ನಾನು ರಾಜಕೀಯಕ್ಕೆ ಬರಲು ಪ್ರೊ ನಂಜುಂಡಸ್ವಾಮಿ ಕಾರಣ; ರೈತ ಮುಖಂಡನ ಒಡನಾಟ ನೆನಪಿಸಿಕೊಂಡ ಸಿಎಂ

Date:

Advertisements

“ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡಬೇಕಾದರೆ ಪ್ರೊ.ನಂಜುಂಡಸ್ವಾಮಿಯವರು ಕಾರಣ. ರಾಜಕೀಯದಲ್ಲಿ ಈ ಮಟ್ಟದಲ್ಲಿ ಬೆಳೆಯಲಿಕ್ಕೆ ನಂಜುಂಡಸ್ವಾಮಿಯವರ ಪ್ರಾಥಮಿಕ ಕೊಡುಗೆಗಳು ಕಾರಣ. ಅವರನ್ನು ಮರೆಯಲಿಕ್ಕೆ ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ಬೃಹತ್‌ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.

“ರೈತ ಸಂಘ ಇಂದು ಅನೇಕ ಗುಂಪುಗಳಾಗಿವೆ. ಆ ಕಾಲದಲ್ಲಿ ಒಂದೇ ಒಂದು ರೈತ ಸಂಘ ಇತ್ತು. ನಾನೂ ರೈತಸಂಘದಲ್ಲಿದ್ದೆ. ವರಣಾ ನಾಲೆ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಆಗ ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದರು. ಸಿಎಂ ಮೀಟಿಂಗ್ ಕರೆದಿದ್ದರು. “ಗುಂಡೂರಾಯರೇ ಆ ಚೀಫ್‌ ಸೆಕ್ರೇಟರಿಯವರನ್ನು ಹೊರಗೆ ಕಳಿಸಿ” ಎಂದಿದ್ದರು. ಅವತ್ತು ನಂಜುಂಡಸ್ವಾಮಿಯವರು ಸರ್ಕಾರದ ವಿರುದ್ಧ ಐತಿಹಾಸಿಕ ಭಾಷಣ ಮಾಡಿದ್ದರು. ಎಲ್ಲವನ್ನೂ ಅಂಕಿ ಅಂಶಗಳ ಮೂಲಕ ನಂಜುಂಡಸ್ವಾಮಿಯವರು ಹೇಳುತ್ತಿದ್ದರು. ಆ ಶಕ್ತಿ ಅವರಿಗಿತ್ತು. ನಂಜುಂಡಸ್ವಾಮಿಯವರ ಕೊಡುಗೆ ಈ ನಾಡಿಗೆ, ರೈತರಿಗೆ, ಕೃಷಿಗೆ ದೊಡ್ಡದಿದೆ” ಎಂದು ನೆನಪಿಸಿಕೊಂಡರು.

Advertisements

“ಪ್ರೊ.ನಂಜುಂಡಸ್ವಾಮಿಯವರು ಟಿ.ನರಸೀಪುರಪುರದವರು. ವಕೀಲರ ಮನೆತನ ಅದು. ಮೈಸೂರು ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡಿದವರು. ನನಗೆ ಗೊತ್ತಿರುವ ಮಟ್ಟಿಗೆ ಅವರಿಗೆ ಆಳವಾದ ಜ್ಞಾನವಿತ್ತು. ಯಾವುದೇ ವಿಚಾರವನ್ನು ತರ್ಕಬದ್ಧವಾಗಿ ಮಂಡಿಸುತ್ತಿದ್ದರು. ಕೊನೆಯಗಳಿಗೆವರೆಗೂ ಕ್ರಿಯಾಶೀಲವಾಗಿ ಇದ್ದ ವ್ಯಕ್ತಿ. ನಾನು ಶಾರದಾ ವಿಲಾಸ ಲಾ ಕಾಲೇಜಿಗೆ ಸೇರಿದಾಗ ಅಲ್ಲಿ ಅವರು ಪ್ರೊಫೆಸರ್ ಆಗಿದ್ದರು. ನಮ್ಮ ಕ್ಲಾಸ್‌ಗೆ ಅವರು ಪಾಠ ಮಾಡುತ್ತಿರಲಿಲ್ಲ. ಆಗಲೇ ಅವರು ಸಮಾಜವಾದಿ ಪಾರ್ಟಿಯಲ್ಲಿದ್ದರು. ಸಮಾಜದಲ್ಲಿರುವ ಅಸಮಾನತೆ, ಸಾಮಾಜಿಕ ಆರ್ಥಿಕ ಅಸಮಾನತೆಗಳು ರೈತರ ಸಮಸ್ಯೆಗಳು, ಇವುಗಳ ಬಗ್ಗೆ ಅವರು ಲಾ ಕಾಲೇಜಿನಲ್ಲಿ ಪ್ರೊಫೆಸರ್ ಇದ್ದಾಗಲೇ ನಮ್ಮೆಲ್ಲ ಸೇರಿಸಿಕೊಂಡು ಚರ್ಚೆ ಮಾಡಿಕೊಳ್ಳುತ್ತಿದ್ದರು. ಅವರೊಂದಿಗೆ ಎಂಟು ಹತ್ತು ಜನ ಅವರ ಕಟ್ಟಾ ಅಭಿಮಾನಿಗಳಾಗಿದ್ದೆವು. ಅವರು ಲಾ ಕಾಲೇಜಿನಲ್ಲಿ ಅವರು ಕ್ಲಾಸ್ ಮುಗಿದ ಮೇಲೆ ನಮ್ಮನ್ನೆಲ್ಲ ಚಂದ್ರ ಕೆಫೆ ಎಂಬ ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ನಮಗೆ ಬೆಳಿಗ್ಗೆ ಕ್ಲಾಸ್‌ಗಳು ನಡೆಯುತ್ತಿದ್ದವು. ಅಸಮಾನತೆ, ನಿರುದ್ಯೋಗ, ಬಡತನ ಇವುಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು” ಎಂದು ಸಿದ್ದರಾಮಯ್ಯ ನೆನಪಿನ ಸುರುಳಿ ಬಿಚ್ಚಿಟ್ಟರು.

