ಭಟ್ಕಳದ ಕಟ್ಟೆ ಪುರಾಣ: ಚುನಾವಣಾ ನಿಮಿತ್ತಂ, ಕೋಣೆಮನೆ ವೇಷಂ

Date:

Advertisements
ಭಟ್ಕಳದ  ಸಾವರ್ಕರ್ ಕಟ್ಟೆ ಕೋರಿಕೆ ತಿರಸ್ಕೃತ ಮತ್ತು ಮುಸ್ಲಿಮರ ಮಸೀದಿ ನಾಮಫಲಕ ಅಳವಡಿಕೆ ಬೇಡಿಕೆ ಪುರಸ್ಕೃತವಾದಾಗ ಹೆಬಳೆ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಶಾಸಕರು, ಸಂಸದರು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿ ಬಿಜೆಪಿಯವರೇ ಇದ್ದರು. ಆಗ ಸುಮ್ಮನಿದ್ದ ಬಿಜೆಪಿಗರು ಈಗ ಏಕೆ ತಕರಾರು ತೆಗೆಯುತ್ತಿದ್ದಾರೆ?

ಸರಿ ಸುಮಾರು ಒಂದೂವರೆ ದಶಕ ವ್ಯರ್ಥವಾಗಿ ಎಂಪಿಗಿರಿ ಕಳೆದಿರುವ ಅನಂತಕುಮಾರ್ ಹೆಗಡೆ ಟಿಕೆಟ್ ದಾತರ ಗಮನ ಸೆಳೆಯಲು ಯಾವ್ಯಾವುದೋ ಮಸೀದಿ ಒಡೆಯುವ, ಸಿಎಂ ಸಿದ್ದರಾಮಯ್ಯರನ್ನು ಮನಸೋಇಚ್ಛೆ ಮೂದಲಿಸುವ ವಿಕೃತಿ ಪ್ರದರ್ಶಿಸಿ ಕಳೆದೊಂದು ವಾರದಿಂದ ಇದ್ದಕ್ಕಿದ್ದಂತೆ ಸುಮ್ಮನಾಗಿದ್ದಾರೆ. ಅನಂತಕುಮಾರ್ ಹೆಗಡೆ ಸುಮ್ಮನಾಗುತ್ತಲೇ ಸಂಘ ಪರಿವಾರದ ಚಿಂತನಾ ಚಿಲುಮೆಯ ಜೂನಿಯರ್-ಮಾಜಿ ಪತ್ರಕರ್ತ ಹರಿಪ್ರಸಾದ್ ಕೋಣೆಮನೆ ಸಾವರ್ಕರ್ ಕಟ್ಟೆ ಪುರಾಣ ಹೇಳುತ್ತ ಪ್ರತ್ಯಕ್ಷರಾಗಿದ್ದಾರೆ. ತಾನೇ ಕೇಸರಿ ಕ್ಯಾಂಡಿಡೇಟ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಉತ್ತರ ಕನ್ನಡ ಲೋಕ ಕಣದಲ್ಲಿ ಹಾರಾಡುತ್ತಿರುವ ಸುದ್ದಿಗಳ ಪ್ರಕಾರ, ಬಿಜೆಪಿ ಹೈಕಮಾಂಡ್ ಅಸಂಬದ್ಧ ಮಾತುಗಾರಿಕೆಯ ಅನಂತಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸಿ ನಾಜೂಕಾಗಿ ಸಂಘೀ ತತ್ವ ಪ್ರಸಾರ ಮಾಡಬಲ್ಲ ಹರಿಪ್ರಸಾದ್ ಕೋಣೆಮನೆಗೆ ಅಭ್ಯರ್ಥಿಯಾಗಿಸುವ ನಿರ್ಧಾರಕ್ಕೆ ಬಂದಿದೆಯಂತೆ. ಆ ಕಾರಣದಿಂದಾಗಿ, ಜಿಲ್ಲಾ ಸಂಚಾರ ಶುರುಹಚ್ಚಿಕೊಂಡಿರುವ ಕೋಣೆಮನೆ ಹಿಂದುತ್ವದ ಹೇಳಿಕೆ-ಅನಿಸಿಕೆ ಬಿತ್ತರಿಸುತ್ತಿದ್ದಾರೆ.

