“ಹೆಕ್ಟೇರ್‌ಗೆ 25,000 ರೂ.ಗಳ ಬರನಷ್ಟ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಬೇಕು” ಎಂಬ ಒತ್ತಾಯದ ಜೊತೆಗೆ ಒಟ್ಟು 19 ನಿರ್ಣಯಗಳನ್ನು ರಾಜ್ಯ ರೈತ ಸಮಾವೇಶ ಕೈಗೊಂಡಿತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ನಡೆದ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಮತ್ತು ಬೃಹತ್ ರೈತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ತಮ್ಮ ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟರು.
ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯಗಳನ್ನು ಕಟುವಾಗಿ ಟೀಕಿಸಿರುವ ಸಮಾವೇಶವು, ರಾಜ್ಯ ಸರ್ಕಾರದ ಜವಾಬ್ದಾರಿಗಳನ್ನು ನೆನಪಿಸಿದೆ. ರಾಜ್ಯದ ವಿವಿಧೆಡೆ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರ್ಕಾರದ ಗಮನಕ್ಕೆ ಸಮಾವೇಶ ತಂದಿದೆ.
ಸಮಾವೇಶ ಕೈಗೊಂಡ ನಿರ್ಣಯಗಳು:
- ರಾಜ್ಯವು ಹಿಂದೆಂದೂ ಕಂಡರಿಯದಂತಹ ಬರಗಾಲಕ್ಕೆ ಒಳಗಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಪರಿಹಾರದ ಅನುದಾನವನ್ನು ಇದುವರೆಗೆ ಬಿಡುಗಡೆ ಮಾಡದಿರುವುದು ಖಂಡನೀಯ. ಹಾಗೆಯೇ ರಾಜ್ಯ ಸರ್ಕಾರವು ಎಕರೆ ಒಂದಕ್ಕೆ ಕೇವಲ 2000 ರೂ. ಘೋಷಿಸಿರುವುದನ್ನು ಅಷ್ಟೇ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರಗಳು ಹೆಕ್ಟೇರ್‌ಗೆ ಕನಿಷ್ಟ 25,000 ರೂ. ಬರನಷ್ಟ ಪರಿಹಾರವನ್ನು ತ್ವರಿತವಾಗಿ ನೀಡಿ ರೈತ ಸಮುದಾಯವನ್ನು ರಕ್ಷಿಸಬೇಕು.
- ಬರಗಾಲದ ಇಂತಹ ಪರಿಸ್ಥಿತಿಯಲ್ಲಿ ರೈತರಿಂದ ಕೃಷಿ ಸಾಲವನ್ನು ವಸೂಲಾತಿ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಸಂಘಗಳು ಹಾಗೂ ಖಾಸಗಿ ಬ್ಯಾಂಕುಗಳು ಬಲತ್ಕಾರದ ವಸೂಲಾತಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಲ್ಲದೆ ಸಂಸ್ಥೆಗಳು ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿ ರೈತರಿಗೆ ಕಿರುಕುಳ ನೀಡುತ್ತಿವೆ. ಆನ್‌ಲೈನ್ ಮೂಲಕ ರೈತರ ಸ್ಥಿರಾಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆಗೂ ಮುಂದಾಗಿದೆ. ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಕೃಷಿ ಸಾಲದಕ್ಕಾಗಿ ರೈತರ ಸ್ಥಿರ ಆಸ್ತಿಗಳನ್ನು ಹರಾಜು ಮಾಡುವುದನ್ನು ತಡೆಯಲು ಸೂಕ್ತ ಕಾನೂನು ಕ್ರಮ ರೂಪಿಸಬೇಕು.
- ಕೃಷಿ ಬೆಲೆ ಆಯೋಗವನ್ನು ಸಬಲೀಕರಿಸುವುದಾಗಿ ಕಾಂಗ್ರೆಸ್ ಪಕ್ಷ ತನ್ನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿದೆ. ನೀಡಿರುವ ವಾಗ್ದಾನದಂತೆ ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು. ಆಯೋಗ ನೀಡುವ ವರದಿಗಳನ್ನು ಜಾರಿಗೆ ತರುವಂತೆ ಕ್ರಮ ಕೈಗೊಳ್ಳಬೇಕು. ಈ ಆಯೋಗಕ್ಕೆ ಶಾಸಕರು, ಅಥವಾ ರಾಜಕೀಯ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ನೇಮಿಸದೆ ಕೃಷಿ ಮತ್ತು ಮಾರುಕಟ್ಟೆ ತಜ್ಞರು, ಕೃಷಿ ತಜ್ಞ ರೈತರನ್ನು ನೇಮಿಸಬೇಕು.
