂದಿರದ ಜಾಗಕ್ಕೆ ಸಂಬಂಧಿದಂತೆ ನಾಲ್ಕೈದು ಬೇರೆ ಬೇರೆ ಅರ್ಜಿಗಳು ಸಲ್ಲಿಕೆಯಾಗುವುದು ವಿವಾದದ ಮುನ್ಸೂಚನೆಯಂತೆ ತೋರುತ್ತವೆ.

ಗೌರಿ ಶಂಕರ ಸೇವಾ ಟ್ರಸ್ಟ್‌ ಸಲ್ಲಿಸಿದ್ದ ಮನವಿ ಪತ್ರ

ಯೋಗೀಶ್ ಎಂಬವರು ಮನವಿ ಸಲ್ಲಿಸಿ, “ಪಕ್ಕದಲ್ಲೇ ಇರುವ ಆಂಜನೇಯ ದೇವಸ್ಥಾನದ ಮುಂದೆ ಅರ್ಜುನ ಧ್ವಜಸ್ತಂಭ ಮಾಡಿಸಬೇಕು” ಎನ್ನುತ್ತಾರೆ. ಆನಂದ್ ಎಂಬವರು ಜನವರಿ 2ರಂದು ಅರ್ಜಿ ಹಾಕಿ, “ಈ ಜಾಗದಲ್ಲಿ ಕೆಂಪೇಗೌಡ ವಿಗ್ರಹ ಮಾಡಿ ಬಾವುಟ ಹಾರಿಸುತ್ತೇವೆ” ಎಂದು ಕೇಳುತ್ತಾರೆ. ವಿವಾದ ಭುಗಿಲೇಳುತ್ತಿರುವ ಬೆನ್ನಲ್ಲೇ ಲೋಕೇಶ್ ಎಂಬವರು ಜನವರಿ 23ರಂದು ಅರ್ಜಿ ಸಲ್ಲಿಸಿ, “ಕೆರಗೋಡು ರಂಗಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ನಿರ್ಮಾಣ ಮಾಡಬೇಕು” ಎಂದು ವಾದಿಸುತ್ತಾರೆ.

ಕೆಂಪೇಗೌಡ ಪ್ರತಿಮೆಗಾಗಿ ಮನವಿ ಸಲ್ಲಿಕೆ
ಕುವೆಂಪು ಪುತ್ಥಳಿಗಾಗಿ ಮನವಿ ಸಲ್ಲಿಕೆ

ಜನವರಿ 5ರಂದು ಸ್ಥಳ ಪರಿಶೀಲನೆ ಮಾಡಿ, ರಾಷ್ಟ್ರಧ್ವಜ, ಕನ್ನಡ ಬಾವುಟ ಹಾರಿಸಲು ಟ್ರಸ್ಟ್‌ಗೆ ಅವಕಾಶವನ್ನು ನೀಡಲು ನಿರ್ಧರಿಸಲಾಗುತ್ತದೆ. ಅದರಂತೆ ನಿಬಂಧನೆಗಳಿಗೆ ಒಳಪಡುವಂತೆ ಮತ್ತು ಕನ್ನಡ ಧ್ವಜ, ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿ ನೀಡುವುದಾಗಿ ಜನವರಿ 17ರಂದು ಟ್ರಸ್ಟ್‌ನಿಂದ ಛಾಪಾ ಕಾಗದ ಮಾಡಿಸಿಕೊಂಡಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಯಾವುದೇ ಅಹಿತಕರ ಘಟನೆಯಾದಲ್ಲಿ ಟ್ರಸ್ಟ್ ಹೊಣೆ ಹೊರಬೇಕಾಗುತ್ತದೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ. ಜನವರಿ 19ರಂದು ಅನುಮತಿ ಪತ್ರವನ್ನು ಅಧಿಕೃತವಾಗಿ ನೀಡಲಾಗುತ್ತದೆ.

ಗ್ರಾಪಂ ನೀಡಿರುವ ಅನುಮತಿ ಪತ್ರ
ಸ್ಥಳ ಮಹಜರು ವರದಿ
ಮುಚ್ಚಳಿಕೆ ಪತ್ರ

ಇದರ ನಡುವೆ ಜನವರಿ 16ರಂದು ಹದಿನೆಂದು ಜನರ ಒಂದು ಪ್ರಜ್ಞಾವಂತರ ಗುಂಪು ಮುಂದೆ ಆಗಬಹುದಾದ ಘಟನೆಗಳನ್ನು ಊಹಿಸಿ ಮನವಿಯೊಂದನ್ನು ಸಲ್ಲಿಸಿ, “ಯಾವುದೇ ಒಂದು ಧರ್ಮದ ಪ್ರಚಾರಕ್ಕಾಗಿ, ಕೋಮು ಪ್ರಚೋದನೆಗೆ ಅವಕಾಶ ನೀಡಬಾರದು, ಶಾಂತಿ ಸುವ್ಯವಸ್ಥೆ ಕಾಪಾಡಬೇಕು” ಎಂದು ಕೋರುತ್ತದೆ. ಯಾಕೆಂದರೆ ಸ್ಥಳ ಪರಿಶೀಲನೆ ಮಾಡಿದ ದಿನವೇ, ಅಂದರೆ ಇನ್ನೂ ಅನುಮತಿ ಸಿಗುವ ಮುನ್ನವೇ ಒಂದು ಗುಂಪು ಸ್ಥಳದಲ್ಲಿ ಕಾಮಗಾರಿ ಆರಂಭಿಸಿರುತ್ತದೆ.