ಅನಂತ್ ಒರಟು-ಅತ್ಯುಗ್ರ ಕೋಮುವಾದಿಯಾದರೆ, ಕೋಣೆಮನೆ ಸೌಮ್ಯ ಸ್ವಭಾವದ ತಣ್ಣನೆಯ ತಂತ್ರಗಾರ. ಆದರೆ, ಅಭಿವೃದ್ಧಿ ಇಲ್ಲದೆ ಕುಗ್ಗಿಹೋಗಿರುವ ಉತ್ತರ ಕನ್ನಡ ತಲೆಯೆತ್ತುವಂತೆ ಮಾಡುವ ದೂರದರ್ಶಿತ್ವದ ಲಕ್ಷಣಗಳ್ಯಾವುದೂ ಕೋಣೆಮನೆಯಲ್ಲೂ ಕಾಣಿಸುತ್ತಿಲ್ಲ ಎಂಬ ತರ್ಕಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕೋಣೆಮನೆ ಕುರಿತು ಇಂಥ ಋಣಾತ್ಮಕ-ನಕಾರಾತ್ಮಕ ಭಾವನೆ ಮೂಡಲು ಅವರಾಡಿದ ಧರ್ಮಕಾರಣದ ಮಾತುಗಳೇ ಕಾರಣ. ಮತೀಯ ಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಫೈಲ್ ನಲ್ಲಿ ದಾಖಲಾಗಿರುವ ‘ಆತಂಕ ವಲಯ’ ಭಟ್ಕಳದಲ್ಲಿ ಕುಳಿತು ಕೋಣೆಮನೆ ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದು ಜನರನ್ನು ಬೆಚ್ಚಿಬೀಳಿಸಿದೆ.

Advertisements

ಭಟ್ಕಳ ಬಳಿಯ ತೆಂಗಿನಗುಂಡಿಯಲ್ಲಿರುವ ವೀರ ಸಾವರ್ಕರ್ ಕಟ್ಟೆ ತೆರವು ಕಾರ್ಯಾಚರಣೆ ಸ್ಥಳೀಯ ಶಾಸಕ-ಸಚಿವ ಮಂಕಾಳು ವೈದ್ಯ ಚಿತಾವಣೆಯಿಂದ ನಡೆದಿದೆ; ಈ ವೀರ ಸಾವರ್ಕರ್ ಕಟ್ಟೆ ತೆರವುಗೊಳಿಸಿದರೆ ತಾಲೂಕಿನ ಎಲ್ಲ ರಸ್ತೆಯ ಸರ್ಕಲ್ ಗಳಲ್ಲಿ ವೀರ ಸಾವರ್ಕರ್ ಹೆಸರಿನಲ್ಲಿ ಕಟ್ಟೆಕಟ್ಟಿ ಭಗವಾಧ್ವಜ ಹಾರಿಸುತ್ತೇವೆ ಎಂದು ರಾಜ್ಯ ಬಿಜೆಪಿ ವಕ್ತಾರ ಕೋಣೆಮನೆ ಹಿಂದುತ್ವದ ಉನ್ಮಾದ ಹುಟ್ಟುಹಾಕುವ ಹಿಕಮತ್ತಿನ ಮಾತುಗಳನ್ನಾಡಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ

