- ರಮೇಶ್ ಕುಮಾರ್ ದಿಢೀರ್ ಮುನಿಸಿಗೆ ಬೆಚ್ಚಿಬಿದ್ದ ಹೈಕಮಾಂಡ್
- ರಮೇಶ್ ಕುಮಾರ್ ನಿವಾಸಕ್ಕೆ ಸುರ್ಜೇವಾಲಾ ಭೇಟಿ, ಮಾತುಕತೆ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಮಯ್ಯ ಅವರಿಗೆ ಕೋಲಾರ ಟಿಕೆಟ್ ಕೈ ತಪ್ಪಿರುವುದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ರಮೇಶ್ ಕುಮಾರ್ ಅವರ ಮುನಿಸು ಶಮನ ಮಾಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಂದಾಗಿದ್ದಾರೆ.
ಶನಿವಾರ ಸುರ್ಜೇವಾಲಾ ಅವರು ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದಲ್ಲಿನ ರಮೇಶ್ ಕುಮಾರ್ ನಿವಾಸಕ್ಕೆ ಸುರ್ಜೇವಾಲಾ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಕೋಲಾರಕ್ಕೆ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹೈಕಮಾಂಡ್ ಸೂಚಿಸಿದ್ದಕ್ಕೆ ಬೇಸರಗೊಂಡಿರುವ ರಮೇಶ್ ಕುಮಾರ್, ಕೋಲಾರದಲ್ಲಿ ಭಾನುವಾರ ನಡೆಯಲಿರುವ ಜೈ ಭಾರತ ಸತ್ಯಾಗ್ರಹ ಯಾತ್ರೆಗೆ ಗೈರಾಗಲಿದ್ದೇನೆ ಎಂದು ತಿಳಿಸಿದ್ದರಂತೆ. ಹಾಗೆಯೇ ಸಿದ್ದರಾಮಯ್ಯಗೆ ಕೋಲಾರದಿಂದ ಟಿಕೆಟ್ ನೀಡದೇ ಇದ್ದಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸದಿರಲು ತೀರ್ಮಾನಿಸಿದ್ದರು ಎನ್ನಲಾಗಿದೆ.
ರಮೇಶ್ ಕುಮಾರ್ ಅವರ ದಿಢೀರ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಹೈಕಮಾಂಡ್ ನಾಯಕರು, ಸುರ್ಜೇವಾಲಾ ಮೂಲಕ ರಮೇಶ್ ಕುಮಾರ್ ಮುನಿಸು ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ. ಸುರ್ಜೇವಾಲಾ ಜೊತೆಗೆ ಶಾಸಕ ಬೈರತಿ ಸುರೇಶ್ ಹೋಗಿದ್ದು, ರಮೇಶ್ ಕುಮಾರ್ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಕೋಲಾರದಲ್ಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಶಾಸಕರಾದ ರಮೇಶ್ ಕುಮಾರ್, ಕೆ ವೈ ನಂಜೇಗೌಡ ಹಾಗೂ ಎಸ್ ಎನ್ ನಾರಾಯಣಸ್ವಾಮಿ ಪದೆ ಪದೇ ಒತ್ತಾಯಿಸುತ್ತಿದ್ದರು. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಹಾಯವಾಗಲಿದೆ ಎನ್ನುವುದು ಅವರ ನಿರಿಕ್ಷೆ.