ಉದ್ಯೋಗಿಗಳ ಭವಿಷ್ಯನಿಧಿ ಬಡ್ಡಿದರ ಅಲ್ಪಪ್ರಮಾಣದಲ್ಲಿ ಏರಿಸಲು ಶಿಫಾರಸು ಮಾಡಲಾಗಿದೆ. ಶ್ವೇತಪತ್ರದಲ್ಲಿ ಹೇಳಿರುವಂತೆ ದೇಶ ಆರ್ಥಿಕವಾಗಿ ಉತ್ತಮ ಪ್ರಗತಿ ಸಾಧಿಸಿದಲ್ಲಿ ಅದರ ಫಲ ಶ್ರಮಿಕವರ್ಗಕ್ಕೆ ಏಕೆ ಸಿಗುತ್ತಿಲ್ಲ?
ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಇರುವ ಸಂದರ್ಭದಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಟ್ರಸ್ಟಿಗಳ ಕೇಂದ್ರ ಮಂಡಳಿ (ಸಿಬಿಟಿ), 2023-24ರ ಹಣಕಾಸು ವರ್ಷಕ್ಕೆ ಬಡ್ಡಿದರವನ್ನು ಶೇ. 8.25ಕ್ಕೆ ಏರಿಸಲು ಶಿಫಾರಸು ಮಾಡಿದೆ.
ಇದೇ ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೊದಲು ಶನಿವಾರ ಸಭೆ ನಡೆಸಿದ ಸಿಬಿಟಿ ಉದ್ಯೋಗಿಗಳ ಭವಿಷ್ಯನಿಧಿಯ ಮೇಲಿನ ಬಡ್ಡಿದರವನ್ನು ಏರಿಸಲು ಶಿಫಾರಸು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಕಳೆದ ಮೂರು ವರ್ಷಗಳಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಭವಿಷ್ಯ ನಿಧಿಯ ಮೇಲಿನ ಬಡ್ಡಿದರವನ್ನು ಏರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಆದರೆ ಹಿಂದಿನ ಅವಧಿಯ ಎನ್‌ಡಿಎ ಆಡಳಿತದ ಸಂದರ್ಭದ ಭವಿಷ್ಯನಿಧಿ ಮೇಲಿನ ಬಡ್ಡಿದರಕ್ಕೆ ಹೋಲಿಸಿದಲ್ಲಿ ಈಗ ಅಲ್ಪಮಾತ್ರ ಬಡ್ಡಿದರ ಏರಿಸಲಾಗಿದೆ.
ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 2019-20ರಲ್ಲಿ ಭವಿಷ್ಯನಿಧಿಯ ಮೇಲಿನ ಬಡ್ಡಿದರವನ್ನು ಶೇ 8.5ರಷ್ಟು ಏರಿಸಲಾಗಿತ್ತು. ನಂತರ 2020-21ರವರೆಗೆ ಅದೇ ದರವನ್ನು ಕಾಯ್ದುಕೊಳ್ಳಲಾಗಿದೆ. ನಂತರ 2021-22ರಲ್ಲಿ ಬಡ್ಡಿದರವನ್ನು ಶೇ 8.1ಕ್ಕೆ ಇಳಿಸಲು ಸಿಬಿಟಿ ನಿರ್ಧರಿಸಿತ್ತು. ಇದು ನಾಲ್ಕು ದಶಕಗಳ ಅತಿ ಕಡಿಮೆ ಬಡ್ಡಿದರವಾಗಿ ದಾಖಲಾಗಿತ್ತು. ನಂತರ 2022-23ರಲ್ಲಿ ಅದನ್ನು ಶೇ 8.15ಕ್ಕೆ ಏರಿಸಲಾಗಿದೆ.
ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ ಈ ಬಡ್ಡಿದರವನ್ನು ಅನುಷ್ಠಾನಗೊಳಿಸಲು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಲಿದೆ. ಹಣಕಾಸು ಸಚಿವಾಲಯದ ಒಪ್ಪಿಗೆಯ ನಂತರ ಇಪಿಎಫ್‌ಒ ಭವಿಷ್ಯನಿಧಿ ಚಂದಾದಾರರ ಕೊಡುಗೆಗೆ ಈ ದರವನ್ನು ನಿಗದಿ ಮಾಡಲಿದೆ. ಭವಿಷ್ಯನಿಧಿ ಸಂಸ್ಥೆಯ ಒಟ್ಟು 29 ಕೋಟಿ ಚಂದಾದಾರರಲ್ಲಿ ಸಕ್ರಿಯವಾಗಿ ಕೊಡುಗೆ ನೀಡುವ 6.8 ಕೋಟಿ ಚಂದಾದಾರರು ಇದ್ದಾರೆ.