ಭಟ್ಕಳದ ಕಡಲ ತಡಿಯ ತೆಂಗಿನಗುಂಡಿಯ ಸಾವರ್ಕರ್ ಕಟ್ಟೆ ಕತೆ ಕೆದಕುತ್ತ ಹೋದರೆ ಬಿಜೆಪಿ ಸಂಸದನಾಗುವ ಅವಸರದಲ್ಲಿರುವ ಕೋಣೆಮನೆ ಓಟ್ ಬ್ಯಾಂಕ್ ಧರ್ಮಕಾರಣಕ್ಕಾಗಿ ಹಸಿಹಸೀ ಸುಳ್ಳು ಹೇಳಿದ್ದಾರೆಂಬುದು ಎಂಥವರಿಗೂ ಖಾತ್ರಿಯಾಗುತ್ತದೆ. ಅಯೋಧ್ಯೆಯಲ್ಲಿ ರಾಮ ದೇವರಿಗೆ ಮನುಷ್ಯರು ಜೀವ ಕೊಡುವ ಮುನ್ನಾದಿನ ರಾತ್ರಿ ಬೆಳಗಾಗುವುದರಲ್ಲಿ ತೆಂಗಿನಗುಂಡಿಯ ಧಕ್ಕೆ(ಬಂದರು)ಯಲ್ಲಿ ಸಾವರ್ಕರ್ ಹೆಸರಿನ ಭಗವಾಧ್ವಜ ಕಟ್ಟೆ ತಲೆ ಎತ್ತಿತ್ತು. ಸಂಘ ಪರಿವಾರದ ಮಂಕು ಬೂದಿಯಿಂದ ಮಂದವಾಗಿರುವ ಒಂದಿಷ್ಟು ಹಿಂದುಳಿದ ವರ್ಗದ ಹುಡುಗರು ಕಟ್ಟಿದ್ದ ಈ ಕಟ್ಟೆ ಕಂಬದಲ್ಲಿ ಅಯೋಧ್ಯೆ ‘ಸಡಗರ’ದ ಸಂಕೇತವಾಗಿ ಭಗವಾಧ್ವಜ ಹಾರಿಸಲಾಗಿತ್ತು. ಇವರಲ್ಲಿ ಬಹುತೇಕರು ಸಂಸದ ಅನಂತ್ ಹೆಗಡೆ ಹಿಂಬಾಲಕರು.

ಮೀನುಗಾರಿಕಾ ಧಕ್ಕೆಯ ನಡುವೆ ಕಟ್ಟಲಾಗಿದ್ದ ಈ ಸಾವರ್ಕರ್ ಕಟ್ಟೆಯಿಂದ ಬೆಸ್ತರ ದೈನಂದಿನ ಕಸುಬು-ವಹಿವಾಟಿಗೆ ಅಡ್ಡಿಯಾಯಿತು. ಮೀನುಗಾರರು ಸಾವರ್ಕರ್ ಕಟ್ಟೆಯಿಂದ ತಮಗಾಗುವ ತೊಂದರೆ ಕುರಿತು ತಹಶೀಲ್ದಾರರಿಗೆ ದೂರಿದರು. ತಹಶೀಲ್ದಾರ್ ತನ್ನ ಸಿಬ್ಬಂದಿಯಿಂದ ಸುಲಭವಾಗಿ ತೆರವುಗೊಳಿಸಬಹುದಾಗಿದ್ದ ಕಟ್ಟೆ ಕೇಸನ್ನು ಹೆಬಳೆ ಗ್ರಾಮ ಪಂಚಾಯತ್ ಪಿಡಿಓಗೆ ವರ್ಗಾಯಿಸಿ ಪಲಾಯನ ಮಾಡಿದರು. ಪಿಡಿಓ ಜ. 27ರಂದು ಜೆಸಿಬಿಯಿಂದ ಕಟ್ಟೆ ನೆಲಸಮ ಮಾಡಿಸಿದರು.