“ಅವರೊಂದಿಗೆ ಟೀ ಕುಡಿದುಕೊಂಡು, ಚಾರ್ಮಿನರ್ ಸಿಗರೇಟ್ ಸೇದೋರು. ನಮಗೆಲ್ಲ ಸಿಗರೇಟ್ ಸೇದಿಸೋರು. ನಮ್ಮೊಂದಿಗೆ ದೇಶದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಕಾಲೇಜು ಯೂನಿಯನ್ ಎಲೆಕ್ಷನ್ ಬಂತು. ನಮಗೆಲ್ಲ ಪ್ರಜಾಪ್ರಜಾಪ್ರಭುತ್ವ ಇಲ್ಲ ಎನ್ನುತ್ತಿದ್ದರು. ಫೈನಲ್ ಇಯರ್‌ನವರು ಮಾತ್ರ ನಿಲ್ಲುತ್ತಿದ್ದರು. ಎಲ್ಲರೂ ನಿಲ್ಲಬೇಕು ಎಂಬುದು ಅವರ ನಿಲುವಾಗಿತ್ತು. ಯಾರು ಬೇಕಾದರೂ ಚುನಾವಣೆಗೆ ನಿಲ್ಲಬೇಕು ಎಂದು ಹೋರಾಟ ಶುರು ಮಾಡಿದೆವು. ಚುನಾವಣೆ ನಡೆಯದಂತೆ ನೋಡಿಕೊಂಡು. ಎರಡನೇ ವರ್ಷ ಚುನಾವಣೆ ಮಾಡಿದಾಗ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು ಎಂದು ಬೈಲಾ ಬದಲಾವಣೆ ಮಾಡಿದರು. ನಮಗೆ ಚುನಾವಣೆಯಲ್ಲಿ ಜಯ ಸಿಕ್ತು. ದೇವನೂರು ಮಹಾದೇವ ಕನ್ನಡ ಎಂಎ ಓದುತ್ತಿದ್ದರು. ನಾನು ಸೆಕೆಂಡ್‌ ಇಯರ್ ಲಾ ಓದುತ್ತಿದ್ದೆ. ವೀರೇಂದ್ರ ಪಾಟೀಲ್ ವಿರುದ್ಧ ಒಂದು ಚಳವಳಿ ಮಾಡಿದರು. ರಾಮಸ್ವಾಮಿ ಸರ್ಕಲ್‌ನಲ್ಲಿ ನಾನು ದೇವನೂರ ಮಹಾದೇವ ಎಲ್ಲ ವೀರೇಂದ್ರ ಪಾಟೀಲ್ ಸರ್ಕಾರದ ವಿರುದ್ಧ ಹೊರಟೆವು. ಪೊಲೀಸರು ಲಾಠಿ ಚಾರ್ಜ್‌ ಮಾಡಿದರು. ಅದೇ ಮೊದಲ ಬಾರಿಗೆ ಪೊಲೀಸರಿಂದ ಏಟು ತಿಂದದ್ದು. ಇನ್ನೊಂದು ಸಲ ದೇ ಜ ಗೌಡ ಅವರು ಕುಲಪತಿ ಆಗಿದ್ದರು. ಆಗ ಘಟಿಕೋತ್ಸವದಲ್ಲಿ ಕಪ್ಪುಬಾವುಟ ಪ್ರದರ್ಶಿಸಲು ಹೋಗಿ ಪೊಲೀಸರಿಂದ ಏಟು ತಿಂದೆವು. ಹೀಗೆ ನಂಜುಂಡಸ್ವಾಮಿಯವರು ನಮಗೆ ಪ್ರೇರಣೆ ಆಗಿದ್ದರು” ಎಂದರು.

