ಜೀತ ಪದ್ಧತಿ ನಿರ್ಮೂಲನೆ ಮಾಡಲು ಕಾಯ್ದೆ ರೂಪಿಸಿದ್ದರೂ ಅಲ್ಲಲ್ಲಿ ಜೀತ ಪದ್ದತಿ ವರದಿಯಾಗುತ್ತಿದ್ದು, ಇದನ್ನು ಬುಡ ಸಹಿತ ಕಿತ್ತೊಗೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಕರೆ ನೀಡಿದರು.
ದಾವಣಗೆರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಜೀತಪದ್ಧತಿ ನಿರ್ಮೂಲನಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
“ಜೀತ ಪದ್ದತಿ ಈ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ. ಮನೆಯಲ್ಲಿ ಹಣಕಾಸಿನ ತೊಂದರೆಯಾದರೆ ಹಂವಂತರ ಬಳಿ ಹಣವನ್ನು ಪಡೆಯುತ್ತಿದ್ದರು. ಪಡೆದ ಹಣಕ್ಕೆ ಬಡ್ಡಿಯ ರೂಪದಲ್ಲಿ ಎಲ್ಲರೂ ಕೂಡ ಅವರ ಮನೆಯಲ್ಲಿ ಜೀತವನ್ನು ಮಾಡಬೇಕಿತ್ತು. ಜೀತ ಪದ್ಧತಿ ರದ್ದತಿ ಕಾಯ್ದೆಯನ್ನು 1976ರಲ್ಲಿ ದೇಶಾದ್ಯಂತ ಜಾರಿ ಮಾಡಲಾಗಿದೆ. ಜೀತ ಪದ್ಧತಿ ಎಲ್ಲಿದೆ ಎಂಬುದನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿರ್ಮೂಲನೆ ಮಾಡಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಅಂಥವರಿಗೆ ಪುನರ್ವಸತಿ ಕಲ್ಪಿಸಬೇಕು” ಎಂದು ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಭೋದಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತಾನಾಡಿ, “ಯಾವುದೇ ಒಬ್ಬ ವ್ಯಕ್ತಿಗೆ ಅವನ ಇಚ್ಛೆಗೆ ವಿರುದ್ಧವಾಗಿ ಅವನನ್ನು ಕೂಡಿಹಾಕಿ ಕೆಲಸವನ್ನು ಮಾಡಿಸುತ್ತಾರೆ. ಅದು ನಮ್ಮ ಗಮನಕ್ಕೆ ಬಂದರೆ, ನಾವು ಕಾನೂನು ರೀತಿ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು. ಜೀತ ಪದ್ಧತಿ ನಿರ್ಮೂಲನೆ ಕಾನೂನು ತಿಳಿದುಕೊಂಡು ಇಂತಹ ಘಟನೆಗಳು ಎಲ್ಲಿಯಾದರೂ ನಡೆದರೆ ಅದನ್ನು ಗುರುತಿಸಿ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಆಗ ಮಾತ್ರ ಕಾನೂನು ರೀತಿ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ತಂದೆ, ತಾಯಿ ಜೀತ ಪದ್ಧತಿ ಅಥವಾ ಜೀತದ ಕೆಲಸದಲ್ಲಿ ತೊಡಗಿದ್ದಲ್ಲಿ ಅವರ ಮಕ್ಕಳೂ ಕೂಡ ಆ ಕೆಲಸವನ್ನು ಮಾಡುತ್ತಾರೆ. ಈ ಜೀತಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕೆಂಬುದು ಪ್ರತಿಯೊಬ್ಬರ ಧೈಯವಾಗಿದೆ. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಬದ್ದರಾಗಿದ್ದಲ್ಲಿ ಮಾತ್ರ ಜೀತ ಪದ್ದತಿ ನಿರ್ಮೂಲನೆ ಸಾಧ್ಯವಾಗುತ್ತದೆ” ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ ಮಾತನಾಡಿ, “ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ನೆಮ್ಮಲ್ಲರ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಿದೆ. ಸರ್ಕಾರ ಜನ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಹೇಳುವುದು ನಮ್ಮ ಕರ್ತವ್ಯ” ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರೆಣ್ಣವರ ಜಿಲ್ಲಾ ಮಟ್ಟದ ಜೀತಪದ್ಧತಿ ನಿರ್ಮೂಲನಾ ದಿನಾಚರಣೆಯ ಜಾಥಾ ಅಂಗವಾಗಿ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್‌ನಲ್ಲಿ ಸ್ಕೌಟ್ಸ್, ಗೈಡ್ಸ್ ಕಲರವ; ಕಲ್ಯಾಣ ಕರ್ನಾಟಕ ಪ್ರಥಮ ಜಾಂಬೊರೇಟ್ ಆರಂಭ
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಶ್ವಥ್, ಜಿ ಪಂ ಸಿಪಿಒ ಮಲ್ಲನಾಯ್ಕ, ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್ ಎಲ್ ಹೆಚ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಿಕಿ ವಾಸಂತಿ ಉಪ್ಪಾರ್, ಡಿಡಿಪಿಐ ಜಿ ಕೊಟ್ರೇಶ್ ಸೇರಿದಂತೆ ಇತರರು ಇದ್ದರು.