ಇದಾದ ಮೂರ್ನಾಲ್ಕು ದಿನ ಹಿಂದುತ್ವದ ತಂಡ ಹೇಳಿಕೆ, ದೂರು, ಪ್ರತಿಭಟನೆ ಯಾವುದೂ ಇಲ್ಲದೆ ಸುಮ್ಮನಿತ್ತು. ಯಾವಾಗ ಮಂಡ್ಯದ ಕೆರಗೋಡಲ್ಲಿ ಹನುಮ ಧ್ವಜ ಗಲಾಟೆಯಾಗಿ ರಾಜ್ಯ ವ್ಯಾಪಿ ಸುದ್ದಿ-ಸದ್ದಾಯಿತೋ ಆಗ ಭಟ್ಕಳದ ಕೇಸರಿ ಕಲಿಗಳ ಬಳಗ ಯಾರದೋ ಕುಮ್ಮಕ್ಕಿನಿಂದ ಮೈಕೊಡವಿ ಎದ್ದಂತೆ ಹಾರಾಡತೊಡಗಿತು. ಹಿಂದುತ್ವದ ಮೇಲಿನ ಧಾಳಿ; ಹಿಂದು ಸಮಾಜಕ್ಕೆ ಅವಮಾನ ಎಂದೆಲ್ಲ ಬೊಬ್ಬಿರಿಯುತ್ತ ಬೀದಿಗಿಳಿದು ಮತೋನ್ಮತ್ತ ಸೀನ್ ಸೃಷ್ಟಿಸಿತು. ತಾಲೂಕಾಡಳಿಕ್ಕೆ ಕೇರ್ ಮಾಡದೆ ಬಲಾತ್ಕಾರವಾಗಿ ಮತ್ತೆ ಕಟ್ಟೆ ಕಟ್ಟಿ ನಿಲ್ಲಿಸಿತು. ಜಿಲ್ಲಾಡಳಿತ ಸಾವರ್ಕರ್ ಕಟ್ಟೆ ತಂಟೆಗೆ ಹೋಗಲು ಹೆದರುತ್ತಿದೆ. ಆದರೆ ಕೇಸರಿ ಬಾವುಟ ಸದರಿ ಕಟ್ಟೆಯ ಕಂಬವೇರದಂತೆ ನಿಗಾ ವಹಿಸಿದೆ.

ಸಾವರ್ಕರ್ ಕಟ್ಟೆ
ಸಾವರ್ಕರ್ ಕಟ್ಟೆ

ಜಿಲ್ಲಾಡಳಿತ ವ್ಯಗ್ರವಾಗಿದ್ದ ಪರಿಸ್ಥಿತಿಯನ್ನು ತಿಳಿಯಾಗಿಸಿ ಎಲ್ಲ ಸಮಾಧಾನದ ಹಂತಕ್ಕೆ ಬಂತು ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗಲೇ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಸಾದ್ ಕೋಣೆಮನೆ ಭಟ್ಕಳಕ್ಕೆ ಓಡೋಡಿಬಂದರು. ಭಟ್ಕಳದ ಸಾವರ್ಕರ್ ಕಟ್ಟೆ ಕಥನ ತನ್ನು ಬಿಜೆಪಿ ಅಭ್ಯರ್ಥಿತನದ ಪ್ರಚಾರಕ್ಕೆ ಪ್ರಶಸ್ತ ‘ಇಶ್ಯೂ’ ಎಂದು ಭಾವಿಸಿ, ಕೋಮು ವೈಷಮ್ಯ ಪ್ರಚೋದಿಸುವಂತಹ ಮಾತುಗಳನ್ನಾಡಿದರು. 2018ರ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಹೊನ್ನಾವರದ ಹುಡುಗ ಪರೇಶ್ ಮೇಸ್ತ ಕಾಲು ಜಾರಿ ಕೆರೆಗೆ ಬಿದ್ದು ಅಸುನೀಗಿದ್ದನ್ನು ಇಸ್ಲಾಮೋಫೋಬಿಕ್ ಕತೆಯ ಪುಸ್ತಕ ಬರೆಯಲು ಬಳಸಿಕೊಂಡಿದ್ದ ಕೋಣೆಮನೆ ಭಟ್ಕಳದ ಸಾವರ್ಕರ್ ಕಟ್ಟೆ ಪುರಾಣ ಕಡೆಗಣಿಸಲು ಸಾಧ್ಯವೇ? ಅದೂ ಕಡು ಕೇಸರಿ ಎಂಪಿಯಾಗುವ ತಯಾರಿಯಲ್ಲಿರುವಾಗ?