ಕುಸಿಯುತ್ತ ಹೋದ ಭವಿಷ್ಯನಿಧಿ ಮೇಲಿನ ಬಡ್ಡಿದರ
ಉದ್ಯೋಗಿಗಳ ಭವಿಷ್ಯನಿಧಿಯ ಮೇಲಿನ ಬಡ್ಡಿದರ ಇತ್ತೀಚೆಗಿನ ಎರಡು ದಶಕಗಳಲ್ಲಿ ಕೆಳಮುಖವಾಗಿ ಇಳಿಯುತ್ತಲೇ ಬಂದಿದೆ. 2010-11ರ ಅವಧಿಯಲ್ಲಿ ಭವಿಷ್ಯನಿಧಿಯ ಮೇಲೆ ಅತ್ಯಧಿಕ ಶೇ 9.50ರಷ್ಟು ಬಡ್ಡಿದರ ನಿಗದಿಯಾಗಿತ್ತು. ನಂತರ 2011-12ರಲ್ಲಿ ಅದನ್ನು ಶೇ 8.25ರಷ್ಟಕ್ಕೆ ಇಳಿಸಲಾಯಿತು.
2012- 13ರಲ್ಲಿ ಶೇ 8.50ಕ್ಕೆ ಮತ್ತು ಲೋಕಸಭಾ ಚುನಾವಣೆಗೆ ಮೊದಲು 2013-14ರಲ್ಲಿ ಶೇ 8.75ಕ್ಕೆ ಏರಿಸಲಾದ ಬಡ್ಡಿದರವನ್ನು ನಂತರ 2015-16ರ ಅವಧಿಯಲ್ಲಿ ಶೇ 8.80ಕ್ಕೆ ಏರಿಸಲಾಗಿತ್ತು.
2016-17ರಲ್ಲಿ ಶೇ 8.65ರಷ್ಟಕ್ಕೆ ಇಳಿಸಿದ ನಂತರ ಬಡ್ಡಿದರ ಕುಸಿಯುತ್ತಲೇ ಹೋಗಿದೆ. 2017-18ರಲ್ಲಿ ಶೇ 8.55ಕ್ಕೆ ಇಳಿಸಲಾಯಿತು. ನಂತರ ಲೋಕಸಭಾ ಚುನಾವಣೆಗೆ ಮೊದಲು 2018-19ರಲ್ಲಿ ಶೇ 8.65ಗೆ ಏರಿಸಲಾಯಿತು. ಚುನಾವಣೆಯ ನಂತರದಲ್ಲಿ ಮತ್ತೆ ಬಡ್ಡಿದರವನ್ನು ವರ್ಷಂಪ್ರತಿ ಇಳಿಸುತ್ತಲೇ ಹೋಗಲಾಗಿದೆ.
ಚುನಾವಣೆ ನಂತರ ಪಾತಾಳಕ್ಕೆ ಇಳಿದ ಬಡ್ಡಿದರ
2019-20ರಲ್ಲಿ ಶೇ 8.5ಗೆ ಇಳಿದ ಬಡ್ಡಿದರ, 2021-22ರಲ್ಲಿ ಶೇ 8.1ಕ್ಕೆ ಕುಸಿಯಿತು. ಹೀಗೆ ಇನ್ನಷ್ಟು 0.4ರಷ್ಟು ಕುಸಿದ ಬಡ್ಡಿದರವನ್ನು ನಂತರ 2022-23ರಲ್ಲಿ ಶೇ 8.15ಕ್ಕೆ ಕೇವಲ 0.05ರಷ್ಟು ಏರಿಸಲಾಯಿತು.