ಯಾವುದೇ ಧರ್ಮದ ಆಚರಣೆಗೆ ಅವಕಾಶ ನೀಡಬಾರದೆಂದು ಮನವಿ ಸಲ್ಲಿಸಿರುವುದು

ಅನುಮತಿ ಇಲ್ಲದೆ ಕೆಲಸ ಆರಂಭಿಸಿರುವುದನ್ನು ಕಂಡ ಗ್ರಾಮ ಪಂಚಾಯಿತಿಯು ಟ್ರಸ್ಟ್‌ನ ಅಧ್ಯಕ್ಷರಾದ ರಾಮಚಂದ್ರ ಅವರಿಗೆ ಜನವರಿ 16ರಂದು ನೋಟೀಸ್ ಕಳಿಸಿ, “ಮುಚ್ಚಳಿಕೆ ಪತ್ರ ನೀಡಿ, ಅನುಮತಿ ಪತ್ರ ಪಡೆಯಲು ತಿಳಿಸಲಾಗಿದ್ದರೂ ತಾವುಗಳು ಕಾಮಗಾರಿ ಪ್ರಾರಂಭಿಸಿರುವುದು ಕಂಡು ಬಂದಿದೆ. ಆದ್ದರಿಂದ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದ ನಂತರ ಕಾಮಗಾರಿ ಆರಂಭಿಸಬೇಕು ಅಲ್ಲಿಯವರೆಗೂ ಕಾಮಗಾರಿ ನಿಲ್ಲಿಸಬೇಕು” ಎಂದು ಸೂಚಿಸಲಾಗುತ್ತದೆ.

ರಾಮಚಂದ್ರ ಅವರಿಗೆ ಕೆರಗೋಡು ಗ್ರಾಮ ಪಂಚಾಯಿತಿ ನೀಡಿರುವ ನೋಟಿಸ್

ಗ್ರಾಮ ಪಂಚಾಯಿತಿಗೆ ಭೇಟಿದ ಸಂದರ್ಭದಲ್ಲಿ ’ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ ಗ್ರಾಪಂ ಸದಸ್ಯರೊಬ್ಬರು, “ಈ ಕೆಲಸ ನಡೆಯುತ್ತಿರುವುದು ರಾಮಚಂದ್ರ ಅವರಿಗೆ ಗೊತ್ತಿರುವುದಿಲ್ಲ. ಗೌರಿ ಶಂಕರ ಸೇವಾ ಟ್ರಸ್ಟ್ ಅರ್ಜಿ ಕೊಡಿಸಿರುವುದು ಬಿಟ್ಟರೆ, ಈ ಕೆಲಸ ಕಾರ್ಯಗಳನ್ನು ಮಾಡಿರುವುದು ಮತ್ತೊಂದು ತಂಡ” ಎಂದದ್ದು ನೋಡಿದರೆ ಇದರ ಹಿಂದೆ ಊರಿಗೆ ಕೇಡುಬಗೆವ ಸಂಚು ರೂಪಿಸಿದಂತೆ ಕಾಣುತ್ತದೆ.

ಟ್ರಸ್ಟ್‌ನಿಂದ ಅನುಮತಿ ಕೋರಲಾಗಿತ್ತು. ಆದರೆ ಕೆಲಸ ಮಾಡಿದ್ದು ಮಾತ್ರ ಬೇರೆಯವರು. ರಾಮಚಂದ್ರ ಅವರ ಹೆಸರಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದು ಅವರಿಗೂ ಗೊತ್ತಾಗುವುದಿಲ್ಲ. ಅನುಮತಿ ಇಲ್ಲದೆ ಕಾಮಗಾರಿ ಆರಂಭಿಸಿರುವುದನ್ನು ಕಂಡು ರಾಮಚಂದ್ರ ಅವರಿಗೂ ಸಿಟ್ಟು ಬರುತ್ತದೆ. ಆಗ ಜನವರಿ 17ರಂದು ನಿಬಂಧನೆಗೆ ಒಳಪಟ್ಟು ಮುಚ್ಚಳಿಕೆ ಮತ್ತು ಛಾಪಾ ಕಾಗದವನ್ನು ರಾಮಚಂದ್ರ ಬರೆದುಕೊಡುತ್ತಾರೆ. ಇಲ್ಲಿ ಬೇರೊಂದು ಧ್ವಜ ಹಾರಿಸುತ್ತಾರೆಂಬ ಗುಸುಗುಸು ಆ ವೇಳೆಗಾಗಲೇ ಗ್ರಾಮದಲ್ಲಿ ಹಬ್ಬಿರುತ್ತದೆ.

ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಗದಿಯಾಗಿರುತ್ತದೆ. ದೇಶವ್ಯಾಪಿ ಹಬ್ಬಿದ್ದ ಸಮೂಹಸನ್ನಿಗೆ ಕೆರಗೋಡು ಹೊರತಾಗಿರಲಿಲ್ಲ. ಆದರೆ ಜನವರಿ 20ರಂದೇ ಕೆರಗೋಡಿನಲ್ಲಿ ಕೇಸರಿ ಧ್ವಜವನ್ನು ಹಾರಿಸಲಾಗುತ್ತದೆ. ಕಾರಣ 20ನೇ ತಾರೀಕು ಸಮೀಪದ ಮಾರಗೊಂಡನಹಳ್ಳಿಯಲ್ಲಿ ರಾಮಮಂದಿರ ಉದ್ಘಾಟನೆ ಹಮ್ಮಿಕೊಳ್ಳಲಾಗಿರುತ್ತದೆ. ಅಲ್ಲಿಗೆ ಕುಮಾರಸ್ವಾಮಿಯವರು ಬರುವುದು ನಿಶ್ಚಯವಾಗಿರುವುದರಿಂದ, ಅವರಿಂದಲೇ ಕೇಸರಿ ಧ್ವಜಾರೋಹಣ ಮಾಡಿಸಲು ಜನವರಿ 19ನೇ ತಾರೀಕಿನಂದೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅನಾರೋಗ್ಯ ನಿಮಿತ್ತ ಕುಮಾರಸ್ವಾಮಿಯವರು ಗ್ರಾಮಕ್ಕೆ ಬರುವುದಿಲ್ಲ. ಆದರೆ ಸ್ಥಳೀಯ ಜೆಡಿಎಸ್‌ ನಾಯಕರೇ ಕೇಸರಿ ಭಾವುಟವನ್ನು ಹಾರಿಸುತ್ತಾರೆ.

