ಕೇಂದ್ರದ ಬಿಜೆಪಿ ಸರ್ಕಾರ ರೈತ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಫೆಬ್ರವರಿ 16ರಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಸಂಘಟನೆ ಗ್ರಾಮೀಣ ಭಾರತ ಬಂದ್ ನಡೆಸಲಿದೆ ಎಂದು ಟಿಯುಸಿಐ ಜಿಲ್ಲಾಧ್ಯಕ್ಷ ಜಿ ಅಮರೇಶ ಹೇಳಿದರು.
ರಾಯಚೂರು ನಗರದಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಹೋರಾಟವನ್ನು ಬೆಂಬಲಿಸಿ ಭಾಗವಹಿಸಲಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸುಳ್ಳುಗಳನ್ನು ಹೇಳುತ್ತಲೇ ಜನರ ದಾರಿ ತಪ್ಪಿಸುತ್ತಾ ಬಂದಿದೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರೂ, ಮಾತು ಮರೆತಿದೆ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ದುಡಿಯುವ ಜನರ ವೇತನ ಕುಸಿದು ಕೆಲಸ ದೊರೆಯದ ಸ್ಥಿತಿ ಆವರಿಸಿದೆ” ಎಂದರು.
“ರೈತರ ದುಡಿಮೆಗೆ ಬೆಲೆಯೇ ಇಲ್ಲದೆ ಹೋಗಿದೆ. ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಘೋಷಣೆಯಾಗಿದ್ದರೂ ದೊರೆಯದೇ ಹೋಗುತ್ತಿರುವುದರಿಂದ ಕನಿಷ್ಠ ಬೆಂಬಲ ಕಾಯ್ದೆ ರೂಪಿಸಲು ಮುಂದಾಗುತ್ತಿಲ್ಲ. ಕಾರ್ಮಿಕರು ಸೌಲಭ್ಯ ಪಡೆಯಲು ಸಾಧ್ಯವಾಗದೇ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ತರಲು ಹೊರಟಿದೆ” ಎಂದರು.
“ರೈತರು ಹಾಗೂ ಕಾರ್ಮಿಕರಿಗೆ ಜೀವನ ಭದ್ರತೆಯೇ ಇಲ್ಲದಂತಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿ, ಇರುವ ಆದಾಯವೂ ಕುಸಿತವಾಗುವ ನೀತಿ ರೂಪಿಸುತ್ತಿದೆ. ರೈತ ಮತ್ತು ಕಾರ್ಮಿಕ ನೀತಿಗಳ ವಿರುದ್ದ ರೈತರು, ಕಾರ್ಮಿಕರ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸಿ ಸಿಪಿಐ ಪ್ರತಿಭಟನೆ
“ಬೀಜಗಳ ಸಬ್ಸಿಡಿಯನ್ನು ಶೇ.50ಕ್ಕೆ ಹೆಚ್ಚಿಸುವುದು, ರಸಗೊಬ್ಬರ, ವಿದ್ಯುತ್ ಸಬ್ಸಿಡಿ ನೀಡುವುದು, ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ ₹500 ದಿನಗೂಲಿ ನಿಗದಿಪಡಿಸುವುದು, ಎಲ್ಲರಿಗೂ ₹31,000 ಕನಿಷ್ಠ ವೇತನ ನಿಗದಿಪಡಿಸುವುದು, ಗುತ್ತಿಗೆ ಪದ್ದತಿ ರದ್ದುಗೊಳಿಸಿ ಸಾಮಾಜಿಕ ಭದ್ರತೆ ಒದಗಿಸುವಂತೆ ರಾಯಚೂರು, ಸಿಂಧನೂರು, ಮಸ್ಕಿ, ಹಟ್ಟಿ ಸೇರಿದಂತೆ ಏಳು ಕಡೆ ಸಂಘಟನೆಯಿಂದ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತದೆ” ಎಂದರು.
ಅಜೀಜ ಜಹಾಗೀರದಾರ, ಜಿ ಅಡವಿರಾವ್, ನಿರಂಜನ್, ಲಕ್ಷ್ಮಣ ಇದ್ದರು.
ವರದಿ : ಹಫೀಜುಲ್ಲ