ಒಂದೂವರೆ ತಿಂಗಳ ಹಿಂದೆ ಅಪಾರ್ಟ್‌ಮೆಂಟ್ ಒಂದರ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕಿ ಮೃತಪಟ್ಟಿದ್ದ ಘಟನೆ ಸಂಬಂಧ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
2023ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ವರ್ತುರು ಬಳಿಯ ಪ್ರೆಸ್ಟೀಜ್ ಲೇಕ್ ಸೈಡ್ ಹೆಬಿಬಾಬ್ ಅಪಾರ್ಟ್‌ಮೆಂಟ್‌ನ ಈಜುಕೊಳದಲ್ಲಿ ಆಟವಾಡುವಾಗ 10 ವರ್ಷದ ಬಾಲಕಿ ಮಾನ್ಯ ವಿದ್ಯುತ್ ಪ್ರವಹದಿಂದ ಸಾವನ್ನಪ್ಪಿದ್ದರು. ಈಜುಕೊಳದಲ್ಲಿ ವಿದ್ಯುತ್ ಪ್ರವಹದ ಬಗ್ಗೆ ಮಾಹಿತಿ ನೀಡಿದರೂ ಅಪಾರ್ಟ್‌ಮೆಂಟ್ ನಿರ್ವಹಣೆ ಜವಬ್ದಾರಿ ಹೊತ್ತಿರುವ ಸಂಘದ ಅಧ್ಯಕ್ಷ ಮತ್ತು ಎಲೆಕ್ಟ್ರಿಶಿಯನ್ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಪರಿಣಾಮ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿತ್ತು.
ಘಟನೆ ಸಂಬಂಧ ಮೃತ ಬಾಲಕಿಯ ತಂದೆ ರಾಜೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ದೇಬಸಿಸ್ ಸಿನ್ಹಾ, ಜಾವೇದಿ ಸಫೀಕ್ ರಾಂ, ಸಂತೋಷ್ ಮಹಾರಾಣ, ಬಿಕಾಸ್ ಕುಮಾರ್ ಫೋರಿಡಾ, ಭಕ್ತ ಚರಣ್ ಪ್ರಧಾನ್, ಸುರೇಶ್ ಹಾಗೂ ಗೋವಿಂದ್ ಮಂಡಲ್ ಎಂಬವರನ್ನು ಬಂಧಿಸಿದ್ದಾರೆ.