ಅಂದು ಶನಿವಾರ. ಹೈಕೋರ್ಟ್ ಪ್ರಕರಣವೊಂದರ ನಿಮಿತ್ತ ಪಿಡಿಒ ಬೆಂಗಳೂರಿಗೆ ತೆರಳಿರುತ್ತಾರೆ.  ಮಾರನೇ ದಿನ ಅಂದರೆ 21ನೇ ತಾರೀಕು ಗ್ರಾಮ ಪಂಚಾಯಿತಿಗೆ ತೆರಳಿದ ಒಂದು ತಂಡ ಇದನ್ನು ಪ್ರಶ್ನಿಸುತ್ತದೆ. ಪಿಎಸ್‌ಐ ಸಮ್ಮುಖದಲ್ಲಿ ಪಂಚಾಯಿತಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಅಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಮಾತುಕತೆ ನಡೆಯುತ್ತದೆ. ಸುಮಾರು 35 ಜನರು ಗ್ರಾಮ ಪಂಚಾಯಿತಿಯ ಒಳಗಡೆ ಮತ್ತು ನೂರಾರು ಜನ ಹೊರಗಡೆ ನೆರೆದಿದ್ದು ಈ ಪ್ರಕರಣ ಎತ್ತ ಸಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಸಮಸ್ಯೆ ಇತ್ಯರ್ಥವಾಗುವುದಿಲ್ಲ. “ಜನವರಿ 25ನೇ ತಾರೀಕು ಸಾಮಾನ್ಯ ಸಭೆ ಇದ್ದು, ಭಾವುಟ ಇರಬೇಕೋ ಬೇಡವೋ ಎಂಬುದು ಅಂದು ತೀರ್ಮಾನ ಮಾಡೋಣ. ಸಾಮಾನ್ಯ ಸಭೆಯ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ” ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಇದರ ನಡುವೆ ಕಾಣದ ಕೈಗಳು ಸಕ್ರಿಯವಾಗುತ್ತವೆ. “ಹನುಮಧ್ವಜವನ್ನು ವಿರೋಧಿಸುತ್ತಿರುವವರು ಕೆಲವೇ ಜನರು ಮಾತ್ರ. ಅವರ ಸಂಖ್ಯೆ ತೀರಾ ಕಡಿಮೆ. ಅವರು ಮೇಲ್ಜಾತಿಯವರನ್ನು ತಡೆಯುತ್ತಿದ್ದಾರೆ” ಎಂದು ಗ್ರಾಪಂ ವ್ಯಾಪ್ತಿಯಲ್ಲಿ ಗುಲ್ಲು ಹಬ್ಬಿಸಿ ಜಾತಿ ಅಹಮ್ಮಿಕೆಯನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಲಾಗುತ್ತದೆ. ಇದರ ಭಾಗವಾಗಿ ಜನವರಿ 22, 23, 24- ಈ ಮೂರು ದಿನ ಸತತವಾಗಿ ಸುಮಾರು 800 ಅರ್ಜಿಗಳು ಗ್ರಾಮ ಪಂಚಾಯಿತಿಗೆ ಬರುತ್ತವೆ. “ವರ್ಷದ 365 ದಿನವೂ ಶಾಶ್ವತವಾಗಿ ಹನುಮಧ್ವಜ ಅಲ್ಲಿಯೇ ಹಾರಾಡಬೇಕು” ಎಂದು ಟೈಪ್ ಮಾಡಲಾದ ಅರ್ಜಿಗಳವು. ಅವುಗಳಲ್ಲಿದ್ದ ವಿಷಯ ಒಂದೇ, ಆದರೆ ಸಹಿ ಮಾತ್ರ ಬೇರೆ ಬೇರೆಯವರದ್ದಾಗಿರುತ್ತವೆ. ತಾಳೇಮೇಳೆ ದೊಡ್ಡಿ ಸೇರಿದಂತೆ ಕೆರಗೋಡಿನಲ್ಲಿ ನಾಲ್ಕು ಬ್ಲಾಕ್ ಹಾಗೂ ಇತರ ಗ್ರಾಮಗಳನ್ನು ಒಳಗೊಂಡ ಐದು ಬ್ಲಾಕ್‌ಗಳು, ಅಂದರೆ ಒಟ್ಟು 9 ಬ್ಲಾಕ್‌ಗಳು ಈ ಗ್ರಾಪಂ ವ್ಯಾಪ್ತಿಯಲ್ಲಿವೆ. ಕೆರಗೋಡಿನ ಹೊರಗಿನ ಬ್ಲಾಕ್‌ಗಳಿಂದ ಬಂದ ಅರ್ಜಿಗಳೇ ಅಧಿಕವಾಗಿರುತ್ತವೆ!

