ಕೇಂದ್ರ ಬಜೆಟ್ ಜನ ವಿರೋಧಿ, ರೈತ, ಕಾರ್ಮಿಕ ವಿರೋಧಿ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಫೆ.16ರಂದು ಕೇಂದ್ರ ಬಜೆಟ್ ವಿರೋಧಿಸಿ ಪ್ರತಿಭಟನೆಗೆ ಕರೆಕೊಟ್ಟಿದೆ.
ಈ ಕುರಿತು ಶಿವಮೊಗ್ಗದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಂಘಟನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರೋಧಿಸಿ, ರಾಷ್ಟ್ರೀಯ ಬ್ಯಾಂಕ್‌ಗಳ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯಿಸಿ, ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ತಕ್ಷಣವೇ ಪರಿಹಾರ ಕೊಡುವುದು, ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯವುದು, ಬರಗಾಲಕ್ಕೆ ಎಕರೆಗೆ 20ಸಾವಿರ ಪರಿಹಾರ ಕೊಡುವುದು, ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಲ ಮನ್ನಾ, ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡುವಂತೆ ಒತ್ತಾಯಿಸಿ ಫೆ.16ರಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಿವೆ ಎಂದು ತಿಳಿಸಿದ್ದಾರೆ.
2020ರ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರೈತರು ದೆಹಲಿಯಲ್ಲಿ 13 ತಿಂಗಳುಗಳ ಕಾಲ ಬೀಡು ಬಿಟ್ಟು ನಡೆಸಿದ ಐತಿಹಾಸಿಕ ಹೋರಾಟದ ಪರಿಣಾಮ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಿತು. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ತಂದ ಮೂರು ಕೃಷಿ ಕಾಯ್ದೆಗಳನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರ ಸಹ ಹಿಂಪಡೆದಿಲ್ಲ.
ತಕ್ಷಣವೇ ಈ ಕಾಯ್ದೆಗಳನ್ನ ಹಿಂಪಡೆಯಬೇಕು ಮತ್ತು ದೆಹಲಿ ಹೋರಾಟದ ಸಂದರ್ಭದಲ್ಲಿ ರೈತರ ಉಳಿದ ಹಕ್ಕೊತ್ತಾಯಗಳಾದ ಕನಿಷ್ಠ ಬೆಂಬಲ ಬೆಲೆ ಜಾರಿ, ವಿದ್ಯುತ್ ರಂಗದ ಸಂಪೂರ್ಣ ಖಾಸಗೀಕರಣ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ ರದ್ದು ಪಡಿಸುವುದು, ರೈತರ ಸಾಲಮನ್ನಾ, ದೆಹಲಿಯ ರೈತ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿರುವ ಕೇಸುಗಳನ್ನು ವಾಪಾಸ್ ಪಡೆಯುವುದು ಇನ್ನೂ ಮುಂತಾದ ವಿಷಯಗಳಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ಈ ವೇಳೆ ಆರೋಪಿಸಿದರು.
2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಈಗಿನ ಕೇಂದ್ರ ಸರ್ಕಾರ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ, ಡಾ. ಸ್ವಾಮಿನಾಥನ್‌ರವರ ವರದಿಯ ಪ್ರಕಾರ ರೈತರ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಲಾಭಾಂಶ ಸೇರಿಸಿ ಎಂ.ಎಸ್.ಪಿ ನೀಡುವುದಾಗಿ, ನೀರಾವರಿ ಸೌಲಭ್ಯವನ್ನು ವಿಸ್ತರಿಸುವುದಾಗಿ, ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೂ ಇದು ಸಾಧ್ಯವಾಗಿಲ್ಲ.
