ಆಮ್ ಆದ್ಮಿ ಪಾರ್ಟಿ (ಆಪ್) ಪಂಜಾಬ್‌ನಲ್ಲಿ ಎಲ್ಲಾ 13 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಇಂಡಿಯಾ ಮೈತ್ರಿಕೂಟದಿಂದ ಹೊರಗುಳಿಯಲಿದೆ ಎಂದು ಅರವಿಂದ ಕೇಜ್ರಿವಾಲ್ ಶನಿವಾರ (ಫೆಬ್ರವರಿ 10) ಘೋಷಿಸಿದ್ದಾರೆ.
ಆ ಮೂಲಕ ಆಮ್ ಆದ್ಮಿ ಪಾರ್ಟಿ ಪಂಜಾಬ್ ಮಟ್ಟಿಗೆ ಇಂಡಿಯಾ ಮೈತ್ರಿಕೂಟದಿಂದ ಹೊರಗುಳಿದು ಸ್ಪರ್ಧಿಸುವ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ. ದೆಹಲಿಯಲ್ಲಿ ಸ್ಪರ್ಧೆಯ ಬಗ್ಗೆ ಅವರು ಸ್ಪಷ್ಟ ವಿವರ ನೀಡಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಮುಂದಿನ 10-15 ದಿನಗಳಲ್ಲಿ ಪ್ರಕಟಿಸುವುದಾಗಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
“ಎರಡು ವರ್ಷಗಳ ಹಿಂದೆ ನೀವು ನಮ್ಮನ್ನು ವಿಧಾನಸಭೆಗೆ ಆರಿಸಿ ಪಂಜಾಬ್‌ನಲ್ಲಿ ಇತಿಹಾಸ ರಚಿಸಿದ್ದೀರಿ. ಅಂತಹ ಮತ್ತೊಂದು ಆಶೀರ್ವಾದ ಕೇಳಲು ನಿಮ್ಮ ಮುಂದೆ ಕೈಮುಗಿದು ನಿಂತಿದ್ದೇನೆ. ಎರಡು ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿವೆ. ಲೋಕಸಭಾ ಚುನಾವಣೆಗಳಿಗೆ ಪಂಜಾಬ್‌ನ 13 ಸ್ಥಾನಗಳು ಮತ್ತು ಚಂಡೀಗಢದಲ್ಲಿ ಆಪ್ ಸ್ಪರ್ಧಿಸಲಿದೆ. ಎಲ್ಲಾ 14 ಸ್ಥಾನಗಳಿಗೆ ಮುಂದಿನ ಕೆಲ ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಿದ್ದೇವೆ” ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.