ಇದ್ಯಾಕೋ ಬೇರೆ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಬುದ್ಧ, ಬಸವ, ಅಂಬೇಡ್ಕರ್‌ ವಿಚಾರಧಾರೆಯನ್ನು ಓದಿಕೊಂಡ ಜನರು ಜನವರಿ 23ರಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ದೂರು ನೀಡುತ್ತಾರೆ. “ಸಾರ್ವಜನಿಕ ಸ್ಥಳದಲ್ಲಿ ಕೇಸರಿ ಬಾವುಟ ಹಾರಿಸಲಾಗಿದೆ. ಕಾನೂನಿನ ಪ್ರಕಾರ ರಾಷ್ಟ್ರಧ್ವಜ, ಕನ್ನಡ ಭಾವುಟವನ್ನು ಮಾತ್ರ ಹಾರಿಸಬೇಕು” ಎಂದು ದೂರಿನಲ್ಲಿ ತಿಳಿಸಲಾಗುತ್ತದೆ. ಅಂದು ಜಿಲ್ಲಾಧಿಕಾರಿಯವರು ಕಾಕತಾಳೀಯವಾಗಿ ಇತರ ಅಧಿಕಾರಿಗಳ ಜೊತೆಯಲ್ಲಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳ ಸಭೆಯನ್ನು ಕರೆದಿರುತ್ತಾರೆ. ತಕ್ಷಣವೇ ಕೆರಗೋಡಿನ ಅಧ್ಯಕ್ಷರು ಮತ್ತು ಪಿಡಿಒ ಅವರನ್ನು ಕರೆದು ಸೂಚನೆ ನೀಡಿ, “ಹೀಗೆ ಬಾವುಟ ಹಾರಿಸಲು ಅನುಮತಿ ನೀಡಲು ನನಗೆಯೇ ಅಧಿಕಾರವಿಲ್ಲ. ಬಾವುಟವನ್ನು ತೆರವು ಮಾಡಿಸಿ” ಎಂದು ತಿಳಿಸುತ್ತಾರೆ.

ಜನವರಿ 25ರಂದು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಇರುತ್ತದೆ. ಕೊನೆಯಲ್ಲಿ ಈ ವಿಚಾರವನ್ನು ಚರ್ಚೆಗೆ ಇಟ್ಟುಕೊಳ್ಳಲಾಗಿರುತ್ತದೆ. ಮೇಲಧಿಕಾರಿಗಳ ಸೂಚನೆಯನ್ನು ಪಿಡಿಒ ಸಭೆಯ ಗಮನಕ್ಕೆ ತರುತ್ತಾರೆ. “ಜಿಲ್ಲಾಧಿಕಾರಿಯರಿಗೆ ಒಂದಿಷ್ಟು ಜನ ದೂರು ನೀಡಿದ್ದಾರೆ. ನಾವು ಅನುಮತಿ ನೀಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಹೀಗಾಗಿ ಬಾವುಟದ ವಿಚಾರವಾಗಿ ನಾವು ಮಾತಾಡುವುದು ತಪ್ಪಾಗುತ್ತದೆ” ಎಂದು ಸ್ಪಷ್ಟಪಡಿಸುತ್ತಾರೆ.

22 ಜನ ಸದಸ್ಯರಲ್ಲಿ ಅಂದು ಇಬ್ಬರು ಗೈರು ಹಾಜರಾಗಿರುತ್ತಾರೆ. ಅಧ್ಯಕ್ಷರೂ ಒಳಗೊಂಡಂತೆ 18 ಜನ ಸದಸ್ಯರು 365 ದಿನವೂ ಅಲ್ಲಿ ಬಾವುಟ ಹಾರಿಸಲು ಅನುಮತಿ ನೀಡಬಹುದು ಎಂದು ಸಮ್ಮತಿ ಸೂಚಿಸುತ್ತಾರೆ. ಭಾವುಟದ ವಿಚಾರಕ್ಕೆ ಬಂದಿರುವ ಕಾನೂನಿನ ತೊಡಕನ್ನು ಚರ್ಚಿಸಲಾಗುತ್ತದೆ. “ಹನುಮಧ್ವಜ ಹಾರಿಸಲು ಅನುಮತಿ ನೀಡಲಾಗದು. ಸಂಬಂಧಪಟ್ಟ ಇಲಾಖೆಯಲ್ಲಿ ಒಪ್ಪಿಗೆ ತೆಗೆದುಕೊಳ್ಳಿ” ಎಂದು ಪಿಡಿಒ ತಿಳಿಸುತ್ತಾರೆ. ಅಂದು ಕೂಡ ಸಮಸ್ಯೆ ಇತ್ಯರ್ಥವಾಗುವುದಿಲ್ಲ.

ಇದರ ನಡುವೆ, “ನೀವು ಕೇಸರಿ ಧ್ವಜ ಹಾರಿಸಿ, ಆದರೆ ಅಂಬೇಡ್ಕರ್‌ ಜಯಂತಿಯಂದು ನಾವು ನೀಲಿಧ್ವಜ ಹಾರಿಸಲು ಅವಕಾಶ ನೀಡಬೇಕು” ಎಂದು ಒಂದು ಗುಂಪು ಕೋರಿದ್ದನ್ನು ಅನೇಕರು ವಿರೋಧಿಸಿದರು ಎಂದೂ ಮೂಲಗಳು ದೃಢಪಡಿಸುತ್ತವೆ.

