ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆಲವು ಕೆರೆಗಳಿಗೆ ಬೆಂಗಳೂರಿನ ಅರೆಸಂಸ್ಕರಿತ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ಆ ನೀರನ್ನು ಕರೆಗೆ ಹರಿಸುವ ಮೊದಲು ತೃತೀಯ ಹಂತದಲ್ಲಿ ಸಂಸ್ಕರಣೆಗೆ ಒಳಪಡಿಸಬೇಕು. ಅದಕ್ಕಾಗಿ ಕರ್ನಾಟಕದ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಸಣ್ಣ ನೀರಾವರಿ ಸಚಿವರು ಮತ್ತು ಪರಿಸರ ಸಚಿವರಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರು ರಾಜ್ಯಪಾಲರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಶನಿವಾರ, ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಸಂಘಟನೆಯ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮಳೆಯಾಶ್ರಿತ, ಅಂತರ್ಜಲ ಅತಿಬಳಕೆ ಪ್ರದೇಶಕ್ಕೆ ಸೇರಿವೆ. ಸ್ವಾತಂತ್ರ್ಯ ಬಂದ ನಂತರ ನದಿ ನಾಳೆಗಳಿಲ್ಲದ, ಶಾಶ್ವತ ನೀರಾವರಿ ಸೌಲಭ್ಯಗಳಿಂದ ವಂಚಿತವಾದ ಕಾರಣ ಇಲ್ಲಿನ ರೈತರು ತಮ್ಮ ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ 1,500 ಅಡಿ ಆಳದ ಕೊಳವೆಬಾವಿಗಳನ್ನು ಕೊರೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆಳದಿಂದ ಬರುವ ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್‌ಗಳ ಜೊತೆಗೆ, ಯುರೇನಿಯಂ ಮತ್ತು ಆರ್ಸೆನಿಕ್ ಕಣಗಳು ಪತ್ತೆಯಾಗಿದೆ. ಈ ನೀರು ಕುಡಿಯಲು ಮಾತ್ರವಲ್ಲದೆ ಕೃಷಿಗೂ ಅಯೋಗ್ಯವಾಗಿದೆ” ಎಂದು ತಿಳಿಸಿದ್ದಾರೆ
“ಜಿಲ್ಲೆಗಳಲ್ಲಿ ಅಂತರ್ಜಲವನ್ನು ಪುನಃ ತುಂಬಿಸುವ ಪ್ರಯತ್ನದಲ್ಲಿ, ರಾಜ್ಯ ಸರ್ಕಾರವು 2018ರಲ್ಲಿ ಬೆಂಗಳೂರಿನಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪಂಪ್ ಮಾಡುವ ಮೂಲಕ ಕೆಲವು ಆಯ್ದ ಕೆರೆಗಳನ್ನು ತುಂಬಲು ಪ್ರಾರಂಭಿಸಿತು. ಆದರೆ, ಭರವಸೆಯಂತೆ ನೀರಿನ ತೃತೀಯ ಸಂಸ್ಕರಣೆಯನ್ನು ಖಾತ್ರಿಪಡಿಸುವ ಬದಲು, ಎರಡು ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲವನ್ನು ಕಲುಷಿತಗೊಳಿಸಲಾಗುತ್ತಿದೆ. ಮಾತ್ರವಲ್ಲದೆ, ಮೀನುಗಳು ಮತ್ತು ಇತರ ಜಲಚರಗಳ ಸಾವಿಗೆ ಕಾರಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಮರುಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಪಾಲಿಸುತ್ತಿಲ್ಲ. ಕೊಳಚೆ ಮತ್ತು ಒಳಚರಂಡಿ ಸಂಸ್ಕರಣಾ ಮಾನದಂಡಗಳ ಕೈಪಿಡಿಯ ಪ್ರಕಾರ, ಅಗತ್ಯವಿರುವ ಸಂಸ್ಕರಣಾ ತಂತ್ರಗಳನ್ನು ಅನುಸರಿಸುವ ಮೂಲಕ ಒಳಚರಂಡಿ ನೀರಿನ ಕಡ್ಡಾಯ ಮೂರು ಹಂತಗಳಲ್ಲಿ ಸಂಸ್ಕರಣೆ ಮಾಡಬೇಕು. ಎಲ್ಲ ಮಾರ್ಗಸೂಚಿಗಳು ನಿರ್ದಿಷ್ಟವಾಗಿ, ಬೆಂಗಳೂರಿನ ಕೊಳಚೆ ಮತ್ತು ಒಳಚರಂಡಿ ನೀರಿನ ತೃತೀಯ ಸಂಸ್ಕರಣೆ ಅತ್ಯಗತ್ಯ. ಆದರೆ, ರಾಜ್ಯ ಸರ್ಕಾರ ಇದನ್ನು ಪಾಲಿಸುತ್ತಿಲ್ಲ” ಎಂದು ಆರೋಪಿಸಿದ್ದಾರೆ.
