ಲೌಕಿಕ ಹಿತದ ಜೊತೆಗೆ ಪಾರಮಾರ್ಥಿಕ ಸತ್ಯದ ಕಡೆಗೆ ಶ್ರೀಸಾಮಾನ್ಯರ ಮನಸ್ಸು ಆಕರ್ಷಿಸಿದವರು ದಾಸರು, ಜಗದ ಏಳಿಗೆಯನ್ನು ಕನ್ನಡದ ಸಿರಿಗಂಧದ ಕೀರ್ತನೆ, ಸಾಹಿತ್ಯದ ಮುಖಾಂತರ ಮಾಡಿದ್ದಾರೆ ಎಂದು ಬಿ.ವ್ಹಿ.ಬಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ ಶಿವರಾಜ ಜಿ. ಮಠ ನುಡಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ವತಿಯಿಂದ ಬೀದರ ನಗರದ ಶ್ರೀಮತಿ ಚಿಕ್ಕಮಣಿ ಡಿ ದೇವರಾಜ ಅರಸ್ ಪ್ರೌಢ ಶಾಲೆಯಲ್ಲಿ ಪುರಂದರದಾಸರ ಆರಾಧನೆ ನಿಮಿತ್ಯ ʼದಾಸರೆಂದರೆ ಪುರಂದರದಾಸರಯ್ಯʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಹರಿದಾಸರು ಜ್ಞಾನದ ಮೂಲಕ ಸಮಾಜದಲ್ಲಿ ಅಡಗಿರುವ ನ್ಯೂನತೆ ಮತ್ತು ಅಂಧಕಾರವನ್ನು ಹೊಗಲಾಡಿಸಿ, ಭಕ್ತಿರಸವನ್ನು ಚಿಮ್ಮಿಸಿ, ಸಾಮಾನ್ಯ ಸಾಧಕನ ಜೀವನ ಸಮೃದ್ಧಗೊಳಿಸಲು ಶ್ರಮಿಸಿದ್ದಾರೆ” ಎಂದರು.
ಉಪನ್ಯಾಸಕ ಬಸವರಾಜ ಬಿರಾದಾರ ಅವರು ʼದಾಸರೆಂದರೆ ಪುರಂದರದಾಸರಯ್ಯʼ ವಿಷಯ ಕುರಿತು ಉಪನ್ಯಾಸ ನೀಡಿ, “ಪುರಂದರದಾಸರು ಜನಪದ ಹಾಗೂ ಮಾನವ ಜನಾಂಗದ ಕವಿಗಳು. ಅವರು ತಮ್ಮ ಬಾಳಿನುದ್ದಕ್ಕೂ ಅನುಭವಿಸದ್ದನ್ನು ಪ್ರಮಾಣಿಕವಾಗಿ ಕೀರ್ತನೆಯಲ್ಲಿ ಅನಾವರಣಗೊಳಿಸಿದ್ದಾರೆ. ಜನರಲ್ಲಿಯ ಒಣ ಡಂಬಾಚಾರ, ಕಂದಾಚಾರ, ಅಪನಂಬಿಕೆಗಳು ಹೊಗಲಾಡಿಸುವ ಶಕ್ತಿಯುತವಾದ ಜೀವನ ಮೌಲ್ಯಗಳು ಸಮಾಜಕ್ಕೆ ನೀಡಿದ್ದಾರೆ” ಎಂದು ಹೇಳಿದರು.
ಶಾಲೆಯ ಮುಖ್ಯಗುರು ವಿಜಯಕುಮಾರ ಪಾಟಿಲ್ ಮಾತನಾಡಿ, “ಹರಿದಾಸರ ಜೀವನ ಮತ್ತು ಸಂದೇಶಗಳು ವಿಧ್ಯಾರ್ಥಿಗಳಿಗೆ ಪರಿಚಯಿಸುವ ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ” ಎಂದರು
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ರವೀಂದ್ರ ಲಂಜವಾಡಕರ ಅಧ್ಯಕ್ಷತೆ ವಹಿಸಿ ಮಾತನಾಡಿ, “ಹರಿದಾಸರು ತುಂಗಾಭದ್ರಾ ತೀರದಲ್ಲಿ ಕೀರ್ತನಾ ತರಂಗಿಣಿಯನ್ನು ಪ್ರವಾಹಿಸುವಂತೆ ಮಾಡಿ, ಲೋಕ ಜೀವನವನ್ನು ಪಾವನಗೊಳಿಸಿ, ಕನ್ನಡ ಸಾಹಿತ್ಯ ಸಂಪತ್ತಿಗೊಂದು ಉನ್ನತ ಸ್ಥಾನವನ್ನು ಒದಗಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಮಾದ; ಪ್ರಯಾಣಿಕರ ʼದಾರಿ ತಪ್ಪಿಸುವʼ ನಾಮಫಲಕ!
ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಾದ ಪ್ರತಿಭಾ, ಪ್ರ‍್ರಿಸ್ಕಲಾ ಕೀರ್ತನೆ ಗಾಯನ ಮಾಡಿದರು. ಮಹೇಬೂಬ್ ಉಸ್ತಾದ ನಿರೂಪಿಸಿದರು, ಪ್ರಕಾಶ ಬಿರಾದಾರ ಸ್ವಾಗತಿಸಿದರು, ಮಹ್ಮದ ಆರೀಫ್ ವಂದಿಸಿದರು.