ಜನವರಿ 26ರಂದು ಗಣರಾಜ್ಯೋತ್ಸವ ಬರುತ್ತದೆ. ಅಲ್ಲಿಯವರೆಗೂ ರಂಗಮಂದಿರದಲ್ಲಿ ಕೇಸರಿಧ್ವಜವೇ ಹಾರುತ್ತಿರುತ್ತದೆ. ಅಂದು ಹನುಮಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಐದೂವರೆಗೆ ರಾಷ್ಟ್ರಧ್ವಜವನ್ನು ಇಳಿಸಿದ ಬಳಿಕ ಮತ್ತೆ ಕೇಸರಿ ಧ್ವಜವನ್ನು ಮೇಲೇರಿಸಲಾಗುತ್ತದೆ. ಇದೆಲ್ಲವನ್ನೂ ತಿಳಿದು 26ನೇ ತಾರೀಕು ತಾಲ್ಲೂಕು ಕಚೇರಿಯಿಂದ ಅಧಿಕಾರಿಯೊಬ್ಬರು ಗ್ರಾಮಕ್ಕೆ ಧಾವಿಸಿ, “ಹೀಗೆಲ್ಲ ಕೇಸರಿ ಧ್ವಜ ಹಾರಿಸುವುದು ಸರಿಯಲ್ಲ” ಎಂದು ಸೂಚಿಸುತ್ತಾರೆ. ಆದರೆ ಅಲ್ಲಿದ್ದ ಜನ ಅಧಿಕಾರಿಯ ಸಲಹೆಯನ್ನು ಧಿಕ್ಕರಿಸುತ್ತಾರೆ. ಆದರೆ 27ನೇ ತಾರೀಕು ತಾಲ್ಲೂಕು ಪಂಚಾಯಿತಿ ಇಒ, ತಹಸೀಲ್ದಾರ್‌, ಡಿವೈಎಸ್‌ಪಿ ಅವರಿದ್ದ ತಂಡ ಗ್ರಾಮಕ್ಕೆ ಬರುತ್ತದೆ. ಆಗಲೂ ಸಾರ್ವಜನಿಕರು ಗದ್ದಲು ಉಂಟು ಮಾಡುತ್ತಾರೆ. ಗ್ರಾಮ ಪಂಚಾಯಿತಿಯಲ್ಲಿ ಮೀಟಿಂಗ್ ಮಾಡಲಾಗುತ್ತದೆ. “ಕೇಸರಿ ಧ್ವಜವನ್ನು ಧ್ವಜಸ್ತಂಭದಲ್ಲಿ ಹಾರಿಸುವುದು ಕಾನೂನಿಗೆ ವಿರುದ್ಧವಾಗುತ್ತದೆ. ಜನರಿಗೆ ಮನವರಿಕೆ ಮಾಡಿ ಅದನ್ನು ತೆಗೆಸಿ” ಎಂದು ಅಧಿಕಾರಿಗಳು ಹೇಳುತ್ತಾರೆ. “ಜನರು ನಮ್ಮ ಮಾತು ಕೇಳಲ್ಲ, ಆ ಮಟ್ಟಿಗೆ ಮುಂದೆ ಹೋಗಿದ್ದಾರೆ. ಜನರು ನಮಗೆ ಹೊಡೆಯಲು ಕೂಡ ಹೇಸಲ್ಲ” ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿ ಹತ್ತು ದಿನ ಸಮಯಾವಕಾಶ ಕೋರುತ್ತಾರೆ. ಜನವರಿ 28ರಂದು ಗ್ರಾಮಕ್ಕೆ ಬಂದ ಅಧಿಕಾರಿಗಳು, ಕೇಸರಿ ಧ್ವಜವನ್ನು ಇಳಿಸಿ ರಾಷ್ಟ್ರಧ್ವಜವನ್ನು ಆರಿಸುತ್ತಾರೆ. ಆನಂತರ ನಡೆದದ್ದು ಮಾಧ್ಯಮಗಳ ಹಾರಾಟ ಚೀರಾಟ. ರಾಷ್ಟ್ರಧ್ವಜದ ಬದಲು ಕೇಸರೀ ಧ್ವಜದ ವೈಭವೀಕರಣ.

ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ ಮತ್ತು ಸಚಿವ ಚೆಲುವರಾಯಸ್ವಾಮಿಯವರನ್ನು ಎಳೆದುತಂದು ರಾಜಕೀಯ ಕೆಸರೆರಚಾಟ ಶುರುವಾಗುತ್ತದೆ. ಗ್ರಾಮಕ್ಕೆ ಕುಮಾರಸ್ವಾಮಿಯವರ ಪ್ರವೇಶವಾಗುತ್ತದೆ. ಕೆರಗೋಡಿನಿಂದ ಮಂಡ್ಯದವರೆಗೆ ಪಾದಯಾತ್ರೆ ನಡೆಸಿ, ದಾಂಧಲೆ ಎಬ್ಬಿಸಲಾಗುತ್ತದೆ. ಕೆರಗೋಡಿನ ಮನೆಮನೆಯ ಮೇಲೆ ಕೇಸರಿಧ್ವಜ ಹಾರಿಸುತ್ತೇವೆ ಎಂದು ಸಂಘಪರಿವಾರ ಹೊರಡುತ್ತದೆ. ರಾಜ್ಯದ ಮೂಲೆಮೂಲೆಯಿಂದ ಬಿಜೆಪಿ ನಾಯಕರು ಕೆರಗೋಡಿಗೆ ಬಂದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿಯಲು ಯತ್ನಿಸುತ್ತಾರೆ.