“ರೈತ ಸಂಘ ಎಂದರೆ ಇಡೀ ಸರ್ಕಾರ ಹೆದರುವ ರೀತಿ ಇತ್ತು. ಅಧಿಕಾರಿಗಳು ಗಡಗಡ ನಡುಗುತ್ತಿದ್ದರು. ಅದು ತೀವ್ರವಾಗಿದ್ದು 1980ರಲ್ಲಿ ರೈತ ಸಂಘ ತೀವ್ರವಾಯಿತು. 83ರ ಚುನಾವಣೆಗೆ ನಿಲ್ಲಬೇಕೋ ಬೇಡ ಅನ್ನೋ ಚರ್ಚೆ ಆಗುತ್ತಿತ್ತು. ನಾವೆಲ್ಲ ನಿಲ್ಲಬೇಕು ಅಂತ ನಂಜುಂಡಸ್ವಾಮಿಯವರು ಬೇಡ ಅಂತ ಇದ್ದರು. ಚುನಾವಣೆ ನಿಲ್ಲಬೇಕೆಂದು ನಾವೆಲ್ಲ ವಾಕ್ ಔಟ್ ಮಾಡಿದೆವು. ನಮ್ಮನ್ನು ಸುಂದರೇಶ್ ಉಚ್ಚಾಟನೆ ಮಾಡಿದರು” ಎಂದರು.

ಇದನ್ನೂ ಓದಿ ಬಿಜೆಪಿ ತಂದಿದ್ದ ರೈತ ವಿರೋಧಿ ʼಭೂ ಸುಧಾರಣಾ ಕಾಯ್ದೆ 2020ʼಕ್ಕೆ ತಿದ್ದುಪಡಿ: ಸಿದ್ದರಾಮಯ್ಯ ಭರವಸೆ

ಎಪಿಎಂಸಿ ಆಕ್ಟ್ ತಿದ್ದುಪಡಿ ಮಾಡಿದ್ದೇವೆ. 143 ಕೋಟಿ ಜನರಿಗೆ ಆಹಾರ ನೀಡುತ್ತಿರುವುದು ರೈತರು. ರೈತರು, ಸೈನಿಕರು, ಶಿಕ್ಷಕರನ್ನು ಯಾವಾಗಲು ಕೂಡ ಸ್ಮರಿಸಬೇಕು. ನಾಗೇಂದ್ರ ಅವರಿಗೆ ಹೇಳಿದ್ರೆ, ರೈತರಿಗೆ ಹೆಣ್ಣು ಸಿಗೋದು ಕಷ್ಟ ಎಂದು ಹೇಳುತ್ತಾರೆ. ನಾವೆಲ್ಲ ರೈತ ಮಕ್ಕಳೇ. ರೈತರ ಮಕ್ಕಳೇ ಜಾಸ್ತಿ. ಕೃಷಿಯನ್ನು ಲಾಭದಾಯಕ ಮಾಡಿದರೆ ಈ ಸಮಸ್ಯೆ ಇರಲಿಕ್ಕೆ ಸಾಧ್ಯವಿಲ್ಲ. ಕೃಷಿ ಲಾಭದಾಯಕವಾಗದೆ ರೈತರು ಉಳಿಯುವುದು ಕಷ್ಟ ಎಂದರು.

“ನಿಮ್ಮ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ರೈತ ಸಂಘದ ಬೇಡಿಕೆಗಳನ್ನು ಬಡಗಲಪುರ ನಾಗೇಂದ್ರ ಹೇಳಿದ್ದಾರೆ. ಕೋಮುವಾದಿಗಳ ವಿರುದ್ದ ನಿಲುವು ತೆಗೆದುಕೊಂಡಿರುವುದು ಬಹಳ ಸ್ವಾಗತಾರ್ಹ. ರೈತರ ಸಮಸ್ಯೆಗಳನ್ನು ತಗೊಂಡು ಹೋರಾಟ ಮಾಡುತ್ತಿರುವುದು ಮುಖ್ಯ. ಹೋರಾಟಗಳು ಇಲ್ಲದೆ ಹೋದರೆ ಈ ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಬದುಕನ್ನೇ ಬಿಟ್ಟು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಶ್ಲಾಘಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X