ಅಲ್ಲದೇ, 2014ರಿಂದ ಇದುವರೆಗೆ ಮಂಡಿಸಿರುವ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕೃಷಿಗೆ, ಗ್ರಾಮೀಣಾಭಿವೃದ್ಧಿಗೆ, ಗ್ರಾಮೀಣ ಮೂಲಸೌಕರ್ಯಕ್ಕೆ, ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಉದ್ಯೋಗ ಖಾತ್ರಿ, ಕೃಷಿ ಉತ್ಪನ್ನಗಳ ಖರೀದಿಗೆ ಮುಂತಾದ ವಲಯಗಳಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ನಿರಂತರವಾಗಿ ಕಡಿತ ಮಾಡಿಕೊಂಡು ಬಂದಿದೆ. ಚುನಾವಣಾ ಹೊಸ್ತಿಲಿನಲ್ಲಿ 2024 ಫೆಬ್ರವರಿ 1ರಂದು ಮಂಡಿಸಿರುವ ಬಜೆಟ್‌ನಲ್ಲೂ ಸಹ ಇದೇ ರೀತಿಯ ಧೋರಣೆಗಳನ್ನು ಮುಂದುವರಿಸಲಾಗಿದೆ. ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲಿನಿಂದ ತರುವ ಪ್ರಸ್ತಾಪಗಳನ್ನು ಈ ಬಜೆಟ್‌ನಲ್ಲಿ ಮಾಡಲಾಗಿದೆ ಎಂದು ದೂರಿದರು.
ಈಗಾಗಲೇ ವಿಶ್ವವಾಣಿಜ್ಯ ಒಪ್ಪಂದದ ಷರತ್ತುಗಳಿಂದ ಆಗ್ನೆಯ ಏಷ್ಯಾ ದೇಶಗಳ ಜೊತೆ, ಆಸ್ಟ್ರೇಲಿಯಾ, ಯೂರೋಪ್ ದೇಶಗಳ ಜೊತೆಮುಕ್ತ ವ್ಯಾಪಾರ ಒಪ್ಪಂದಗಳ ಆಮದು ನೀತಿಗಳಿಂದ ತೆಂಗು, ಅಡಿಕೆ, ಕಾಫಿ, ಮೆಣಸು, ರಬ್ಬರ್, ಹಾಲು, ದ್ರಾಕ್ಷಿ, ಶೇಂಗಾ, ಸೂರ್ಯಕಾಂತಿ ಮುಂತಾದ ಎಣ್ಣೆ ಕಾಳುಗಳು ಆಮದಾಗುತ್ತಿದ್ದು, ನಮ್ಮ ದೇಶದ ರೈತರ ಬೆಳೆಗಳ ಬೆಲೆ ಕುಸಿತವಾಗಿದೆ. ಬರಗಾಲದಿಂದ ತತ್ತರಿಸಿ ಹಳ್ಳಿಯ ರೈತರು, ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಫಸಲ್ ಭೀಮಾ ಯೋಜನೆಯು ರೈತರಿಗೆ ಪ್ರಯೋಜನಕಾರಿಯಾಗದೆ, ಕಂಪನಿಗಳಿಗೆ ಲಾಭದಾಯಕವಾಗಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ಗಳನ್ನ ಅಳವಡಿಸಲು ವಿದ್ಯುತ್ ತಿದ್ದುಪಡಿ ಮಸೂದೆ 2022ನ್ನು ಸಂಸತ್ತಿನಲ್ಲಿ ಮಂಡಿಸಿದೆ. ರಸಗೊಬ್ಬರದ ಸಬ್ಸಿಡಿಯನ್ನು ಕಡಿತ ಮಾಡಿ ಬೆಲೆಯನ್ನು ಏರಿಕೆ ಮಾಡಿದೆ. ಸರ್ಕಾರದ ಈ ರೀತಿ ಧೋರಣೆಗಳಿಂದಾಗಿ ರೈತರ ಸಾಲಭಾದೆ ಹೆಚ್ಚಾಗಿ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ.
ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು ಬೇಡಿಕೆ ಇದ್ದರೂ ಸಹ ಹೆಚ್ಚಿಸಿಲ್ಲ. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡಿರುವುದು ಕಡಿಮೆ ಸಂಭಳದಲ್ಲಿ ವಿದೇಶಿ ಕಂಪನಿಗಳಿಗೆ ಕೂಲಿ ಆಳುಗಳಾಗಿ ಕೆಲಸಕ್ಕೆ ಯುವಕರನ್ನು ಒದಗಿಸುವ ಹುನ್ನಾರ ಅಡಗಿದೆ. ಮತ್ತು ಹೆಚ್ಚಿನ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನು ದಿನಗೂಲಿ ಮತ್ತು ಗುತ್ತಿಗೆ ಕಾರ್ಮಿಕರ ದೇಶವನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನವೆಂಬರ್ 26,27,28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಸಿದ ಮಹಾಧರಣೆ ಸಂದರ್ಭದಲ್ಲಿ ನಿಗಧಿಯಾದಂತೆ ದಿನಾಂಕ 18/01/2024ರಂದು ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ರೈತರ, ಕಾರ್ಮಿಕ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಚರ್ಚಿಸಲು ಆಹ್ವಾನ ನೀಡಿದ್ದರು. ಈ ಸಭೆಗೆ ನಾವುಗಳು ಪಾಲ್ಗೊಂಡು ನಡೆಸಿದ ಚರ್ಚೆಯ ಸಂದರ್ಭದಲ್ಲಿ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ ಹಿಂಪಡೆಯವುದು, ರೈತರ ಐ.ಪಿ ಸೆಟ್‌ಗಳಿಗೆ ರೈತರೇ ಸ್ವಯಂ ಆರ್ಥಿಕ ವೆಚ್ಚದಲ್ಲಿ ಸಂಪರ್ಕ ಪಡೆಯುವ ಯೋಜನೆ ರದ್ದುಪಡಿಸುವುದು, ದಿನಕ್ಕೆ 7ಗಂಟೆ ಸಮರ್ಪಕ ವಿದ್ಯುತ್ ಕೊಡುವುದು ಸೇರಿದಂತೆ, ಮನೆ ಮೀಟರ್ ವಾಪಾಸ್ ಕೊಟ್ಟ ಸಂದರ್ಭದ ವಿದ್ಯುತ್ ಬಾಕಿ ಹಣ ಮನ್ನಾ ಮಾಡುವುದು, ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ವಿದ್ಯುತ್ ಚ್ಚಕ್ತಿ ಸಂಪರ್ಕ ಪಡೆದ ಐ.ಪಿ ಸೆಟ್‌ನವರಿಗೆ ಕಂಬ. ತಂತಿ, ಟ್ರಾನ್ಸ್‌ಫಾರ್ಮರ್ ಮೂಲ ಸೌಕರ್ಯಗಳನ್ನು ಒದಗಿಸಲು 4 ಸಾವಿರ ಕೋಟಿ ರೂ.ಗಳನ್ನು ಟೆಂಡರ್ ಕರೆದು ಶೀಘ್ರವೇ ಕೆಲಸ ಮಾಡಿಸುವುದಾಗಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದು ಮತ್ತು ಬರಗಾಲದ ಹಿನ್ನಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಹಣಕಾಸು ಸಂಸ್ಥೆಯವರ, ಸಹಕಾರಿ ಸೊಸೈಟಿಗಳ ಸಾಲ ವಸೂಲಾತಿ ಆದೇಶವನ್ನು ತಡೆಯುವುದು, ವಸೂಲಾತಿಗಾಗಿ ಕಿರುಕುಳ ಮಾಡಬಾರದೆಂದು ಆದೇಶ ಹೊರಡಿಸುವುದಾಗಿ ತಿಳಿಸಿದರು.
ಬಗರ್‌ಹುಕ್ಕುಂ ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡುವುದು, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸುವುದು, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ರಾಜ್ಯದ ಬರಗಾಲದ ಸಬ್ಸಿಡಿ ಹಣವನ್ನು ನೀಡುವುದಾಗಿ ಮತ್ತು ಕೆಲವು ಕಾರ್ಮಿಕ ಸಮಸ್ಯೆಗಳನ್ನು ಸಹ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಇವುಗಳಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಬಡ್ಡಿ ಮನ್ನಾ ಹೊರತುಪಡಿಸಿ ಉಳಿದ ಯಾವ ಭರವಸೆಗಳು ಈಡೇರಿಸಿಲ್ಲ. ಇವುಗಳನ್ನು ತಕ್ಷಣವೇ ಜಾರಿ ಮಾಡಬೇಕು. ಮತ್ತು ವಿದ್ಯುತ್ ಚ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ವಿಧಾನಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ.
ಈ ಮೇಲ್ಕಂಡ ಕಾರಣಗಳಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಶಿವಮೊಗ್ಗದಲ್ಲಿಯೂ ಕೂಡ ಫೆ.16ರಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ರೈತರು, ಕೃಷಿ ಕೂಲಿಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಮತ್ತು ಇತರ ಎಲ್ಲ ದೇಶಪ್ರೇಮಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟನೆ ಕರೆ ನೀಡಿದೆ.