“ಈ ಘಟನೆಯಲ್ಲಿ ಶಾಸಕ ಗಣಿಗ ರವಿಕುಮಾರ್ ಅವರ ಪಾತ್ರ ಇಲ್ಲ” ಎಂಬುದು ಅನೇಕ ಗ್ರಾಮ ಪಂಚಾಯಿತಿ ಸದಸ್ಯರ ಪ್ರಾಮಾಣಿಕ ಅಭಿಪ್ರಾಯ. “ಒಮ್ಮೆ ಜಲಜೀವನ್ ಮಿಷನ್ ಕಾಮಗಾರಿ ಉದ್ಘಾಟನೆಗೆ ಶಾಸಕರು ಗ್ರಾಮಕ್ಕೆ ಬಂದಿದ್ದರು. ಆ ವೇಳೆ, ಆಂಜನೇಯ ದೇವಾಲಯದ ಎದುರು ಧ್ವಜಸ್ತಂಭ ನಿರ್ಮಾಣ ಮಾಡುತ್ತೇವೆ ಎಂಬ ಪ್ರಸ್ತಾಪವನ್ನು ಕೆಲವರು ಇಟ್ಟಿದ್ದರು. ಆಂಜನೇಯ ದೇವಸ್ಥಾನದ ಬಳಿ ಮಾಡುವುದು ಬೇಡ, ಅಲ್ಲಿ  ಬಸ್‌ ಸ್ಟ್ಯಾಂಡ್ ಅಭಿವೃದ್ದಿ ಮಾಡೋಣ ಅಂತಿದ್ದೀನಿ, ಬೇರೆ ಕಡೆ ಮಾಡಿಕೊಳ್ಳಿ ಎಂದು ಶಾಸಕರು ತಿಳಿಸಿದ್ದರು. ರಂಗಮಂದಿರದ ಬಳಿ ಮಾಡುತ್ತೇವೆ ಎಂದು ಈ ಗುಂಪು ಕೇಳಿತ್ತು. ಅಲ್ಲಿ ಬೇಕಾದರೆ ಮಾಡಿಕೊಳ್ಳಿ, ಖಂಡಿತ ಬೇಡ ಅನ್ನಲ್ಲ ಎಂದು ಶಾಸಕರು ಅನುಮತಿ ನೀಡಿದ್ದರು” ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದರು. ಇನ್ನೂ ಆಳಕ್ಕಿಳಿದು ಶೋಧಿಸಿದಾಗ, “ಇದನ್ನೆಲ್ಲ ದೊಡ್ಡದು ಮಾಡಬೇಡಿ. ಧ್ವಜಸ್ತಂಭದ ವಿವಾದ ಎಬ್ಬಿಸಿ, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಬಿಜೆಪಿಯವರು ಬಂದು ಊರಿನ ಶಾಂತಿ ಕದಡುತ್ತಾರೆ” ಎಂದು ಶಾಸಕರು ಕಿವಿಮಾತು ಹೇಳಿರುವ ಮಾಹಿತಿಯನ್ನೂ ’ಈದಿನ.ಕಾಂ’ ಪ್ರವೇಶಿಸಿದೆ.

ವಾಸ್ತವ ಕೆದಕಿ ನೋಡಿದರೆ ಈ ಘಟನೆಯಲ್ಲಿ ಕೆರಗೋಡು ಗ್ರಾಮದ ಜನರ ಪಾಲು ತೀರಾ ಕಡಿಮೆ ಎಂಬುದು ಸ್ಪಷ್ಟವಾಗುತ್ತದೆ. ಅಕ್ಕಪಕ್ಕದ ಊರಿನ ಜನರೇ ಇದರಲ್ಲಿ ಹೆಚ್ಚು ಭಾಗಿಯಾದಂತೆ ಕಾಣುತ್ತದೆ.

“ಗೌರಿಶಂಕರ ಟ್ರಸ್ಟ್ ಹೆಸರು ಬಳಸಿಕೊಂಡು, ಟ್ರಸ್ಟ್‌ನ ಅಧ್ಯಕ್ಷರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸಗಳಾಗಿವೆ. ಚಿನ್ನದಂತಹ ಮನುಷ್ಯನನ್ನು ಇಕ್ಕಟ್ಟಿಗೆ ಸಿಲುಕಿಸಿರುವವರಿಗೆ ಆ ರಾಮನಾಗಲೀ, ಹನುಮನಾಗಲೀ ಒಳಿತು ಮಾಡುವುದಿಲ್ಲ. ಅವರು ಖಂಡಿತ ಸರ್ವನಾಶ ಆಗುತ್ತಾರೆ” ಎಂಬುದು ಕೆರಗೋಡು ಗ್ರಾಮದ ಭಾಗವಾಗಿರುವ ತಾಳೇಮೇಳೆ ದೊಡ್ಡಿಯ ನಿವಾಸಿಯೊಬ್ಬರ ಪ್ರಾಮಾಣಿಕ ಅಭಿಪ್ರಾಯ.

ತಮಗಾಗಿರುವ ವಂಚನೆಯನ್ನು ರಾಮಚಂದ್ರ ಅವರು ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಜಿಲ್ಲಾಧಿಕಾರಿಯವರಿಗೆ ವಿಷಯ ತಿಳಿಸಿರುವುದು ಬಲ್ಲಮೂಲಗಳಿಂದ ಖಚಿತವಾಗಿದೆ. “ನನ್ನ ಗಮನಕ್ಕೆ ಬರದೆ ಕೇಸರಿ ಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಮತ್ತು ಕನ್ನಡಧ್ವಜ ಬಿಟ್ಟು ಬೇರೆ ಯಾವುದಕ್ಕೂ ನಾನು ಅನುಮತಿ ಪಡೆದಿಲ್ಲ. ಆದರೆ ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ರಾಮಚಂದ್ರ ಅವರು ಅಧಿಕಾರಿಗಳೊಂದಿಗೆ ಬೇಸರ ವ್ಯಕ್ತಪಡಿಸಿರುವುದು ಸ್ಪಷ್ಟ. ಧ್ವಜದ ಗುದ್ದಾಟದಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ರಾಮಚಂದ್ರ ಅವರು ಹೆಣಗಾಡುತ್ತಾ ಜೇಬು ಬರಿದು ಮಾಡಿಕೊಳ್ಳುತ್ತಿದ್ದಾರೆ.