ಪರೇಶ್ ಮೇಸ್ತನದು ಕೊಲೆಯಲ್ಲ; ಆಕಸ್ಮಿಕ ಸಾವೆಂದು ಮೋಶಾ ಯಜಮಾನಿಕೆಯ ಬಿಜೆಪಿ ಸರಕಾರದ ಸಿಬಿಐ ಬಿ-ರಿಪೋರ್ಟ್ ಹಾಕಿದಾಗ ಕೋಣೆಮನೆ ಅಸಲಿ ಬಣ್ಣ ಬಯಲಾಗಿತ್ತು. ಈಗ ಹೆಬಳೆ ಗ್ರಾಮ ಪಂಚಾಯತಿಯಲ್ಲಿರುವ ಸಾವರ್ಕರ್ ಕಟ್ಟೆ ಕರಾಮತ್ತಿನ ದಾಖಲೆಗಳು, ಸಾಂದರ್ಭಿಕ ಸಾಕ್ಷ್ಯಗಳು ಕೋಣೆಮನೆ ಸುಳ್ಳು ಹೇಳಿ ಸಮಾಜದ ಶಾಂತಿ-ಸೌಹಾರ್ದತೆ ಕೆಡಿಸಿ ಧರ್ಮಕಾರಣದ ಮೈಲೇಜಿಗೆ ಹವಣಿಸುತ್ತಿರುವುನ್ನು ಬಯಲುಗೊಳಿಸಿದೆ.

2022ರ ಫೆಬ್ರುವರಿ 5ರಂದು ಹೆಬಳೆ ಗ್ರಾ.ಪಂ.ಗೆ ತೆಂಗಿನಗುಂಡಿಯಲ್ಲಿ ಸಾವರ್ಕರ್ ಕಟ್ಟೆ ಕಟ್ಟಲು ಪರವಾನಗಿ ಕೋರಿದ ಅರ್ಜಿಯೊಂದು ಬರುತ್ತದೆ. ಅದೇ ಹೊತ್ತಲ್ಲಿ ಜಾಮಿಯಾ ಕಾಲೋನಿ ಮಸೀದಿಗೆ ನಾಮಫಲಕ ಅಳವಡಿಕೆಗೆ ಅವಕಾಶ ಕೇಳಲಾಗುತ್ತದೆ. ಈ ಎರಡೂ ಬೇಡಿಕೆಯನ್ನು ಪರಿಶೀಲಿಸಿದ ಪಂಚಾಯತ್ ಆಡಳಿತ ಸಾವರ್ಕರ್ ಕಟ್ಟೆಗೆ ಅವಕಾಶ ನಿರಾಕರಿಸುತ್ತದೆ; ಜಾಮಿಯಾ ಕಾಲೋನಿ ಮಸೀದಿ ನಾಮಫಲಕ ಅಳವಡಿಕೆಗೆ ಒಪ್ಪಿಗೆ ಕೊಡುತ್ತದೆ.