“ಬೆಂಗಳೂರಿನ ಹೆಬ್ಬಾಳ-ನಾಗವಾರ ಕಣಿವೆ (ಎಚ್‌ಎನ್ ವ್ಯಾಲಿ) ಮತ್ತು ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ (ಕೆಸಿ ವ್ಯಾಲಿ) ಯಿಂದ ದ್ವಿತೀಯ ಸಂಸ್ಕರಿಸಿದ ನೀರನ್ನು ಕೋಲಾರದ ಕೆಲವು ಆಯ್ದ ಸಣ್ಣ ನೀರಾವರಿ ಕೆರೆಗಳಿಗೆ ಹರಿಸುತ್ತಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲ ವಿಷಪೂರಿತವಾಗಿ ಜನ ಮತ್ತು ಜಾನುವಾರುಗಳ ಜೀವಕ್ಕೆ ಸರಿಪಡಿಸಲಾಗದ ಹಾನಿಯಾಗಿದೆ” ಎಂದು ತಿಳಿಸಿದ್ದಾರೆ.
“ರಾಜ್ಯ ಸರ್ಕಾರವು 2023-24ನೇ ಸಾಲಿನ ಬಜೆಟ್‌ನಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೃತೀಯ ಹಂತದ ಶುದ್ಧೀಕರಿಸಿದ ನೀರನ್ನು ಹರಿಸುವ ಭರವಸೆ ನೀಡಿದ್ದರು. ಆದಾಗ್ಯೂ, ಚುನಾವಣೆಯ ನಂತರದ ನಂತರದ ಸರ್ಕಾರವು ತನ್ನ ಬಜೆಟ್‌ನಲ್ಲಿ ಅದಕ್ಕೆ ಹಣವನ್ನು ಮೀಸಲಿಡುವ ಬಗ್ಗೆ ಏನನ್ನೂ ಉಲ್ಲೇಖಿಸಲಿಲ್ಲ” ಎಂದು ಹೇಳಿದ್ದಾರೆ.
“ಬರಪೀಡಿತ ಜಿಲ್ಲೆಗಳನ್ನು ಉಳಿಸಲು ಆದ್ಯತೆಯ ಆಧಾರದ ಮೇಲೆ ತೃತೀಯ ಹಂತದ ಸಂಸ್ಕರಣಾ ಸೌಲಭ್ಯಗಳೊಂದಿಗೆ ಎಸ್‌ಟಿಪಿಗಳನ್ನು ಉನ್ನತೀಕರಣಗೊಳಿಸಲು ಅಗತ್ಯವಾದ ಹಣ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ನಿರ್ದೇಶನ ನೀಡಲು ರಾಜ್ಯಪಾಲರು ಸಮಯೋಚಿತ ಮಧ್ಯಸ್ಥಿಕೆವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.