ಮೂಲಸೌಕರ್ಯಗಳಿಂದ ವಂಚಿತವಾಗಿರುವ ತುಮಕೂರು ಮಹಾನಗರ ಪಾಲಿಕೆಯ 11ನೇ ವಾರ್ಡ್‌ಗೆ ಭೇಟಿ ನೀಡಿರುವ ನೈಜ ಹೋರಾಟಗಾರರ ವೇದಿಕೆ ಕಾರ್ಯಕರ್ತರು ಪ್ರದೇಶದ ದುಸ್ಥಿತಿಯ ಕಂಡು ತುಮಕೂರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಲು ಇವರ ಮತ ಬೇಕು. ವಿಧಾನಸಭಾ
ಸದಸ್ಯರನ್ನು ಆಯ್ಕೆ ಮಾಡಲು ಇವರ ಮತ ಬೇಕು. ಅಷ್ಟೇ ಏಕೆ? ತುಮಕೂರು ಮಹಾನಗರ ಪಾಲಿಕೆಯ 11ನೇ ವಾರ್ಡಿಗೆ ಕಾರ್ಪೊರೇಟರ್ ಆಯ್ಕೆ ಮಾಡಲೂ ಇವರ ಮತ ಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೂ ಇವರು ಬೇಕು. ಆದರೆ ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಮಗೆಲ್ಲರಿಗೂ ಇವರು ಬೇಡದಂತಾಗಿದೆ” ಎಂದು ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
“ಇವರು ಈ ದೇಶದ ನಾಗರಿಕರು. ಇವರ ಬಳಿ ಆಧಾರ್ ಪತ್ರವಿದೆ, ರೇಷನ್ ಕಾರ್ಡ್ ಇದೆ, ಚುನಾವಣೆ ಗುರುತಿನ ಚೀಟಿಯೂ ಇದೆ. ಆದರೆ, ಮೂಲ ಸೌಕರ್ಯವಿಲ್ಲ. ಶೌಚಾಲಯ ಇಲ್ಲ, ಶುದ್ಧ ಕುಡಿಯುವ ನೀರು ಇಲ್ಲ, ಅಂಗನವಾಡಿ ಇಲ್ಲ, ರಸ್ತೆ ಇಲ್ಲ, ವಿದ್ಯುತ್ ದೀಪ ಇಲ್ಲ, ಶಾಲೆಯ ಮಾತು ಬಹು ದೂರ. ಆದರೆ ಇವರೆಲ್ಲ ನಮ್ಮ ದೇಶದ ನಾಗರಿಕರು” ಎಂದು ಬೇಸರ ವ್ಯಕ್ತಪಡಿಸಿದರು.
“ಕೂಗಳತೆಯ ದೂರದಲ್ಲಿ ಲೋಕಸಭಾ ಸದಸ್ಯ ಎಂ ಪಿ ಬಸವರಾಜ್ ಅವರ ಮನೆ ಇದ್ದರೂ ಈ ವಾರ್ಡ್ ನಿವಾಸಿಗರು ಸೌಕರ್ಯಗಳ ಕೊರತೆಯ ನಡುವೆ ಬದುಕಬೇಕಾಗಿರುವುದು ವಿಪರ್ಯಾಸ. ಇಲ್ಲಿನ ವಿಧಾನಸಭಾ ಸದಸ್ಯ ಜ್ಯೋತಿ ಗಣೇಶ್ ಅವರ ಹುಟ್ಟೂರು ಗಂಗಸಂದ್ರ” ಎಂದು ಅವರು ತಿಳಿಸಿದರು.
“ಇಲ್ಲಿ ಏಳು ಗುಡಿಸಲುಗಳು ಮಾತ್ರ ಇವೆ. ಎರಡನೇ ತಲೆಮಾರಿನ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಇದೇ ಸ್ಥಳದಲ್ಲಿ ನೆಲೆಸಿದ್ದಾರೆ. ಬಲಾಢ್ಯರು ಕೆರೆ ಅಂಗಳವನ್ನು ಅತಿಕ್ರಮಿಸಿ ವಸತಿ ಸಂಕೀರ್ಣ ಕಟ್ಟಿದರೆ ಕಾನೂನು ಅನ್ವಯಿಸುವುದಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾದವರು ಕೆರೆ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿದರೆ ಕಾನೂನು ಅನ್ವಯಿಸುವುದಿಲ್ಲ. ಇಂತಹ ಬಲಾಢ್ಯರಿಗೆ ಆಡಳಿತದ ಸಂಪೂರ್ಣ ಸಹಕಾರ ಇದೆ” ಎಂದು ಆರೋಪಿಸಿದರು.
“ಧ್ವನಿ ಇಲ್ಲದ, ತುಳಿತಕ್ಕೊಳಗಾದ, ದೀನ ದುರ್ಬಲರಿಗೆ ಮಾತ್ರ ಈ ದೇಶದ ಕಾನೂನು ಅನ್ವಯವಾಗುತ್ತದೆ. ಧ್ವನಿ ಇಲ್ಲದವರ ಧ್ವನಿಯಾಗಿ ನೈಜ್ಯ ಹೋರಾಟಗಾರರ ವೇದಿಕೆಯ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವೆಲ್ಲರೂ, ಪಣತೊಟ್ಟು ಇಂತಹ ಕುಟುಂಬಗಳನ್ನು ಮುಖ್ಯ ವಾಹಿನಿಗೆ ತರಲು ಕೆಲಸ ಮಾಡಬೇಕಿದೆ” ಎಂದು ಅವರು ಹೇಳಿದರು.
ಇಲ್ಲಿನ ನಿವಾಸಿಗಳಿಗೆ ಕೂಡಲೇ ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ಜಿಲ್ಲಾಡಳಿತ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ನೀಡಿ ಮುಖ್ಯವಾಹಿನಿಗೆ ತರುವಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು. “ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ದೂರು ದಾಖಲಿಸಲಾಗುವುದು” ಎಂದು ತಿಳಿಸಿದರು.
“ಇಂತಹ ಗುಡಿಸಿಲಿನಿಂದಲೂ ಬಡತನಕ್ಕೆ ಸವಾಲು ಒಡ್ಡಿ ಕಷ್ಟಪಟ್ಟು ಓದಿದ ಯುವತಿಯೊಬ್ಬಳು ಎಸ್‌ಎಸ್‌ಎಲ್‌ಸಿ ಮುಗಿಸಿ ಡಿಪ್ಲೋಮಾ ಓದುತ್ತಿದ್ದಾಳೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು” ಎಂದು ವೇದಿಕೆಯ ಮುಖಂಡರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಆನೆ, ಕೇರಳದ ಆನೆ ಅಂತ ಯಾವುದೂ ಇಲ್ಲ: ಸಚಿವ ಈಶ್ವರ್ ಖಂಡ್ರೆ
ಹಂದ್ರಾಳ ನಾಗಭೂಷಣ್, ಕುಣಿಗಲ್ ನರಸಿಂಹಮೂರ್ತಿ, ಜಿ ಹೆಚ್ ರಾಜು ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಎಚ್ ಎಂ ವೆಂಕಟೇಶ್ ಭೇಟಿ ಮಾಡಿದ ತಂಡದಲ್ಲಿ ಉಪಸ್ಥಿತರಿದ್ದರು.