ಗ್ರೌಂಡ್ ರಿಪೋರ್ಟ್ ವೇಳೆ ಈದಿನ.ಕಾಂ ಜೊತೆ ಮಾತನಾಡಿದ ಕೆರಗೋಡು ನಿವಾಸಿ ಗುರು ಹೇಳಿದ್ದು ಹೀಗೆ: “ಧ್ವಜಸ್ತಂಭ ಇರುವ ಜಾಗದಲ್ಲೇ ನನ್ನ ಅಂಗಡಿ ಇದೆ. ಇಲ್ಲಿ ನಡೆಯುತ್ತಿರುವ ಡ್ರಾಮಾಗಳನ್ನು ನಿತ್ಯವೂ ನೋಡುತ್ತಿದ್ದೇನೆ. ಕೆರಗೋಡು ಗ್ರಾಮದ ಜನರಿಗಿಂತ, ಅಕ್ಕಪಕ್ಕದ ಗ್ರಾಮದ ಜನರೇ ಇಲ್ಲಿಗೆ ದೊಡ್ಡಮಟ್ಟದಲ್ಲಿ ಬಂದು ಸೇರಿ, ವಿವಾದವನ್ನು ದೊಡ್ಡದು ಮಾಡಿದರು. ಕೇಸರಿ ಬಾವುಟವನ್ನು ಅನೇಕ ಜಾತಿಗಳ ಜನರು ವಿರೋಧಿಸುತ್ತಾರೆ. ಆದರೆ ಒಂದು ಜಾತಿಯ ಜನರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆಂದು ಹಬ್ಬಿಸಿ, ಜನರನ್ನು ಸಂಘಟಿಸಿದರು. ಪ್ರಚೋದಿತರಾದವರು ಇನ್ನೊಬ್ಬರನ್ನು ಹಠ ಹಿಡಿದು ವಿರೋಧಿಸಿದರು. ವಾಸ್ತವದಲ್ಲಿ ನಮ್ಮೂರಿನ ಜನ ರಾಷ್ಟ್ರಧ್ವಜದ ವಿರೋಧಿಗಳೂ ಅಲ್ಲ, ಹನುಮಧ್ವಜದ ವಿರೋಧಿಗಳೂ ಅಲ್ಲ. ಸತ್ಯಗಳನ್ನು ಮಾಧ್ಯಮಗಳು ಬಿಚ್ಚಿಡುವ ಕೆಲಸ ಮಾಡಿದ್ದರೆ ಪ್ರಕರಣ ಇಷ್ಟು ದೊಡ್ಡದಾಗುತ್ತಲೇ ಇರಲಿಲ್ಲ. ರಾಮ ಹನುಮ ಏನಾದರೂ ಇದ್ದರೆ ಈ ಘಟನೆಯನ್ನು ನೋಡಿ ತಲೆ ತಗ್ಗಿಸಿ ಕೂರುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಕೆರಗೋಡು ನಿವಾಸಿ ಗುರು

“ಕೆರಗೋಡಿಗೆ ಅವಶ್ಯಕತೆ ಇರುವ ಘಟನೆಗಳು ಇಲ್ಲಿ ನಡೆಯುತ್ತಿಲ್ಲ. ಕಳೆದ ಹದಿನೈದು ವರ್ಷಗಳಿಂದ ಪಶುವೈದ್ಯ ಆಸ್ಪತ್ರೆಯಲ್ಲಿ ಡಾಕ್ಟರ್‌ ಇಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಡಾಕ್ಟರ್‌ ಇಲ್ಲ. ನೂರ ಐವತ್ತು ದಿನಗಳು ಮಂಡ್ಯದಲ್ಲಿ ನೀರಿಗಾಗಿ ರೈತರು ಹೋರಾಟ ಮಾಡಿದರು. ನಾವು ಅದರ ಬಗ್ಗೆ ಗಂಭೀರವಾಗಿ ಯೋಚಿಸಲಿಲ್ಲ. ಅವಶ್ಯಕತೆ ಇರುವುದಕ್ಕೆ ಈ ಯುವಕರು ಹೋಗಲಿಲ್ಲ. ಕೆರೆ ಹೊತ್ತುವರಿಯಾಗಿದೆ, ಹೂಳು ತುಂಬಿಕೊಂಡಿದೆ. ಬರಗಾಲ ಬಂದಿದೆ. ಇಂತಹ ವಿಚಾರಗಳಿಗಾಗಿ ಯೋಚಿಸದೆ ಇರುವುದನ್ನು ನೋಡಿ ಬೇಸರವಾಗುತ್ತದೆ” ಎಂದರು.

ಕರೆಗೋಡಿನ ಭಾಗವೇ ಆದ ತಾಳೇಮೇಳೆ ದೊಡ್ಡಿಗೆ ’ಈದಿನ.ಕಾಂ’ ಭೇಟಿ ನೀಡಿತ್ತು. ಆ ವೇಳೆ ಮಾತಿಗೆ ಸಿಕ್ಕ ಸುಮಾರು 80 ವಯಸ್ಸಿನ ಲಿಂಗಯ್ಯ ಅವರ ನೋವಿನ ಕಥನ ಕೇಳಿ ಮೌನ ಆವರಿಸಿತು. “ನನ್ನ ಎರಡು ಮಕ್ಕಳು ಕೂಡ ಆತ್ಮಹತ್ಯೆ ಮಾಡಿಕೊಂಡ್ರು ಸ್ವಾಮಿ. ಅವರು ಯಾಕೆ ಸತ್ರು ಅಂತ ಗೊತ್ತಾಗಲೇ ಇಲ್ಲ. ಅವರಿಗೆ ಮದುವೆ ಆಗಿರಲಿಲ್ಲ. ಈಗ ನಾನು ನನ್ನ ಹೆಂಡತಿ ಹೇಗೋ ಕಾಲ ದೂಡುತ್ತಿದ್ದೇವೆ” ಎಂದು ತಮ್ಮ ಜೀವನದ ಗತಿಯನ್ನು ಹೇಳಿಕೊಂಡರು.

ತಾಳೇಮೇಳೆದೊಡ್ಡಿ ನಿವಾಸಿ ಲಿಂಗಯ್ಯ

ಇಳಿವಯಸ್ಸಿನಲ್ಲೂ ಗಟ್ಟಿಜೀವವಾದ ಲಿಂಗಯ್ಯ ಅವರಿಗೆ ಊರಿನಲ್ಲಿ ಏನು ನಡೆಯುತ್ತಿದೆ ಎಂಬ ಎಚ್ಚರಿಕೆಯೂ ಇತ್ತು. ರಾಜಕೀಯದ ಮಾತಿಗೆ ಎಳೆದಾಗ, “ಈ ಬಾವುಟ ಗೀವುಟ ಎಂಬುದನ್ನೆಲ್ಲ ನಾನು ನೋಡಿರಲಿಲ್ಲ ಸ್ವಾಮಿ, ನಾವು ಯಾವತ್ತು ಅದನ್ನು ಮಾಡ್ಸಿ ಹಾಕ್ಸಿಲ್ಲ. ನಮ್ಮ ಮನೆ ಮೇಲೆ ಕಟ್ಟುತ್ತೇನೆ ಅಂದ್ರೆ ಒಪ್ಪಲ್ಲ. ಅಂದ್ರಿದ್ದ ಏನು ಸ್ವಾಮಿ ಉಪಯೋಗ?” ಎಂದು ಪ್ರಶ್ನಿಸಿದರು.

