ಕಳೆದ ಏಳು ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದ್ದರೂ, ಖಾಸಗಿಯವರ ಹಾವಳಿಯಿಂದಾಗಿ ಅಂಚಿನಲ್ಲಿರುವ ಸಮುದಾಯ ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಉನ್ನತ ಶಿಕ್ಷಣ ಸಂಸ್ಥೆ ಸಂಬಂಧಿಸಿದ 2021-22ರ ಅಖಿಲ ಭಾರತ ಶೈಕ್ಷಣಿಕ ಸಮೀಕ್ಷೆಯ ವರದಿಯಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಹೆಚ್ಚು ನೋಂದಣಿ ಮಾಡಿಕೊಂಡಿರುವುದನ್ನು ಯಶೋಗಾಥೆ ಎಂದು ಬಣ್ಣಿಸಿಕೊಂಡಿದೆ.
ವರದಿಯ ಪ್ರಕಾರ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 7,000 ಶಿಕ್ಷಣ ಸಂಸ್ಥೆಗಳು ಹೆಚ್ಚುವರಿಯಾಗಿ ಸ್ಥಾಪನೆಯಾಗಿ, ವಿದ್ಯಾರ್ಥಿಗಳ ನೋಂದಣಿ ರೂ 3.42 ಕೋಟಿಯಿಂದ ರೂ 4.33 ಕೋಟಿಗಳಿಗೇರಿದೆ. ಅಂದರೆ ವಿದ್ಯಾರ್ಥಿಗಳ ಸಂಖ್ಯೆ ಶೇ 25ರಷ್ಟು ಹೆಚ್ಚಾಗಿದೆ. 2014-15ರಿಂದ ವಿದ್ಯಾರ್ಥಿನಿಯರ ನೋಂದಣಿ ಶೇ 32ರಷ್ಟು ಏರಿಕೆಯಾಗಿದೆ.
ಸರ್ಕಾರಿ ಶಿಕ್ಷಣ ಸಂಸ್ಥೆಗಳ ಜಾಗಕ್ಕೆ ಖಾಸಗಿ ಅತಿಕ್ರಮಣ
ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಉನ್ನತ ವ್ಯಾಸಂಗದಲ್ಲಿ ತೊಡಗಿರುವ ಮಹಿಳೆಯರ ಅಂಕಿ-ಅಂಶಗಳು ಶೈಕ್ಷಣಿಕ ನೀತಿಯನ್ನು ರೂಪಿಸಲು ತಳಹದಿಯಾಗಬೇಕು. ಇದೇ ಸಮೀಕ್ಷೆಯಲ್ಲಿ ಹೇಳಿರುವಂತೆ ಏಳು ವರ್ಷಗಳ ಹಿಂದೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅತಿಕಡಿಮೆ ಇದ್ದವು. ಆದರೆ ಇದೀಗ ಶೇ 53ರಷ್ಟು ಸರ್ಕಾರಿ ಸಂಸ್ಥೆಗಳಿದ್ದರೆ, ಖಾಸಗಿ ಸಂಸ್ಥೆಗಳ ಪ್ರಮಾಣ ಶೇ 81ರಷ್ಟು ಏರಿವೆ.

ಸರ್ಕಾರಿ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಶುಲ್ಕಗಳು ಮತ್ತು ಶೈಕ್ಷಣಿಕ ವೆಚ್ಚಗಳು ಅತ್ಯಧಿಕ. ಹೀಗಾಗಿ ಅಂಚಿನಲ್ಲಿರುವ ಸಮುದಾಯದ ವಿದ್ಯಾರ್ಥಿಗಳು ಈ ಖಾಸಗಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವುದು ಸಾಧ್ಯವಾಗುತ್ತಿಲ್ಲ. ಎಲ್ಲರನ್ನೊಳಗೊಂಡ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಆಗಬೇಕಿದ್ದಲ್ಲಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಗಳು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯಬಾರದು. ಬದಲಾಗಿ ತಮ್ಮ ಅಸ್ತಿತ್ವವನ್ನು ಇನ್ನಷ್ಟು ವ್ಯಾಪಿಸಿಕೊಳ್ಳಬೇಕು.
ಏಳು ವರ್ಷಗಳಲ್ಲಿ ಅಭಿವೃದ್ಧಿಯಾಗದ ಮೂಲಸೌಕರ್ಯ
ಈ ಸಮೀಕ್ಷೆಯ ಅಂಕಿ-ಅಂಶಗಳಿಂದ ಕಂಡುಬಂದಿರುವ ಮತ್ತೊಂದು ಕಳವಳಕಾರಿ ವಿಚಾರವೆಂದರೆ ಸರ್ಕಾರಿ ಸಂಸ್ಥೆಗಳಿಗೆ ಅಧ್ಯಾಪಕರ ನೇಮಕಾತಿಯಲ್ಲಿ ತೋರಲಾಗಿರುವ ಅಲಕ್ಷ್ಯ. ಸರ್ಕಾರಿ ಸಂಸ್ಥೆಗಳಲ್ಲಿ ಅಧ್ಯಾಪಕರ ನೇಮಕಾತಿ ಶೇ 8.4ರಷ್ಟೇ ಏರಿಕೆಯಾಗಿದೆ. ಅಂದರೆ ಅಧ್ಯಾಪಕ-ವಿದ್ಯಾರ್ಥಿಗಳ ಅನುಪಾತ ಕುಸಿದಿದೆ!
ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಅಧ್ಯಾಪಕರ ನೇಮಕಾತಿಯಾಗದೆ ಇದ್ದಲ್ಲಿ ಶೈಕ್ಷಣಿಕ ಮಾನದಂಡಗಳಿಗೆ ಸಮಸ್ಯೆಯಾಗಲಿದೆ. ಹೆಚ್ಚು ಅಧ್ಯಾಪಕರನ್ನು ನೇಮಿಸಿದಲ್ಲಿ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲಿದೆ. ಅಲ್ಲದೆ, ನಮ್ಮ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಗೆ ತಕ್ಕಂತೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ತರಗತಿಗಳಿಗೆ ಹೆಚ್ಚು ಉತ್ತೇಜನದ ಅಗತ್ಯವಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.