ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಆಶ್ರಯದಲ್ಲಿ ತುಳುನಾಡಿನ ಮೂಲ ನಿವಾಸಿಗಳಾದ ಆದಿವಾಸಿ ಕೊರಗ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮ ನಾಳೆ (ಫೆ.11) ನಡೆಯಲಿದೆ.
ಸುರತ್ಕಲ್ ಕುತ್ತೆತ್ತೂರಿನ ಆದಿವಾಸಿ ಸಮುದಾಯ ಭವನದಲ್ಲಿ ಭಾನುವಾರ ಬೆಳಿಗ್ಗೆ 11.15ಕ್ಕೆ ಮದುವೆ ಸಮಾರಂಭ ನಡೆಯಲಿದ್ದು, ಒಟ್ಟು ಆರು ಜೋಡಿಯ ವಿವಾಹ ನೆರವೇರಲಿದೆ.
ಕೊರಗ ಸಮುದಾಯ ತುಳುನಾಡಿನ ಮೂಲ ನಿವಾಸಿಗಳಾಗಿದ್ದು, ತಮ್ಮದೇ ಆದ ಸ್ವತಂತ್ರ ಕೊರಗ ಭಾಷೆಯನ್ನು ಹೊಂದಿರುವ ಸಮುದಾಯವಾಗಿದೆ. ಈ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಹ್ವಾನ ಪತ್ರವನ್ನು ಕನ್ನಡ ಹಾಗೂ ಕೊರಗ ಭಾಷೆಯಲ್ಲಿ ಮುದ್ರಿಸಲಾಗಿದೆ.
ಕೊರಗ ಸಮುದಾಯದ ಸಂಪ್ರದಾಯದಂತೆ ಸಮುದಾಯದ ಗುರಿಕಾರರ ನೇತೃತ್ವದಲ್ಲಿ ಹೆತ್ತವರೇ ಮದುಮಕ್ಕಳಿಗೆ ಧಾರೆ ಎರೆಯುತ್ತಾರೆ.
ಮದುವೆಯ ಎಲ್ಲಾ ಸಂಪ್ರದಾಯ, ಆಚರಣೆಗಳನ್ನು ಸಮುದಾಯದ ಜನರೆ ನಿರ್ವಹಿಸುವಂತಹದು ಕೊರಗ ಸಮುದಾಯದ ವಿಶೇಷತೆಯಾಗಿದೆ. ಮದುವೆ ಸಮಾರಂಭದಲ್ಲಿ ಮಾಂಸಹಾರಿ ಹಾಗೂ ಸಸ್ಯಹಾರಿ ಊಟೋಪಚಾರದ ವ್ಯವಸ್ಥೆ ಇರುತ್ತದೆ.
ಜಿಲ್ಲಾ ಕೊರಗ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಐದನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಇದಾಗಿದೆ, ಮದುವೆ ಸಮಾರಂಭದಲ್ಲಿ ಸುಮಾರು ಎರಡು ಸಾವಿರ ಮಂದಿ ಭಾಗವಹಿಸುವರು ಎಂದು ದಕ್ಷಿಣ ಕನ್ನೆವ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಸುಂದರ ಬೆಳುವಾಯಿ ಅವರು ಈ ದಿನ.ಕಾಮ್ ಗೆ ತಿಳಿಸಿದ್ದಾರೆ.