ಇದೀಗ ಮೂರು ವರ್ಷಗಳ ನಂತರದ ಅತ್ಯಧಿಕ ಬೆಲೆಯಾಗಿ 2023-24ರ ಅವಧಿಯಲ್ಲಿ ಶೇ 8.25ರಷ್ಟು ಬಡ್ಡಿದರ ನಿಗದಿ ಮಾಡಲು ಶಿಫಾರಸು ಮಾಡಲಾಗಿದೆ. ಆದರೆ 2019-20ರಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದ ಶೇ 8.65ಕ್ಕೆ ಹೋಲಿಸಿದರೆ ಈಗಿನ ಶೇ. 0.10 ರಷ್ಟು ಏರಿಕೆಯ ಶಿಫಾರಸು ಅತಿ ಕನಿಷ್ಠ ಪ್ರಗತಿ. ಹೀಗಾಗಿ ಅಲ್ಪಮೊತ್ತದ ಬಡ್ಡಿದರ ಏರಿಕೆ ಚುನಾವಣೆಯ ಘಟ್ಟದಲ್ಲಿ ಉದ್ಯೋಗಿಗಳ ಕಣ್ಣಿಗೆ ಮಣ್ಣೆರಚುವ ಯತ್ನವೆನ್ನುವ ಅನುಮಾನ ಮೂಡಿದೆ.
ಶ್ರಮಿಕ ವರ್ಗಕ್ಕೆ ನೀಡಿಲ್ಲವೆ ಆರ್ಥಿಕ ಪ್ರಗತಿಯ ಫಲ?
ಆರ್ಥಿಕವಾಗಿ ಸದೃಢವಾದ ದೇಶವನ್ನು ಕಟ್ಟಿರುವ ಹೆಮ್ಮೆಯನ್ನು ಶ್ವೇತಪತ್ರದಲ್ಲಿ ಪ್ರಕಟಿಸಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರದ ಅವಧಿಯಲ್ಲಿ ಕಾರ್ಮಿಕರಿಗೆ ಸಿಗುತ್ತಿದ್ದ ಭವಿಷ್ಯನಿಧಿಯ ಮೇಲಿನ ಬಡ್ಡಿದರ ಶೇ 8.75ರಿಂದ ಕುಸಿದು ಶೇ. 8.15ಗೆ ಇಳಿಸಿ, ಇದೀಗ ಶೇ. 8.25ಕ್ಕೆ ಏರಿಸಿರುವುದನ್ನು ಹೇಗೆ ವ್ಯಾಖ್ಯಾನಿಸಲಿದೆ ಎನ್ನುವ ಪ್ರಶ್ನೆ ಏಳುತ್ತದೆ.
ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದರೂ, ಯುಪಿಎ ಅವಧಿಗೆ ಹೋಲಿಸಿದರೆ ಉತ್ತಮ ಅರ್ಥವ್ಯವಸ್ಥೆಯನ್ನು ಕಟ್ಟಿದ್ದರೂ, ಅದರ ಲಾಭವನ್ನು ಶ್ರಮಿಕ ವರ್ಗಕ್ಕೆ ನೀಡುವುದಿಲ್ಲ ಎನ್ನುವ ಧೋರಣೆಯನ್ನು ಪ್ರದರ್ಶಿಸಲಾಗುತ್ತಿದೆಯೆ? ಅಥವಾ ಎನ್‌ಡಿಎ ಸರ್ಕಾರ ತನ್ನ ಆರ್ಥಿಕ ಪ್ರಗತಿಯ ಕುರಿತ ಶ್ವೇತಪತ್ರದಲ್ಲಿ ಸುಳ್ಳಿನ ಸರಮಾಲೆ ಕಟ್ಟಿದೆಯೆ? ಶ್ರಮಿಕ ವರ್ಗ ಈ ಪ್ರಶ್ನೆಯನ್ನು ಕೇಂದ್ರ ಸರ್ಕಾರದ ಮುಂದಿಡಲು ಲೋಕಸಭಾ ಚುನಾವಣೆಯ ಘಟ್ಟ ಅತ್ಯುತ್ತಮ ಸಮಯ.
ಕಳೆದ ಒಂದು ದಶಕದಲ್ಲಿ ದಾಖಲಾಗಿರುವ ಉದ್ಯೋಗಿ ಭವಿಷ್ಯನಿಧಿ ಬಡ್ಡಿದರದ ಏರಿಳಿತ ಹೀಗಿದೆ:
ಭವಿಷ್ಯನಿಧಿ ಬಡ್ಡಿದರದ ಏರಿಳಿತ | |
2010-11 | 9.50% |
2011-12 | 8.25% |
2012-13 | 8.50% |
2013-14 | 8.75% |
2014-15 | 8.75% |
2015-16 | 8.80% |
2016-17 | 8.65% |
2017-18 | 8.55% |
2018-19 | 8.65% |
2019-20 | 8.50% |
2020-21 | 8.50% |
2021-22 | 8.10% |
2022-23 | 8.15% |
2023-24* | 8.25% |