- ಹಿಂದಿನ ಬಿ.ಜೆ.ಪಿ ಸರ್ಕಾರ ಜಾರಿಗೆ ತಂದಿದ್ದ ರೈತವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ವಾಪಸ್ ಪಡೆದುಕೊಳ್ಳಬೇಕು.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ರೈತರು ಸಾಲದ ಸುಳಿಗೆ ಸಿಲುಕದಂತೆ ಕೃಷಿ ನೀತಿಯನ್ನು ರೂಪಿಸಬೇಕು.
- ಫಸಲ್‌ಭಿಮಾ ಯೋಜನೆಯಲ್ಲಿ ಪ್ರೀಮಿಯಂ ತುಂಬಿದ ರೈತರಿಗೆ ಬೆಳೆ ನಷ್ಟವಾದರೂ ಸೂಕ್ತ ಪರಿಹಾರ ಸಿಕ್ಕಿರುವುದಿಲ್ಲ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಫಸಲ್ ಭಿಮಾ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು ಅಧಿಕಾರಿಗಳು ಹಾಗೂ ವಿಮಾ ಕಂಪನಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು.
- ತುಂಗಭದ್ರ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಒಂದೂವರೆ ಲಕ್ಷ (150,000) ಎಕರೆ ಅನಧಿಕೃತ ನೀರಾವರಿ ಮಾಡಿಕೊಂಡಿರುವುದರಿಂದ ಸಿರವಾರ, ಮಾನವಿ, ರಾಯಚೂರು ತಾಲೂಕುಗಳಿಗೆ ನೀರು ತಲುಪದೇ ರೈತರು ಅಪಾರ ನಷ್ಟ ಹೊಂದಿದ್ದಾರೆ. ತುಂಗಭದ್ರ ಎಡದಂಡೆ ನಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು.
- ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ರೈತರು ಬೆಳೆದ ಮೆಣಸಿನಕಾಯಿ, ಶೇಂಗಾ, ಸಜ್ಜೆ, ಜೋಳ, ತೊಗರಿ ಬೆಳೆಗಳನ್ನು ರಕ್ಷಿಸಲು ಫೆಬ್ರವರಿ ಕೊನೆಯವರೆಗೂ ನಾರಾಯಣಪುರ ಬಲದಂಡೆ ಹಾಗೂ ಎಡದಂಡೆ ನಾಲೆಗೆ ನೀರು ಒದಗಿಸಬೇಕು. ನಾರಾಯಣಪುರ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿ ಪೂರಾ ಕಳಪೆ ಮಟ್ಟದಿಂದ ಕೂಡಿದ್ದು, ಕೂಡಲೇ ಇದರ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
- ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಕಾಯ್ದೆ 2020 ನ್ನು ಜಾರಿಗೆ ತಂದು ಅದಾನಿ-ಅಂಬಾನಿ ಕೈಗೆ ಸಂಪೂರ್ಣ ವಿದ್ಯುತ್ ಉತ್ಪಾದನೆ-ಸರಬರಾಜು ಹಾಗೂ ವಿತರಣೆಯನ್ನು ಒಪ್ಪಿಸಲು ಹೊರಟಿದ್ದು, ಈ ತಿದ್ದುಪಡಿಯನ್ನು ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ತೀವ್ರವಾಗಿ ವಿರೋಧಿಸಿದೆ. ಕಾಂಗ್ರೆಸ್ ನೇತೃತ್ವದಲ್ಲಿನ ರಾಜ್ಯ ಸರ್ಕಾರ ಈ ತಿದ್ದುಪಡಿಯನ್ನು ಜಾರಿಗೆ ತರದೇ ಬದ್ಧತೆಯನ್ನು ತೋರಬೇಕು.
- ಹಿಂದಿನ ಸರಕಾರ ಘೋಷಣೆ ಮಾಡಿರುವ ಟನ್ ಕಬ್ಬಿಗೆ ರೂ. 150 ನಂತೆ ರೈತರಿಗೆ ಪಾವತಿಸಲು ಇರುವ ಎಲ್ಲಾ ತಾಂತ್ರಿಕ ತೊಂದರೆಯನ್ನು ನಿವಾರಿಸಿ ರೈತರ ಖಾತೆಗೆ ತುಂಬಲು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಎಸ್.ಎ.ಪಿ. ಯನ್ನು ತಕ್ಷಣ ಘೋಷಣೆ ಮಾಡಬೇಕು.
- ಹೊಸದಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು ಎಲ್ಲಾ ಪರಿಕರಗಳ ವೆಚ್ಚವನ್ನು ರೈತರೇ ತುಂಬಬೇಕೆನ್ನುವ ಹೊಸ ನಿಯಮವನ್ನು ಹಿಂಪಡೆದು ಹಿಂದಿನ ನಿಯಮದಂತೆ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಕರ ನಿರಾಕರಣ ಚಳವಳಿಯ ಭಾಗವಾಗಿ ಬಾಕಿ ಉಳಿದಿರುವ ರೈತರ ಗೃಹ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
- ಕಾಫಿ ಬೆಳೆಗಾರರಿಗೆ ಈ ಹಿಂದಿನ ಸರ್ಕಾರ 10 ಹೆಚ್.ಪಿ. ತನಕ ಉಚಿತ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಿ ಹಳೇ ಬಾಕಿ ಇರುವ ವಿದ್ಯುತ್ ಬಿಲ್‌ನ್ನು ರೈತರು ಪಾವತಿಸಿದ ನಂತರ ರೈತರ ಖಾತೆಗೆ ಸರ್ಕಾರ ತುಂಬುವುದಾಗಿ ಹೇಳಿತ್ತು, ಆದರೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ನಿಮ್ಮ ಸರ್ಕಾರವು ಈ ತೀರ್ಮಾನವನ್ನು ಮಾರ್ಪಡಿಸಿ ಎಲ್ಲಾ ರೈತರಿಗೂ ಸರಬರಾಜು ಮಾಡುವ ನೀತಿಯನ್ನು ಅನ್ವಯಿಸುವಂತೆ ಮಾಡಬೇಕು ಹಾಗೂ ಹಳೇ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು.
- ರಾಜ್ಯದ ರೈತರು ಬಗರ್‌ಹುಕುಂ, ಸೊಪ್ಪಿನಬೆಟ್ಟ, ಕುಮ್ಮಿ, ಕಾನಾಬಾಣೆ ಹಾಗೂ ಅರಣ್ಯ ಒತ್ತುವರಿಯ ಆಕ್ಷೇಪದ ಜಮೀನುಗಳನ್ನು ಖಾತಾ ಮಾಡಿ ನೀಡಲು ಸರಕಾರಕ್ಕೆ ನೀಡಿದ ಲಕ್ಷಾಂತರ ಅರ್ಜಿಗಳು ವಿಲೇ ಆಗದೇ ಉಳಿದುಕೊಂಡಿವೆ. ನ್ಯಾಯಯುತವಾಗಿ ರೈತರ ಅರ್ಜಿಗಳನ್ನು ತಕ್ಷಣ ವಿಲೇ ಮಾಡಿ ರೈತರಿಗೆ ಪಟ್ಟಾ ನೀಡಬೇಕು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಾದ್ಯಂತ ಬಗರ್‌ಹುಕುಂ ಭೂಮಿಯನ್ನು ಸರ್ವೆಸೆಟಲ್ಮೆಂಟ್ ಮಾಡಿದ್ದು, ಬಹಳ ವ್ಯತ್ಯಾಸವಾಗಿದ್ದು ರೈತರಿಗೆ ಬಹಳ ಅನಾನುಕೂಲವಾಗಿದೆ. ತಕ್ಷಣವೇ ಮರು ಸರ್ವೆ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾಗಿ ಈ ಸಮಾವೇಶವು ಒತ್ತಾಯಿಸುತ್ತದೆ.
- ರೈತ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಬಡತನ ರೇಖೆಗಿಂತಲೂ ಕಡಿಮೆ ಇರುತ್ತದೆ. ರೈತ ಕುಟುಂಬಗಳಿಗೆ ಕನಿಷ್ಟ ಮಾಸಿಕ ಆದಾಯ ಖಾತ್ರಿ ಒದಗಿಸುವ ಸಂಬಂಧ ಯೋಜನೆಗಳನ್ನು ರೂಪಿಸಲು ರೈತ ವೇತನ ಆಯೋಗವನ್ನು ರಚಿಸಬೇಕು.
- ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿರುವ ಶ್ರೀ ವೀರಪುಲಕೇಶಿ ಸಹಕಾರಿ ಬ್ಯಾಂಕ್ ರೈತರಿಗೆ 1.00 ಲಕ್ಷ ಸಾಲ ನೀಡಿ, 40.00 ಲಕ್ಷ ಕಟ್ಟಿರಿ, ಬಾಕಿ ಇದೆ ಎಂದು ನೂರಾರು ರೈತರಿಗೆ ನೋಟೀಸ್ ನೀಡಿ ಅವರ ಆಸ್ತಿಯನ್ನು ಹರಾಜು ಮಾಡಿದ್ದಾರೆ. ಅವರ ಕಿರುಕುಳ ಇನ್ನೂ ಮುಂದುವರಿಯುತ್ತಿದ್ದು, ಸರಳ ಬಡ್ಡಿ ದರದಲ್ಲಿ 0.T.S ಗೆ ಅವಕಾಶ ನೀಡಿ ಸಾಲ ಚುಕ್ತಾ ಮಾಡಿಕೊಂಡು ದಾಖಲೆಗಳನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಬೆಳಗಾವಿ, ವಿಜಯಪುರ, ಜಿಲ್ಲೆಗಳಲ್ಲಿ ಸೌಹಾರ್ದ ಸಹಕಾರ ಬ್ಯಾಂಕ್ ರೈತರನ್ನು ಶೋಷಣೆ ಮಾಡುತ್ತಿದ್ದು, ಇದನ್ನೂ ತಡೆಗಟ್ಟಬೇಕು.
- ಆಲಮಟ್ಟಿ ಜಲಾಶಯವನ್ನು 524 ಅಡಿಗೆ ಏರಿಸಿ ಕೃಷ್ಣ ಜಲವಿವಾದ ಮಂಡಳಿ ನಮ್ಮ ರಾಜ್ಯಕ್ಕೆ ನೀಡಿರುವ ಪಾಲನ್ನು ಸಂಪೂರ್ಣವಾಗಿ ಬಳಸಿಕೊಂಡು ನೀರಾವರಿ ಪ್ರದೇಶವನ್ನು ವಿಸ್ತರಿಸಬೇಕು. ಕೊಬ್ಬರಿ ಬೆಲೆ ಕುಸಿದಿದ್ದು, ಕನಿಷ್ಠ 20,000 ರೂ ದೊರಕಿಸಿ ಖರೀದಿ ಕೇಂದ್ರಗಳ ಮುಖಾಂತರ ಸಂಪೂರ್ಣ ಕೊಬರಿಯನ್ನು ಕೊಂಡುಕೊಳ್ಳಬೇಕು.
- ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು 26 ಹಳ್ಳಿಗಳನ್ನು ಒಕ್ಕಲೆಬ್ಬಿಸುವುದರ ಜೊತೆಗೆ 8000 ಎಕರೆಗಿಂತಲೂ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಕ್ರಿಯೆ ನಡೆಸುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ ಸಮ್ಮತಿಯನ್ನು ನೀಡಬಾರದು.
- ಮೈಸೂರು ಜಿಲ್ಲೆ ಮೈಸೂರು ತಾಲ್ಲೂಕು ಕೋಚನಹಳ್ಳಿ ಗ್ರಾಮದಲ್ಲಿ ಎರಿಟೇಜ್ ಕಂಪನಿಯವರು ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಇಲ್ಲಿ ಖಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ರೈತರಿಂದ 2 ರಿಂದ 2.50 ಲಕ್ಷ ರೂಗಳಿಗೆ ಎಕರೆಗೆ ನೀಡಿ ಬೇನಾಮಿ ಹೆಸರಿನಲ್ಲಿ ಕ್ರಯ ಮಾಡಿಸಿಕೊಂಡು ಅದೇ ಭೂಮಿಯನ್ನು ಕೆ.ಐ.ಎ.ಡಿ.ಬಿಗೆ 47.50 ಲಕ್ಷ ರೂಗಳಿಗೆ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿರುತ್ತಾರೆ. ಈ ರೀತಿ ಬೇನಾಮಿಯಿಂದ ಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೆದ್ದಮೆ ಹೂಡಬೇಕು, ಮತ್ತು ರೈತರಿಗೆ ನ್ಯಾಯ ದೊರಕಿಸಿಕೊಡಬೇಕು.
- ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಆಯವ್ಯಯದಲ್ಲಿ 5,300 ಕೋಟಿ ರೂಪಾಯಿಗಳ ಅನುದಾವನ್ನು ಘೋಷಣೆ ಮಾಡಿದ್ದು ಇದುವರೆವಿಗೂ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ. ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಕರಣ ಗೊಳಿಸಬೇಕು. ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ಘೋಷಿಸಿದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಒತ್ತಾಯಿಸಬೇಕು. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಳಿ ಅಬ್ಬಿನಹೊಳಲು ಗ್ರಾಮದಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 1.7 ಕಿ.ಮೀ ನಾಲಾ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಇದಕ್ಕೆ ತೊಡಕಾಗಿರುವ ಸ್ಥಳೀಯ ರೈತರನ್ನು ಮನವೊಲಿಸಿ ಹೆಚ್ಚಿನ ಪರಿಹಾರ ನೀಡಿ ತಕ್ಷಣವೇ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕು.
Sandur to ballri