ಹಿಂದೂ ಸಂಘಟನೆಯೊಂದು ಅಸ್ಸಾಂನ ಕ್ರಿಶ್ಚಿಯನ್ ಶಾಲೆಗಳಲ್ಲಿರುವ ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕು ಮತ್ತು ಧರ್ಮಗುರುಗಳು, ಕ್ರೈಸ್ತಸನ್ಯಾಸಿನಿಯರು ಹಾಗೂ ಸನ್ಯಾಸಿಗಳು ತಮ್ಮ ಆವರಣದಲ್ಲಿ ಧರಿಸುವ ಧಾರ್ಮಿಕ ಆಚರಣೆಗಳನ್ನು ತೊರೆಯಬೇಕು ಎಂದು ಆದೇಶಿಸಿ 15 ದಿನಗಳ ಅಂತಿಮ ಗಡುವು ನೀಡಿದೆ.
ಶಾಲೆಯ ಆವರಣದಿಂದ ಜೀಸಸ್ ಮತ್ತು ಮೇರಿಯ ಪ್ರತಿಮೆಗಳನ್ನು ತೆಗೆಯಲು ಕುಟುಂಬ ಸುರಕ್ಷ್ಯ ಪರಿಷದ್ ನೀಡಿರುವ ಆದೇಶದಲ್ಲಿ ಸೂಚಿಸಲಾಗಿದೆ. ಕ್ರೈಸ್ತ ಮಿಷನರಿಗಳು ಶಿಕ್ಷಣ ಸಂಸ್ಥೆಗಳು ಮತ್ತು ಶಾಲೆಗಳನ್ನು ಮತಾಂತರ ಚಟುವಟಿಕೆಗಳಿಗೆ ಬಳಸುವುದನ್ನು ತಡೆಯುವ ಉದ್ದೇಶದಿಂದ ಈ ಸೂಚನೆ ನೀಡಲಾಗಿದೆ ಎಂದು ಪರಿಷದ್ ಹೇಳಿದೆ.
ಜೊತೆಗೆ, ಶಾಲಾ ಆವರಣಗಳಲ್ಲಿರುವ ಚರ್ಚ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ತಿಳಿಸಲಾಗಿದೆ.
ಆದೇಶ ಜಾರಿಗೆ ತರದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ. ಶಾಲೆಯ ಕ್ರೈಸ್ತ ಧರ್ಮಗುರು ಜಾನ್ ಮೂಲಾಚಿರ ಇಂತಹ ಆದೇಶದ ಆಚರಣೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
“ಸಂಘಟನೆಗಳ ಬೆದರಿಕೆಯ ಅರಿವಿದೆ. ಆದರೆ ಇಂತಹ ಬೆಳವಣಿಗೆಗಳು ರಾಜ್ಯದಲ್ಲಿ ಏಕಾಗುತ್ತಿವೆ ಎಂದು ತಿಳಿಯುತ್ತಿಲ್ಲ” ಎಂದು ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆದರಿಕೆಯ ಹಿನ್ನೆಲೆಯಲ್ಲಿ ಧರ್ಮಗುರುಗಳು, ಸನ್ಯಾಸಿನಿಯರು ಶಾಲಾ ಆವರಣದಲ್ಲಿ ಸಾಮಾನ್ಯ ಉಡುಗೆಗಳನ್ನು ಧರಿಸುವಂತೆ ಕ್ರೈಸ್ತ ಮುಖಂಡರು ಸಲಹೆ ನೀಡಿದ್ದಾರೆ. ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾರಿಗೆ ಮನವಿ ಸಲ್ಲಿಸಲು ಕ್ರೈಸ್ತ ಮುಖಂಡರು ನಿರ್ಧರಿಸಿದ್ದಾರೆ.
ಹಿಂದೂ ಸಂಘಟನೆಗಳು ಧಾರ್ಮಿಕ ರಾಷ್ಟ್ರವಾದಕ್ಕೆ ಒತ್ತು ನೀಡಿ ಪ್ರಚಾರ ಆರಂಭಿಸಿದ ನಂತರ ಸಂಪೂರ್ಣ ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತ ಧರ್ಮ ಮತ್ತು ಮಿಷನರಿ ಚಟುವಟಿಕೆಗಳಿಗೆ ಧಕ್ಕೆಯಾಗಿದೆ ಎಂದು ಮುಖಂಡರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.