ಹಿಂದುಗಳ ಕಟ್ಟೆ ಕೋರಿಕೆ ತಿರಸ್ಕೃತ ಮತ್ತು ಮುಸ್ಲಿಮರ ಮಸೀದಿ ನಾಮಫಲಕ ಅಳವಡಿಕೆ ಬೇಡಿಕೆ ಪುರಸ್ಕೃತವಾದಾಗ ಹೆಬಳೆ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಭಟ್ಕಳ ಬಿಜೆಪಿ ಮಂಡಾಲಾಧೀಶ್ವರನೇ ಆ ಗ್ರಾ.ಪಂ ಮೆಂಬರನೂ ಆಗಿದ್ದ. ಭಟ್ಕಳದಲ್ಲಿ ಸುನೀಲ್ ನಾಯ್ಕ್ ಬಿಜೆಪಿ ಶಾಸಕರಾಗಿದ್ದರು. ಅನಂತಕುಮಾರ್ ಹೆಗಡೆಯೇ ಆಗ ಎಂಪಿಯಾಗಿದ್ದರು. ಅದೆಲ್ಲಕಿಂತ ಹೆಚ್ಚಾಗಿ ಸಾವರ್ಕರ್ ಕಟ್ಟೆಗೆ ಅವಕಾಶ ನಿರಾಕರಣೆಯಾದಾಗ ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು. ಹಳ್ಳಿ ಹೆಬಳೆಯಿಂದ ದಿಲ್ಲಿವರೆಗೆ ಹಿಂದುತ್ವದ ಸೋಕಾಲ್ಡ್ ಸಂರಕ್ಷಕರದೇ ದರ್ಬಾರು ನಡೆದಿರುವ ಅನುಕೂಲಕರ ಸಂದರ್ಭದಲ್ಲಿ ತೆಂಗಿನಗುಂಡಿ ಸಾವರ್ಕರ್ ಕಟ್ಟೆ ಸ್ಥಾಪನೆ ಸಾಧ್ಯವಾಗಲಿಲ್ಲವೇಕೆ?

hariprakash10

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವ ಈ ಚುನಾವಣಾ ಕಾಲದಲ್ಲಿ ಭಗವಾಧ್ವಜದ ಸಾವರ್ಕರ್ ಕಟ್ಟೆ ಕಟ್ಟುವ-ಕೆಡವುವ ಆಟ ನಡೆದದ್ದು ಹೇಗೆ? ಈ ಪವಾಡದ ಪರಿವೆ ಪ್ರತಿಭಾನ್ವಿತ ಎನ್ನಲಾಗುವ ಕೋಣೆಮನೆಗಿಲ್ಲವೆ? ಮೇಲಿಂದ ಕೆಳಗಿನವರೆಗೆ ಹಿಂದುತ್ವದ ಹಿರೇಮಣಿಗಳ ಆಡಳಿತವಿರುವಾಗ ಸಂಘೀ ಪಿತಾಮಹ ಸಾವರ್ಕರ್ ಕಟ್ಟೆಗೆ ಅನುಮತಿ ಸಿಗಲಿಲ್ಲವೇಕೆ? ಆಗ ಸುಮ್ಮನಿದ್ದ ಸಾವರ್ಕರ್ ಭಕ್ತ ಕೋಣೆಮನೆ ಮತ್ತವರ ಕೇಸರಿ ಪರಿವಾರಕ್ಕೆ ಈಗೇಕೆ ಏಕಾಏಕಿ ಹಿಂದುತ್ವದ ಸ್ಪಿರಿಟ್ ಉಕ್ಕುತ್ತಿದೆ ಎಂಬ ಜಿಜ್ಞಾಸೆಗಳು ಈಗ ಉತ್ತರ ಕನ್ನಡದಲ್ಲಿ ನಡೆದಿದೆ. ಹಾಗೆಯೇ ಚುನಾವಣಾ ನಿಮಿತ್ತಂ ಹಿಂದುತ್ವ ವೇಷಂ ಎಂಬ ಜೋಕ್ ಕೂಡ ಕೇಳಿಬರುತ್ತಿದೆ.

-ನಹುಷ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ಧರ್ಮಸ್ಥಳ | ದೂರುದಾರನ ಹಿನ್ನೆಲೆ ತಿಳಿದುಕೊಂಡಿದ್ದರೆ ಸರ್ಕಾರದ ದುಡ್ಡು ಉಳೀತಿತ್ತು: ಆರ್. ಅಶೋಕ್

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಡಲಾಗಿದೆ ಎಂದು ದೂರು ಕೊಟ್ಟಿದ್ದ ಸಾಕ್ಷಿ ದೂರುದಾರನನ್ನು...

ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಬಂಧಿಸಿದ ಇಡಿ: ನಗದು ಸಹಿತ ಚಿನ್ನಾಭರಣ ವಶಕ್ಕೆ

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿ ಸೇರಿದಂತೆ 31...

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

Download Eedina App Android / iOS

X