ತಾಳೇಮೇಳೆ ದೊಡ್ಡಿಯ ಮತ್ತೊಬ್ಬ ನಿವಾಸಿ ಕೃಷ್ಣೇಗೌಡರ ಪಾಲಿಗೆ ಈ ಬಾವುಟ ಒಂದು ಪಟ ಅರ್ಥಾತ್ ಗಾಳಿಪಟವಷ್ಟೆ. “ಈ ಗಾಳಿಪಟದಿಂದ ಏನು ಉಪಯೋಗವಿಲ್ಲ. ನನಗೆ ಜಮೀನಿಲ್ಲ. ನಾಲೆಯಲ್ಲಿ ನೀರು ಹರಿದರೆ ಕೂಲಿ ಕೆಲ್ಸ ಸಿಗುತ್ತೆ. ಈಗ ಕೆಲ್ಸ ಇಲ್ಲ. ಮೂರು ಕೆಜಿ ಅಕ್ಕಿ ಕೊಡ್ತಾ ಇದ್ದಾರೆ. ಸಾಕಾಗಲ್ಲ. ಅದನ್ನು ಹೆಚ್ಚು ಮಾಡಬೇಕು. ಕೆರಗೋಡಿನಲ್ಲಿ ನಡೆಯುತ್ತಿರೋದನ್ನು ಟಿವಿಯಲ್ಲೇ ನೋಡಿಕೊಂಡೆ. ಇದರಿಂದ ನಮಗೇನೂ ಆಗಬೇಕಿದೆ ಸ್ವಾಮಿ?” ಎಂದು ಪ್ರಶ್ನಿಸಿದರು.

ತಾಳೇಮೇಳೆದೊಡ್ಡಿಯ ನಿವಾಸಿ ಕೃಷ್ಣೇಗೌಡ

ಇದು ವಾಸ್ತವದ ಕೆರಗೋಡು. ಕಾಣದ ಕೈಗಳು ಗ್ರಾಮವನ್ನು ಜಾತಿ ಕೇಂದ್ರಿತವಾಗಿ ಒಡೆಯಲು ಯತ್ನಿಸಿ, ಅದು ಸಫಲವಾಗದಿದ್ದಾಗ ಧರ್ಮ ದಂಗಲ್ ಆಗಿ ಚಿತ್ರಿಸಲು ಯತ್ನಿಸಿದವು. ಇದ್ಯಾವುದಕ್ಕೂ ತಲೆಕಡೆಸಿಕೊಳ್ಳದ ಊರಿನ ಬಹುತೇಕ ಸಾಮಾನ್ಯ ಜನ ರಂಗಮಂದಿರದ ಬಳಿ ನಡೆಯುತ್ತಿರುವ ರಾಜಕೀಯ ಡ್ರಾಮಾವನ್ನು ನೋಡಿ ಮೂಕವಿಸ್ಮತರಾದರು. ಹಸಿರೇ ಉಸಿರಾಗಿರುವ ಮಂಡ್ಯದಲ್ಲಿ ಕೇಸರಿ ಆಟ ನಡೆಯಲ್ಲ ಅಂತ ಕುಮಾರಸ್ವಾಮಿಯವರಿಗೂ ಅರ್ಥವಾದಂತೆ ಕಾಣುತ್ತಿದೆ. ಹೀಗಾಗಿ ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ಎರಡು ಹೆಜ್ಜೆ ಹಿಂದಕ್ಕೆ ಇಟ್ಟಿದೆ.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ Exclusive ಸಂದರ್ಶನ | ದೇಶಕ್ಕೆ ಸಾಮೂಹಿಕ ಜೋಮು ಹಿಡಿದಿದೆ; ಹೊಸ ಭ್ರಮೆಗಳ ಕಟ್ಟಲಾಗುತ್ತಿದೆ: ಪರಕಾಲ ಪ್ರಭಾಕರ್

ಪರಕಾಲ ಪ್ರಭಾಕರ್ ಬುಧವಾರ(ಜ.24)ದಂದು ಬೆಂಗಳೂರಿಗೆ ಭೇಟಿ ನೀಡಿದ್ದರು. 'ಈ ದಿನ' ಯೂಟ್ಯೂಬ್...

ಭಾರತೀಯರಿಗೆ ಪುರಾಣ ಪಥ್ಯವಾಯಿತು, ವಾಸ್ತವ ಅಪಥ್ಯವಾಯಿತು

ಭಾರತದ ಇತಿಹಾಸದ ನೆಲೆಗಳೆಲ್ಲವೂ ವಾಸ್ತವದಲ್ಲಿ ಬೌದ್ಧ ಹಾಗೂ ಜೈನ ನೆಲೆಗಳು. ಇದಕ್ಕೆ...

ರಾಮಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ ನಾಲ್ವರು ಧರ್ಮ ಗುರುಗಳು; ಕಾರಣಗಳೇನು?

ಕಾರ್ಯಕ್ರಮದಲ್ಲಿ ಮೋದಿ ಅವರು ಮುಂಚೂಣಿಯಲ್ಲಿ ಇರುತ್ತಾರೆ. ಅದು, ಸನಾತನ ಶಾಸ್ತ್ರಗಳು ನಿರ್ದೇಶಿಸಿದ...